ಕಲ್ಲಡ್ಕ ಅನುಗ್ರಹ ಕಾಲೇಜಿನ ವಿದ್ಯಾರ್ಥಿನಿಯರ ಮಾದರಿ ನಡೆ: ಬಡವರ ಹೊಟ್ಟೆ ತುಂಬಿಸಿದ ಪಾಕೆಟ್ ಮನಿ

0
1450

ವರದಿ – ರಶೀದ್ ವಿಟ್ಲ

ಕಲ್ಲಡ್ಕದಲ್ಲಿ ಅನುಗ್ರಹ ಮಹಿಳಾ ಕಾಲೇಜು ಸೇವಾ ಯೋಜನೆಯ ಜೊತೆಗೆ ಸದ್ದಿಲ್ಲದೆ ಕಾರ್ಯಾಚರಿಸುತ್ತಿದೆ. ವಿದ್ಯಾರ್ಜನೆ ಜೊತೆ ಸುಸಂಸ್ಕೃತ ನಡೆ, ಹೆಣ್ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆ, ಮಾನವೀಯ ಸೇವೆಯ ದರ್ಶನ ಮಾಡಿ ಎಳೆಯ ಪ್ರಾಯದಲ್ಲೇ ಕಾರುಣ್ಯದ ನೋಟ ಬೀರಲು ಕಲಿಸಿಕೊಡುವ ಅಪೂರ್ವ ವಿದ್ಯಾಸಂಸ್ಥೆ ಕಲ್ಲಡ್ಕದ ಅನುಗ್ರಹ ಕಾಲೇಜು.

ಇಲ್ಲಿ ಪಿಯುಸಿ ಮತ್ತು ಪ್ರಥಮ ದರ್ಜೆಯಲ್ಲಿ (ಡಿಗ್ರಿ) ಕಲಿಯುವ ಸುಮಾರು 400 ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಸಂಸ್ಕಾರವನ್ನು ತುಂಬುವ ಉತ್ತಮ ಅದ್ಯಾಪಕರೂ ಇದ್ದಾರೆ. ಈ ಹೆಣ್ಮಕ್ಕಳು ಪ್ರತಿ ವರ್ಷ ಹನಿ ಹನಿಗೂಡಿ ಹಳ್ಳವಾದಂತೆ ಸಣ್ಣ ಸಣ್ಣ ಮೊತ್ತದ ರೂಪಾಯಿ, ನಾಣ್ಯಗಳನ್ನು ಪ್ರತಿವಾರ ಕೂಡಾ ಕಾಲೇಜಿನಲ್ಲಿ ಸಂಗ್ರಹಿಸಿಡುತ್ತಾರೆ. ಎಲ್ಲಾ ಹೆಣ್ಮಕ್ಕಳು ಮನೆಯಲ್ಲಿ ಬಸ್ಸಿನ ಪ್ರಯಾಣಕ್ಕೆ ಮತ್ತಿತರ ಖರ್ಚಿಗೆ ಕೊಡುವ ಮೊತ್ತದಲ್ಲಿ ಒಂದಂಶವನ್ನು ಕಾಲೇಜಿನಲ್ಲಿ ಶೇಖರಿಸುತ್ತಾರೆ. ಹೀಗೇ ಶೇಖರಿಸಿಟ್ಟ ಮೊತ್ತವನ್ನು ವರ್ಷಕ್ಕೊಮ್ಮೆ ಸೇವಾ ಯೋಜನೆಗೆ ಬಳಸುತ್ತಾರೆ.

ಈ ವರ್ಷ ಅನುಗ್ರಹ ಮಹಿಳಾ ಕಾಲೇಜು ಮಕ್ಕಳಲ್ಲಿ ಸುಮಾರು 25,000/- ರೂ. ಸಂಗ್ರಹವಾಗಿತ್ತು. ಇದನ್ನು ಹೇಗೆ ಬಳಸಬಹುದು ಎಂದು ಆಲೋಚಿಸುವಾಗ ಅವರಿಗೆ ಹೊಳೆದದ್ದು ಎಂ.ಫ್ರೆಂಡ್ಸ್’ನ ಕಾರುಣ್ಯ ಯೋಜನೆ. ವೆನ್ಲಾಕ್ ಜಿಲ್ಲಾಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ಎಂ.ಫ್ರೆಂಡ್ಸ್ ಪ್ರತಿದಿನ ಸಂಜೆ 6 ಗಂಟೆಗೆ ಡಿನ್ನರ್ ಫುಡ್ ಉಚಿತವಾಗಿ ವಿತರಿಸುತ್ತಿದೆ. ಸುಮಾರು 500 ಮಂದಿ ಬಡ, ಅಶಕ್ತ ಫಲಾನುಭವಿಗಳು ದಿನನಿತ್ಯ ಇದರ ಸದುಪಯೋಗ ಪಡೆಯುತ್ತಾರೆ. “ಕಾರುಣ್ಯ” ಹೆಸರಲ್ಲಿ ನೀಡುವ ಈ ಯೋಜನೆಗೆ ಎಂ.ಫ್ರೆಂಡ್ಸ್ ಪ್ರತಿದಿನ 7,500/- ರೂ. ಖರ್ಚು ಮಾಡುತ್ತಿದೆ. ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಈ ಯೋಜನೆ ನಿರಂತರ ನಡೆಯುತ್ತಿದೆ.

ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಗೆ ತಾವು ಸಂಗ್ರಹಿಸಿಟ್ಟಿದ್ದ 25,000/- ರೂ.ಗಳನ್ನು ನೀಡುವ ಮೂಲಕ ಕಲ್ಲಡ್ಕ ಅನುಗ್ರಹ ಕಾಲೇಜಿನ ಹೆಣ್ಮಕ್ಕಳು ಇತರ ವಿದ್ಯಾರ್ಥಿಗಳಿಗೆ ಮಾದರಿ ಮತ್ತು ಸ್ಪೂರ್ತಿಯಾಗಿದ್ದಾರೆ. ವಿದ್ಯೆ ಅನ್ನುವುದು ಕೇವಲ ಪುಸ್ತಕವಲ್ಲ. ಸೇವೆಯಲ್ಲೂ ಕಾಣಬಹುದು ಎನ್ನುವುದು ಅನುಗ್ರಹದ ಹೆಣ್ಮಕ್ಕಳ ಸಂಕಲ್ಪ. ಅವರಿಂದಾಗಿ ಹೊಟ್ಟೆ ತಣಿಸಲು ಅರ್ಹರಾದ ಸುಮಾರು 1,700 ಮಂದಿ ಬಡರೋಗಿಗಳ ಜೊತೆಗಾರರು ಹೊಟ್ಟೆ ತುಂಬಿಸುವಂತಾಯಿತು. ತಾವು ಸಂಗ್ರಹಿಸಿದ 25,000/- ರೂ. ಮೊತ್ತವನ್ನು ಕಾಲೇಜಿನಲ್ಲಿ ಗಣರಾಜ್ಯೋತ್ಸವದಂದು ನಡೆದ ಸಮಾರಂಭದಲ್ಲಿ ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಗೋಳ್ತಮಜಲು ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಕಾಲೇಜು ಅಧ್ಯಕ್ಷರಾದ ಯಾಸಿನ್ ಬೇಗ್, ಸಂಚಾಲಕ ಅಮಾನುಲ್ಲಾ ಖಾನ್, ಪ್ರಾಂಶುಪಾಲರಾದ ಗೀತಾ ಜಿ.ಭಟ್, ಎಂ.ಫ್ರೆಂಡ್ಸ್ ಸದಸ್ಯ ಆಶಿಕ್ ಕುಕ್ಕಾಜೆ, ಕಾಲೇಜು ಸದಸ್ಯರಾದ ಅಬ್ದುಲ್ ಹಮೀದ್ ಬಂಟ್ವಾಳ ಹಾಗೂ ಅಬ್ದುರ್ರಹ್ಮಾನ್, ಉಪನ್ಯಾಸಕಿ ಪ್ರಜ್ಞಾ, ಶಿಕ್ಷಕ ರಕ್ಷಕ ಸಂಘದ ಹಾಜಿರಾ, ವಿದ್ಯಾರ್ಥಿನಿಯರಾದ ಆಯಿಷಾ, ಮಿಸ್ರಿಯಾ, ಸಂಬ್ರಿನಾ ಬಾನು, ಫಾತಿಮತ್ ಅಝ್ಮಿಯಾ, ಸೌಶಾನಾ ಮೊದಲಾದವರು ಉಪಸ್ಥಿತರಿದ್ದರು. ಅನುಗ್ರಹದ ಮಕ್ಕಳು ಇಂತಹ ಮಾನವೀಯ ಸೇವೆ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಅನಾಥಾಶ್ರಮ, ವೃದ್ದಾಶ್ರಮ, ಮಕ್ಕಳ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ತಾವು ಸಂಗ್ರಹಿಸಿದ ಮೊತ್ತವನ್ನು ದಾನ ಮಾಡಿದ್ದು ಸ್ಮರಣಾರ್ಹ. ಇದು ಇತರ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತೇಜನವಾಗಲಿ.