ಜಾನುವಾರು ಕಳ್ಳತನ ಆರೋಪ: ಬಿಹಾರದಲ್ಲಿ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಗುಂಪು

0
294

ಸನ್ಮಾರ್ಗ ವಾರ್ತೆ

ಪಾಟ್ನಾ: ಜಾನುವಾರು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಬಿಹಾರದಲ್ಲಿ 32 ವರ್ಷದ ಮುಹಮ್ಮದ್ ಆಲಂಗೀರ್ ಎಂಬಾತನನ್ನು ಗುಂಪೊಂದು ಹೊಡೆದು ಸಾಯಿಸಿದ ಘಟನೆ ನಡೆದಿದೆ.ಪಾಟ್ನಾದ ಸಮೀಪದ ಪುಲ್ವಾರಿ ಶರೀಫ್‍ನಲ್ಲಿ ಘಟನೆ ನಡೆದಿದ್ದು ಮೂರು ಗಂಟೆಗಳ ಕಾಲ ಮುಹಮ್ಮದ್ ಆಲಂಗೀರನನ್ನು ಬಡಿದಿದ್ದು, ಬುಧವಾರ ಬೆಳಗ್ಗೆ ಮೂರು ಗಂಟೆಗೆ ಆಲಂಗೀರ್ ಮತ್ತು ಅವನ ಸಂಗಡಿಗ ಸೇರಿ ಎಮ್ಮೆಯನ್ನು ಹಟ್ಟಿಯಿಂದ ಬಿಚ್ಚಿಕೊಂಡು ಹೋಗಲು ಶ್ರಮಿಸಿದ್ದಾನೆ ಎಂದು ಆರೋಪಿಸಿ ಜನರ ಗುಂಪು ಹಲ್ಲೆ ಮಾಡಿದೆ.

ಆಲಂಗೀರನ ಜೊತೆ ಇದ್ದ ವ್ಯಕ್ತಿ ಓಡಿ ಪಾರಾಗಿದ್ದಾನೆ. ವಿಷಯ ತಿಳಿದು ಮಧ್ಯಾಹ್ನದ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಆಗಮಿಸುವವರೆಗೂ ಆಲಂಗೀರನಿಗೆ ಬಡಿಯುತ್ತಲೇ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತ ಅಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಯ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.