ಕೇಂದ್ರದ ತಲಾಕ್ ಸುಗ್ರೀವಾಜ್ಞೆ: ಪುಷ್ಪ ವರ್ಷವೋ, ಅಗ್ನಿ ವರ್ಷವೋ?

0
681

➤ ಪುನೀತ್ ಅಪ್ಪು
(ನ್ಯಾಯವಾದಿಗಳು, ಮಂಗಳೂರು)

ಕಳೆದ ವರ್ಷ ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠ ತಕ್ಷಣದ ತ್ರಿವಳಿ ತಲಾಕ್ ಅಥವಾ ತಲಾಕ್ ಅಲ್ ಬಿದ್‍ಅತ್ ಎಂಬ ಸಂಪ್ರದಾಯಿಕವೂ ಅಧಾರ್ಮಿಕವೂ ಆದ ಮುಸ್ಲಿಂ ವಿವಾಹ ವಿಚ್ಛೇದನಾ ಕ್ರಮವನ್ನು ರದ್ದುಗೊಳಿಸಿತು. ಆ ತೀರ್ಪಿನಲ್ಲಿ ಚರ್ಚಿತ ವಾದ ಮುಖ್ಯ ವಿಷಯದಲ್ಲಿ ಧಾರ್ಮಿಕವಾಗಿ ಕೆಟ್ಟದೆಂದು ಹೇಳ ಲಾದ ಆಚರಣೆಯನ್ನು ಕಾನೂನಿನಲ್ಲಿ ಒಳ್ಳೆಯದೆಂದು ಕರೆಯಲಾಗದು ಎಂಬುದು ಪ್ರಮುಖವಾಗಿತ್ತು. ಶರಿಯಾ ತತ್ವಗಳಿಗೆ ವಿರುದ್ಧವಾದ ತಕ್ಷಣದ ತ್ರಿವಳಿ ತಲಾಕನ್ನು ಅಸಾಂವಿಧಾನಿಕವೆಂದು ಘೋಷಿಸಿತು.

ಶಹಬಾನೋ ಪ್ರಕರಣದ ನಂತರದ ಐತಿಹಾಸಿಕ ತೀರ್ಪೆಂದು ಇದು ಕರೆಯಲ್ಪಟ್ಟರೂ ಶಹಬಾನೋ ತೀರ್ಪಿನಿಂದ ಅಂತಹ ಮಹತ್ವದ ಬ ದಲಾವಣೆಗಳೇನೂ ಘಟಿಸಲಿಲ್ಲ. ಅದು ಮುಸ್ಲಿಂ ಮಹಿಳಾ ವಿಚ್ಛೇದನಾ ಹಕ್ಕುಗಳ ಕಾಯ್ದೆ ಎಂಬ ಹೊಸ ಕಾನೂನಿಗೆ ನಾಂದಿಯಾಯಿತು ಮತ್ತು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 125ರ ಪ್ರಕಾರ ಮುಸ್ಲಿಂ ಮಹಿಳೆಯು ಪತಿಯಿಂದ ಜೀವನಾಂಶಕ್ಕೆ ಅರ್ಹಳು ಎಂಬ ಅಂಶಗಳು ಮುನ್ನೆಲೆಗೆ ಬಂದವು.

ಧರ್ಮಶಾಸ್ತ್ರ ಪ್ರಣೀತ ವಿಚ್ಛೇದನಾ ಪ್ರಕಿಯೆಯಾದ ತಲಾಕ್‍ನ ಪ್ರಕಾರ ಪತಿಯು ತನ್ನ ಮೊದಲನೇ ಮತ್ತು ಎರಡನೇ ತಲಾಕ್ ಉಚ್ಚರಣೆಯ ಅವಧಿಯಲ್ಲಿ ಇದ್ದತ್ ಪದ್ಧತಿಯನ್ನು ಕಾಯ್ದುಕೊಳ್ಳುವ ನಿಯಮವಿದೆ ಮತ್ತು ಪತಿ ಪತ್ನಿಯು ಒಟ್ಟಾಗಿ ದಾಂಪತ್ಯ ನಡೆಸುವ ಅವಕಾಶವಿದೆ. ಆ ಸಂದರ್ಭಗಳಲ್ಲಿ ಗುರು ಹಿರಿಯರ ಮಧ್ಯ ಪ್ರವೇಶ ಮತ್ತು ರಾಜಿ ಸಂಧಾನಗಳಿಗೂ ಅವಕಾಶವಿದೆ. ಮೂರನೆಯ ತಲಾಕ್ ಉಚ್ಚರಣೆಯ ನಂತರ ದಾಂಪತ್ಯ ಜೀವನವು ಕೊನೆಗೊಳ್ಳು ವುದು ಮತ್ತು ಮೂರನೆಯ ಇದ್ದತ್ ಆಚರಣೆಯ ನಂತರ ಮಹಿಳೆಯು ಪುನರ್‍ವಿವಾಹವಾಗ ಬಹುದು. ಪ್ರಸಕ್ತ ಲಭ್ಯ ವಿವಾಹ ವಿಚ್ಛೇದನಾ ಪ್ರಕ್ರಿಯೆಗಳಲ್ಲಿ ಇದು ಅತ್ಯುತ್ತಮ ವಿಧಾನವೇ ಸರಿ.

2017ರ ಆಗಸ್ಟ್ ತಿಂಗಳಲ್ಲಿ ಸುಪ್ರೀಮ್ ಕೋರ್ಟ್ ಶಾಯಿರಾ ಬಾನು ಪ್ರಕರಣದಲ್ಲಿ ನೀಡಿದ ತೀರ್ಪಿನ ಮುಂದುವರಿದ ಭಾಗ ವಾಗಿ ಕೇಂದ್ರ ಸರಕಾರ ಹೊಸ ಕಾನೂನೊಂದನ್ನು ಸಿದ್ಧಪಡಿಸಿದೆ. ಸದನದ ಎರಡೂ ಮನೆಗಳಲ್ಲಿ ಮಂಡಿಸಲು ವಿಫಲವಾದ ನಂತರ ಸುಗ್ರೀವಾಜ್ಞೆಯ ಮೂಲಕ ಅದನ್ನು ಹೊರತಂದಿದೆ.

ತ್ರಿವಳಿ ತಲಾಕ್ (ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷ ಣಾ ಕಾಯಿದೆ) 2017 ಹೀಗಿದೆ:

1. ಇದರ ಅನ್ವಯ ಕಲಂ 3 ರಲ್ಲಿ ವಿವರಿಸಿದಂತೆ ಗಂಡನು ತನ್ನ ಹೆಂಡತಿಗೆ ಮಾತಿನ ಮೂಲಕ ಅಥವಾ ವಿದ್ಯುನ್ಮಾನ ಮಾಧ್ಯಮಗಳಾದ ಈ ಮೇಲ್, ಎಸ್ಸ್ಮೆಮ್ಮೆಸ್ ಮೂಲಕ ತಲಾಕ್ ನೀಡಿದರೆ ಅದು ಸಿಂಧುವಾಗತಕ್ಕದ್ದಲ್ಲ. ಮತ್ತು ಅದು ಕಾನೂನು ರೀತ್ಯಾ ಅಪರಾಧವಾಗಿದ್ದು ಮೂರು ವರ್ಷಗಳ ಜೈಲು ಸಜೆಯನ್ನು ವಿಧಿಸಬೇಕಾಗಿದೆ.

2. ನೊಂದ ಮಹಿಳೆ ಸ್ವತಃ ಅಥವಾ ಆಕೆಯ ರಕ್ತ ಸಂಬಂಧಿಗಳು ದೂರು ನೀಡಬಹುದಾಗಿದೆ.

3. ಇದು ಸಂಜ್ಞೆಯ ಅಪರಾಧ ವಾಗಿದ್ದು, ಜಾಮೀನು ನೀಡುವ ಮುಂಚೆ ನ್ಯಾಯಾಲಯವು ಪತ್ನಿಯ ವಿವರಣೆಯನ್ನು ಮತ್ತು ಆಕ್ಷೇಪಣೆಯನ್ನು ಪಡೆಯಬಹುದಾಗಿದೆ.

4. ನ್ಯಾಯಾಲಯವು ಹೆಂಡತಿಯ ಕೋರಿಕೆಯಂತೆ ಮಾಶಾಸನವನ್ನು ನಿಗದಿಪಡಿಸಿ, ಗಂಡನಿಗೆ ಆದೇಶ ನೀಡಬಹುದು.

5. ಪತ್ನಿಗೆ ತನ್ನ ಮಕ್ಕಳ ಸ್ವಾಧೀನವನ್ನು ನೀಡಬಹುದು.

6. ಪ್ರಕರಣವನ್ನು ಪತ್ನಿಯು ರಾಜಿ ಮಾಡಬಹುದು.

ಇವಿಷ್ಟು ಸದ್ರಿ ಕಾನೂನಿನ ಮುಖ್ಯಾಂಶಗಳು.

ವಿವರಣೆ:
ಈ ಕಾನೂನು ಮಹಿಳೆಯ ವೈವಾಹಿಕ ಹಕ್ಕುಗಳನ್ನು ಸುಧಾರಿಸುವ ಬದಲು ಇನ್ನಷ್ಟು ಅಧಃಪತನದತ್ತ ನೂಕುತ್ತಿರುವಂತೆ ಕಂಡು ಬರುತ್ತಿದೆ. ಕಾನೂನಿನಲ್ಲಿ ಅಸಿಂಧುವಾಗಿರುವ ಮತ್ತು ಮಹಿಳೆಯ ವೈವಾಹಿಕ ಸಂಬಂಧವನ್ನು ಯಾವುದೇ ರೀತಿಯಲ್ಲಿ ಕೊನೆಗೊಳಿಸದ ಕೃತ್ಯವೊಂದನ್ನು ಅಪರಾಧೀಕರಣ ಗೊಳಿಸುವ ಅಗತ್ಯವೇನಿದೆ? ಇಲ್ಲಿ ಉಲ್ಲೇಖಿಸಲಾದ ‘ಮೌಖಿಕ ತಲಾಕ್’ ಎಂಬ ಆಧಾರದ ಮೇಲೆ ಪತ್ನಿಯು ಅಥವಾ ಆಕೆಯ ರಕ್ತ ಸಂಬಂಧಿಗಳು ಪತಿಯ ಮೇಲೆ ಪ್ರಕರಣ ದಾಖಲು ಗೊಳಿಸಬಹುದೆಂದಾದ ಮೇಲೆ ಇದನ್ನು ಸಾಬೀತು ಪಡಿಸುವುದು ತುಂಬಾ ಸುಲಭ. ಅಪರಾಧ ಸಂಹಿತೆಯಲ್ಲಿ ದೂರು ನೀಡಿದವರೇ ಆರೋಪವನ್ನು ಸಂಶಯಾತೀತವಾಗಿ ಸಾಬೀತು ಪಡಿಸ ಬೇಕಾಗಿರುವ ಕಾರಣ ಇಲ್ಲಿ ಒಂದು ಸುಳ್ಳು ದೂರು ಕೂಡಾ ಒಬ್ಬ ಪತಿ ಯನ್ನು ಮೂರು ವರ್ಷ ಜೈಲಿನಲ್ಲಿರಿಸ ಬಹುದು. ಇಲ್ಲಿ ಪತಿಗೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿ ತಾನು ನಿರ್ದೋಷಿಯೆಂದು ಸಾಬೀತು ಪಡಿ ಸಲು ಅವಕಾಶ ಕಡಿಮೆಯಿದೆ.

ಇನ್ನು ಆರೋಪಿಗೆ ಜಾಮೀನು ನೀಡುವ ಮೊದಲು ನ್ಯಾಯಾಲಯವು ಆತನ ಪತ್ನಿಯ ಅಭಿಪ್ರಾಯ ಪಡೆಯ ಬಹುದಾಗಿದೆ. ಇದು ಪರಸ್ಪರ ದುರಭಿ ಮಾನ, ಈಷ್ರ್ಯೆಗಳನ್ನು ಹುಟ್ಟು ಹಾಕಿಸ ಬಲ್ಲ ಮತ್ತು ದಾಂಪತ್ಯ ಜೀವನದ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಿಸ ಬಹುದಾದ ಒಂದು ಕೆಟ್ಟ ವಿಧಾನ. ಜಾಮೀನು ಎಂಬುದು ಯಾವುದೇ ಆರೋಪಿಯ ಶಾಸನ ಬದ್ಧ ಹಕ್ಕು. ಆ ಹಕ್ಕನ್ನು ಚಾಲ್ತಿಗೊಳಿಸಲು ನ್ಯಾಯಾ ಲಯವು ದೂರುದಾರರ ಅಭಿಪ್ರಾಯ ಕೇಳುವುದು ಸಮಂಜಸ ವಿಧಾನವೂ ಅಲ್ಲ. ಇಲ್ಲಿ ಮುಸ್ಲಿಂ ಮಹಿಳೆಗೆ ಮಕ್ಕಳ ಮೇಲಿನ ಸ್ವಾಧೀನತೆಯನ್ನು ನೀಡಬಹು ದಾಗಿದೆ. ಇದು ಶರೀಯತ್ ನಿಯಮ ಗಳಿಗೆ ವಿರುದ್ಧವಾಗಿದ್ದು.

ಇಂತಹ ಒಂದು ಅವಕಾಶವನ್ನು ಕಾಯ್ದೆಯೇ ಮಹಿಳೆಗೆ ನೀಡಿರುವ ಕಾರಣ ಪತಿ ಮತ್ತು ಪತಿಯ ಮನೆಯವರು ಮಕ್ಕಳ ಮೇಲೆ ನಿರಾಸಕ್ತಿ ತೋರಿಸಬಹುದು. ಕಾನೂನಿನಲ್ಲಿ ಅವಕಾಶ ಇರುವ ಕಾರಣ ಬೇಕಾದರೆ ಆಕೆ ಮಕ್ಕಳನ್ನು ಕರೆದುಕೊಂಡು ಎಲ್ಲಿ ಬೇಕಾದರೂ ಹೋಗಲಿ ಎಂಬ ದೋರಣೆ ತೋರಿಸಬಹುದು. ಇದು ಮಹಿಳೆಯ ಮೇಲೆ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಯನ್ನು ಹೇರಲು ಕಾರಣವಾಗಬಹುದು.

ಈ ಪ್ರಕರಣದ ದೂರಿನನ್ವಯ ಪತಿಯ ಮೇಲೆ ವಿಚಾರಣೆಯಾಗಿ ಆತನಿಗೆ ಮೂರು ವರ್ಷಗಳ ಸಜೆ ಯಾದರೆ ಆ ಮಹಿಳೆಗೆ ಇನ್ನೊಂದು ವಿವಾಹವಾಗಬಹುದೇ? ಈ ಪ್ರಶ್ನೆಗೆ ಉತ್ತರವಿಲ್ಲ. ಆಕೆ ಲಭ್ಯವಿರುವ ಕಾನೂ ನಿನ ಪ್ರಕಾರ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿ ವಿಚ್ಚೇದನೆ ಪಡೆಯಬಹುದು. ಆದರೆ ಜೈಲು ಸೇರಿರುವ ಪತಿಯಿಂದ ವಿಚ್ಚೇದನೆ ಪಡೆಯುವುದು ಸುಲಭ ಸಾಧ್ಯವೇ? ಆಕೆಯ ಖರ್ಚನ್ನು ಭರಿಸುವವರು ಯಾರು?

ಇಂತಹ ಕಾನೂನುಗಳು ಸುಖ ಸಂಸಾರದಲ್ಲಿ ಕಿಚ್ಚು ಹತ್ತಿಸಲು ಸರಕಾ ರವೇ ನಡೆಸಿದ ಹುನ್ನಾರದಂತೆ ಕಂಡು ಬರುತ್ತಿದೆ. ಪರಸ್ಪರ ಕಚ್ಚಾಡಲು ಒಂದಷ್ಟು ಅವಕಾಶ ನೀಡಬಹುದೇ ಹೊರತು ಒಬ್ಬರೊನ್ನೊಬ್ಬರು ಅರಿತು ಸಹಬಾಳ್ವೆ ನೀಡಲು ಈ ಕಾನೂನು ಸಹಕಾರಿಯಾಗಲಾರದು.