ಖಾಸಿಂ ಸುಲೈಮಾನಿ ಕೊಲೆಗೆ ಅಮೇರಿಕಾದೊಂದಿಗೆ ಪ್ರತೀಕಾರ: ನಿರಪರಾಧಿಗಳನ್ನು ಗುರಿಯಾಗಿಸುವುದಿಲ್ಲ ಎಂದ ಇರಾನ್

0
390

ಸನ್ಮಾರ್ಗ ವಾರ್ತೆ

ಟೆಹ್ರಾನ್,ಸೆ.20: ಜನವರಿಯಲ್ಲಿ ಬಾಗ್ದಾದ್‍ನಲ್ಲಿ ಡ್ರೋನ್ ದಾಳಿಯಲ್ಲಿ ಇರಾನ್ ರೆವುಲ್ಯೂಶನರಿ ಗಾರ್ಡ್ ಮುಖ್ಯಸ್ಥ ಖಾಸಿಂ ಸುಲೈಮಾನಿಯ ಕೊಲೆಗೆ ಅಮೆರಿಕದೊಂದಿಗೆ ಪ್ರತೀಕಾರ ಮಾಡಲಾಗುವುದು. ಕೊಲೆಗಡುಕರು ಮತ್ತು ಅದಕ್ಕೆ ಕಾರಣರಾದವರ ಮೇಲೆ ಗುರಿ ಇಟ್ಟಿದ್ದೇವೆ ಎಂದು ಇರಾನ್ ಹೇಳಿದೆ. ಆದರೆ ನಿರಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾರೆವು ಎಂದು ರೆವುಲ್ಯೂಶನರಿ ಗಾರ್ಡ್ ಮುಖ್ಯಸ್ಥ ಮೇಜರ್ ಜನರಲ್ ಹುಸೈನ್ ಸಲಾಮಿ ಹೇಳಿದರು.

ದಕ್ಷಿಣ ಆಫ್ರಿಕಾದ ಅಮೆರಿಕನ್ ರಾಯಭಾರಿ ಲಾನಾ ಮಾರ್ಕ್‍‌ರನ್ನು ಕೊಲೆ ಮಾಡಲು ಅಮೆರಿಕದ ಚುನಾವಣೆಯ ಮೊದಲೇ ಇರಾನ್ ಗುರಿಯಿರಿಸಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಮೆರಿಕದ ಅಧಿಕಾರಿಗಳನ್ನು ಉದ್ಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಇಂತಹದೊಂದು ಕ್ರಮ ಉಂಟಾದರೆ ಸಾವಿರ ಪಟ್ಟು ಬಲಿಷ್ಠವಾಗಿ ಇರಾನ್ ವಿರುದ್ಧ ದಾಳಿ ನಡೆಯಲಿದೆ ಎಂದು ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು. ಇದೇ ವೇಳೆ ಲಾನಾ ಮಾರ್ಕ್‍‌ ಕೊಲೆ ಸಂಚು ನಡೆದಿದೆ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿಲ್ಲ ಎಂದು ದಕ್ಷಿಣ ಆಫ್ರಿಕದ ಸ್ಟೇಟ್ ಸೆಕ್ಯೂರಿಟಿ ಏಜೆನ್ಸಿ ತಿಳಿಸಿದೆ.

“ಮಿಸ್ಟರ್ ಟ್ರಂಪ್, ನಮ್ಮ ಮಹಾನ್ ಕಮಾಂಡರ್‌ರ ಹುತಾತ್ಮೆಯ ಪ್ರತೀಕಾರವಂತೂ ದೃಢವೂ, ಗಂಭೀರವಾದ ಸತ್ಯವೂ ಆಗಿದೆ. ಆದರೆ, ನಾವು ನ್ಯಾಯಯುತವಾಗಿ ಪ್ರತೀಕಾರ ತೀರಿಸುತ್ತೇವೆ. ನಮ್ಮ ಹುತಾತ್ಮ ಸಹೋದರನ ರಕ್ತಕ್ಕಾಗಿ ದಕ್ಷಿಣ ಆಫ್ರಿಕಾದ ಒಬ್ಬಳು ಮಹಿಳಾ ರಾಯಭಾರಿಯ ಮೇಲೆ ದಾಳಿ ಮಾಡುತ್ತೇವೆ ಎಂದು ನೀವು ತಿಳಿದಿದ್ದೀರಾ? ಈ ಮಹಾನ್ ಮನುಷ್ಯನ ಹುತಾತ್ಮತೆಗೆ ನೇರವಾಗಿ ಮತ್ತು ಅಲ್ಲದೆಯೂ ಕಾರಣರಾದವರನ್ನು ಗುರಿಯಿಡುತ್ತೇವೆ” ಎಂದು ಮೇಜರ್ ಜನರಲ್ ಹುಸೈನ್ ಸಲಾಮಿ ಹೇಳಿದರು.

ಜನವರಿಯಲ್ಲಿ ಅಮೆರಿಕದ ದಾಳಿಯಲ್ಲಿ ಖಾಸಿಂ ಸುಲೈಮಾನಿಯ ಜೊತೆ ಇರಾಕಿನ ಕಮಾಂಡರ್ ಅಬು ಮಹ್ದಿ ಅಲ್ಲ ಮುಹದ್ದಿಸ್ ಕೊಲೆಯಾಗಿದ್ದರು. ಇದಾದ ದಿನಗಳೊಳಗೆ ಇರಾನ್ ಇರಾಕಿನ ಅಮೆರಿಕದ ನೆಲೆಗೆ ದಾಳಿ ಮಾಡಿತ್ತು.