ಗಾಯಾಳುಗಳನ್ನು ಭುಜದಲ್ಲಿ ಹೊತ್ತು ಸಾಗಿದ ಪೊಲೀಸ್ ಅಧಿಕಾರಿ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ- ವೀಡಿಯೊ

0
578

ಸನ್ಮಾರ್ಗ ವಾರ್ತೆ

ಜಬಲ್‍ಪುರ,ನ.19: ಗಾಯಾಳು ಮಹಿಳೆಯನ್ನು ಭುಜದಲ್ಲಿ ಹೊತ್ತು ಆಸ್ಪತ್ರೆಗೆ ಕರೆತಂದ ಪೊಲೀಸರೊಬ್ಬರ ವೀಡಿಯೊಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಮಧ್ಯಪ್ರದೇಶದ ಜಬಲಪುರದಲ್ಲಿ ಮಂಗಳವಾರ 35 ಕಾರ್ಮಿಕರನ್ನೊಳಗೊಂಡ ಟ್ರಕ್‍ ಪಲ್ಟಿಯಾಗಿತ್ತು. ಹಲವು ಕಾರ್ಮಿಕರಿಗೆ ಗಾಯಗಳಾಗಿದ್ದವು. ಘಟನೆಯ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದರು. ಆದರೆ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್ ಸೌಲಭ್ಯ ಇಲ್ಲದನ್ನು ಮನಗಂಡ ಪೊಲೀಸರು ಗಾಯಾಳುಗಳನ್ನು ಎತ್ತಿಕೊಂಡು ಕರೆದೊಯ್ದಿದ್ದಾರೆ.

ವಾಹನದಿಂದ ರೋಗಿಗಳನ್ನು ಭುಜದಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪೊಲೀಸರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಸೇನ್, ಕಾನ್ಸ್‌ಟೇಬಲ್‍ಗಳಾದ ಅಶೋಕ್, ರಾಜೇಶ್, ಅಂಕಿತ್ ಸ್ಥಳೀಯರ ನೆರವಿನಲ್ಲಿ ರಕ್ಷಣಾ ಕಾರ್ಯ ವಹಿಸಿಕೊಂಡಿದ್ದರು.

ದೇಹವಿಡೀ ಗಾಯಗಳಾಗಿದ್ದ ಮಹಿಳೆಯನ್ನು 57 ವರ್ಷದ ಸಂತೋಷ್ ಸೆನ್ ಭುಜದಲ್ಲಿ ಹಾಕಿ ಕರೆದುಕೊಂಡು ಹೋಗುತ್ತಿರುವುದು ವೀಡಿಯೊದಲ್ಲಿದೆ. ಇನ್ನೊಬ್ಬ ಪೊಲೀಸ್ ಮಹಿಳೆಗೆ ಸಹಾಯ ಮಾಡುತ್ತಿರುವುದು ವೀಡಿಯೊದಲ್ಲಿದೆ. ವೀಡಿಯೊ ವೈರಲ್ ಆಗುವುದರೊಂದಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.