ಪತಿಯನ್ನು ಕಳಕೊಂಡಿದ್ದೇನೆ, ಆದರೆ ಅಲ್ಲಾಹನ ಮೇಲೆ ಭರವಸೆಯಿದೆ: ಜಮಾಅತ್ ಕಾರ್ಯಕರ್ತೆಯ ಮನಕಲಕುವ ಪತ್ರ

0
1552

ಸನ್ಮಾರ್ಗ ಲೇಖನ

ಶಿಕ್ಷಕರಾದ ಇಲಕಲ್‍ನ ಫಯಾಝ್ ಕರ್ನೂಲ (40) ಅವರು ಅಕ್ಟೋಬರ್ 3ರಂದು ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟರು. ಅವರು ಜಮಾಅತ್‍ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಜಮಾಅತ್‍ನ ಸದಸ್ಯರಾದ ಸಿಂಧನೂರಿನ ಡಾ| ತಾಹೀರ್ ಅಲಿಯವರ ಅಳಿಯಂದಿರೂ ಹೌದು. ಮೃತರ ಪತ್ನಿ ಉಬೇದಾ ಬೇಗಂ ಜಮಾಅತ್‍ನ ಕಾರ್ಯಕರ್ತೆಯಾಗಿದ್ದು ತಮ್ಮ ಪತಿಯ ಆಕಸ್ಮಿಕ ಸಾವಿನ ದುಃಖದ ಸಂದರ್ಭದಲ್ಲೂ ಅತ್ಯಂತ ತಾಳ್ಮೆಯಿಂದ ಮೃತ ಪತಿಯ ಪಾಪ ವಿಮೋಚನೆಗಾಗಿ ಮತ್ತು ಸ್ವರ್ಗ ಪ್ರಾಪ್ತಿಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕೆಂದೂ ಮತ್ತು ದೇವನ ಮೇಲೆ ಭರವಸೆಯಿಟ್ಟು ಧೈರ್ಯದಿಂದ ಬದುಕುವೆನೆಂದೂ ಹೇಳಿ ಜಮಾಅತ್ ಕಚೇರಿಗೆ ಪತ್ರ ಬರೆದಿದ್ದರು. ಅದರ ಯಥಾನುವಾದ ಇಲ್ಲಿದೆ:

“ನನ್ನ ಪ್ರೀತಿಯ ಪತಿಯವರು ಪತ್ನಿಯನ್ನು ಸದಾ ಪ್ರೀತಿಸುವವರಾಗಿ, ಮಕ್ಕಳಿಗೆ ಆದರ್ಶ ತಂದೆಯಾಗಿ, ಮಾತಾಪಿತರಿಗೆ ವಿಧೇಯ ಪುತ್ರನಾಗಿ, ಕುಟುಂಬದ ಎಲ್ಲ ಬಂಧುಗಳಿಗೆ ಹಿತೈಷಿಯಾಗಿ, ಬಡವರಿಗೆ ಕರುಣೆ ತೋರುವವರಾಗಿ, ಶಿಷ್ಯಂದಿರೆಲ್ಲರಿಗೂ ಆದರ್ಶ ಶಿಕ್ಷಕರಾಗಿ, ಇಸ್ಲಾಮಿಗೆ ದುಡಿಯುವವರಾಗಿ ಈಗ ಅಲ್ಲಾಹನಿಗೆ ಪ್ರಿಯವಾಗಿದ್ದಾರೆ. ಖಂಡಿತವಾಗಿ ನಾವು ಅಲ್ಲಾಹನವರೇ ಮತ್ತು ಅಲ್ಲಾಹನ ಕಡೆಗೇ ಮರಳುವವರಾಗಿದ್ದೇವೆ. ಈ ಮಾತಿನ ಮೇಲೆ ನನಗೆ ವಿಶ್ವಾಸವಿದೆ ಮತ್ತು ಅಲ್ಲಾಹನ ತೀರ್ಮಾನಕ್ಕೆ ನಾನು ಬದ್ಧಳಾಗಿರುವೆ.

ಓರ್ವ ಹುತಾತ್ಮನ ಪತ್ನಿಯೆಂಬ ಬಗ್ಗೆ ನನಗೆ ಅಭಿಮಾನವಿದೆ. ನನ್ನ ಮಕ್ಕಳ ತಂದೆ ಓರ್ವ ಹುತಾತ್ಮ ಎಂಬ ಅಭಿಮಾನವಿದೆ. ಅವರು ನಮ್ಮೆಲ್ಲರಿಗೂ ಮಾದರಿಯಾಗಿ ಜೀವಿಸಿದರು. ಎಲ್ಲರ ಹಕ್ಕುಗಳನ್ನು ನೆರವೇರಿಸುವವರಾಗಿದ್ದರು. ಸದ್ಗುಣ ಸಂಪನ್ನರಾಗಿದ್ದರು. ಅಧ್ಯಯನಶೀಲರಾಗಿದ್ದರು. ಸಮಯವನ್ನು ಹೆಚ್ಚು ಗೌರವಿಸುತ್ತಿದ್ದರು. ಕೇವಲ 10 ವರ್ಷಗಳ ದಾಂಪತ್ಯ ಜೀವನದಲ್ಲಿ ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ನನಗೆ ಶಿಕ್ಷಕನಂತಿದ್ದರು. ಸದಾ ಅಲ್ಲಾಹನನ್ನು ಭಯಪಡುತ್ತಾ ಪರಲೋಕ ಚಿಂತೆಯಲ್ಲಿ ಜೀವನ ಸಾಗಿಸುತ್ತಿದ್ದರು. ಹಲಾಲ್-ಹರಾಮ್‍ನ ಬಗ್ಗೆ ಸದಾ ಜಾಗೃತರಾಗಿರುತ್ತಿದ್ದರು.

ನಾನು ನನ್ನ ಪ್ರಿಯ ಪತಿಯನ್ನು ಕಳೆದುಕೊಂಡ ಶೋಕ ಸಾಗರದಲ್ಲೂ ಸಹನೆ ವಹಿಸುವೆನು. ಏಕೆಂದರೆ ಸಹನೆಯ ಫಲ ಸ್ವರ್ಗವಾಗಿದೆ. ಜೀವನ ಪರ್ಯ೦ತ ಸಹನೆಯಿಂದ ಬದುಕಲು ಅಲ್ಲಾಹನು ಅ ನುಗ್ರಹಿಸಲೆಂದು ನನಗಾಗಿ ನೀವೆಲ್ಲ ಪ್ರಾರ್ಥಿಸಿ. ನನಗೆ ನನ್ನ ಪ್ರಭುವಿನ ಮೇಲೆ ಸಂಪೂರ್ಣ ಭರವಸೆಯಿದೆ. ನನ್ನ ಪತಿಗೆ ಸ್ವರ್ಗದಲ್ಲಿ ಉನ್ನತಸ್ಥಾನ ನೀಡೆಂದೂ, ಸೇರಿಸುವನೆಂದು ಅಲ್ಲಾಹ್ ನನ್ನ ಪತಿಯ ಪುಣ್ಯಗಳಿಗೆ ಶ್ರೇಷ್ಠ ಪ್ರತಿಫಲ ನೀಡೆಂದೂ ನನ್ನ ಅನಾಥ ಮಕ್ಕಳ ಭವಿಷ್ಯ ಉಜ್ವಲಗೊಳಿಸೆಂದೂ ಮತ್ತು ನನಗೆ ಸಹನೆ ವಹಿಸುವ ಶಕ್ತಿ ನೀಡೆಂದೂ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. (ಆಮೀನ್)