ಜಮಾಅತೆ ಇಸ್ಲಾಮೀ ಕಾಪು ವರ್ತುಲದಿಂದ ಸ್ವಾವಲಂಬನೆಯ ಬದುಕು ಕಟ್ಟಲು ನೆರವು

0
160

ಸನ್ಮಾರ್ಗ ವಾರ್ತೆ

ಕಾಪು:ಕಾಪು ತಾಲೂಕು ವ್ಯಾಪ್ತಿಯ ಮುದರಂಗಡಿಯಲ್ಲಿ, ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಹಾಗೂ ನಾಲ್ಕು ಎಳೆ ಪ್ರಾಯದ ಮಕ್ಕಳೊಂದಿಗೆ ಜೀವಿಸುತ್ತಿದ್ದ ವ್ಯಕ್ತಿಯೋರ್ವರು ಕಳೆದ ವರ್ಷ ಕಾರು ಅಪಘಾತವೊಂದರಲ್ಲಿ ಸಿಲುಕಿ ಒಂದು ವರ್ಷದ ಕಾಲ ವಿಶ್ರಾಂತಿ ಪಡೆಯಬೇಕಾದ ಕಾರಣದಿಂದ ಅವರ ಕುಟುಂಬದ ಬದುಕು ದುಸ್ತರವಾಗಿತ್ತು.

ಔಷೋದೋಪಚಾರ ಮತ್ತು ಕುಟುಂಬದ ನಿರ್ವಹಣೆಗೆ ಪತ್ನಿ ಬೀಡಿ ಕಟ್ಟುತಿದ್ದರೂ, ವಾರದಲ್ಲಿ ಎರಡು, ಮೂರು ದಿವಸಗಳ ಕೆಲಸ ಮಾತ್ರ ಸಿಗುತ್ತಿದ್ದುದರಿಂದ ಅದು ಸಾಕಾಗದೆ, ಸಾಲ ಸಂಸ್ಥೆಗಳಲ್ಲಿ ಸುಮಾರು ನಲ್ವತ್ತು ಸಾವಿರ ಸಾಲ ಮಾಡಿದ್ದರು. ಇತ್ತೀಚಿಗೆ ಕೊರೋನಾ ಮಹಾ ವಿಪತ್ತಿನ ಕಾರಣ, ಬೀಡಿ ಉದ್ಯಮಕ್ಕೂ ಲಾಕ್ ಆಗಿದ್ದು, ಪರಿಸ್ಥಿತಿಯು ಶೋಚನೀಯ ಮಟ್ಟಕ್ಕೆ ತಲುಪಿತ್ತು.

ಈ ಕುರಿತು ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಗಮನಕ್ಕೆ ಬಂದಾಗ ಇದರ ಸ್ಥಾನೀಯ ಅಧ್ಯಕ್ಷ ಮತ್ತು ಕಾರ್ಯದರ್ಶಿ ರೇಷನ್ ಕಿಟ್‌ನೊಂದಿಗೆ ಮನೆಗೆ ಭೇಟಿ ನೀಡಿ ವಾಸ್ತವಿಕತೆಯ ಅಧ್ಯಯನ ನಡೆಸಿದ್ದರು. ಬಾಡಿಗೆ ಮನೆಯ ಠೇವಣಿ ಹಾಗೂ ಬಾಡಿಗೆ ಭರಿಸಲಾಗದೇ ಅವಧಿಯೂ ಕೂಡಾ ಮುಗಿದಿರುವ ಕಾರಣ ಕಂಗಾಲಾಗಿರುವುದನ್ನು ಗಮನಿಸಿ ತುರ್ತು ನೆರವಿಗಾಗಿ ಇಪ್ಪತ್ತು ಸಾವಿರ ರೂಪಾಯಿ ನೀಡಿತ್ತು.

ತದನಂತರ ಇವರ ವಿಶ್ರಾಂತಿಯ ಅವಧಿ ಮುಗಿದಿದ್ದು, ಈ ಮುಂಚೆ ನಿರ್ವಹಿಸುತ್ತಿದ್ದ ಕಬಾಟು ಮಾರಾಟದ ವ್ಯಾಪಾರಕ್ಕೆ ಪುನಃ ದಾನಿಗಳಿಂದ ಇಪ್ಪತ್ತು ಸಾವಿರ ರೂಪಾಯಿ ಸಂಗ್ರಹಿಸಿ ನೀಡಿ ಸ್ವಾಭಿಮಾನದ ಬದುಕು ಕಟ್ಟಲು ಚಾಲನೆ ನೀಡುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಕಾಪು, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್, ಎಸ್. ಐ. ಓ ಹೊಣೆಗಾರರ ಅನೀಸ್ ಅಲಿ ಕಾಪು ಉಪಸ್ಥಿತರಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.