ಉಯಿಗುರ್ ಅಲ್ಪಸಂಖ್ಯಾತರ ಬಂಧನಕ್ಕೆ ಹೆಚ್ಚಿದ ಬಂದೀಖಾನೆಗಳು: ವರದಿ ಬಹಿರಂಗ

0
300

ಸನ್ಮಾರ್ಗ ವಾರ್ತೆ

ಬೀಜಿಂಗ್,ಸೆ.25: ಉಯಿಗುರ್ ಅಲ್ಪಸಂಖ್ಯಾತ ವಿಭಾಗವನ್ನು ಗುರಿಯಾಗಿಟ್ಟು ಮತ್ತಷ್ಟು ಬಯಲು ಬಂದೀಖಾನೆಗಳ ಸರಣಿಯನ್ನು ಚೀನದ ಆಡಳಿತಗಾರರು ತಯಾರಿಸುತ್ತಿರುವ ವರದಿ ಬಹಿರಂಗವಾಗಿದೆ.

ಆಸ್ಟ್ರೇಲಿಯದ ಸ್ಟ್ರಾಟಜಿಕ್ ಪಾಲಿಸಿ ಇನ್ಸಿಟಿಟ್ಯೂಟ್ ಈ ವಾರ್ತೆಯನ್ನು ಹೊರತಂದಿದೆ. ಸಿಂಜಿಯಾಂಗ್ ಪ್ರಾಂತ್ಯದಲ್ಲಿರುವಂತಹ 380 ಕೇಂದ್ರಗಳನ್ನು ಸಜ್ಜುಗೊಳಿಸಿಡಲಾಗಿದೆ. ಈಗಿರುವುದಕ್ಕಿಂತ ಶೇ.40ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಉಪಗ್ರಹ ಚಿತ್ರಗಳು, ಪ್ರತ್ಯಕ್ಷದರ್ಶಿಗಳ ಸಂದರ್ಶನ, ಪತ್ರಿಕಾ ವರದಿಗಳು, ಅಧಿಕೃತ ದಾಖಲೆಗಳ ಆಧಾರದಲ್ಲಿ ನಡೆಸಿದ ಶೋಧನೆಯಲ್ಲಿ ನೂರಕ್ಕೂ ಹೆಚ್ಚು ಡಿಟೆನ್ಶನ್ ಸೆಂಟರ್‌ಗಳು ಕಂಡು ಬಂದಿವೆ. 2019 ಜುಲೈ ಮತ್ತು 2020 ಜುಲೈಯ ನಡುವೆ 60 ಡಿಟೆನ್ಶನ್ ಸೆಂಟರ್‌ಗಳನ್ನು ನಿರ್ಮಿಸಲಾಗಿದ್ದು. ಇನ್ನೂ 14 ಬಂದೀಖಾನೆಗಳು ನಿರ್ಮಾಣ ಹಂತದಲ್ಲಿವೆ.

ಇವುಗಳಲ್ಲಿ ಅರ್ಧದಷ್ಟಕ್ಕೆ ಜೈಲುಗಳಂತೆ ಸಮಯ ಕ್ರಮವನ್ನು ನಿಶ್ಚಯಿಸಿ ಭಾರೀ ಭದ್ರತೆಯನ್ನೂ ಕಲ್ಪಿಸಲಾಗಿದೆ ಎಂದು ವರದಿ ತಯಾರಿಸಿದ ನಾಥೆನ್ ರೂಸರ್ ಹೇಳುತ್ತಾರೆ. ಇದೇವೇಳೆ ಸಿಂಜಿಯಾಂಗ್ ಪ್ರಾಂತ್ಯದ ಬಡತನ, ಸ್ಥಳೀಯ ಭಯೋತ್ಪಾದನೆಯನ್ನು ನಿಭಾಯಿಸುವುದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚೀನ ಹೇಳುತ್ತಿದೆ. ಆದರೆ, ಒಂದು ದಶಲಕ್ಷ ಜನರನ್ನು ಜೈಲಿನೊಳಗಿಡುವ ಕ್ರಮ ನಡೆಯುತ್ತಿದೆ ಎಂದು ಬೆಟ್ಟು ಮಾಡಲಾಗುತ್ತಿದೆ.

ಅಲ್ಪಸಂಖ್ಯಾತ ವಿಭಾಗವಾದ ಉಯಿಗುರ್ ಮುಸ್ಲಿಮರನ್ನು ಹಾನ್ ಎಂಬ ಬಹುಸಂಖ್ಯಾತರ ವಂಶಕ್ಕೆ ಸೇರಿಸಲು ಚೀನದ ಕಮ್ಯುನಿಸ್ಟ್ ಪಾರ್ಟಿ ಶ್ರಮಿಸುತ್ತಿದೆ. ಇದಕ್ಕೆ ಒಪ್ಪದವರ ಮೇಲೆ ಚೀನ ಉಕ್ಕಿನ ಮುಷ್ಠಿ ಬಿಗಿಯುತ್ತಿದೆ. ಜೊತೆಗೆ ಧಾರ್ಮಿಕ ಕಾರ್ಯಕ್ರಮ, ಆಚರಣೆಗಳನ್ನು ಮುಸ್ಲಿಮರಿಗೆ ಸರಕಾರ ನಿಷೇಧಿಸಿದೆ. 2015ರಲ್ಲಿ ಸಿಂಜಿಯಾಂಗ್ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ಭಯೋತ್ಪಾದನಾ ವಿರೋಧಿ ಕಾನೂನು, 2017ರ ಭಯೋತ್ಪಾದನೆ ನಿಯಂತ್ರಣ ಕಾನೂನು ಉಯುಗುರ್‌‌ರ ಜೀವನವನ್ನು ನರಕ ಸದೃಶ್ಯಗೊಳಿಸಿದೆ.