ಇಷ್ಟು ವರ್ಷ ಗಲ್ಫ್ ನಲ್ಲಿ ದುಡಿದ ಹಣವನ್ನು ಏನು ಮಾಡಿದಿರಿ?

0
2253

✒ಖದೀಜ ನುಸ್ರತ್, ಅಬು ಧಾಬಿ

ತಾಯ್ನಾಡಿಗೆ ಮರಳುವಿಕೆಯ ತಯಾರಿಯಲ್ಲಿ ಪ್ರವಾಸಿಗಳು… ಚರಿತ್ರೆಯಾಗುತ್ತಿರುವ ಆದಾಯದ ಮೂಲಗಳು

ಪ್ರವಾಸಿ ಜೀವನ ಅಸ್ತಮಿಸುತ್ತಿದೆ ಎಂದು ಕೇಳಲು ಆರಂಭಿಸಿ ಕೆಲವು ವರ್ಷಗಳಾದವು. ಸದ್ಯದಲ್ಲಿ ಪ್ರವಾಸಿ ಜೀವನ ಕೊನೆಗೊಳ್ಳಲಿದೆಯೇ? ಗಲ್ಫ್ ನಲ್ಲಿರುವವರೆಲ್ಲರೂ ಮರಳಿ ಬರುವರೇ? ಇಂದು ಗಲ್ಫ್ ನಲ್ಲಿರುವ ಪತಿ, ಪುತ್ರ ಅಥವಾ ಸಹೋದರ ಮರಳಿ ಬಂದರೆ ಅವರನ್ನು ಸ್ವೀಕರಿಸಲು ನಾವು ಮಾನಸಿಕವಾಗಿ ತಯಾರಿದ್ದೇವೆಯೇ? ಲಕ್ಷಾಂತರ ಪ್ರವಾಸಿಗಳು ಈಗಾಗಲೇ ಉದ್ಯೋಗ ಕಳೆದುಕೊಂಡು, ಬೇರೆ ಉದ್ಯೋಗ ಪಡೆಯುವ ಯಾವುದೇ ಅವಕಾಶವಿಲ್ಲದೆ ಸ್ವದೇಶ ತಲುಪಿದ್ದಾರೆ. ಬರುವ ಒಂದೆರಡು ವರ್ಷಗಳಲ್ಲಿ ಅದಕ್ಕಿಂತಲೂ ಹತ್ತಿಪ್ಪತ್ತು ಪಟ್ಟು ಅಧಿಕ ಮಂದಿ ಮರಳಿ ಬರಲಿದ್ದಾರೆ. ಎಕ್ಸ್ ಚೇಂಜ್ ನಿಂದ ಊರಿಗೆ ಹಣ ಕಳುಹಿಸುವುದಂತು ಕೆಲವರ ಪಾಲಿಗೆ ಚರಿತ್ರೆಯಾಗಿ ಬಿಟ್ಟಿದೆ.
ಮರಳಿ ಬಂದವರಲ್ಲಿ ಹೆಚ್ಚಿನವರು ಪುನಃ ಬೇರೆ ಬೇರೆ ಗಲ್ಫ್ ರಾಷ್ಟ್ರ ಗಳಲ್ಲಿ ಉದ್ಯೋಗ ಪಡೆಯುವ ಯಾವುದಾದರೂ ಅವಕಾಶವಿದೆಯೇ ಎಂದು ಹುಡುಕುತ್ತಿದ್ದಾರೆ.

ತಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಮಾನಸಿಕವಾಗಿ ಸಂಕಟವನ್ನು ಅನುಭವಿಸುತ್ತಿರುವವರೂ ಇದ್ದಾರೆ. ಹಲವಾರು ಸಮಯಗಳಿಂದ ಯಾವುದೇ ಸಂಭಳ ಪಡೆಯದೇ ಮತ್ತು ವಿವಿಧ ಕಾರಣಗಳಿಂದ ವೀಸಾ ನವೀಕರಣ ಮಾಡಲು ಸಾಧ್ಯವಾಗದೆ , ಸಂಬಳದ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿರುವವರು ಇದ್ದಾರೆ. ಇನ್ನುಕೆಲವು ಸಹೋದರರು ಗಲ್ಫ್ ನಲ್ಲಿ ಬ್ಯಾಂಕ್ ನಿಂದ ಸಾಲ ಪಡೆದಿದ್ದರೆ ಅದನ್ನು ಮರು ಪಾವತಿ ಮಾಡದಿದ್ದರೆ ಬ್ಯಾಂಕ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದರಿಂದ ಕೆಲಸ ಕಳೆದುಕೊಂಡರೂ ಮರಳಿ ಬರಲು ಅಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಊರಿನಲ್ಲಿ ಸಂಬಂಧಿಕರಿಂದ ಸಾಲ ಪಡೆದಿದ್ದರೆ ಅದನ್ನು ಮರು ಪಾವತಿಸದೆ ಅವರ ಮುಖ ನೋಡಲು ಸಾಧ್ಯವಿಲ್ಲ. ಬ್ಯಾಂಕ್ ನಿಂದ ಸಾಲ ಪಡೆದಿದ್ದರೆ ಬ್ಯಾಂಕ್ ಜಪ್ತಿ ಮಾಡುವ ಸಾಧ್ಯತೆಗಳಿವೆ.

ಭಾರತದ ಸದ್ಯದ ಆರ್ಥಿಕ ಪರಿಸ್ಥಿತಿಯುಲ್ಲಿ ಸ್ವದೇಶದಲ್ಲಿ ವ್ಯಾಪಾರಕ್ಕಾಗಿ ಹಣ ಹೂಡಿಕೆ ಮಾಡಲು ಎಲ್ಲರೂ ಹಿಂದೆಮುಂದೆ ನೋಡುತ್ತಿದ್ದಾರೆ.

ಹತ್ತಿಪ್ಪತ್ತು ವರ್ಷ ಗಲ್ಫ್ ನಲ್ಲಿ ದುಡಿದರೂ ಊರಿನಲ್ಲಿ ವಾಸಿಸಲು ಇಷ್ಟ ಪಡದೇ ಇರಲು ಕಾರಣವೇನು? ಅದಕ್ಕೆ ಮುಖ್ಯ ಕಾರಣ ಸಿಕ್ಕಿದ ಸಂಬಳವನ್ನೆಲ್ಲಾ ಅನಾವಶ್ಯಕ ಮತ್ತು ತೋರಿಕೆಗಾಗಿ ಖರ್ಚುಮಾಡಿ ಸಂಭ್ರಮಿಸುವುದು. ಸಂಬಳ ಹೆಚ್ಚಿದಂತೆಲ್ಲಾ ಜೀವನ ರೀತಿಯನ್ನು ಐಶಾರಾಮಗೊಳಿಸುವುದು. ಅದೂ ಸಾಕಾಗದಿದ್ದರೆ ಕ್ರೆಡಿಟ್ ಕಾರ್ಡ್ ಹಾಗು ಬ್ಯಾಂಕ್ ನಿಂದ ಸಹಾಯವನ್ನು ಪಡೆಯುವುದು. ಇಂದು ಹೆಚ್ಚಿನ ಪ್ರವಾಸಿಗಳು ಕ್ರೆಡಿಟ್ ಕಾರ್ಡ್ ಗಳ ಮಾಯಾ ಬಲೆಗೆ ಸಿಲುಕಿ ಅದರಿಂದ ಹೊರ ಬರಲು ಯಾವುದೇ ದಾರಿಯನ್ನು ಕಾಣದೆ ದಿನದಿಂದ ದಿನಕ್ಕೆ ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಪ್ರವಾಸಿಗಳ ಸಂಪಾದನೆ ಮತ್ತು ಉಳಿತಾಯದ ಒಂದು ದೊಡ್ಡ ಭಾಗವು ಮನೆ, ಕಾರು ಅಥವಾ ಇನ್ನಿತರ ಅನಾವಶ್ಯಕ ಖರ್ಚುಗಳಿಗೆ ಮಾಡಿದ ಸಾಲಕ್ಕೆ ಬಡ್ಡಿ, ಫೈನಾನ್ಸ್ ಚಾರ್ಜ್, ಪ್ರೊಸೆಸಿಂಗ್ ಫೀ ಎಂದು ಬ್ಯಾಂಕ್ ನ ಪಾಲಾಗುತ್ತಿದೆ. ಹೀಗೆ ಯಾವುದೇ ದೂರವ್ಯಾಪಿ ಯೋಜನೆಗಳಿಲ್ಲದೇ ಮಾಡುವ ಖರ್ಚುಗಳಿಂದಾಗಿ ಪ್ರವಾಸಿಗಳು ಉದ್ಯೋಗ ಕಳೆದುಕೊಂಡಾಗ ದಿವಾಳಿಯನ್ನಾಗಿ ಮಾಡುತ್ತದೆ.

ಗಲ್ಫ್ ನಲ್ಲಿ ದುಡಿದವರ ಹೆಚ್ಚಿನವರ ಉಳಿತಾಯದಲ್ಲಿ ಕೇವಲ ಒಂದು ಮನೆ ಮಾತ್ರ ನಿರ್ಮಾಣವಾಗಿರುತ್ತದೆ. ನೋಡುವ ಜನರಿಗೆ ಅತ್ಯಾಕರ್ಷಕವಾಗಿಯೂ ಎಲ್ಲ ಸೌಕರ್ಯಗಳಿಂದ ಕೂಡಿಯೂ ಇದ್ದರೆ ಗಲ್ಫ್ ನಿಂದ ಮರಳಿದಾಗ ಅದು ಯಾವುದೇ ಆದಾಯ ನೀಡುವುದಿಲ್ಲ. ಬದಲಾಗಿ ಅದರ ಸಂರಕ್ಷಣೆ ಕೂಡ ಕಷ್ಟವಾಗುತ್ತದೆ. ಸ್ವತಃ ಅಥವಾ ಕುಟುಂಬಿಕರ ವಿವಾಹ, ಹೊಸ ಹೊಸ ವಿನ್ಯಾಸದ ಬೆಲೆಬಾಳುವ ವಸ್ತ್ರ, ಬ್ರಾಂಡೆಡ್ ಶೂ, ವಾಚ್, ಸೌಂದರ್ಯ ವರ್ಧಕ ವಸ್ತುಗಳು, ಚಿನ್ನಾಭರಣ ಉಡುಗೊರೆ, ಗ್ಯಾಜೆಟ್, ವಾರಾಂತ್ಯದಲ್ಲಿ ಹೋಟೆಲ್ ನಲ್ಲಿ ಉಪಚಾರ, ಕಾರಿನಲ್ಲಿ ತಿರುಗಾಡಲು ಖರ್ಚು ಮಾಡಿದ ಹಣವೆಷ್ಟು? ಇತ್ಯಾದಿ ಅನಾವಶ್ಯಕ ಖರ್ಚುಗಳನ್ನು ಮೂಲಭೂತ ಬೇಡಿಕೆಗಳೆಂದೇ ಪರಿಗಣಿಸಿ, ಅದಕ್ಕಾಗಿ ಸಾಲ ಮಾಡುವ ಒಂದು ದೊಡ್ಡ ಜನವಿಭಾಗವೇ ನಮ್ಮ ಸಮುದಾಯದಲ್ಲಿದೆ. ಅತ್ಯಂತ ಸುಲಭ ಹಾಗೂ ಸರಳ ಆಚರಣೆಗಳಿರುವ ಧರ್ಮದ ಅನುಯಾಯಿಗಳಾಗಿಯೂ ಎಲ್ಲಾ ರೀತಿಯ ಅನಾವಶ್ಯಕ ಆಚರಣೆ, ಖರ್ಚುಗಳನ್ನು ಮಾಡುತ್ತಾ ಹೋಗುತ್ತಿರುವುದು ಖೇದಕರ ಸಂಗತಿಯಾಗಿದೆ.

ಆದಾಯದ ಒಂದು ಭಾಗವನ್ನು ಉಳಿತಾಯ ಮಾಡಿದ ನಂತರ ಇನ್ನೊಂದು ಭಾಗವನ್ನು ಅಗತ್ಯಾನುಸಾರ ಖರ್ಚು ಮಾಡುವುದು ಒಬ್ಬನ ಆರ್ಥಿಕ ಯಶಸ್ಸಿನ ಬುನಾದಿಯಾಗಿದೆ. ಅತ್ಯಧಿಕ ಲಾಭ ಸಿಗುತ್ತದೆಂಬ ಅತಿ ಆಸೆಯಿಂದ ಅಥವಾ ವಿದೇಶಿ ವಿನಿಮಯ ದರ ಉತ್ತಮವಾಗಿದೆಯೆಂದು ಬ್ಯಾಂಕ್ ನಿಂದ ಸಾಲ ಪಡೆದು ಅನಾವಶ್ಯಕವಾಗಿ ಮಾಡುವ ವ್ಯವಹಾರವು ನಮ್ಮ ಜೀವನದ ಸಮತೋಲನವನ್ನು ಕೆಡಿಸುತ್ತದೆ. ಇಂದು ಮಾರುಕಟ್ಟೆಯಲ್ಲಿರುವ ಬೇಡಿಕೆ ನಾಳೆ ಇರಬೇಕೆಂದಿಲ್ಲ ಎಂಬುದಕ್ಕೆ ಕಳೆದ ಎರಡು ವರ್ಷಗಳು ನಮಗೆ ಸಾಕ್ಷಿಯಾಗಿದೆ.

ಸಾಲವನ್ನು ಅತಿ ಅವಶ್ಯಕ ಕಾರಣಗಳಿಗೆ ಮಾತ್ರ ಪಡೆಯಬೇಕು, ಜೀವನ-ಮರಣದ ಹೋರಾಟದ ಸಂದರ್ಭ, ತುರ್ತು ಚಿಕಿತ್ಸೆ ಅಥವಾ ಇನ್ನಾವುದೇ ಮೂಲಭೂತ ಸಮಸ್ಯೆಗಳಿರುವಾಗ ಮಾತ್ರ ಸಾಲವನ್ನು ಪಡೆಯಬೇಕು. ಅದೇ ರೀತಿ ನೀಡುವಾಗಲೂ ಸಾಲಗಾರನ ಹಣಕಾಸಿನ ಅಗತ್ಯವನ್ನು ಪರಿಗಣಿಸಿ ನೀಡಬೇಕು. ಅನಾವಶ್ಯಕ ಹಾಗೂ ದುಂದು ವೆಚ್ಚ ಮಾಡುವವರಿಗೆ ಸಾಲ ನೀಡಿ ಪ್ರೋತ್ಸಾಹಿಸಬಾರದು. ಆದರೆ ಸಾಲ ಮಾಡಿಯೇ ಜೀವನ ನಡೆಸುವವರಾಗಿದ್ದರೆ ಅಥವಾ ಸಾಲ ಮರುಪಾವತಿಸದವರಾಗಿದ್ದರೆ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಯಾರೂ ನಮಗೆ ಸಾಲ ನೀಡುವುದಿಲ್ಲವೆಂಬುದನ್ನು ನೆನಪಿನಲ್ಲಿಡಬೇಕು. ನಮ್ಮ ಸಮಾಜದಲ್ಲಿ ಕೇವಲ ಬಡವರು ಮಾತ್ರವಲ್ಲ ಬೆಲೆಬಾಳುವ ಮನೆಯಲ್ಲಿ ವಾಸಿಸುವ, ಕಾರಿನಲ್ಲಿ ಓಡಾಡುವ, ಲಕ್ಷಾಂತರ ರೂಪಾಯಿ ಸಂಪಾದಿಸುವ ಶ್ರೀಮಂತರು ಕೂಡ ಸಾಲಗಾರರಾಗಿದ್ದಾರೆ ಎಂಬುದು ಕಹಿ ವಾಸ್ತವಾಗಿದೆ.

ಗಲ್ಫ್ ನಲ್ಲಿ ಉದ್ಯೋಗ ಕಳೆದುಕೊಂಡವರು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಂತೆ ನಿರಾಶರಾಗಬೇಕೆಂದಿಲ್ಲ. ಗಲ್ಫ್ ಜೀವನದ ಅಂತ್ಯವು ನಮ್ಮ ಜೀವನದ ಇನ್ನೊಂದು ಘಟ್ಟದ ಆರಂಭ ವಾಗಿರಬಹುದು. ತಾತ್ಕಾಲಿಕವಾಗಿ ಕಳೆದುಕೊಂಡಿರುವುದು ಉದ್ಯೋಗವನ್ನು ಮಾತ್ರ. ಅಲ್ಲಾಹನು ನೀಡಿರುವ ಆಯುಷ್ಯ, ಆರೋಗ್ಯ, ಬುದ್ಧಿವಂತಿಕೆಯನ್ನು ಉಪಯೋಗಿಸಿ ಅಲ್ಲಾಹನೊಂದಿಗೆ ಸಂಪೂರ್ಣ ಭರವಸೆಯಿಟ್ಟು ಮತ್ತು ಶುಭ ನಿರೀಕ್ಷೆಯೊಂದಿಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕು. ಎಲ್ಲಿದ್ದರೂ ಜೀವನಾಧಾರ ನೀಡುವವನು ಅಲ್ಲಾಹನು ಎಂಬ ದೃಢ ವಿಶ್ವಾಸ ನಮ್ಮಲ್ಲಿರಬೇಕು. “ಅಲ್ಲಾಹನನ್ನು ಭಯಪಡುತ್ತ ಕಾರ್ಯವೆಸಗುವವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ತೆರೆಯುವನು -ಮತ್ತು ಅವನು ಊಹಿಸಿಯೂ ಇರದಂತಹ ಕಡೆಗಳಿಂದ ಅವನಿಗೆ ಜೀವನಾಧಾರ ನೀಡುವನು. ಅಲ್ಲಾಹನ ಮೇಲೆ ಭರವಸೆ ಇಡುವವನ ಪಾಲಿಗೆ ಅವನೇ ಸಾಕು.”(ಅತ್ತಲಾಕ್ 2 -3)

ಇದುವರೆಗೆ ಪ್ರವಾಸಿಯಾಗಿ ಜೀವಿಸಿದವನು ಇನ್ನು ತನ್ನ ಸ್ವಂತ ತಾಯ್ನಾಡಿನಲ್ಲಿ ಪ್ರಕೃತಿ ಸೌಂದರ್ಯ ಅನುಭವಿಸುತ್ತಾ, ತನ್ನ ಮನೆಯಲ್ಲಿ, ಕುಟುಂಬದೊಂದಿಗೆ ಜೀವನ ನಡೆಸುವ ಸೌಭಾಗ್ಯ ಲಭಿಸಲಿದೆ ಎಂದು ಧನಾತ್ಮಕವಾಗಿ ಚಿಂತಿಸಬೇಕು. ನಮ್ಮ ಸಂಪತ್ತು, ಕುಟುಂಬ ಎಲ್ಲವನ್ನೂ ತೊರೆದು ಒಂದು ದಿನ ನಾವು ಇಹಲೋಕಕ್ಕೇ ಶಾಶ್ವತ ವಿದಾಯ ಹೇಳಬೇಕಾಗಿದೆ. ಆದ್ದರಿಂದ ಗಲ್ಫ್ ಗೆ ತಾತ್ಕಾಲಿಕ ವಿದಾಯ ನೀಡುವುದು ನಮ್ಮ ಜೀವನದಲ್ಲಿ ಒಂದು ಬದಲಾವಣೆ ಮಾತ್ರ. ಜೀವನವೆಂದರೆ ಸೋಲು ಗೆಲುವು ನೋವು ನಲಿವು ಕಷ್ಟ ಸುಖ ಸಂತೋಷ ದುಃಖ ಎಲ್ಲವೂ ಇದೆ. ಯಾವುದೇ ಸಮಯದಲ್ಲಿ ತಾಯ್ನಾಡಿಗೆ ಮರಳಲಿಕ್ಕಾಗಿ ಆರ್ಥಿಕವಾಗಿಯೂ ಮಾನಸಿಕವಾಗಿಯೂ ತಯಾರಾಗಿರಬೇಕು.

ತಮ್ಮ ಅಲ್ಪ ಸಂಪಾದನೆಯಿಂದ ಕುಟುಂಬಿಕರ ಮಾಸಿಕ ಖರ್ಚು, ಅನಾರೋಗ್ಯ, ವಿದ್ಯಾಭ್ಯಾಸ ಹಾಗೂ ಅನಾಥರು, ವಿಧವೆಯರಿಗೆ ಆಸರೆ ಯಾಗುತ್ತಾ ಜೀವನ ಸಾಗಿಸುವವರೂ ಇದ್ದಾರೆ. ಎಷ್ಟು ವರ್ಷ ಗಲ್ಫ್ ನಲ್ಲಿ ದುಡಿದರೂ ಸ್ವಂತ ಮನೆ ನಿರ್ಮಿಸಲೂ ಸಾಧ್ಯವಾಗದವರೂ ಇದ್ದಾರೆ. ಊರಿನಲ್ಲಿರುವ ಕುಟುಂಬಿಕರು ಉದ್ಯೋಗ ಕಳೆದು ಕೊಂಡು ಬರುವವರಿಗೆ ಸಾಂತ್ವನ ನೀಡುತ್ತಾ ಧೈರ್ಯ ತುಂಬಬೇಕು. ಮಗಳ ಮದುವೆ ಅಥವಾ ಸ್ವಂತ ಮನೆ ಅಥವಾ ಅಂಗಡಿ ಆಗುವವರೆಗೆ ಅಲ್ಲೇ ದುಡಿಯಿರಿ ಎಂದು ಒತ್ತಾಯಪಡಿಸದಿರಿ. ಇಷ್ಟು ವರ್ಷ ದುಡಿದ ಹಣವೆಲ್ಲ ಏನು ಮಾಡಿದಿರಿ? ಎಂಬ ಹರಿತವಾದ ಮಾತಿನಿಂದ ಮನ ನೋಯಿಸುತ್ತಾ ಸ್ವಾಗತಿಸದಿರಿ. ಮಾತಾಪಿತರು, ಪತ್ನಿ ಮಕ್ಕಳು ಆರ್ಥಿಕ ಪರಿಸ್ಥಿತಿಯನ್ನು ಪರಸ್ಪರ ಅರ್ಥಮಾಡಿಕೊಳ್ಳುತ್ತಾ ಖರ್ಚು ಮಾಡಬೇಕು.