ಕುರ್ ಆನ್ ಪ್ರವಚನ ಮತ್ತು ತೋಂಟದ ಶ್ರೀ

0
237

 

ಸಾರ್ವಜನಿಕ ಕುರ್ ಆನ್ ಪ್ರವಚನಗಳ ಮೂಲಕ ರಾಜ್ಯದ ಮೂಲೆ ಮೂಲೆಗೂ ಕುರ್ ಆನ್ ನ್ನು ತಲುಪಿಸಿದ ಮತ್ತು ತಲುಪಿಸುತ್ತಿರುವ ಶ್ರೇಯಸ್ಸು ಜಮಾಅತೆ ಇಸ್ಲಾಮೀ ಹಿಂದ್ ಗೆ ಇದೆ. ಮೂಲ ಕುರ್ ಆನ್ ಅರಬಿ ಭಾಷೆಯಲ್ಲಿರುವುದರಿಂದ ಅದರ ಬಗ್ಗೆ ಸಂದೇಹಗಳನ್ನು ಪ್ರಸಾರ ಮಾಡಲು ಅವಕಾಶ ಇದೆ. ಇವತ್ತು ಅದರ ಕನ್ನಡ ಅನುವಾದ ಗ್ರಂಥಗಳು ಲಭ್ಯ ಇದ್ದರೂ ಅದನ್ನು ಓದುವ ವ್ಯವಧಾನ ಎಷ್ಟು ಮಂದಿಯಲ್ಲಿ ಇದೆ ಅನ್ನುವ ಪ್ರಶ್ನೆಯೂ ಇದೆ. ಆದ್ದರಿಂದ, ಓದಿಸುವ, ಆಲಿಸುವ ಮತ್ತು ವಿವರಿಸುವ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮಗಳನ್ನು ಜಮಾಅತೆ ಇಸ್ಲಾಮಿ ಹಲವು ದಶಕಗಳಿಂದಲೂ ಮಾಡುತ್ತಾ ಬಂದಿದೆ. ಇವತ್ತು ಇಂಥ ಪ್ರವಚನಗಳನ್ನು ನಡೆಸಿಕೊಂಡು ಬರುತ್ತಿರುವವರಲ್ಲಿ ಮುಂಚೂಣಿಯಲ್ಲಿರುವವರು ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ ಅವರು.
ದಿವಂಗತ ತೋಂಟದ ಶ್ರೀಗಳಿಗೂ ಕುರ್ ಆನ್ ಪ್ರವಚನಕ್ಕೂ ನಡುವೆ ಇದ್ದ ನಂಟನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಮುಹಮ್ಮದ್ ಕುಂಞಿ

ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ| ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರೊಂದಿಗೆ ನನ್ನದು ಸುಮಾರು ಇಪ್ಪತ್ತು ವರ್ಷಗಳ ಅವಿನಾಭಾವ ಸಂಬಂಧ. ಕಳೆದ 20 ವರ್ಷಗಳಲ್ಲಿ ಉತ್ತರ ಕರ್ನಾಟಕದಾದ್ಯಂತ ಹಲವು ಕಾರ್ಯಕ್ರಮಗಳಲ್ಲಿ ಶ್ರೀಗಳ ಜೊತೆ ಭಾಗವಹಿಸುವ ಅವಕಾಶ ಸಿಕ್ಕಿದ ಭಾಗ್ಯಶಾಲಿ ನಾನು. ಗದಗದ ಅವರ ಮಠದ ಆವರಣದಲ್ಲೂ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ.

ಸ್ವಾಮೀಜಿಯವರು ಒಬ್ಬ ಧರ್ಮಗುರು ಹೇಗಿರಬೇಕೆಂಬುದಕ್ಕೆ ಉತ್ತಮ ಮಾದರಿಯಾಗಿದ್ದರು. ಎಂತಹವರನ್ನೂ ಆಕರ್ಷಿಸುವ, ಸರಳ ಆದರೆ ಬಹಳ ಗಾಂಭೀರ್ಯದಿಂದ ಕೂಡಿದ ವ್ಯಕ್ತಿತ್ವ ಅವರದು. ಅವರ ಪ್ರವಚನ-ಭಾಷಣಗಳಲ್ಲಿ ಪ್ರೀತಿ ಇತ್ತು, ಆಕರ್ಷಣೆ ಇತ್ತು ಹಾಗೂ ಅವು ಗಾಂಭೀರ್ಯದಿಂದ ಕೂಡಿರುತ್ತಿತ್ತು. ಸ್ವಾಮೀಜಿಯವರು ಶಾಂತಿ ಪ್ರಕಾಶನದ ಬಹು ದೊಡ್ಡ ಅಭಿಮಾನಿ ಆಗಿದ್ದರು. ಶಾಂತಿ ಪ್ರಕಾಶನದಿಂದ ಸಾವಿರಾರು ರೂಪಾಯಿಗಳ ಪುಸ್ತಕ ಖರೀದಿಸಿ ತಮ್ಮ ಭಕ್ತರಿಗೆ ವಿತರಿಸುತ್ತಿದ್ದರು. ತಮ್ಮ ಶಿಷ್ಯಂದಿರೊಂದಿಗೆ ಶಾಂತಿ ಪ್ರಕಾಶನದ ಪುಸ್ತಕ ಓದುವಂತೆ ಆದೇಶಿಸುತ್ತಿದ್ದರು. ತಮ್ಮ ಮಠಕ್ಕೆ ಬರುವ ಅತಿಥಿಗಳಿಗೆ ಶಾಂತಿಯ ಸಾಹಿತ್ಯಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಸಾವಿರಾರು ಜನರು ಸೇರಿದ ಸಭೆಗಳಲ್ಲಿ ಶಾಂತಿ ಪ್ರಕಾಶನದ ಸಾಹಿತ್ಯ ಮತ್ತು ಸನ್ಮಾರ್ಗ ಪತ್ರಿಕೆ ಓದುವಂತೆ ಜನತೆಗೆ ಕರೆ ನೀಡುತ್ತಿದ್ದರು.

ಪ್ರವಾದಿ ಮಹಮ್ಮದ್(ಸ)ರ ಜೀವನ ಮತ್ತು ಸಂದೇಶಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿತ್ತು. ಶಾಂತಿ ಪ್ರಕಾಶನ ಪ್ರಕಟಿಸಿದ ಮಾನವಕುಲದ ವಿಮೋಚಕ ಪ್ರವಾದಿ ಮುಹಮ್ಮದ್(ಸ) ಎಂಬ ಗೃಂಥವನ್ನು ತಮ್ಮ ಮಠದಲ್ಲೇ ಅವರು ಬಿಡುಗಡೆಗೊಳಿಸಿದ್ದರು.

ಅವರ ಪ್ರವಚನದ-ಭಾಷಣದ ಪ್ರತಿಯೊಂದು ಮಾತುಗಳು ಕೂಡ ಸಮಾಜದ ಸೌಹಾರ್ದತೆಯನ್ನು ಬಲಪಡಿಸುವ ಹೃದಯಗಳನ್ನು ಬೆಸೆಯುವ ಜನರಲ್ಲಿ ನೈತಿಕತೆಯನ್ನು ಬೆಳೆಸುವ ಮಾತುಗಳಾಗಿತ್ತು.

ಕನ್ನಡ ನಾಡಿನಾದ್ಯಂತ ನಡೆಯುವ ಕುರ್ ಆನ್ ಪ್ರವಚನ ಕಾರ್ಯಕ್ರಮಗಳಲ್ಲಿ ಹಲವುಕಡೆ ಅವರ ಸಾನಿಧ್ಯವಿರುತ್ತಿತ್ತು. ಕುರ್ ಆನ್ ಪ್ರವಚನ ಕಾರ್ಯಕ್ರಮಕ್ಕೆ ಶ್ರೀಗಳು ಉದ್ಘಾಟಕರಾಗಿ ಆಗಮಿಸುತ್ತಿದ್ದರು. ಅವರೆಂದೂ ತಮ್ಮ ಉದ್ಘಾಟನಾ ಕರ್ತವ್ಯ ಮುಗಿಸಿ ವೇದಿಕೆಯಿಂದ ಎದ್ದು ಹೋದವರಲ್ಲ. ಸುಮಾರು ಎರಡು ಗಂಟೆಗಳ ಕಾಲ ನಡೆಯುವ ಕುರ್ ಆನ್ ಪ್ರವಚನ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳು ಮುಗಿದ ನಂತರವೇ ಅವರು ವೇದಿಕೆಯಿಂದ ನಿರ್ಗಮಿಸುತ್ತಿದ್ದರು.

ಇತ್ತೀಚೆಗೆ ಕಾರ್ಯಕ್ರಮದ ನಿಮಿತ್ತ ಕೊಪ್ಪಳಕ್ಕೆ ಹೋಗುವ ದಾರಿಯಲ್ಲಿ ಗದಗ ಜಮಾಅತೆ ಇಸ್ಲಾಮಿಯ ನಾಯಕ ಜನಾಬ್ ಕೆ.ಐ.ಶೇಖ್ ಅವರ ಜೊತೆ ಶ್ರೀಗಳ ಮಠಕ್ಕೆ ಭೇಟಿ ನೀಡಿದ್ದೆ. ಸ್ವಾಮೀಜಿಯವರು ಯಾವುದೋ ಕಾರ್ಯಕ್ರಮಕ್ಕೆ ಹೋಗುವ ಸಿದ್ಧತೆಯಲ್ಲಿದ್ದರು. ಆ ನಿಬಿಡತೆಯ ಮಧ್ಯೆಯೂ ಅವರು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಅವರ ಪ್ರತಿ ಮಾತುಗಳಲ್ಲಿ ನಮ್ಮ ದೇಶದ ಭವಿಷ್ಯದ ಬಗ್ಗೆ ಇರುವ ಅಪಾರ ಕಾಳಜಿ ವ್ಯಕ್ತವಾಗುತ್ತಿತ್ತು.

ಸೂಫಿಗಳು ಮತ್ತು ಸೂಫಿ ಪರಂಪರೆಯ ಬಗ್ಗೆ ಅವರಿಗೆ ಹೆಚ್ಚಿನ ಒಲವಿತ್ತು. ಭಾರತದ ಸೂಫಿ ಸಂತರು ಹಾಗೂ ಸೂಫಿ ಪರಂಪರೆಯ ಬಗ್ಗೆ ಶಾಂತಿ ಪ್ರಕಾಶನದ ವತಿಯಿಂದ ಪುಸ್ತಕ ಪ್ರಕಟಿಸುವಂತೆ ಹಲವು ಸಲ ಒತ್ತಾಯಿಸಿದ್ದರು. ಸ್ವಾಮೀಜಿಯವರ ಚಟುವಟಿಕೆಗಳು ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಅವರು ಒಳ್ಳೆಯ ಹೋರಾಟಗಾರರೂ ಆಗಿದ್ದರು. ಗೋಕಾಕ್ ಚಳುವಳಿಯಲ್ಲಿ ಅವರು ಮುಂಚೂಣಿಯಲ್ಲಿದ್ದರು ಭಂಡವಾಳಶಾಹಿಗಳ ಅನ್ಯಾಯದ-ಕ್ರೌರ್ಯದ ವಿರುದ್ಧ ಸೆಟೆದು ನಿಂತರು. ಪರಿಸರವನ್ನು ನಾಶ ಪಡಿಸುವ ಯೋಜನೆಗಳ ವಿರುದ್ಧ ಜನಾಂದೋಲನ ರೂಪಿಸಿದರು ಹಾಗೂ ಹೋರಾಟಕ್ಕೆ ನಾಯಕತ್ವ ನೀಡಿದರು. ಯಾವುದೇ ಒತ್ತಡ-ಆಮಿಷಗಳಿಗೆ ಬಲಿಯಾಗದೆ ತಾವು ನಂಬಿದ ಬಸವ ತತ್ವದ ಹಾದಿಯಲ್ಲಿ ಪ್ರಾಮಾಣಿಕವಾಗಿ ಮುಂದೆ ಸಾಗಿದರು. ಸಮಾಜವನ್ನು ಮುನ್ನಡೆಸಿದರು.

ಅವರ ಅಕಾಲಿಕ ಮರಣ ಖಂಡಿತವಾಗಿಯೂ ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರು ನಮ್ಮನ್ನು ಬಿಟ್ಟು ಅಗಲಿದರೂ ಅವರು ಬಿಟ್ಟು ಹೋದ ಚಿಂತನೆಗಳು ಅವರ ಆದರ್ಶಗಳು ಖಂಡಿತ ಈ ನಾಡಿನಲ್ಲಿ ಉಳಿಯುತ್ತದೆ ಎಂಬುದು ನನ್ನ ಬಲವಾದ ನಂಬಿಕೆ. ಅವರ ಜೊತೆ ಕಳೆದ ಪ್ರತಿಕ್ಷಣಗಳು ಅವರ ಒಡನಾಟ ಅವರು ತೋರಿದ ಪ್ರೀತಿ ಖಂಡಿತ ನನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ಘಟನೆಗಳಾಗಿವೆ.

ಭಾರತದ ರಾಷ್ಟ್ರಪತಿ ಅವರಿಂದ ಕೋಮುಸೌಹಾರ್ದತಾ ರಾಷ್ಟ್ರೀಯ ಪ್ರಶಸ್ತಿ ಪಡೆದ ಆ ಮಹಾನ್ ವ್ಯಕ್ತಿ ಕಲಿಸಿದ ಪ್ರೀತಿಯ, ಕರುಣೆಯ, ಭ್ರಾತೃತ್ವದ, ಸಮಾನತೆಯ, ನೈತಿಕತೆಯ ಸಂದೇಶಗಳು ನಮ್ಮ ನಾಡಿಗೆ ಎಂದೆಂದೂ ದಾರಿದೀಪವಾಗಲಿ. ಅವರು ಕಲಿಸಿದ ಹೋರಾಟದ ಹಾದಿ ಈ ನಾಡಿನ ಜನತೆಗೆ ಪಾಠವಾಗಲಿ.

ಖಂಡಿತವಾಗಿಯೂ ಸ್ವಾಮೀಜಿಯವರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಅವರು ಈ ನಾಡಿನ ದೊಡ್ಡ ಶಕ್ತಿಯಾಗಿದ್ದರು. ಅವರು ಬಿಟ್ಟುಹೋದ ಮಾನವೀಯತೆಯ-ಸೌಹಾರ್ದತೆಯ ಪರಂಪರೆಯನ್ನು ಉಳಿಸಬೇಕಾದದ್ದು ನಾಡಿನ ಪ್ರಜ್ಞಾವಂತ ನಾಗರಿಕರ ಬಹುದೊಡ್ಡ ಹೊಣೆಗಾರಿಕೆಯಾಗಿದೆ. ದೇವನು ಅನುಗ್ರಹಿಸಲಿ.