ಕಟಕಟೆಯಲ್ಲಿ ಬಿಷಪ್, ಚರ್ಚ್ ಮತ್ತು ನಂಬಿಕೆ

0
342

ಕೆಲ ಪುರೋಹಿತ ವರ್ಗದವರ ಕುರಿತು ವಿಶ್ವದಾದ್ಯಂತ ಲೈಂಗಿಕ ಆರೋಪಗಳು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕ್ಯಾಥೋಲಿಕ್ ವಿಭಾಗವು ತೀವ್ರವಾದ ಧಾರ್ಮಿಕ ಸವಾಲುಗಳನ್ನು ಎದುರಿಸುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಅಂತರಾಷ್ಟ್ರೀಯ ಮಾಧ್ಯಮಗಳು ಬಿಡುಗಡೆ ಗೊ ಳಿಸಿದ ಆಂತರಿಕ ವರದಿಯ ಪ್ರಕಾರ, ಜರ್ಮನಿಯಲ್ಲಿ 1946 ರಿಂದ 2014ರ ನಡುವೆ 1670 ಕ್ಯಾಥೋಲಿಕ್ ಪುರೋಹಿತರು 3677 ಅಪ್ರಾಪ್ತರನ್ನು ಲೈಂಗಿಕ ದೌರ್ಜನ್ಯಕ್ಕೊಳಪಡಿಸಿದ್ದಾ ರೆಂದು ಹೇಳಲಾಗಿದೆ.

ವ್ಯಾಟಿಕನ್ ಅಧೀನದಲ್ಲಿರುವ ಪ್ರತಿನಿಧಿಯೂ ಅಮೇರಿಕದ ಪ್ರಮುಖ ಧರ್ಮಾಧಿ ಕಾರಿಯೂ ಆದ ಕ್ರೈಸ್ತ ಪುರೋಹಿತ ತಿಯೋಡರ್ ಮೆಕಾರ್ಟಿಕ್ ಜುಲೈ ತಿಂಗಳ ಕೊನೆಯ ವಾರದಲ್ಲಿ ಸ್ಥಾನ ತೊರೆಯಬೇಕಾಗಿ ಬಂದುದು ಲೈಂಗಿಕ ಆರೋಪಕ್ಕೊಳಗಾದ ಕಾರಣದಿಂದಾಗಿತ್ತು. ಮುನ್ನೂರು ಪುರೋಹಿತರು ಸಾವಿರಾರು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂಬ ತನಿಖಾ ವರದಿಯೂ ಅಮೇರಿಕದಿಂದ ಈ ತಿಂಗಳಲ್ಲಿಯೇ ಬಹಿರಂಗವಾಯಿತು. ಧಾರ್ಮಿಕವಾಗಿ ಜನರನ್ನು ಸಂಸ್ಕರಿಸಬೇಕಾದ ಪುರೋಹಿತರುಗಳಿಂದ ನಡೆಯುವ ಇಂತಹ ಕುಕೃತ್ಯಗಳು ಅಕ್ಷಮ್ಯವಾಗಿವೆ.

ಕ್ಯಾಥೋಲಿಕ್ ವಿಭಾಗದ ಕ್ರೈಸ್ತ ಧಾರ್ಮಿಕ ಪುರೋಹಿತರಲ್ಲಿ ಕೆಲವರಿಂದ ಲೈಂಗಿಕವಾಗಿ ಶೋಷಣೆಗೊಳಗಾದ ಮಕ್ಕಳ ನೋವನ್ನು ಅಳಲನ್ನು ಕೇಳುವಾಗ ಪೋಪ್ ಪೌಲ್ ಹೇಳಿದ, “ದೇಹದ ಒಂದು ಭಾಗಕ್ಕೆ ಹಿಂಸೆಯಾದರೆ ಸಂಪೂರ್ಣ ದೇಹವು ನೋವನುಭವಿಸುತ್ತದೆ” (1: 12- 26) ಎಂಬ ವಚನಗಳು ಹೃದಯದಲ್ಲಿ ಕಂಪನ ಉಂಟುಮಾಡುತ್ತಿದೆ, ಅಸಹಾಯಕ ಸ್ಥಿತಿ, ನೋವು, ಆಳದಲ್ಲಿ ಗಾಯವುಂಟುಮಾಡುವ ಇಂತಹ ದುಷ್ಕೃತ್ಯಗಳು ಪ್ರಥಮವಾಗಿ ಶೋಷಣೆಗೆ ಗುರಿಯಾದವರಿಗೂ ಅವರ ಕುಟುಂಬದವರಿಗೂ ವಿಶ್ವಾಸಿಗಳಿಗೂ, ಅವಿಶ್ವಾಸಿಗಳಿಗೂ ವಿರುದ್ಧವಾಗಿವೆ” ಎಂಬ ಪ್ರಾಸ್ತಾವಿಕ ನುಡಿಗಳೊಂದಿಗೆ ಪೋಪ್ ಫ್ರಾನ್ಸಿಸ್‍ರ ಸಂದೇಶಗಳು ಮುನ್ನೆಚ್ಚರಿಕೆ ಮಾತ್ರವಲ್ಲ ಭಾರತದ ಕ್ಯಾಥೋಲಿಕ್ ಸಭೆಯನ್ನೂ ಚಿಂತನೆ ಗೊಳಪಡಿಸುವಂತಹದ್ದು. ಯಾಕೆಂದರೆ ಕ್ಯಾಥೋಲಿಕ್ ಸಭೆಯು ಇತಿಹಾಸದಲ್ಲಿ ಅತ್ಯಂತ ಕಠಿಣವಾದ ಸವಾಲನ್ನು ಈಗ ಎದುರಿಸುತ್ತಿದೆ. ಕ್ರೈಸ್ತ ಭಗಿನಿಯೋರ್ವಳು ಬಿಷಪ್ ವಿರುದ್ಧ ಲೈಂಗಿಕ ಕಿರುಕುಳ ನೀಡುತ್ತಾರೆಂದು ಕೇಸು ದಾಖಲಿಸಿ ನ್ಯಾಯಕ್ಕಾಗಿ ಕ್ರೈಸ್ತ ಭಗಿನಿಯರು ಬೀದಿಗಿಳಿದ ಘಟನೆ ಭಾರತದಲ್ಲಿ ಕ್ಯಾಥೋಲಿಕ್ ಸಭಾ ಇತಿಹಾಸದಲ್ಲಿ ಮೊದಲನೆಯದ್ದು.

ಕೇರಳದ ಜಲಂಧರ್‍ನ ಬಿಷಪ್ ಫ್ರಾಂಕೋ ವಿರುದ್ಧ ಎದ್ದಿರುವಂತಹ ಲೈಂಗಿಕ ಕಿರುಕುಳ ಆರೋಪದ ಕುರಿತು ಕ್ಯಾಥೋಲಿಕ್ ಸಭಾ ತಾಳುತ್ತಿರುವ ನಿಲುವು ಏಸುಕ್ರಿಸ್ತ ಕಲಿಸಿದ ನ್ಯಾಯ ನೀತಿಗೆ ಹೊಂದುವಂತಹದ್ದಲ್ಲ. ಆದ್ದರಿಂದ ಅದು ತಾಳಿದ ನಿಲುವು ವಿಮರ್ಶೆಗೆ ಕಾರಣ ವಾಗಿದೆ. ನ್ಯಾಯಕ್ಕಾಗಿ ಕ್ರೈಸ್ತ ಭಗಿನಿಯರು ಬೀದಿ ಗಿಳಿಯ ಬೇಕಾದದ್ದು ದುರಂತವಲ್ಲವೇ? ಅವರ ನೋವನ್ನು ಆಲಿಸಿ ಪರಿಹರಿಸಲು ಕ್ಯಾಥೋಲಿಕ್ ಸಭಾ ಬಾಧ್ಯಸ್ಥವಾಗಿದೆಯೆಂಬ ಫಾದರ್ ಪೌಲ್‍ರ ಮಾತುಗಳು ಸ್ಮರಣೀಯ.

2014ರ ಮೇ ತಿಂಗಳ ಐದರಿಂದ ಎರಡು ವರ್ಷಗಳ ಕಾಲ 13 ಬಾರಿ ಅತ್ಯಾಚಾರಕ್ಕೊಳಗಾದ ಕ್ರೈಸ್ತ ಭಗಿನಿಯೋರ್ವರು ದೇಶದ ಒಳಗೂ ಹೊರಗೂ ಇರುವ ಉನ್ನತ ನಾಯಕರಿಗೆ ದೂರು ನೀಡಿಯೂ ಕ್ಯಾಥೋಲಿಕ್ ಸಭಾ ಯಾವುದೇ ನಿರ್ಧಾರ ಕೈಗೊಳ್ಳದ್ದು ಅನುಮಾನಕ್ಕೆ ಎಡೆ ಮಾಡಿದೆ. ತನಿಖೆ ನಡೆಸಲು ಅಥವಾ ಅದನ್ನು ಒಪ್ಪದಿರಲು ಈ ವಿಳಂಬ ನೀತಿ ಅನು ಸರಿಸುತ್ತಿದೆಯೇ ತಿಳಿಯುತ್ತಿಲ್ಲ. ವಿವಿಧ ಶಾಖೆಗಳ ಬಿಷಪ್‍ಗಳು ಮದರ್ ಸುಪೀರಿಯರ್‍ಗಳೂ ಅತ್ಯಾಚಾರಕ್ಕೆ ಗುರಿಯಾದ ಸನ್ಯಾಸಿನಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿವೆ. ಪೋಲೀಸ್ ತನಿಖೆಯ ವೇಳೆ ಬಿಷಪ್ ವಿರುದ್ಧ ಸಾಕ್ಷ್ಯಗಳನ್ನು ಸಲ್ಲಿಸಿದರೂ ಅಧಿಕಾರ ರೂಢರು ಬಿಷಪ್ ಫ್ರಾಂಕೋ ಪರವಾಗಿ ಒಗ್ಗಟ್ಟಾಗಿರುವಂತೆ ಕಂಡುಬರುತ್ತಿದೆ. ಕ್ಯಾಥೋಲಿಕ್ ಫೆಡರೇಶನ್ ಆಫ್ ಇಂಡಿಯಾ ಕೂಡಾ ಫ್ರಾಂಕೋ ಪರ ಇರುವಂತೆ ಕಂಡು ಬರುತ್ತಿದೆ.

ಜೊತೆಗೆ ದೂರು ನೀಡಿದ ಸನ್ಯಾಸಿನಿ ಮತ್ತು ಆಕೆಯ ಕುಟುಂಬ ದವರನ್ನು ನಿಂದಿಸಿರುವ ಸಮಿತಿಯು ಇದು ಸ್ವಯಂ ಸೃಷ್ಟಿಸಲಾದ ಪ್ರಕರಣ ಎಂದು ಪ್ರಚಾರ ಪಡಿಸುತ್ತಿದ್ದಾರೆ. ಈ ಪ್ರಕರಣವನ್ನು ನ್ಯಾಯಬದ್ಧ ರೀತಿಯಲ್ಲಿ ಎದುರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುವ ಬದಲು ಅಧಿಕಾರವನ್ನು ದುರುಪಯೋಗಿಸಿ ಪ್ರಕರಣವನ್ನು ಬುಡಮೇಲು ಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಪ್ರಕರಣದಿಂದ ಹಿಂದೆ ಸರಿಯಲು ದೂರುದಾರರಿಗೆ ಒತ್ತಡ ಹಾಕುತ್ತಿರುವುದು ಕ್ಯಾಥೋಲಿಕ್ ಸಭೆಯ ಪ್ರಾಮಾಣಿಕತೆಗೆ ಧಕ್ಕೆ ತರುವಂತಿದೆ. ಕ್ರೈಸ್ತ ಸನ್ಯಾಸಿನಿಯನ್ನು ಲೈಂಗಿಕವಾಗಿ ಶೋಷಿಸಿ ಧಾರ್ಮಿ ಕತೆ, ನೈತಿಕತೆಗೆ ಕಳಂಕ ತಂದಂತೆ ಕೇರಳದ ಪೊಲೀಸರ ಮತ್ತು ಸರಕಾರ ಪ್ರಾಮಾಣಿಕತೆಯ ಬಗ್ಗೆಯೂ ಸಂಶಯ ಉದ್ಭವಿಸಿದೆ.

ಆಡಳಿತಗಾರರ ತೀವ್ರ ಒತ್ತಡದ ಫಲವಾಗಿ ನಿಧಾನಗತಿಯಲ್ಲಿ ಸಾಗುತ್ತಿರುವ ಪ್ರಕರಣದಲ್ಲಿ ತನಿಖಾಧಿಕಾರಿಗಳು ಆರೋಪಿಗಳಿಗೆ ನೋಟಿಸು ನೀಡಿರುವುದು ಕೂಡಾ ಹೈಕೋರ್ಟು ಮಧ್ಯ ಪ್ರವೇಶಿಸಿದ ಬಳಿಕವಾಗಿತ್ತು. ಕ್ರೈಸ್ತ ಸನ್ಯಾಸಿನಿಯ ದೂರಿನಲ್ಲಿ ಸಾಕ್ಷಿ ಪುರಾವೆ ಗಳಿದ್ದರೂ ಬಿಷಪ್‍ರನ್ನು ವಿಚಾರಣೆಗೊಳಪಡಿಸದೆ ವೈದ್ಯಕೀಯ ತಪಾಸಣೆಗೊಳಪಡಿಸಲು ಪೊಲೀಸರು ಹೆದರುತ್ತಿರುವುದು ಏಕೆ? ಡಿ.ಜಿ.ಪಿ. ಹಾಗೂ ಐ.ಜಿ. ಸೇರಿ ಪ್ರಕರಣವನ್ನು ಬುಡಮೇಲುಗೊಳಿಸು ತ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರು ಆರೋಪಿಸಿರುವುದು ನಿರ್ಲಕ್ಷಿಸುವಂತಹದ್ದಲ್ಲ.

ಈ ಪ್ರಕರಣದ ಕುರಿತು ಪೊಲೀಸರ ವರ್ತನೆ ಅದನ್ನು ಪುಷ್ಟೀಕರಿಸುವಂತಿದೆ. ಸರಕಾರ ಕೂಡಾ ತೀವ್ರ ನಿರ್ಲಕ್ಷತೆ ಪಾಲಿಸುತ್ತಿದೆ. ಪೊಲೀಸರಿಂದ ಯಾವುದೇ ಲೋಪವಾಗಿಲ್ಲವೆಂದು ಮಾಧ್ಯಮದೊಂದಿಗೆ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ರಾಮನ್ ಪಿಳ್ಳೆ ಹೇ ಳಿಕೆ ನೀಡಿದ್ದಾರೆ. ಕ್ರೈಸ್ತ ಸನ್ಯಾಸಿನಿಯರ ಪ್ರತಿಭಟನೆ ಮತ್ತು ಸುಸಂಸ್ಕೃತ ಕೇರಳ ನೀಡಿದ ಬೆಂಬಲವು ನ್ಯಾಯಕ್ಕಾಗಿ ಹೋರಾಡುತ್ತಿರುವ ನೊಂದ ಯುವತಿಗೆ ಜೀವ ತುಂಬಿದೆ. ನ್ಯಾಯದ ನೆಲೆ ನಿಲ್ಲುವಿಕೆಗೆ ಕ್ರೈಸ್ತ ಸನ್ಯಾಸಿನಿಯರೂ, ಅವರ ಕುಟುಂಬಸ್ಥರೂ ಸ್ಥೈರ್ಯದಿಂದಮುನ್ನುಗುತ್ತಿದ್ದಾರೆ. ಇದು ಕ್ಯಾಥೋಲಿಕ್ ಸಭೆಯನ್ನು, ಪಾವಿತ್ರ್ಯತೆಯನ್ನು ಉಳಿಸಬಹುದು. ಕೇರಳ ಪೊಲೀಸರನ್ನು ಶುದ್ಧಗೊಳಿಸುವ ಇತಿಹಾಸವಾಗಿ ಮಾರ್ಪಡಬಹುದು.

ಅನು: ಅಬೂ ಸಫ್ವಾನ್