ತಬ್ಬಲಿ ಕರುವೊಂದನ್ನು ಬದುಕಿಸಲು ಹರಸಾಹಸ ಪಡುತ್ತಿರುವ ಮುಹಮ್ಮದ್: ಒಂದು ಪ್ರಾಣಿ ಪ್ರೀತಿಯ ಕತೆ

0
709

ಸನ್ಮಾರ್ಗ ವಾರ್ತೆ

ಇಸ್ಮತ್ ಪಜೀರ್

ಇಂದು ಬೆಳಿಗ್ಗೆ ಗೆಳೆಯ‌ ಮುಹಮ್ಮದನ ಮನೆಗೆ ಹೋಗಿದ್ದೆ. ಆತ ಸಣ್ಣ ಕೃಷಿಕ. ಜಾನುವಾರುಗಳ ಮೇಲೆ ಆತನಿಗೆ‌ ವಿಶೇಷ ಪ್ರೀತಿ.
ಈ ಚಿತ್ರದಲ್ಲಿ ಕಾಣುತ್ತಿರುವುದು ಕೇವಲ ಒಂದು ತಿಂಗಳು ಪ್ರಾಯದ ಗಂಡು ಕರು. ಇದರಮ್ಮ ಈ ಕರುವಿಗೆ ಜನ್ಮ ಕೊಟ್ಟ‌ ಮೂರನೇ ದಿನಕ್ಕೆ ಪ್ರಾಣ ತ್ಯಜಿಸಿದ್ದಾಳೆ.

ಮುಹಮ್ಮದ್ ಈ ಕರುವಿನ ಬಗ್ಗೆ ಹೇಳುತ್ತಾ ಕಣ್ಣೀರುಗೆರೆಯತೊಡಗಿದ.

ನಾನು ಇದು ಹುಟ್ಟಿದ ಮೂರನೇ ದಿನದಿಂದ ಅಂದರೆ ಇದರಮ್ಮ ಸತ್ತಂದಿನಿಂದ ಪ್ಯಾಕೆಟ್ ಹಾಲು ಕುಡಿಸಲೆತ್ನಿಸುತ್ತಿದ್ದೇನೆ. ಮೊದ ಮೊದಲು ಇದು ಬಿಲ್‌ಕುಲ್ ಕುಡಿಯಲು ಕೇಳುತ್ತಿರಲಿಲ್ಲ ಅನ್ನುವುದಕ್ಕಿಂತ ಇದಕ್ಕೆ ಬಾಟಲಿಯಲ್ಲಿ ಕುಡಿಯಲು ಆಗುತ್ತಿರಲಿಲ್ಲ. ಬಿದಿರಿನ ನಳಿಗೆ ಮಾಡಿ ಅದರಿಂದ ಕುಡಿಸಲು ಯತ್ನಿಸಿದರೂ ಅದಕ್ಕೆ ಕುಡಿಯಲು ಕಷ್ಟವಾಗುತ್ತಿತ್ತು. ಆ ಬಳಿಕ ಸ್ಪ್ರೇಯಿಂಗ್ ಬಾಟಲಿಯಲ್ಲಿ ಹಾಲು ತುಂಬಿಸಿ ಇದರ ಬಾಯಿಯನ್ನು ಕೈಯಲ್ಲಿ ತೆರೆದು ಹಿಡಿದು ಬಾಯಿಯೊಳಕ್ಕೆ ಹಾಲನ್ನು ಸ್ಪ್ರೇ ಮಾಡುತ್ತಿದ್ದೇನೆ. ಯಾಕೆಂದರೆ ಅಮ್ಮನ ಎದೆಹಾಲು‌‌ ಕರುವಿಗಾಗಲೀ, ಮನುಷ್ಯ ಮಗುವಾಗಲೀ ಹನಿ ಹನಿ ಯಾಗಿಯೇ ಹೋಗುತ್ತದೆ. ನಾವು ನಳಿಕೆಯಿಂದ ಹಾಕಿದ್ರೆ ಅದು ದೊಡ್ಡ ಪ್ರಮಾಣದಲ್ಲಿ‌ ಕರುವಿನ ಬಾಯಿಗೆ ಹೋದರೆ ಅದಕ್ಕೆ ಅದನ್ನು ಕುಡಿಯಲು ಸಾಧ್ಯವಾಗುವುದಿಲ್ಲ. ಫೀಡಿಂಗ್ ಬಾಟಲ್‌ನಲ್ಲಿ ಕೊಡೋಣವೆಂದರೆ ಅದು ಕಚ್ಚುತ್ತದೆ, ಅದರ ನಿಪ್ಪ್‌ಲ್ ಹರಿಯುತ್ತದೆ.

ದಿನಕ್ಕೆ ಮೂರು ಲೀಟರ್ ಪ್ಯಾಕೆಟ್ ಹಾಲು ಈ ತಬ್ಬಲಿ ಕರುವಿಗಾಗಿ ತರುತ್ತೇನಾದರೂ ಒಂದು ಲೀಟರ್‌ನಷ್ಟು ಹಾಲು ಕುಡಿಸುವಾಗ ಹೊರಚೆಲ್ಲಿ ಹೋಗುತ್ತದೆ. ನಾವೆಷ್ಟೇ ಪ್ಯಾಕೆಟ್ ಹಾಲು ಕುಡಿಸಿದರೂ ಅದರವ್ವನ ಎದೆಹಾಲಿಗೆ ಸಮನಾಗದು. ಮನುಷ್ಯ ಮಗುವಿಗೆ ಹೇಗೆ ಎದೆಹಾಲು ಅತ್ಯಗತ್ಯ ಮತ್ತು ಅಮೃತಸಮಾನವೋ ಹಾಗೆಯೇ ಕರುವಿಗೆ ಅದರಮ್ಮನ ಹಾಲು ಮೂರು ತಿಂಗಳವರೆಗೆ ಅತ್ಯಗತ್ಯವೂ ಅಮೃತಸಮಾನವೂ ಹೌದು.

ಅಮ್ಮನ ಎದೆಹಾಲಿಲ್ಲದೇ ಕರು ತುಂಬಾ ಬಡವಾಗಿದೆ ಕೂಡಾ. ನಾನಿದಕ್ಕೆ ಮನೆಯಲ್ಲಿ ನಮಗೆ ಮಾಡುವ ಅಕ್ಕಿಯ ತಿಂಡಿಯನ್ನು ಹಾಲಲ್ಲಿ ಬೆರೆಸಿ ತಿನ್ನಿಸಲೆತ್ನಿಸಿದೆ. ಆದರೆ ಇದು ಬಿಲ್ಕುಲ್ ತಿನ್ನುವುದಿಲ್ಲ , ಅದಕ್ಕೆ ತಿನ್ನಲು ಸಾಧ್ಯವಾಗುವುದಿಲ್ಲ. ಹಾಗೆಯೇ ಅನೇಕ ಬಾರಿ ಸ್ವಲ್ಪ ಹಸಿಹುಲ್ಲನ್ನು ತಂದು ಹಾಕಿದೆ.. ಅದೆಲ್ಲಾ ತಿನ್ನುವ ವಯಸ್ಸಲ್ಲವಲ್ಲಾ…. ಇದೂ ಕೂಡಾ ನಮ್ಮ ಮಕ್ಕಳಂತೆಯೇ‌ ಅಲ್ವಾ…? ವ್ಯತ್ಯಾಸವಿಷ್ಟೆ, ಇದು ಎದ್ದು‌‌ ನಿಲ್ಲುತ್ತದೆ, ಮನುಷ್ಯ ಮಕ್ಕಳಿಗೆ ಈ ಪ್ರಾಯದಲ್ಲಿ ಎದ್ದು ನಿಲ್ಲಲಾಗದು. ಒಮ್ಮೆ ಮೂರು‌ ತಿಂಗಳಾದರೆ ಸಾಕಿತ್ತು ಮಾರಾಯ,ಈ‌ ಪುಟ್ಟ ಕರುವಿನ ಅಸಹಾಯಕತೆ ನೋಡಲಾಗುವುದಿಲ್ಲ. ನಾನಿಷ್ಟು ಕಷ್ಟಪಡುತ್ತಿರುವುದಕ್ಕೆ ಬದುಕಿದರೆ ಸಾಕಿತ್ತು ಮಾರಾಯ… ಎಂದ.

ನಾನು ಕೇಳಿದೆ, “ಬೇರೆ ಯಾವುದಾದರೂ ಹಾಲು ನೀಡುವ ದನದ ಬಳಿ ಕೊಂಡೊಯ್ದು ಬಿಡಲಾಗದೇ..?”

ಯಾವ ದ‌ನವೂ ತಾನು ಹೆತ್ತ ಕರುವಿಗಲ್ಲದೇ ಬೇರೆ ಕರುಗಳಿಗೆ ಹಾಲೂಡಿಸದು ಎಂದ.

ನಾನು ಲೆಕ್ಕ ಹಾಕಿದೆ, ಈ ಕರುವನ್ನು ಮೂರು ತಿಂಗಳು‌ ಸಾಕಲು ದಿನಕ್ಕೆ ನೂರ ಇಪ್ಪತ್ತಾರು ರೂಪಾಯಿಗಳ ಲೆಕ್ಕದಲ್ಲಿ ಸುಮಾರು ಹನ್ನೊಂದೂವರೆ ಸಾವಿರ ರೂಪಾಯಿ ಖರ್ಚಾಗುತ್ತದೆ. ನೀವು ಕೇಳಬಹುದು ದನ ಸಾಕಲೂ ಖರ್ಚಿಲ್ಲವೇ…? ಇದೆ, ಆದರೆ ಅದರಿಂದ ಹಾಲೂ ಸಿಗುತ್ತದೆ.

ದನವನ್ನು ಮಾತೆಯೆನ್ನುವವರಲ್ಲೂ ನನ್ನ ಗೆಳೆಯ ಮುಹಮ್ಮದನಂತೆ ಗಂಡು ಕರುವನ್ನು ಸಾಕುವವರು ಇರಲಾರರು, ಇದ್ದರೂ ತೀರಾ ವಿರಳ.. ಹೆಣ್ಣು ಕರುವಾದರೆ ಭವಿಷ್ಯದಲ್ಲಿ ಲಾಭವಿದೆ ಎಂದು ನೋಡುವವರೇ ಹೆಚ್ಚು..

ಈ ಜಾನುವಾರುಗಳ ಮೇಲೆ ವಿಪರೀತ ಮೋಹವಿರುವವರು ಅವುಗಳನ್ನು ಸ್ವಂತ ಮಕ್ಕಳಂತೆ ಸಾಕುತ್ತಾರೆ. ನನ್ನ ಗೆಳೆಯ ಮುಹಮ್ಮದ್ ಹೇಳುತ್ತಿರುವಾಗ ನಾನೂ ಭಾವುಕನಾಗಿಬಿಟ್ಟೆ..

ಅದರ ಪಕ್ಕವೇ ಕೂತು ಈ ವಿಚಾರಗಳನ್ನೆಲ್ಲಾ ಹೇಳಿ ಮುಗಿಸಿ ಆ ತಬ್ಬಲಿ ಕರುವನ್ನೊಮ್ಮೆ ಮುದ್ದಾಡಿ ಆತ ಅಲ್ಲಿಂದ ಎದ್ದು ಬಂದ..

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.