ವಿವಾಹವೆಂದರೆ ವಸ್ತ್ರಾಭರಣಗಳ ಪ್ರದರ್ಶನವೇ?

0
748

ಖದೀಜ ನುಸ್ರತ್, ಅಬುಧಾಬಿ

ಉಡುಗೆ ತೊಡುಗೆಯ ಸರಳತೆಯು ಸತ್ಯ ವಿಶ್ವಾಸದ ಒಂದು ಲಕ್ಷಣವಾಗಿದೆ. ಹಲವು ವರ್ಷಗಳ ಹಿಂದಿನ ಕಾಲವನ್ನು ಒಮ್ಮೆ ಅವಲೋಕನ ನಡೆಸುವಾಗ ವರ್ಷದಲ್ಲಿ ಎರಡು ಹಬ್ಬಕ್ಕೆ ಎರಡು ಜತೆ ಬಟ್ಟೆ ಅಥವಾ ಹತ್ತಿರದ ಬಂಧುಗಳ ವಿವಾಹಕ್ಕೆ, ಹೀಗೆ ವರ್ಷದಲ್ಲಿ ನಾಲ್ಕೈದು ಜತೆ ಬಟ್ಟೆ ಖರೀಸುತ್ತಿದ್ದ ಕಾಲವೊಂದಿತ್ತು. ಮಳೆ, ಬೇಸಿಗೆ ಕಾಲಕ್ಕೆಂದು ಎರಡು ಜತೆ ಚಪ್ಪಲಿ, ಸ್ತ್ರೀಯರಿಗೆ ಎಲ್ಲಾ ಸಮಾರಂಭಗಳಿಗೆ ಒಂದೇ ಬುರ್ಖಾ. ಸಮಯ ನೋಡಲು ಜೋಪಾನವಾಗಿಡುತ್ತಿದ್ದ ಒಂದು ವಾಚ್. ಸಂತೆಯಿಂದ ಅಥವಾ ಫ್ಯಾನ್ಸಿಯಿಂದ ಖರೀದಿಸುತ್ತಿದ್ದ ಒಂದು ಡಜನ್ ಬಳೆ. ಒಂದು ಕುಟುಂಬಕ್ಕೆ ಒಂದು ಅಥವಾ ಎರಡು ಕಪಾಟು. ಹೀಗೆ ಅಗತ್ಯವಿರುಷ್ಟು ಮಾತ್ರ ಎಲ್ಲಾ ಸಾಮಾನುಗಳನ್ನು ಖರೀದಿಸುತ್ತಿದ್ದರು. ಎಲ್ಲವೂ ಅಲ್ಪಸ್ವಲ್ಪವಿದ್ದರೂ ಇದ್ದುದರಲ್ಲಿ ಸಂತೃಪ್ತವಾಗಿದ್ದರು. ಸಹೋದರ, ಪತಿ ಅಥವಾ ತಂದೆ ಖರೀದಿಸಿ ಮನೆಗೆ ತರುತ್ತಿದ್ದ ವಸ್ತ್ರ ಮತ್ತು ಉಡುಗೊರೆಗಳನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದರು.

ಎರಡು ಮೂರು ಅಥವಾ ಎಂಟು ಹತ್ತು ಸಾವಿರ ಕೊಟ್ಟು ಖರೀದಿಸಿದ ವಸ್ತ್ರದ ಬೆಲೆಯು ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಮಹಿಳೆಯರ ಬಾಯಲ್ಲಿ ಎರಡೋ ಮೂರೋ ಪಟ್ಟು ಹೆಚ್ಚಾಗುತ್ತದೆ. ತಮ್ಮಲ್ಲಿ ಇರುವುದನ್ನೋ ಇಲ್ಲದನ್ನೋ ಪ್ರದರ್ಶಿಸಬೇಕೆಂಬ ಭಾವನೆಯು ಅವರನ್ನು ಸುಳ್ಳು ಹೇಳಲು ಪ್ರೇರೇಪಿಸುತ್ತದೆ, ಕುಟುಂಬದ ಸದಸ್ಯರ ಮಧ್ಯೆ ಬೆಲೆಬಾಳುವ ವಸ್ತ್ರ ಧರಿಸುವಲ್ಲಿ ಪೈಪೋಟಿಯನ್ನುಂಟು ಮಾಡುತ್ತಾ ಕುಟುಂಬ ಸಂಬಂಧವನ್ನು ಶಿಥಿಲಗೊಳಿಸುತ್ತದೆ. ಹಣವಿಲ್ಲದವರನ್ನು ಸಾಲ ಪಡೆಯಲು, ಬೇಡಲು ಪ್ರೋತ್ಸಾಹಿಸುತ್ತದೆ, ಮೊದಲೇ ಸಾಲವಿರುವವರು ಅದನ್ನು ಮರು ಪಾವತಿಸಲೂ ಅಸಡ್ಡೆ ತೋರುವಂತೆ ಮಾಡುತ್ತದೆ. ಜನರನ್ನು ಅಕ್ರಮ ಮಾರ್ಗಗಳಿಂದ ಹಣ ಸಂಪಾದಿಸಲು ಪ್ರೋತ್ಸಾಹಿಸುತ್ತದೆ. ಹಣವಿದ್ದರವನ್ನು ಸ್ವಾರ್ಥರನ್ನಾಗಿ ಮಾಡುತ್ತದೆ. ಇರುವುದೆಲ್ಲವನ್ನೂ ಅಗತ್ಯವಿಲ್ಲದೆ ತಮಗೆ ಖರ್ಚು ಮಾಡಬೇಕೆನ್ನುವ ಭಾವನೆ ಬಡವರ ಹಕ್ಕನ್ನು ನೀಡಲು ನಿರಾಕರಿಸುತ್ತದೆ.

ನಮ್ಮಲ್ಲಿ ಎರಡು ಹಬ್ಬಕ್ಕೆ ಯಾರೂ ದುಬಾರಿಯಾದ ವಸ್ತ್ರ ಧರಿಸುವುದಿಲ್ಲ. ಏಕೆಂದರೆ ವಸ್ತ್ರವನ್ನು ನೋಡುವವರು ಯಾರೂ ಇಲ್ಲ. ಮದುವೆ ಸಮಾರಂಭಗಳಲ್ಲಾದರೆ ಸಾವಿರಾರು ನೆಂಟರಿರುತ್ತಾರೆ. ಬೆಲೆಬಾಳುವ ಹೊಸ ಮಾದರಿಯ ವಸ್ತ್ರ ಧರಿಸಿದಾಗ ಜೀವನದಲ್ಲಿ ಅದೇನೋ ದೊಡ್ಡ ಸಾಧನೆ ಮಾಡಿದಂತಹ ಹೆಮ್ಮೆ. ವಿವಾಹ ಸಮಾರಂಭಗಳು ವಸ್ತ್ರಾಭರಣ, ಸೌಂದರ್ಯ ಪ್ರದರ್ಶನಕ್ಕಿರುವ ವೇದಿಕೆ ಅಲ್ಲ. ತಮ್ಮನ್ನು ಅಲಂಕರಿಸಿ ಜಗತ್ತಿಗೆ ತೋರಿಸುವುದು ನಮ್ಮ ಜೀವನದ ನಿಜವಾದ ಉದ್ದೇಶವನ್ನೇ ಮರೆಯುವಂತೆ ಮಾಡುತ್ತದೆ. ಶ್ರೀಮಂತರಿಗೆ ಬಡವರ ಸಮಸ್ಯೆಯ ಕಡೆಗೆ ತಿರುಗಿ ನೋಡದಂತೆ ಮಾಡುತ್ತದೆ. ಬಡವರೂ ಅಷ್ಟೆ ತಮ್ಮ ಇತರೆಲ್ಲಾ ಸಮಸ್ಯೆಗಳನ್ನು ಕಡೆಗಣಿಸುತ್ತಾರೆ. ತಮ್ಮ ಕುಟುಂಬದವರ ವಿವಾಹದ ವಸ್ತ್ರಗಳಿಗೆ ಎಷ್ಟು ಹಣ ಖರ್ಚು ಮಾಡಲು ತಯಾರಿರುವವರು ಅದೇ ಕುಟುಂಬದಲ್ಲಿ ಯಾರಾದರೂ ಕಷ್ಟದಲ್ಲಿರುವಾಗ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ದೂರ ಸರಿಯುತ್ತಾರೆ. ಸ್ವತಃ ಮಕ್ಕಳೂ ಬಟ್ಟೆಗಳಿಗೆ ಎಷ್ಟು ಬೇಕಾದರೂ ಹಣ ಖರ್ಚು ಮಾಡುತ್ತಾರೆ ಆದರೆ ತಂದೆ ತಾಯಿಯ ಖರ್ಚಿಗೆ ಹಣ ನೀಡುವಾಗ ಲೆಕ್ಕ ಹಾಕುವವರೂ ಇದ್ದಾರೆ. ಮದುವೆ ಸಮಾರಂಭಗಳಲ್ಲಿ ಟಿಪ್ ಟಾಪ್ ಆಗಿ ಕಂಡರೂ ನಂತರ ಮೂಲಭೂತ ಅವಶ್ಯಕತೆಗಳಾದ ಶಾಲಾ ಫೀಸ್, ಮನೆ ಬಾಡಿಗೆ, ತುರ್ತು ಚಿಕಿತ್ಸೆಯಂತಹ ಸಂದರ್ಭದಲ್ಲಿ ಹಣವಿಲ್ಲದೆ ಪರದಾಡುವುದನ್ನು ಕಾಣುತ್ತೇವೆ.

ಮದುಮಗಳು ತನ್ನ ವಿವಾಹದಂದು ಹೊಳಪು ಥಳಪು, ಸೌಂದರ್ಯವಿರುವ ವಸ್ತ್ರ ಧರಿಸಬಹುದು. ಆದರೆ ಕೇವಲ ನಾಲ್ಕು- ಐದು ಗಂಟೆ ಧರಿಸಲು ಇಪ್ಪತ್ತು ಮೂವತ್ತು ಸಾವಿರದ ವಸ್ತ್ರಗಳ ಅಗತ್ಯವಿದೆಯೇ? ಅದಕ್ಕಿಂತಲೂ ಹೆಚ್ಚು ಖರ್ಚು ಮಾಡುವವರೂ ಇದ್ದಾರೆ. ಮದುಮಗಳ ವಸ್ತ್ರಾಭರಣವು ಶೋರೂಮ್ ನಲ್ಲಿ ಪ್ರದರ್ಶನಕ್ಕಿಟ್ಟ ಪ್ರತಿಮೆಯಂತಿರುತ್ತದೆ. ಇಂದಿಗೂ ವಿವಾಹ ಸಮಾರಂಭಗಳಿಗೆ ಹೋಗುವಾಗ ಯಾರದೋ ಆರಭರಣಗಳನ್ನು ಧರಿಸಿ ಹೋಗುವವರಿದ್ದಾರೆ. ಅದು ಕಳೆದು ಹೋದರೆ ಸಂಭವಿಸುವ ಅನಾಹುತವನ್ನು ನಾವೇ ಊಹಿಸಬಹುದಾಗಿದೆ. ಮದುಮಗಳು ಅಥವಾ ಮನೆಯವರು ಕಡಿಮೆ ಬೆಲೆಯ ಅಥವಾ ಸರಳ ವಸ್ತ್ರ ಧರಿಸಿದರೆ ನೆಂಟರಿಗೆಲ್ಲಾ ಯಾಕೋ ಅಸಮಾಧಾನ. ಉಪ್ಪು ಖಾರವಿಲ್ಲದ ಊಟವನ್ನು ನೀಡಿದಂತೆ ವರ್ತಿಸುತ್ತಾರೆ. ಮದುಮಗಳ ತಲೆಯಲ್ಲಿ ಹೂವು ಇಲ್ಲದಿದ್ದರೆ ಮದುಮಗಳು ಏನೋ ದೊಡ್ಡ ತಪ್ಪು ಮಾಡಿದಂತೆ ವರ್ತಿಸುತ್ತಾರೆ. ನಮ್ಮ ಹೊಸ ತಲೆಮಾರಿನಲ್ಲಿ ಸರಳ ಉಡುಪನ್ನು ಇಷ್ಟಪಡುವವರಿದ್ದಾರೆ. ತುಂಬಾ ಆಭರಣ ಧರಿಸಲು ಇಷ್ಟಪಡದವರು ಇದ್ದಾರೆ. ಅವರನ್ನು ನಾವು ಪ್ರೋತ್ಸಾಹಿಸಬೇಕು. ಆರ್ಥಿಕ ಸಮಸ್ಯೆ, ನಿರುದ್ಯೋಗವು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ನಮ್ಮನ್ನು ನಾವೇ ಬದಲಾಯಿಸಬೇಕು.

“ಆಡಂಬರ ಪ್ರಿಯತೆಯಿಂದ ದೂರವಿರಿ. ದೇವನ ಇಷ್ಟ ದಾಸರು ಆಡಂಬರ ಪ್ರಿಯರಾಗಿರುವುದಿಲ್ಲ.” – ಪ್ರವಾದಿ ಮುಹಮ್ಮದ್(ಸ)

ಶರೀರದ ಭಾಗಗಳನ್ನು ಮರೆಸುವುದು, ಹವಾಮಾನದಿಂದ ರಕ್ಷಿಸುವುದು ಮತ್ತು ಅಲಂಕಾರ ವಸ್ತ್ರ ಧರಿಸುವ ಉದ್ದೇಶವಾಗಿರುತ್ತದೆ. ಉಡುಪು ಅಹಂಕಾರದ ಹಾಗೂ ತೋರಿಕೆಯ ವಸ್ತ್ರವಾಗಿರಬಾರದು. ಶ್ರೀಮಂತಿಕೆಯ ಪ್ರದರ್ಶನವೂ ಆಗಿರಬಾರದು. ನಮ್ಮ ಶಕ್ತಿಗೆ ಮೀರುವಷ್ಟು ಬೆಲೆಬಾಳುವ ಬಟ್ಟೆಯನ್ನೂ ಧರಿಸಬಾರದು. ತಮ್ಮ ತಮ್ಮ ಅಂತಸ್ತಿಗೆ ತಕ್ಕಂತೆ ಹೊಸ ಮಾಡೆಲ್ ಗಳ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಧರಿಸುವುದನ್ನು ಯಾರೂ ತಪ್ಪು ಎಂದು ಹೇಳುವುದಿಲ್ಲ. ಆದರೆ ಬೆಲೆಬಾಳುವ ವಸ್ತ್ರಗಳನ್ನು ಖರೀದಿಸಿ ನಾಲ್ಕೈದು ಬಾರಿ ಧರಿಸಿ ಕಸದ ಬುಟ್ಟಿಗೆ ಹಾಕುವುದು ಸರಿಯಲ್ಲ. ಯಾವುದೇ ವಸ್ತ್ರವನ್ನು ಹಳತಾಗುವವರೆಗೆ ಧರಿಸಬೇಕು. ದೀರ್ಘಕಾಲ ಧರಿಸಲು ಸಾಧ್ಯವಾಗದ ವಸ್ತ್ರಗಳನ್ನು ಖರೀದಿಸಿ ಪ್ರಯೋಜನವೇನು? ನಮ್ಮ ಸಮಾಜದಲ್ಲಿ ಸಮವಸ್ತ್ರವನ್ನು ಖರೀದಿಸಲು ಕಷ್ಟ ಪಡುವವರೆಷ್ಟು? ಉಡಲು ಸರಿಯಾದ ವಸ್ತ್ರ ವಿಲ್ಲದವರೆಷ್ಟಿದ್ದಾರೆ. ಅವರ ಬಗ್ಗೆ ಒಮ್ಮೆಯಾದರೂ ನಾವು ಆಲೋಚಿಸಿದ್ದೇವೆಯೇ? ನಾಲ್ಕೋ ಐದೋ ಅಥವಾ ಹತ್ತು ಹದಿನೈದು ಸಾವಿರ ರೂಪಾಯಿ ಬಟ್ಟೆಗಾಗಿ ಖರ್ಚು ಮಾಡಿ ಕಪಾಟಿನಲ್ಲಿಡುವ ಬದಲು ಬಡವರಿಗೆ ಹೊಸ ವಸ್ತ್ರ ವನ್ನು ನೀಡಿ ಸ್ವರ್ಗದ ಉಡುಪನ್ನು ಖರೀದಿಸಬಹುದಾಗಿದೆ.

ಪ್ರವಾದಿ(ಸ) ಹೇಳಿರುವರು:

“ಯಾವ ವ್ಯಕ್ತಿ ಓರ್ವ ಮುಸಲ್ಮಾನನ ಮಾನ ಮುಚ್ಚುವ ಸಲುವಾಗಿ ಅವನಿಗೆ ಬಟ್ಟೆ ತೊಡಿಸುವನೋ ಅಲ್ಲಾಹನು ನಿರ್ಣಾಯಕ ದಿನದಂದು ಸ್ವರ್ಗದ ಹಸಿರು ಬಟ್ಟೆಯಿಂದ ಅವನ ಮಾನ ಮುಚ್ಚುವನು.”

ಒಂದು ವಿವಾಹಕ್ಕೆ ಹೋದಾಗ ನಮ್ಮ ಸಮುದಾಯದವರಲ್ಲಿ ಹಣವೆಷ್ಟಿದೆ, ಆಭರಣವೆಷ್ಟಿದೆ ಎಂದು ತಿಳಿಯುತ್ತದೆ. ಈ ಎಲ್ಲಾ ಹಣದ, ಆಭರಣದ ಝಕಾತ್ ಸರಿಯಾಗಿ ನೀಡುತ್ತಿದ್ದರೆ ನಮ್ಮಲ್ಲಿ ಇಂದು ಬಡವರು ಇರುತ್ತಿದ್ದರೇ ಎಂದು ಚಿಂತಿಸಬೇಕಾದ ಸಮಯವಾಗಿದೆ. ಶ್ರೀಮಂತರು ಮದುಮಗನಿಗೆ ನೀಡುವ ವಾಚ್ ಮತ್ತು ಕಾರು ನ ಬೆಲೆ ಎಷ್ಟು? ಕೇವಲ ಬ್ಯೂಟಿ ಪಾರ್ಲರ್, ಮೇಕಪ್ ಅಥವಾ ಚಪ್ಪಲಿಗೆಂದು ಖರ್ಚು ಮಾಡುವ ಹಣದಲ್ಲಿ ಅದೆಷ್ಟೋ ಬಡ ಕುಟುಂಬದ ತಿಂಗಳ ರೇಶನ್ ಕಳೆಯಬಹುದು. ಯಾವುದೇ ಶ್ರೀಮಂತರ ದುಬಾರಿ ಮದುವೆಯ ಊಟೋಪಚಾರ, ವಸ್ತ್ರಾಲಂಕಾರವನ್ನು ಹೊಗಳುತ್ತಾ ಶಿಫಾರಸ್ಸು ಮಾಡುತ್ತಾ ಹೋಗಬೇಡಿರಿ. ಇವರ ಕುಟುಂಬದಲ್ಲಿ ಯಾರೂ ಬಡವರಿಲ್ಲವೇ? ವಿಧವೆಯರು, ಅನಾಥರು, ನಿರ್ಗತಿಕರ ಹಕ್ಕನ್ನು ಇವರು ಕೊಡುತ್ತಾರೆಯೇ?

ವಿವಾಹ ಸಮಾರಂಭಗಳು ಕುಟುಂಬ ಸಂಬಂಧ ಸುದೃಢಗೊಳಿಸುತ್ತಿದೆಯಾದರೂ ಇತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ನಾಲ್ಕೈದು ದಿನಗಳ ವಿವಾಹ ಸಮಾರಂಭಕ್ಕೆ ಬೇಕಾದ ವಸ್ತ್ರಾಭರಣ ಶಾಪಿಂಗ್ ಗಳನ್ನು ಮಾಡಲು ಮಾಡಲು ದೇಶ ವಿದೇಶದ ಯಾವ ಮೂಲೆಗೆ ಹೋಗಲು ವಿಮಾನಕ್ಕೆ ಹಣ ಖರ್ಚು ಮಾಡಲು ತಯಾರಿರುತ್ತಾರೆ. ಆದರೆ ತಮ್ಮ ಝಕಾತ್ ಹಣವನ್ನು ನೀಡುವಾಗ ಮಾತ್ರ ತಮ್ಮಲ್ಲಿ ಉಳಿತಾಯವಿದೆಯೇ ಇಲ್ಲವೇ ಎಂದು ಲೆಕ್ಕ ಹಾಕುತ್ತಾರೆ, ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಲೋನ್ ಇನ್ನೂ ಬಾಕಿ ಇದೆಯೇ ಎಂದು ನೂರು ಬಾರಿ ಆಲೋಚನೆ ಮಾಡುತ್ತಾರೆ.

ಕೈಯಲ್ಲಿರುವ ಹಣವನ್ನೆಲ್ಲಾ ಬೇಕಾಬೇಡವೇ ಎಂದು ನೋಡದೆ ಖರ್ಚು ಮಾಡಿ ನಂತರ ಉಳಿತಾಯವೇ ಇಲ್ಲ ಎನ್ನುತ್ತಾ ಬಡವರಿಗೆ ಝಕಾತ್ ನೀಡಲು ಹಿಂಜರಿಯುವವರ ಸಂಖ್ಯೆ ಹೆಚ್ಛಾಗುತ್ತಿದೆ. ಕೆಲವರು ಮಾಡುವ ದುಂದುವೆಚ್ಚದಿಂದಾಗಿ ಇನ್ನು ಕೆಲವರು ಕಷ್ಟ ಅನುಭವಿಸಬೇಕಾಗುತ್ತದೆ.