ಮಲ್ಪೆ: ನಾಪತ್ತೆಯಾದ ಮೀನುಗಾರರ ಶೋಧಕ್ಕೆ ಚುರುಕುಗೊಂಡ ಕಾರ್ಯಾಚರಣೆ; ಗೃಹ ಸಚಿವ ಎಂ.ಬಿ. ಪಾಟೀಲ್ ರಿಂದ ಮೀನುಗಾರರ ಮನೆಗೆ ಭೇಟಿ

0
928

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಬಳಿಕ ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಕಾರ್ಯಾಚರಣೆಯ ವಿವರಗಳ ಬಗ್ಗೆ ಚರ್ಚಿಸಲು ಉಡುಪಿಯಲ್ಲಿ ಇಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ರವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರ ಉಸ್ತುವಾರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ನೌಕದಳದ ಅಧಿಕಾರಿಗಳು, ಮೀನುಗಾರರ ಮುಖಂಡರು, ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಿದ್ದರು.

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಎಂ.ಬಿ.ಪಾಟೀಲ್ ರವರು ಈ ರೀತಿ ಹಂಚಿಕೊಂಡಿದ್ದಾರೆ;

“ಮಲ್ಪೆ ಬಂದರಿನಿಂದ ಕಾಣೆಯಾಗಿರುವ ಮೀನುಗಾರರ ಪತ್ತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜೊತೆಗೆ ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ಒದಗಿಸಲು ತಿಳಿಸಲಾಗಿದೆ. ನಾಪತ್ತೆಯಾಗಿರುವ ಮೀನುಗಾರರು ಪತ್ತೆಯಾಗುವ ವಿಶ್ವಾಸವಿದೆ.”

“ಮೀನುಗಾರರ ನಾಪತ್ತೆಗೆ ಸಂಬಂಧಿಸಿದಂತೆ ಬಂದರಿನ ಬಳಿಯೇ ಖುದ್ದು ತೆರಳಿ ಮೀನುಗಾರರ ಸಂಘದವರೊಂದಿಗೆ ಸಭೆ ನಡೆಸಿ ಘಟನೆ ಬಗ್ಗೆ ಚರ್ಚಿಸಲಾಯಿತು. ಸಾಧ್ಯವಿರುವ ಎಲ್ಲಾ ರೀತಿಯಲ್ಲಿಯೂ ಕಾರ್ಯಾಚರಣೆ ಮಾಡಲು ಸೂಕ್ತ ಮಾರ್ಗದರ್ಶನ ನೀಡಲಾಗಿದೆ.”

ಕಾಣೆಯಾಗಿರುವ ಮೀನುಗಾರರ ಮನೆಗಳಿಗೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ಮೀನುಗಾರರ ಪತ್ತೆಗೆ ನಾವು ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ತಿಳಿಸಿ ಧೈರ್ಯದಿಂದಿರಲು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಇದಲ್ಲದೇ, ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಹಚ್ಚುವ ಕುರಿತು ಭಾರತೀಯ ನೌಕಾದಳ, ಗೃಹ ಇಲಾಖೆ, ಕರಾವಳಿ ಕಾವಲು ಪಡೆಯ ಅಧಿಕಾರಿಗಳೊಂದಿಗೆ ಉಡುಪಿಯಲ್ಲಿ ಮಹತ್ವದ ಸಭೆ ನಡೆಸಿ, ಜನಪ್ರತಿನಿಧಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಎಂದು ಗೃಹ ಸಚಿವರು ತಿಳಿಸಿದ್ದಾರೆ.