ತಂದೆಯ ಚಿತಾಗ್ನಿ ನಡೆಸಲು ನಿರಾಕರಿಸಿದ ಮಗ; ಅಂತಿಮ ಸಂಸ್ಕಾರ ನೆರವೇರಿಸಿದ ಸ್ಥಳೀಯ ಮುಸ್ಲಿಂ ಯುವಕರು

0
1152

ಸನ್ಮಾರ್ಗ ವಾರ್ತೆ

ಅಕೋಲಾ,ಮೇ.26:ಶನಿವಾರ ಹೃದಯಾಘಾತದಿಂದ ನಿಧನರಾದ 78 ವರ್ಷದ ಹಿಂದೂ ವ್ಯಕ್ತಿಯ ಕುಟುಂಬವು ಅವರ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದ ನಂತರ, ಸ್ಥಳೀಯ ಸಂಘಟನೆಯ ಕೆಲವು ಮುಸ್ಲಿಂ ಯುವಕರು ಭಾನುವಾರ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ ಮಾನವೀಯ ಘಟನೆಯೊಂದು ನಡೆದಿದೆ.

ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಅವರ ಪತ್ನಿ ಕೋವಿಡ್ -19 ನಿಂದಾಗಿ ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ.

“ನಾಗ್ಪುರದಲ್ಲಿ ವಾಸಿಸುವ ಮೃತರ ಮಗನು ಶವವನ್ನು ಸ್ವೀಕರಿಸಲು ಮತ್ತು ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ. ಆದ್ದರಿಂದ, ಸ್ಥಳೀಯ ಮುಸ್ಲಿಂ ಸಂಘಟನೆಯಾದ ಅಕೋಲಾ ಕಚ್ಚಿ ಮೆಮನ್ ಜಮಾಅತ್ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಭಾನುವಾರ, ಕೆಲವು ಮುಸ್ಲಿಂ ಪುರುಷರು ಶವಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಸಿದರು” ಎಂದು ಅಕೋಲಾ ಮುನ್ಸಿಪಲ್ ಕಾರ್ಪೊರೇಶನ್‌ನ ನೈರ್ಮಲ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ರಾಜುರ್ಕರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

25 ಸಾವುಗಳು ಮತ್ತು 400ಕ್ಕೂ ಹೆಚ್ಚು ಸಕ್ರಿಯ ಕೊರೋನ ಪ್ರಕರಣಗಳೊಂದಿಗೆ ಅಕೋಲಾ ಮಹಾರಾಷ್ಟ್ರದ ಅತಿದೊಡ್ಡ ಕೊರೋನ ವೈರಸ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ.

“ಮೃತ ವ್ಯಕ್ತಿಯ ಪತ್ನಿಯನ್ನು ಮೇ 23 ರಂದು ಸಂಜೆ 4 ಗಂಟೆ ಸುಮಾರಿಗೆ ಜಿಎಂಸಿಎಚ್‌ಗೆ ದಾಖಲಿಸಲಾಗಿದೆ. ಅವರಿಗೆ ರೋಗಲಕ್ಷಣ ಕಂಡು ಬಂದ ಕಾರಣದಿಂದಾಗಿ ನಾವು ಅವರ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಂಡೆವು. ಸಂಜೆ 6.30ರ ಸುಮಾರಿಗೆ ಜಿಎಂಸಿಎಚ್ ಡೀನ್‌ಗೆ ಮಹಿಳೆಯ ಪತಿಯು ಮನೆಯಲ್ಲಿ ಕುಸಿದು ಬಿದ್ದಿರುವುದಾಗಿ ಕರೆ ಬಂದಿತ್ತು. ಆಂಬ್ಯುಲೆನ್ಸ್ ಕಳುಹಿಸಲಾಗಿತ್ತಾರೂ ಆದರೆ ಅವರು ಮೃತಪಟ್ಟಿದ್ದರು. ಮೇ 24 ರ ಬೆಳಿಗ್ಗೆ ಮಹಿಳೆಯ ವರದಿಯು ಕೊರೋನ ಇರುವುದನ್ನು ದೇಢಪಡಿಸಿದೆ. ಪ್ರೋಟೋಕಾಲ್ ಪ್ರಕಾರ, ಅವರು ಮೃತ ದೇಹದಿಂದ ಗಂಟಲು ದ್ರವದ ಮಾದರಿಯನ್ನು ತೆಗೆದುಕೊಳ್ಳುವಂತಿಲ್ಲ ಆದರೆ ನಿಕಟ ಸಂಬಂಧಿಗಳ ಸ್ವ್ಯಾಬ್ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ, ವರದಿಗಳಿಗಾಗಿ ಕಾಯುತ್ತಿವೆ ”ಎಂದು ಅಮರಾವತಿ ವಿಭಾಗೀಯ ಆಯುಕ್ತ ಪಿಯೂಷ್ ಸಿಂಗ್ ಹೇಳಿದರು.

“ಅಕೋಲಾದಲ್ಲಿ ಮೊದಲ ಕೊರೋನ ಸಾವು ವರದಿಯಾದಾಗ, ಕೊರೋನದಿಂದ ಮೃತರಾದವರ ಕುಟುಂಬಗಳಿಗೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದಿದ್ದರೇ ಅಂತಹವರ ಅಂತ್ಯಕ್ರಿಯೆ ನಡೆಸಲು ನಾವು ನಿರ್ಧರಿಸಿದೆವು. ಈ ಸತ್ಕಾರ್ಯಕ್ಕೆ ನಮಗೆ ನಮ್ಮ ಪೋಷಕರಿಂದ ಅನುಮತಿ ಲಭಿಸಿತು. ಅಂದಿನಿಂದ, ನಾವು 60 ಅಂತ್ಯಕ್ರಿಯೆಗಳನ್ನು ನಡೆಸಿದ್ದೇವೆ, ಅದರಲ್ಲಿ 21 ಕೋವಿಡ್ ರೋಗಿಗಳಾಗಿದ್ದಾರೆ” ಎಂದು ಮುಸ್ಲಿಂ ಸಂಘಟನೆಯ ಅಧ್ಯಕ್ಷ ಜಾವೇದ್ ಝಕರಿಯಾ ಹೇಳಿದರು.

ತನ್ನ ಸ್ವಯಂಸೇವಕರು ಅಂತ್ಯಕ್ರಿಯೆಯ ಮುಗಿಯುವವರೆಗೂ ರಕ್ಷಣಾತ್ಮಕ ಕವಚಗಳನ್ನು ಧರಿಸಿದ್ದರು, ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಚಿತೆಗೆ ಬೆಂಕಿ ಕೊಟ್ಟ ನಂತರ ಅವರು ನಂದುವವರೆಗೂ ಅಲ್ಲಿಯೇ ಇರುತ್ತಿದ್ದರು ಎಂದು ಜಾವೇದ್ ಹೇಳಿದರು.

ಮೃತನ ಮಗನನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೂ, ಅಂತ್ಯಕ್ರಿಯೆ ನಡೆಸಲು 5,000 ರೂ ಮಗನು ನೀಡಿದನು ಎಂಬುದಾಗಿ ರಾಜುರ್ಕರ್ ಅವರು ಹೇಳಿದರು. “ಭಾನುವಾರದ ಅಂತ್ಯಕ್ರಿಯೆಯು ಕೆಲವು ಜನರ ಕೋಪಕ್ಕೀಡಾಗಿದೆ. ಕೊರೋನಾ ರೋಗಿಯ ಹೆಸರು ಸಾರ್ವಜನಿಕ ವಲಯದಲ್ಲಿ ಹೊರಬಂದಿದೆ ಎಂದು ಕುಟುಂಬಸ್ಥರು ಕೋಪಗೊಂಡಿದ್ದಾರೆ ಮತ್ತು ಮಾಧ್ಯಮಗಳ ವಿಪರೀತ ಪ್ರಸಾರದಿಂದಾಗಿ ಮಗ ಅಸಮಾಧಾನಗೊಂಡಿದ್ದಾನೆ ” ಎಂದು ಅವರು ಹೇಳಿದರು.