ಪ್ರಜ್ಞಾಸಿಂಗ್ ಗೆಲುವಿನ ವಿರುದ್ಧ ಮಧ್ಯಪ್ರದೇಶ ಹೈಕೋರ್ಟಿನಲ್ಲಿ ತಕರಾರು ಅರ್ಜಿ: ಇವಿಎಂ ತಿರುಚಲಾಗಿದೆ ಎಂಬ ಆರೋಪ

0
741

ಭೋಪಾಲ, ಜು. 10: ಲೋಕಸಭಾ ಚುನಾವಣೆಯಲ್ಲಿ ವೋಟಿಂಗ್ ಮೆಶಿನ್‍ನಲ್ಲಿ ವ್ಯಾಪಕ ಅಕ್ರಮ ನಡೆಸುವ ಮೂಲ ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಹಿತ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶ ಹೈಕೋರ್ಟಿನಲ್ಲಿ ಹತ್ತೊಂಬತ್ತು ಅರ್ಜಿಗಳು ದಾಖಲಾಗಿವೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮತಯಂತ್ರ ಅಕ್ರಮವೆಸಗಿ ಬಿಜೆಪಿ ಗೆದ್ದಿದೆ ಎಂದು ಆರೋಪಿಸಿ ಅರ್ಜಿಗಳು ದಾಖಲಾಗಿದ್ದು ಇದರಲ್ಲಿ ಹದಿನೇಳು ಅರ್ಜಿಗಳು ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳದ್ದಾಗಿವೆ. ಎರಡು ಅರ್ಜಿಗಳು ರಾಜ್ಯದ ಮತದಾರರ ಮೂಲಕ ಸಲ್ಲಿಕೆಯಾಗಿವೆ.

ಸಂಘಪರಿವಾರ ನಾಯಕಿ ಪ್ರಜ್ಞಾ ಸಿಂಗ್ ಚುನಾವಣೆಯಲ್ಲಿ ಗೆಲ್ಲಲು ಕೋಮುವಾದ, ಭ್ರಷ್ಟಾಚಾರ ವೆಸಗಿದ್ದಾರೆ ಎಂದು ಆರೋಪಿಸಿ ಭೋಪಾಲದ ಪತ್ರಕರ್ತ ರಾಕೇಶ್ ದೀಕ್ಷಿತ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಜ್ಞಾ ಸಿಂಗ್ ಕೋಮುವಾದಿ ಹೇಳಿಕೆ ನೀಡಿ ಧಾರ್ಮಿಕ ದ್ವೇಷ ಹರಡಿದರು. ಇದು ಜನಪ್ರಾತಿನಿಧ್ಯ ಕಾನೂನಿನ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಬೆಟ್ಟುಮಾಡಲಾಗಿದೆ.

ಸಿದ್ಧಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದನಾಗಿ ಆಯ್ಕೆಯಾಗಿರುವ ರಿತಿ ಪಾಠಕ್‍ರಿಗಾಗಿ ಮಂತಯಂತ್ರ ತಿರುಚಲಾಗಿದೆ ಎಂದು ಈ ಕುರಿತು ತನಿಖೆ ನಡೆಸಬೇಕೆಂದು ಮತದಾರ ರಾಜ್‍ಕುಮಾರ್ ಚೌಹಾನ್ ಹೈಕೋರ್ಟಿಗೆ ದೂರು ನೀಡಿದ್ದಾರೆ. ಮೇ 23ರಂದು ನಡೆದ ಮತದಾನಕ್ಕೆ ತಂದ ಮತಯಂತ್ರಗಳ ಬ್ಯಾಟರಿಯಲ್ಲಿ ಕಡಿಮೆ ಚಾರ್ಜ್ ಇತ್ತು. ಮತದಾನ ಅರ್ಧಾಂಶ ನಡೆಯುವ ಮೊದಲೇ ಯಂತ್ರಗಳು ಕೆಟ್ಟುಹೋಗಿದ್ದವು ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಗುಲಾಭ್ ಸಿಂಗ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.