ಸಾಮಾಜಿಕ ತಾಣಗಳು ನಮ್ಮ ಉಪವಾಸದ ಪುಣ್ಯವನ್ನು ಅಪಹರಿಸದಿರಲಿ

0
1004

ಖದೀಜ ನುಸ್ರತ್, ಅಬು ಧಾಬಿ

ಪುಣ್ಯಗಳ ವಸಂತಕಾಲವಾದ ಅತ್ಯಂತ ಶ್ರೇಷ್ಠ ರಮಝಾನ್ ತಿಂಗಳನ್ನು ಸ್ವಾಗತಿಸಲು ಎಲ್ಲರೂ ತಮ್ಮ ಮನೆಗಳನ್ನು ಶುಚಿಗೊಳಿಸಿ ತಯಾರು ನಡೆಸುತ್ತಿದ್ದಾರೆ. ಅದರ ಜೊತೆಗೇ ನಮ್ಮ ಮನಸ್ಸನ್ನೂ ಶುಚಿಗೊಳಿಸಬೇಕಾಗಿದೆ. ನಮ್ಮ ಮಧ್ಯೆ ಇರುವ ಕಲಹ ವಿದ್ವೇಷಗಳನ್ನು ಕೊನೆಗೊಳಿಸಿ ನಿಷ್ಕಳಂಕ ಹೃದಯದೊಂದಿಗೆ ರಮಝಾನ್ ತಿಂಗಳನ್ನು ಸ್ವಾಗತಿಸಬೇಕು. ದ್ವೇಷವು ಹೃದಯವನ್ನು ಮಲಿನಗೊಳಿಸಿ ಮನುಷ್ಯನನ್ನು ರೋಗಿಯನ್ನಾಗಿ ಮಾಡುತ್ತದೆ.

ರಮಝಾನ್ ತಿಂಗಳಿನಲ್ಲಿ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ನರಕದ ಬಾಗಿಲು ಮುಚ್ಚಲ್ಪಡುತ್ತದೆ. ಶೈತಾನನನ್ನು ಬಂಧಿಸಲಾಗುತ್ತದೆ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುವರು. ಆದರೆ ನಿಜವಾಗಿ ಸ್ವರ್ಗದ ಬಾಗಿಲು ತೆರೆಯಲ್ಪಡಬೇಕಾಗಿರುವುದು ನಮ್ಮ ಹೃದಯದಲ್ಲಿ. ನಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರದ ಹಾಗೆ ನಾವೇ ಶೈತಾನನನ್ನು ಬಂಧಿಸಬೇಕಾಗಿದೆ. ಬಾಯಿಯ ಒಳಗೆ ಹೋಗುವ ವಸ್ತುಗಳ ಬಗ್ಗೆ ನಾವು ಎಷ್ಟು ಜಾಗ್ರತರಾಗಿರುತ್ತೇವೋ ಹಾಗೆಯೇ ನಮ್ಮ ಬಾಯಿಯಿಂದ ಹೊರ ಬರುವ ಮಾತಿನ ಬಗ್ಗೆಯೂ ಜಾಗ್ರತೆವಹಿಸಬೇಕು. ರಮಝಾನ್ ತಿಂಗಳಲ್ಲಿ ಮರಣ ಹೊಂದಿದವರು ಸ್ವರ್ಗ ಹೋಗುವರೆಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಆದರೆ ದುಷ್ಕರ್ಮಗಳನ್ನು ಮಾಡಿದವರು ರಮಝಾನ್ ನಲ್ಲಿ ಮರಣ ಹೊಂದಿದರೆ ಸ್ವರ್ಗ ಹೊಂದಲು ಹೇಗೆ ತಾನೆ ಸಾಧ್ಯ.

ಉಪವಾಸದಲ್ಲಿ ಇಫ್ತಾರ್ ಮತ್ತು ಸಹರಿ ತಿನ್ನುವ ಉದ್ದೇಶ ಹೊಟ್ಟೆಯು ಹಗಲಿನಲ್ಲಿ ಕಳಕೊಂಡ ಆಹಾರವನ್ನು ರಾತ್ರಿ ವೇಳೆ ಭರ್ತಿಗೊಳಿಸುವುದಲ್ಲ. ರಮಝಾನ್ ಎಂಬುದು ಸಮೋಸ, ಕಟ್ಲೇಟ್ ಅಥವಾ ಇನ್ನಿತರ ಹೊಸ ಹೊಸ ರೀತಿಯ ಕರಿದ ತಿಂಡಿ, ಕಬಾಬ್, ಪುಡ್ಡಿಂಗ್ ಗಳನ್ನು ಮಾಡುತ್ತಾ ತಿನ್ನುವ ಮತ್ತು ಸ್ತ್ರಿಯರು ಆಹಾರವನ್ನು ತಯಾರಿಸಲಿಕ್ಕಾಗಿ ಅಡುಗೆ ಮನೆಯಲ್ಲಿ ಸಮಯ ಕಳೆಯುವುದರ ಹೆಸರಲ್ಲ. ರಮಝಾನ್ ಎಂಬುದು ಈದ್ ಗಾಗಿ ಶಾಪಿಂಗ್ ಸೆಂಟರ್ ಮತ್ತು ಪಟ್ಟಣದ ಬೀದಿ ಬೀದಿಗಳಲ್ಲಿ ಸುತ್ತಾಡುತ್ತಾ ತಯಾರಿ ನಡೆಸುವ ತಿಂಗಳೂ ಅಲ್ಲ. ಈದ್ ಗೆ ಒಂದು ಜೊತೆ ಹೊಸ ಬಟ್ಟೆಯ ಹೊರತು ಬೇರೆ ಯಾವುದೇ ದೀರ್ಘ ತಯಾರಿಕೆಯ ಅಗತ್ಯವಿಲ್ಲ. ಶಾಪಿಂಗ್ ಗಳನ್ನು ಇತರ ದಿನಗಳಲ್ಲಿ ಕೂಡಾ ಮಾಡಬಹುದು.

ಉಪವಾಸವನ್ನು ಆರಂಭಿಸುವ ಮತ್ತು ಕೊನೆಗೊಳಿಸುವ ಸಮಯವು ಪ್ರಾರ್ಥನೆ ಸ್ವೀಕರಿಸಲ್ಪಡುವ ಸಮಯವಾಗಿರುತ್ತದೆ. ಅಲ್ಲಾಹನ ಸಂತೃಪ್ತಿಯೊಂದಿಗೆ ಉಪವಾಸವನ್ನು ಆರಂಭಿಸಿ ಸಂತೋಷದಿಂದ ಉಪವಾಸ ಕೊನೆಗೊಳಿಸಬೇಕು. ರೋಗಿಗೆ ಆಹಾರದ ರುಚಿ ಸಿಗದಂತೆ ಪಾಪಿಗಳಿಗೆ ಆರಾಧನೆಯ ಮಾಧುರ್ಯ ಸಿಗಲಾರದು. ತಪ್ಪು ಮಾಡದ ಮನುಷ್ಯರಿಲ್ಲ. ನಿರಂತರ ಪಶ್ಚಾತ್ತಾಪ ಪಟ್ಟು ಮರಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ರಮಝಾನ್ ನ ದಿನಗಳಲ್ಲಿ ಒಂಟಿಯಾಗಿ ಕುಳಿತು ಅಲ್ಲಾಹನೊಂದಿಗೆ ನಮ್ಮ ಪ್ರಾರ್ಥಿಸಲು ಸಮಯ ಕಂಡುಕೊಳ್ಳಬೇಕು. ಕೇವಲ ನನಗೆ ಮಾತ್ರವಲ್ಲ, ನಮ್ಮ ಬಂಧು ಮಿತ್ರಾದಿಗಳಿಗೆ, ಕಷ್ಟದಲ್ಲಿರುವವರಿಗೆ, ರೋಗಿಗಳಿಗೆ, ಜಗತ್ತಿನಲ್ಲಿರುವ ಎಲ್ಲಾ ಮುಸ್ಲಿಮರಿಗಾಗಿ ಪ್ರಾರ್ಥಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಮಾಡುವಂತಹ ವ್ಯಾಪಾರ, ಗಳಿಸುವಂತಹ ಸಂಪತ್ತು, ಧರಿಸುವಂತಹ ಬಟ್ಟೆ, ಸೇವಿಸುವಂತಹ ಆಹಾರ ,ವಾಸಿಸುವಂತಹ ಮನೆ, ಖರ್ಚುಮಾಡುವಂತಹ ಹಣ ಧರ್ಮಸಮ್ಮತವಾಗಿದ್ದರೆ ಮಾತ್ರ ನಮ್ಮ ಪ್ರಾರ್ಥನೆಗಳು ಸ್ವಿಕರಿಸಲ್ಪಡುತ್ತದೆ.

ಪವಿತ್ರ ಕುರ್ ಆನ್ ನಮ್ಮನ್ನು ಅಲ್ಲಾಹನೊಂದಿಗೆ ಸಂಬಂಧವನ್ನು ನಿಕಟಗೊಳಿಸುವ ಕೀಲಿಕೈಯಾಗಿದೆ. ಕುರ್ ಆನ್ ಅರ್ಥವನ್ನರಿತು ಪಾರಾಯಣ ಮಾಡಲು, ಅಧ್ಯಯನ ಮಾಡಲು, ಅದರ ಆದೇಶಗಳನ್ನು ಜೀವನದಲ್ಲಿ ಪಾಲಿಸಲು ಪ್ರಯತ್ನಿಸಬೇಕು. ಕಡ್ಡಾಯ ನಮಾಝ್ ನೊಂದಿಗೆ ಸುನ್ನತ್ ನಮಾಝ್ ಗಳನ್ನು, ಝಕಾತ್ ನೊಂದಿಗೆ ಸದಕಾಗಳನ್ನು ನೀಡಲು ಪ್ರಯತ್ನಿಸಬೇಕು.

ಉಪವಾಸ ಪಾರಣೆ ಮಾಡಿಸುವುದು ಅತ್ಯಧಿಕ ಪುಣ್ಯವಿರುವ ಕರ್ಮವೆಂದು ನಮಗೆ ತಿಳಿದಿದೆ. ಆದರೆ ನಮ್ಮ ಶ್ರಮವೆಲ್ಲವೂ ಉಪವಾಸ ಪಾರಣೆ ಮಾಡಿಸುವುದೇ ಆಗಿರಬಾರದು. ಸ್ತ್ರೀಯರಿಗೆ ಅಡುಗೆ ಮನೆಯಲ್ಲಿ ಅತಿ ಕಡಿಮೆ ಸಮಯ ಕಳೆಯುವಂತಿರಬೇಕು. ಅನಾಥರಿಗೆ, ಬಡವರಿಗೆ, ಯಾತ್ರಿಕರು ಅಥವಾ ದಾರಿಹೋಕರಿಗೆ ಉಪವಾಸ ಪಾರಣೆ ಮಾಡಿಸಿರಿ. ದುಬಾರಿ ಹೋಟೆಲ್ ಗಳಲ್ಲಿ ತೋರಿಕೆಗಾಗಿ ಉಪವಾಸ ಪಾರಣೆ ಮಾಡಿಸುವುದು ಫ್ಯಾಶನ್ ಆಗಿ ಮಾರ್ಪಡುತ್ತಿದೆ. ತುಂಬಾ ಆಹಾರಗಳನ್ನು ವ್ಯರ್ಥ ಮಾಡಿದರೆ ಪುಣ್ಯಕ್ಕೆ ಬದಲಾಗಿ ಪಾಪ ಸಿಗುವ ಸಾಧ್ಯತೆಗಳೇ ಹೆಚ್ಚು. ಹಗಲಿಡೀ ಹಸಿದವನಿಗೆ ಉಪವಾಸ ಪಾರಣೆಗೆ ಮೃಷ್ಟಾನ್ನ ಭೋಜನೆಯುಣ್ಣಬೇಕೆಂಬ ಬಯಕೆಯಾದರೆ ಉಪವಾಸದ ಉದ್ದೇಶವು ಈಡೇರಬಹುದೇ?

ವಾಟ್ಸಾಪ್, ಫೇಸ್ ಬುಕ್, ಇನ್ಟರ್ ನೆಟ್ ಗಳಿಲ್ಲದ ಕಾಲದ ರಮಝಾನನ್ನು ಒಮ್ಮೆ ಆಲೋಚಿಸಿದರೆ ಇಂದು ನಮ್ಮ ಮೊಬೈಲ್ ಗಳು ನಮ್ಮನ್ನು ಆರಾಧನೆ ಮಾಡುವುದರಿಂದ ದೂರ ಸರಿಸುತ್ತಿದೆಯೇ? ಕುರ್ ಆನ್ ತೆರೆದು ನೋಡಲು ಸಮಯ ಸಿಗುತ್ತಿಲ್ಲವೇ? ಮೊಬೈಲ್ ನಿಂದ ನನ್ನ ಸಮಯ ವ್ಯರ್ಥವಾಗುತ್ತಿದೆಯೇ? ಅಥವಾ ನನ್ನ ಸತ್ಕರ್ಮದ ತಟ್ಟೆಯನ್ನು ಭಾರವಾಗಿಸಲು ಉಪಕಾರಿಯಾಗಿದೆಯೇ? ಎಲ್ಲಾ ಕಾರ್ಯವನ್ನು ಆನ್ ಲೈನ್ ನಲ್ಲಿ ಕುಳಿತುಕೊಂಡು ಮಾಡಲು ಸಾಧ್ಯವೇ? ಅನಗತ್ಯ ವಿಷಯಗಳನ್ನು ಶೇರ್ ಮಾಡುವುದನ್ನೂ, ಚರ್ಚೆ ಮಾಡುವುದನ್ನೂ ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು.

ಯಾವುದೋ ದೂರದ ಅಂಗಡಿಯಲ್ಲಿ ಸೇಲ್ ಅಥವಾ ಆಫರ್ ಗಳಿದ್ದರೆ ಎಲ್ಲಿಂದಲೂ ಜನರು ಬಂದು ಮುಗಿ ಬೀಳುತ್ತಾರೆ. ರಮಝಾನ್ ತಿಂಗಳೆಂಬುದು ಅಲ್ಲಾಹನ ಬಳಿ ನಮ್ಮ ಸತ್ಕರ್ಮಗಳಿಗೆ ಅತ್ಯಂತ ಹೆಚ್ಚು ಪ್ರತಿಫಲ ಸಿಗುವಂತಹ ತಿಂಗಳಾಗಿದೆ. ಕಡ್ಡಾಯ ಕರ್ಮಗಳೊಂದಿಗೆ ಐಚ್ಛಿಕ ಕರ್ಮಗಳನ್ನು ಮಾಡುತ್ತಾ ನಮ್ಮ ಸತ್ಕರ್ಮದ ತಟ್ಟೆಯನ್ನು ಭಾರವಾಗಿಸಲು ಗರಿಷ್ಠ ಪ್ರಯತ್ನ ನಡೆಸಬೇಕು.

ರಮಝಾನ್ ನಮ್ಮ ಜೀವನದಲ್ಲಿ ಬದಲಾವಣೆಗೆ ಕಾರಣವಾಗಲಿ. ಕೆಲವು ಋತುವಿನಲ್ಲಿ ಮಾತ್ರ ಬರುವ ಹೂವು, ಹಣ್ಣುಗಳಂತೆ ನಾವು ಕೇವಲ ರಮಝಾನ್ ಮುಸ್ಲಿಮರಾಗುವುದು ಬೇಡ. ನಿರಂತರ ಮಾಡುವ ಸತ್ಕರ್ಮಗಳನ್ನು ಅಲ್ಲಾಹನು ಇಚ್ಛಿಸುತ್ತಾನೆ. ರಮಝಾನ್ ತಿಂಗಳ ನಂತರವೂ ಐಚ್ಛಿಕ ನಮಾಝ್, ದಾನ ಧರ್ಮ, ಉಪವಾಸ, ಕುರ್ ಆನ್ ಪಾರಾಯಣ ಹಾಗೂ ಇನ್ನಿತರ ಸತ್ಕರ್ಮಗಳನ್ನು ಮಾಡಲು ಅಲ್ಲಾಹನು ಅನುಗ್ರಹಿಸಲಿ.