ಕಿಚ್ಚುಗತ್ತಿ ಮಾರಮ್ಮ, ಗಂಗೆ ಮತ್ತು ಗೋಪಾಲದಾಸ

0
962

ಸನ್ಮಾರ್ಗ ಸಂಪಾದಕೀಯ

ಚಾಮರಾಜನಗರದ ಕಿಚ್ಚುಗತ್ತಿ ಮಾರಮ್ಮ ದೇವಾಲಯಕ್ಕೂ ಉತ್ತರ ಭಾರತದ ಗಂಗಾ ನದಿಗೂ ನೇರವಾಗಿಯೋ ಪರೋಕ್ಷವಾಗಿಯೋ ಆಧ್ಯಾತ್ಮಿಕವಾದ ಸಂಬಂಧ ಇದೆ. ವಿಷಾದ ಏನೆಂದರೆ, ಮಾರಮ್ಮ ಗುಡಿಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿ ಸಾವಿಗೀಡಾಗುವಾಗ ಅತ್ತ ಗಂಗೆಯ ತಟದಲ್ಲಿ ಸತ್ಯಾಗ್ರಹ ನಿರತ ಸಾಧುಗಳು ನಾಪತ್ತೆಯಾಗುತ್ತಿದ್ದಾರೆ.

ಗಂಗೆಗೂ ಸಾಧುಗಳಿಗೂ ಅವಿನಾಭಾವ ನಂಟು ಇದೆ. ಗಂಗೆ ಪವಿತ್ರಳು ಅನ್ನುವ ನಂಬಿಕೆ ಹಿಂದೂಗಳದ್ದು. ಆದ್ದರಿಂದಲೇ, ಗಂಗೆಯ ಪಾವಿತ್ರ್ಯಕ್ಕೆ ಧಕ್ಕೆ ತರಬಹುದಾದ ಯೋಜನೆಗಳ ವಿರುದ್ಧ ಅವರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಪರಿಸರ ತಜ್ಞನಾಗಿ ಗುರುತಿಸಿಕೊಂಡಿದ್ದ ಮತ್ತು ಆ ಬಳಿಕ ಸನ್ಯಾಸಿಯಾಗಿ ಪರಿವರ್ತಿತರಾದ ಜಿ.ಡಿ. ಅಗರ್ವಾಲ್ ಎಂಬವರು ಉಪವಾಸ ಸತ್ಯಾಗ್ರಹ ನಿರತರಾಗಿರುತ್ತಾ ಕಳೆದ ವರ್ಷದ ಅಕ್ಟೋಬರ್ 11 ರಂದು ಸಾವಿಗೀಡಾದರು. ಗಂಗಾ ನದಿಯ ವಿವಿಧ ಉಪನದಿಗಳ ಮೇಲೆ ಸರಕಾರಿ ಯೋಜನೆಗಳು ಜಾರಿಯಾಗುವುದನ್ನು ಮತ್ತು ಮರಳು ಹಾಗೂ ಗಣಿಗಾರಿಕೆಯನ್ನು ವಿರೋಧಿಸಿ ಅವರು ಸಾವಿಗಿಂತ 5 ತಿಂಗಳ ಮೊದಲೇ ಉತ್ತರಾಖಂಡದ ಮತ್ರಿ ಸದನ್ ಆಶ್ರಮದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗಂಗೆ ಕಲುಷಿತಗೊಂಡಿರುವುದಕ್ಕೆ ಗಂಗೆಯ ಉಪನದಿಗಳಾದ ಅಲಕ್‍ನಂದಾ, ಭಾಗೀರಥಿ, ಮಂದಾಕಿನಿ, ಪಿಂದಾಕ ಇತ್ಯಾದಿಗಳ ಮೇಲೆ ಮರಳುಗಾರಿಕೆ, ಗಣಿಗಾರಿಕೆ ಮತ್ತು ಅಣೆಕಟ್ಟುಗಳ ನಿರ್ಮಾಣದಂಥ ಸರಕಾರಿ ಯೋಜನೆಗಳೇ ಕಾರಣ ಅನ್ನುವುದು ಅಗರ್ವಾಲ್‍ರೂ ಸೇರಿದಂತೆ ಅನೇಕ ಸಾಧುಗಳ ವಾದ. ಪರಿಸರ ತಜ್ಞರೂ ಇವರ ಜೊತೆ ನಿಂತಿದ್ದಾರೆ. ಅಣೆಕಟ್ಟುಗಳನ್ನು ಕಟ್ಟಿ ಹೈಡ್ರೋ ಪವರ್ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಕ್ಕೆ ಮುಂದಾಗಿರುವುದನ್ನು ಅಪಾಯಕಾರಿ ಎಂದು ಅವರು ಹೇಳುತ್ತಿದ್ದಾರೆ. ಪರಿಸರ ತಜ್ಞರಾಗಿದ್ದ ಅಗರ್ವಾಲ್ ಅವರು ಸಾಧುವಾಗಿ ಪರಿವರ್ತಿತವಾದದ್ದರ ಹಿಂದೆ ಇದರ ಪ್ರಭಾವವೂ ಇದೆ. ಅವರನ್ನು ಉತ್ತರಾಖಂಡ್ ಸರಕಾರ ಸಾಯಲು ಬಿಟ್ಟಿತು. ಇದೀಗ ಗೋಪಾಲ ದಾಸ್ ಎನ್ನುವ ಇನ್ನೋರ್ವ ಸಾಧುವೂ ನಾಪತ್ತೆಯಾಗಿದ್ದಾರೆ. ಗಂಗೆಯ ನದೀ ಪಾತ್ರದಲ್ಲಿ ಹೈಡ್ರೋಪವರ್ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿರುವುದನ್ನು ಪ್ರತಿಭಟಿಸಿ ಜೂನ್ 24 ರಿಂದ ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಅವರು ಉಪವಾಸ ಪ್ರಾರಂಭಿಸಿದ್ದರು. ಡಿಸೆಂಬರ್ 4 ರಂದು ಅವರನ್ನು ಪೋಲೀಸರು ಬಲವಂತದಿಂದ ಎತ್ತಿಕೊಂಡು ಹೋಗಿ ಡೆಹ್ರಾಡೂನಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಡಿ. 6 ರ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಕೊಲ್ಲಲಾಗಿದೆ ಎಂದು ಮತ್ರಿ ಸದನ್ ಆಶ್ರಮದ ಸ್ವಾಮಿ ಶಿವಾನಂದ್ ಹೇಳುತ್ತಾರೆ. ಇದೀಗ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಿ ಎಂದು ಗೋಪಾಲ್ ದಾಸ್ ಅವರ ತಾಯಿ ಶಕುಂತಲಾ ದೇವಿ ಉಪವಾಸ ಕೂತಿದ್ದಾರೆ.

ಗಂಗೆ ಮತ್ತು ಮಾರಮ್ಮ ಗುಡಿ ಇವು ಎರಡೂ ಬೇರೆ ಬೇರೆ ರಾಜ್ಯಗಳಲ್ಲಿರುವ ಮತ್ತು ಬೇರೆ ಬೇರೆ ಭಕ್ತರನ್ನು ಹೊಂದಿರುವ ಎರಡು ಶಕ್ತಿ ಕೇಂದ್ರಗಳು. ಎರಡಕ್ಕೂ ಮಹತ್ವ ಲಭಿಸಿರುವುದು ಆಧ್ಯಾತ್ಮಿಕ ಕಾರಣದಿಂದ. ನಿಜವಾಗಿ, ಆಧ್ಯಾತ್ಮಿಕತೆಯಲ್ಲಿ ಎರಡು ಬಗೆಯಿದೆ. ಒಂದು: ಮುಗ್ಧ ಭಕ್ತರು. ಇನ್ನೊಂದು ಆಧ್ಯಾತ್ಮಿಕ ಕೇಂದ್ರವನ್ನು ನಿಯಂತ್ರಿಸುವವರು. ಮಚ್ಚುಗತ್ತಿ ದೇವಾಲಯಕ್ಕೂ ಇದು ಅನ್ವಯಿಸುತ್ತದೆ. ಒಂದು ಕಡೆ ಮುಗ್ಧ ಭಕ್ತರಿದ್ದರೆ, ಇನ್ನೊಂದು ಕಡೆ ಈ ದೇವಾಲಯವನ್ನು ನಿಯಂತ್ರಿಸುವವರ ಮೇಲೆ ಭೂ ಅತಿಕ್ರಮಣ, ಸರಕಾರಿ ಜಮೀನು ಒತ್ತುವರಿ ಇತ್ಯಾದಿ ಆರೋಪಗಳಿವೆ. ಭಕ್ತರ ಹರಿವು ಹೆಚ್ಚಾದಂತೆಯೇ ಕಾಣಿಕೆಗಳ ಸಂಗ್ರಹವೂ ಅಧಿಕವಾಗುತ್ತದೆ. ಭಕ್ತರನ್ನು ಆಕರ್ಷಿಸುವುದಕ್ಕಾಗಿ ಮೌಡ್ಯಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಕಾಣಿಕೆಗಳ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆಂದರೆ ಆಡಳಿತಾತ್ಮಕವಾಗಿ ದುರಾಸೆಗಳೂ ಜಾಗೃತಗೊಳ್ಳುತ್ತವೆ. ಭಕ್ತರಿಗೆ ಇದು ಗೊತ್ತಿರುವುದಿಲ್ಲ. ಆದಾಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಹೊಸ ಹೊಸ ಪವಾಡಗಳನ್ನು ಹುಟ್ಟು ಹಾಕುತ್ತಿರುವುದರ ಬಗ್ಗೆಯೂ ಅರಿವಿರುವುದಿಲ್ಲ. ತಾವು ಕಣ್ಣಾರೆ ಕಾಣದಿದ್ದರೂ ಯಾರೋ ಹೇಳಿದ್ದನ್ನು, ಕೇಳಿದ್ದನ್ನು ಮನಸಾರೆ ನಂಬಿ ಭಾವುಕತೆಯನ್ನು ಅವರು ಬೆಳೆಸಿಕೊಂಡಿರುತ್ತಾರೆ. ಇವರ ಕಿವಿಗೆ ಪವಾಡದ ಸಂಗತಿಯನ್ನು ಯಾರು ತುಂಬಿಸಿರುತ್ತಾರೋ ಅವರಿಗೂ ಪವಾಡದ ಅನುಭವ ಆಗಿರುವುದಿಲ್ಲ. ಗಂಗೆಗೆ ಸಂಬಂಧಿಸಿಯೂ ಇವತ್ತು ಬಹುತೇಕ ಅಸ್ತಿತ್ವದಲ್ಲಿರುವುದು ಇದುವೇ. ಪವಿತ್ರವೆಂದು ನಂಬಿರುವ ಗಂಗೆಯನ್ನು ಅಪವಿತ್ರ ಮಾಡಿರುವುದು ಯಾವುದೋ ಕಂಪೆನಿಗಳು, ಇನ್ನಾರದೋ ಶವಗಳು, ಮಾಲಿನ್ಯಗಳು ಕಾರಣ ಎಂದೇ ಜನರನ್ನು ನಂಬಿಸಿಕೊಂಡು ಬರಲಾಗಿದೆ. ಸರಕಾರ ಅಂಥದ್ದೊಂದು ಜಾಹೀರಾತನ್ನು ಕೊಟ್ಟು ಅಪವಿತ್ರ ಗಂಗೆಯನ್ನು ಶುದ್ಧಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಯನ್ನು ಘೋಷಿಸುತ್ತದೆ. ಜನರಿಗೆ ಸರಕಾರದ ಮೇಲೆ ಪ್ರೀತಿಯೂ ಉಕ್ಕುತ್ತದೆ. ಸರಕಾರಗಳ ಗುರಿಯೂ ಇದುವೇ. ಜನರನ್ನು ನಂಬಿಸುವುದು. ಹೀಗೆ ಜನರಿಗೆ ಸರಕಾರದ ಮೇಲೆ ಒಮ್ಮೆ ನಂಬಿಕೆ ಬಂದು ಬಿಟ್ಟರೆ ಸಾಕು ಆ ಬಳಿಕ ಹಿಂದಿನ ಕ್ರಮವನ್ನೇ ಮುಂದುವರಿಸಿಕೊಂಡು ಹೋಗುವುದಕ್ಕೆ ಸರಕಾರಕ್ಕೆ ದಾರಿ ಸುಲಭವಾಗುತ್ತದೆ. ನಿಜವಾಗಿ, ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಸತ್ಯಾಗ್ರಹ ನಿರತ ಸನ್ಯಾಸಿಗಳು ಸರಕಾರದ ಈ ಧೋರಣೆಯ ವಿರೋಧಿಗಳು. ಒಂದು ಕಡೆ ಗಂಗಾ ಶುದ್ಧೀಕರಣಕ್ಕೆ ಕೋಟ್ಯಾಂತರ ಹಣವನ್ನು ಘೋಷಿಸುವ ಕೇಂದ್ರ ಮತ್ತು ಉತ್ತರಾ ಖಂಡ ಸರಕಾರಗಳು ಇನ್ನೊಂದು ಕಡೆ ಗಂಗೆಯ ಮೇಲೆ ವಿವಿಧ ಕಾರ್ಪೋರೇಟ್ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅತ್ಯಾಚಾರ ನಡೆಸುತ್ತಿದೆ ಎಂಬುದು ಅವರ ದೂರು.

ಸರಕಾರಗಳಿಗೆ ಗಂಗೆಯನ್ನು ಪವಿತ್ರಳು ಎಂದು ನಂಬುವ ಮುಗ್ಧರ ಅಗತ್ಯವಿದೆಯೇ ಹೊರತು ಗೋಪಾಲ ದಾಸ್‍ರಂತಹ ಸನ್ಯಾಸಿಗಳ ಅಗತ್ಯವಿಲ್ಲ. ಇಂಥವರನ್ನು ಸರಕಾರ ಮುಳ್ಳುಗಳಂತೆ ಪರಿಗಣಿಸುತ್ತದೆ ಮತ್ತು ಅವರನ್ನು ದಾರಿಯಿಂದ ಸರಿಸಿ ಬಿಡುವುದಕ್ಕೆ ಯತ್ನಿಸುತ್ತದೆ. ಹರಿದ್ವಾರದಲ್ಲಿ ನಡೆಯುತ್ತಿರುವುದೂ ಇದುವೇ. ಸತ್ಯಾಗ್ರ ನಿರತ ಅಗರ್ವಾಲ್‍ರ ಸಾವಿನ ಬಳಿಕವೂ ಉತ್ತರಾಖಂಡ ಸರಕಾರ ತನ್ನ ಹೈಡ್ರೋಪವರ್ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದಾದರೆ ಮತ್ತು ನದಿ ಪಾತ್ರದ ವಿವಿಧ ಚಟುವಟಿಕೆಗಳಿಗೆ ತಡೆ ಒಡ್ಡುವುದಿಲ್ಲ ಎಂದಾದರೆ ಏನಿದರ ಅರ್ಥ? ಗಂಗೆಯ ಶುದ್ಧೀಕರಣವನ್ನು ಸರಕಾರ ಲಾಭ-ನಷ್ಟದ ಕನ್ನಡಕದಿಂದ ನೋಡುತ್ತಿದೆ ಎಂದೇ ಅಲ್ಲವೇ? ಗಂಗೆಯನ್ನು ಶುದ್ಧೀಕರಣಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದಕ್ಕಿಂತ ಕಾರ್ಪೋರೇಟ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರೆ ಬೊಕ್ಕಸಕ್ಕೂ ಹಣ ಲಭಿಸುತ್ತದೆ ಮತ್ತು ಪಾರ್ಟಿ ಪಂಡೂ ಸಿಗುತ್ತದೆ ಎಂಬುದರ ಹೊರತು ಇದಕ್ಕೆ ಬೇರೆ ಏನು ಕಾರಣವಿದೆ?

ಆಧ್ಯಾತ್ಮಿಕತೆ ಎಂಬುದು ಇವತ್ತು ಶೋಷಣೆಯ ಅತಿ ದೊಡ್ಡ ಮಾರುಕಟ್ಟೆಯಾಗಿ ರೂಪಾಂತರಗೊಂಡಿದೆ. ಮಾರಮ್ಮ ಗುಡಿಯೂ ಗಂಗೆಯೂ ಇದಕ್ಕಿಂತ ಭಿನ್ನವಲ್ಲ. ಸದ್ಯದ ತುರ್ತು ಅಗತ್ಯ ಏನೆಂದರೆ, ಆಧ್ಯಾತ್ಮಿಕ ಕೇಂದ್ರಗಳನ್ನು ಮಧ್ಯವರ್ತಿಗಳಿಂದ ರಕ್ಷಿಸಿ, ಭಕ್ತರಿಗೆ ಮುಕ್ತವಾಗಿಡುವುದು. ಆದಾಯಕ್ಕಿಂತ ಭಕ್ತಿಗೆ ಪ್ರಾಮುಖ್ಯತೆಯನ್ನು ಕಲ್ಪಿಸುವುದು. ಅದಾಯವೇ ಸಕಲ ಶೋಷಣೆಗಳ ಮೂಲ. ಆದಾಯದ ಗುರಿ ಇಲ್ಲದೇ ಇರುತ್ತಿದ್ದರೆ ನಿರ್ಜನ ಮತ್ತು ಅರಣ್ಯ ಪ್ರದೇಶದಲ್ಲಿ ಮಾರಮ್ಮ ಗುಡಿ ತಲೆ ಎತ್ತುತ್ತಿತ್ತೇ ಅನ್ನುವ ಪ್ರಶ್ನೆ ಅತ್ಯಂತ ಸೂಕ್ತ. ಆಧ್ಯಾತ್ಮಿಕ ಕೇಂದ್ರಗಳನ್ನು ದಲ್ಲಾಲಿಗಳ ಹಿಡಿತದಿಂದ ಹೊರತಂದು ಜನರಿಗೆ ಮುಕ್ತವಾಗಿಸಿ ಬಿಟ್ಟರೆ ಇವತ್ತಿನ ಬಹುತೇಕ ಶಕ್ತಿ ಕೇಂದ್ರಗಳೂ ಭಕ್ತರ ಬರವನ್ನು ಎದುರಿಸಬಹುದು ಎಂಬುದು ಸುಳ್ಳಲ್ಲ. ಯಾಕೆಂದರೆ, ದಲ್ಲಾಳಿಗಳೇ ಅವುಗಳನ್ನು ಸೃಷ್ಟಿಸಿರುವುದು ಮತ್ತು ಅವುಗಳ ಸುತ್ತ ಪವಾಡಗಳ ಕಟ್ಟಕತೆಗಳನ್ನು ಹುಟ್ಟು ಹಾಕಿರುವುದು. ಹೆಚ್ಚಿನ ಭಕ್ತರು ಮುಗ್ಧರು. ಅವರು ಪವಾಡಗಳನ್ನು ನಂಬುತ್ತಾರೆ. ಶಕ್ತಿ ಕೇಂದ್ರಗಳ ಮೇಲೆ ಭರವಸೆಯಿಡುತ್ತಾರೆ. ಕೊನೆಗೆ ಅನಾಹುತಕ್ಕೂ ತುತ್ತಾಗುತ್ತಾರೆ. ಪವಾಡಗಳನ್ನು ಸೃಷ್ಟಿಸಿದವರು ಅದಾಯವನ್ನು ಲೆಕ್ಕ ಹಾಕುತ್ತಾ ಆರಾಮವಾಗಿರುತ್ತಾರೆ.

ಮಾರುಕಟ್ಟೆ ಆಧಾರಿತ ಆಧ್ಯಾತ್ಮಿಕತೆಯ ಬದಲು ದೇವ ಕೇಂದ್ರಿತ ಮತ್ತು ದಲ್ಲಾಳಿ ರಹಿತ ಆಧ್ಯಾತ್ಮಿಕತೆಯನ್ನು ಪ್ರಚುರ ಪಡಿಸುವ ಮೂಲಕ ಇದಕ್ಕೆ ಉತ್ತರವನ್ನು ನೀಡಬೇಕಾದ ಅಗತ್ಯವಿದೆ. ದೇವನನ್ನು ತಲುಪುದಕ್ಕೆ ಮಾನವನ ಮಧ್ಯಸ್ಥಿತಿಕೆಯ ಅಗತ್ಯವಿಲ್ಲ. ಮಾನವನನ್ನು ಸೃಷ್ಟಿಸಿರುವುದು ದೇವನೆಂದಾದರೆ, ಆ ದೇವನಲ್ಲಿ ಇಷ್ಟಾರ್ಥವನ್ನು ಬೇಡುವುದಕ್ಕೆ ಪೂಜಾರಿಗಳು, ಮುಜಾವರುಗಳ ಅಗತ್ಯ ಏಕಿದೆ? ಪವಾಡಗಳ ಹೆಸರಲ್ಲಿ ವಿವಿಧ ಶಕ್ತಿ ಕೇಂದ್ರಗಳ ಅಗತ್ಯ ಏನಿದೆ?

ನಾಪತ್ತೆಯಾಗಿರುವ ಗೋಪಾಲ ದಾಸ್ ಮತ್ತು ಮಾರಮ್ಮ ಗುಡಿ ಪ್ರಸಾದ ದುರಂತವು ಆಧ್ಯಾತ್ಮಿಕ ಶೋಷಣೆಯ ವಿರುದ್ಧ ಜನಜಾಗೃತಿಯನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗಲಿ.