ಕಾಂಗ್ರೆಸ್ ನ ಮೆನಿಫೆಸ್ಟೋ ಸಮಿತಿ ಮತ್ತು ಮುಸ್ಲಿಂ ಚಿಂತಕರ ನಡುವೆ ನಡೆದ ಸಂವಾದ: ಹಲವು ವಿಷಯಗಳ ಬಗ್ಗೆ ಚರ್ಚೆ

0
850

ಕಾಂಗ್ರೆಸ್ ಪಕ್ಷದ ಮೆನಿಫೆಸ್ಟೋ (ಪ್ರಣಾಳಿಕೆ) ಸಮಿತಿ ಮತ್ತು ಮುಸ್ಲಿಂ ಚಿಂತಕರ ಸಭೆಯು ದೆಹಲಿಯಲ್ಲಿ ನಡೆದಿದ್ದು, ಇದರಲ್ಲಿ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ, ಕೋಮು ಸೌಹಾರ್ದಕ್ಕಾಗಿ ಅಭಿಯಾನ ಮತ್ತು ಆಡಳಿತಾತ್ಮಕ ಸುಧಾರಣೆಯೂ ಸೇರಿದಂತೆ ಹಲವಾರು ಸಲಹೆಗಳನ್ನು ಸಮಿತಿಗೆ ನೀಡಲಾಗಿದೆ. ಸಮಾಜದ ವಿವಿಧ ಸಮುದಾಯಗಳೊಂದಿಗೆ ಸಂವಾದ ಎಂಬ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಈ ಸಭೆಯನ್ನು ನಡೆಸಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಪಕ್ಷದ ಮೆನಿಫೆಸ್ಟೋ ಸಮಿತಿಯ ಸದಸ್ಯರಾದ ಸಲ್ಮಾನ್ ಖುರ್ಷಿದ್ ಮತ್ತು ಸಚಿನ್ ರಾವ್ ಅವರು ವಹಿಸಿದ್ದರು.

ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರಾದ ನಿವೃತ್ತ ನ್ಯಾಯಾಧೀಶ M S A ಸಿದ್ದೀಕ್, ಮಾಜಿ ಸಂಸದ ಅದೀಬ್ ಮತ್ತು ದೆಹಲಿಯ ಪಾರ್ಲಿಮೆಂಟ್ ರಸ್ತೆಯ ಜಾಮಾ ಮಸೀದಿಯ ಇಮಾಮ್ ಮೊಹಿಬುಲ್ಲ ನದ್ವಿ ಭಾಗವಹಿಸಿದ್ದರು.

ಸಭೆಯಲ್ಲಿ ಮೇಲೆ ಉಲ್ಲೇಖಿಸಿದ ಅಂಶಗಳ ಹೊರತಾಗಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿಯ ಹೆಚ್ಚಳ, ಮಹಿಳಾ ಸಬಲೀಕರಣ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮುಸ್ಲಿಂ ಸಮುದಾಯವನ್ನು ಸೇರಿಸಿಕೊಳ್ಳುವುದು, ಲಿಂಚಿಂಗ್, ಗುಂಪು ಹಿಂಸೆ, ದ್ವೇಷ ಭಾಷಣ ಇತ್ಯಾದಿಗಳನ್ನು ನಿಯಂತ್ರಿಸಲು ಹೊಸ ಕಾಯ್ದೆ ರೂಪಿಸಬೇಕಾದ ಅಗತ್ಯದ ಕುರಿತೂ ಚರ್ಚಿಸಲಾಗಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಮಾಡಿದೆ.