ಕಾರ್ಕಳ: ಕುರ್ ಆನ್ ಕಂಠಪಾಠ ಮಾಡಿದ 24 ಮಕ್ಕಳಿಗೆ ಪದವಿ ಪ್ರಧಾನ

0
686

ಕಾರ್ಕಳ: ದಾರುಲ್ ಉಲೂಮ್ ಅಲ್ ಮಆರಿಫ್ ಕಾರ್ಕಳ ವತಿಯಿಂದ ಕುರ್ ಆನ್ ಸಂಪೂರ್ಣ ಕಂಠಪಾಠ ಮಾಡಿದ 24 ಮಕ್ಕಳಿಗೆ ಪದವಿ ಪ್ರದಾನ ಕಾರ್ಯಕ್ರಮವು ಹಝ್ರತ್ ಮೌಲಾನಾ ಸೈಯ್ಯದ್ ಮುಹಮ್ಮದ್ ತಲಹಾ ಸಾಹೇಬ್ ಅಲ್ ಕಾಸಿಮಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕುರ್ ಆನ್ ಸಂಪೂರ್ಣ ಕಂಠಪಾಠ ಮಾಡಿದ 24 ಮಕ್ಕಳಿಗೆ ಪದವಿ ಪ್ರದಾನ ಮಾಡಿದ ಅವರು “ಅಲ್ಲಾಹನು ಪವಿತ್ರ ಕುರ್ಆನನ್ನು ಮನುಷ್ಯ ಸಮೂಹಕ್ಕೆ ಔಷದಿಯನ್ನಾಗಿ ಅವತೀರ್ಣಗೊಳಿಸಿದ್ದಾನೆ. ಇದರಲ್ಲಿ ಮನುಷ್ಯನ ಎಲ್ಲಾ ತರಹದ ಕಾಯಿಲೆಗಳಿಗೆ ಗುಣಪಡಿಸುವ ದೇವದತ್ತ ಶಕ್ತಿ ಇದೆ. ಸಮಾಜದ ಅಭಿವೃಧ್ದಿಗೆ ಬೇಕಾಗಿರುವ ಎಲ್ಲಾ ಕಾನೂನುಗಳು ಇದರಲ್ಲಿವೆ. ಪ್ರವಾದಿ (ಸ) ರವರ ಆಗಮನಕ್ಕಿಂತ ಮುಂಚೆ ಅಜ್ಞಾನವೇ ಗೌರವದ ಸಂಕೇತವಾಗಿತ್ತು. ಹೆಣ್ಣು ಮಕ್ಕಳೆಂದರೆ ಅಪಶಕುನ ಎಂದು ತಿಳಿದು ಜೀವಂತ ಹೂಳುವ ಸಂಪ್ರದಾಯ ಅಲ್ಲಿತ್ತು. ಪ್ರವಾದಿ(ಸ) ರವರು ಅಜ್ಞಾನದ ಅಂಧಕಾರವನ್ನು ಜ್ಞಾನದ ಮಹತ್ವವನ್ನು ತಿಳಿಸುವ ಮೂಲಕ ದೂರಗೊಳಿಸಿದರು. ಹೆಣ್ಣಿನ ಮಹತ್ವವನ್ನು ಸಾರಿ, ಮನುಷ್ಯ ಜೀವದ ಗೌರವಗಳನ್ನು ಹೇಳಿದ ಮಾನವಕುಲದ ಶ್ರೇಷ್ಟ ಪ್ರವಾದಿ ಮುಹಮ್ಮದ್ (ಸ) ರವರಾಗಿದ್ದಾರೆ. ಆದ್ದರಿಂದ ಅವರನ್ನು ಅನುಸರಿಸುವ ಮೂಲಕ ತಮ್ಮನ್ನು ಸ್ವತಃ ತರಬೇತುಗೊಳಿಸೋಣ ಹಾಗೂ ಸಮಾಜದ ಉನ್ನತಿಗೆ ಶ್ರಮಿಸೋಣ” ಎಂದು ನುಡಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಮುನಾಝಿರೆ ಇಸ್ಲಾಮ್ ಹಝ್ರತ್ ಮೌಲಾನಾ ಮುಫ್ತಿ ಮಅಸೂಮ್ ಸಾಕಿಬ್ ಸಾಹೇಬ್ ಅಲ್ ಕಾಸಿಮೀಯವರು, ಮದ್ರಸಾಗಳು ಅಲ್ಲಾಹನ ವಿಶೇಷವಾದ ಕರುಣೆಗಳಾಗಿವೆ. ಮದ್ರಸ ಅಂದರೆ ಏನು ? ಮದ್ರಸದಲ್ಲಿ ಏನಿದೆ ? ಮದ್ರಸಗಳಿಂದ ಸಮುದಾಯಕ್ಕಾಗುವ ಲಾಭವಾದರೂ ಏನು ? ಎಂಬ ವಿಷಯವನ್ನುದ್ದೇಶಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅಥಿತಿ ಹಝ್ರತ್ ಮೌಲಾನಾ ಕಲೀಮುಲ್ಲಾ ಸಾಹೇಬ್ ಅಲ್ ಕಾಸಿಮೀ ಮಾತನಾಡುತ್ತಾ, ಕುರ್ ಆನ್ ಒಂದು ವೇಳೆ ಮಾನವ ನಿರ್ಮಿತ ಗ್ರಂಥವಾಗಿರುತ್ತಿದ್ದರೆ ಯಾವಗಲೇ ಅಳಿಸಿ ಹೋಗುತ್ತಿತ್ತು. ಈ ಸಮುದಾಯದ ಮಕ್ಕಳ ನೆನಪಿನ ಶಕ್ತಿ ಅಗಾಧವಾಗಿದೆ. ಇವರಿಗೆ ಅಲ್ಲಾಹನು ನೀಡಿದ ಅಸಾಧಾರಣ ಜ್ಞಾಪಕ ಶಕ್ತಿಯಿಂದ ಇಷ್ಟೊಂದು ಬೃಹತ್ ಗ್ರಂಥವನ್ನು ಕಂಠಪಾಠ ಮಾಡಿ ಜೀವನ ಪರ್ಯಂತ ನೆನಪಿನಲ್ಲಿರಿಸುತ್ತಾರೆ. ಇದೊಂದು ಬಹುದೊಡ್ಡ ದೇವದತ್ತ ಅನುಗ್ರಹವಾಗಿದೆ. ಇದನ್ನು ಜೀವನದ ಅವಿಭಾಜ್ಯ ಅಂಗವಾಗಿರಸಬೇಕು ಎಂದು ವಿಶೇಷವಾಗಿ ಒತ್ತು ಕೊಡುತ್ತಾ ಹೇಳಿದರು.

ಎರಡು ಹಂತಗಳಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮವು ಬೆಳಿಗ್ಗೆ 10 ಘಂಟೆಯಿಂದ ಪ್ರಾರಂಭವಾಗಿತ್ತು. ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮಿಯವರು ಸ್ವಾಗತ ಭಾಷಣವನ್ನು ಮಾಡಿದರು. ಮುಫ್ತಿ ಅರ್ಶದ್ ಅಲ್ ಕಾಸಿಮೀಯವರು ಕಾರ್ಯಕ್ರಮವನ್ನು ನಿರೂಪಿಸಿದರು.ಎರಡನೆಯ ಹಂತದಲ್ಲಿ ಮುಫ್ತಿ ರಿಯಾಝ್ ರವರು ಕಿರಾತ್ ಮಾಡಿದರು. ನಾತ್ ದಿಲ್ಕಶ್ ರವರು ಓದಿದರು. ಕಾರ್ಯಕ್ರಮವನ್ನು ಮುಫ್ತಿ ಇಮ್ದಾದುಲ್ಲಾರವರು ನಿರೂಪಿಸಿದರು. ದೃಶ್ಯ ಮಾಧ್ಯಮದ ವರದಿಗಾರನಾದಿ ವಿ.ಫೋರ್. ನ್ಯೂಸ್ನ ಕಾರ್ಕಳ ವಲಯದ ಪ್ರತಿನಿಧಿಯಾಗಿರುವ ಜನಾಬ್ ಖಲೀಲ್ ಅಹ್ಮದ್ರವರು ಆಗಮಿಸಿದ್ದರು. ವೇದಿಕೆಯಲ್ಲಿ ಕಾರ್ಕಳ ಮುಸ್ಲಿಮ್ ಜಮಾತ್ ಅಧ್ಯಕ್ಷರಾದ ಅಶ್ಫಾಕ್ ಅಹ್ಮದ್, ಮದ್ರಸದ ಟ್ರಸ್ಟಿ ಜನಾಬ್ ಮುಶ್ತಾಕ್ ಅಹ್ಮದ್, ಮದೀನಾ ಮಸೀದಿಯ ಇಮಾಮರಾದ ಮೌಲಾನಾ ಶಮ, ಸಿಟಿ ನರ್ಸಿಂಗ್ ಹೋಮ್ನ ಡಾಕ್ಟರ್ ರಿಝ್ವಾನ್ ಅಹ್ಮದ್, ಶಿರ್ವ ಮದ್ರಸದ ಪ್ರಾಂಶುಪಾಲರಾದ ಹಾಫಿಝ್ ಇಬ್ರಾಹಿಂ, ಕಾರ್ಯದರ್ಶಿಗಳಾದ ಸೈಯ್ಯದ್ ಯೂನುಸ್, ಹಾಗೂ ಮದ್ರಸದ ಪ್ರಾಂಶುಪಾಲರಾದ ಹಝ್ರತ್ ಮುಫ್ತಿ ಅಬ್ದುಲ್ ರಹಿಮಾನ್ ಅಲ್ ಕಾಸಿಮಿಯವರು ಉಪಸ್ಥಿತರಿದ್ದರು. ಮೌಲಾನಾ ಸೈಯ್ಯದ್ ಮುಹಮ್ಮದ್ ತಲಹಾರವರ ದುವಾದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.