ಮಂಗಳೂರು; ಆಧಾರ್ ಶಿಬಿರದಿಂದ ಪ್ರಯೋಜನ ಗಳಿಸಿದ ನೂರಾರು ಸಾರ್ವಜನಿಕರು: ಅಧಿಕಾರಿಗಳಿಂದ ಪ್ರಶಂಸೆ

0
768

ಮಂಗಳೂರು: ಭಾರತೀಯ ಅಂಚೆ ಇಲಾಖೆ ಮತ್ತು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ವತಿಯಿಂದ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ನಗರದ ಬಂದರ್ ನಲ್ಲಿರುವ ಹಿದಾಯತ್ ಸೆಂಟರ್ ನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು.

ಆಧಾರ್ ಕಾರ್ಡ್ ನ ಬಯೋಮೆಟ್ರಿಕ್ ಅಪ್ ಡೇಟ್, ಹೆಸರು, ವಿಳಾಸ ಬದಲಾವಣೆ, ಜನ್ಮದಿನಾಂಕ ತಿದ್ದುಪಡಿ ಸೇರಿದಂತೆ ಹೊಸ ನೋಂದಣಿಗೂ ಅವಕಾಶ ಕಲ್ಪಿಸಿದ್ದರಿಂದ ಸುಮಾರು 400 ರಷ್ಟೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡರು. ಈ ಹಿಂದೆ ಹಲವಾರು ಕಡೆಗಳಲ್ಲಿ ಆಧಾರ್ ಕಾರ್ಡ್ ಮಾಡಲು ಪರದಾಡಿದ್ದ ಸಾರ್ವಜನಿಕರು ಈ ಶಿಬಿರದ ಮೂಲಕ ಜಿಲ್ಲೆಯ ಹಲವಾರು ಕಡೆಗಳಿಂದ ಬಂದು ಪ್ರಯೋಜನ ಪಡೆದುಕೊಂಡರು. ನೂರಾರು ಮಂದಿ ತಮ್ಮ ಆಧಾರ್ ಕಾರ್ಡ್ ನ ಬಗೆಗಿನ ಸಂಶಯ, ಗೊಂದಲಗಳನ್ನು ಅಧಿಕಾರಿಗಳ ಮುಂದೆಯೇ ತಿಳಿಸಿ, ಸರಿಪಡಿಸಿಕೊಂಡರು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಂಚೆ ಇಲಾಖೆಯ ಆಧಾರ್ ಅಧಿಕಾರಿ ವಿಲ್ಸನ್, 2009 ರಲ್ಲಿ ದ.ಕ. ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಆರಂಭವಾದಾಗ ಮೊದಲು ನೋಂದಣಿ ಮಾಡಿ, ಪರೀಕ್ಷೆ ಮಾಡಿದ್ದು ನನ್ನದು. ಆ ಬಳಿಕದಿಂದ ಈವರೆಗೆ ಆಧಾರ್ ನಲ್ಲಿ ದಿನ ನಿತ್ಯ ಹೋದಾಗ ಹೊಸ ಹೊಸ ತಾಂತ್ರಿಕ ಬದಲಾವಣೆಗಳಾಗಿದೆ. ಆದ್ದರಿಂದ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡುವಂತಹ ಜವಾಬ್ದಾರಿ ಸಮಾಜದ ಎಲ್ಲಾ ಸಾಮಾಜಿಕ ಸಂಘಟನೆಗಳು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸಮಾಜ ಸೇವಾ ಘಟಕದ ಸ್ವಯಂ ಸೇವಕರ ಸಹಕಾರದೊಂದಿಗೆ ನಮ್ಮ ಶಿಬಿರವು ಯಶಸ್ವಿಯಾಗಿದೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಮಂಗಳೂರು ಕಾರ್ಯದರ್ಶಿ ಇಸ್ಹಾಕ್ ಪುತ್ತೂರು ಮಾತನಾಡಿ, ಸಮಾಜ ಸೇವೆ ನಮ್ಮ ಧಾರ್ಮಿಕ ಹೊಣೆಗಾರಿಕೆ ಎಂಬ ನೆಲೆಯಲ್ಲಿ ದೇಶಾದ್ಯಂತ ನಮ್ಮ ಸೇವೆಯನ್ನು ನೀಡುತ್ತಾ, ಸಮಾಜದಲ್ಲಿ ಶಾಂತಿ, ಸೌಹಾರ್ದ ನೆಲೆಸಲು ಹಾಗೂ ಸಮಾಜದಲ್ಲಿ ಕಷ್ಟಪಡುತ್ತಿರುವ ಹಲವಾರು ಬಡ ಜನರಿಗೆ ಈ ಶಿಬಿರವು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ಮುಹ್ಸಿನ್ ಕಂದಕ್ ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಾ ಘಟಕದ ವತಿಯಿಂದ ಅಂಚೆ ಇಲಾಖೆಯ ಸಿಬ್ಬಂದಿಗಳಾಗಿ ಸಹಕರಿಸಿದ ವಿನೋದ್, ಶರತ್, ಪವನ್ ಹಾಗೂ ಸೌಮ್ಯಾ ರವರಿಗೆ ಕಿರು ಕಾಣಿಕೆಯನ್ನು ನೀಡಿ, ಗೌರವಿಸಲಾಯಿತು. ಖಾಸಿಮ್ ಕಂದಕ್ ನಿರೂಪಿಸಿ, ಧನ್ಯವಾದವಿತ್ತರು.

ಶಿಬಿರದ ಸಂಚಾಲಕ ಹಾಗೂ ಎಚ್ ಆರ್ ಎಸ್ ಕ್ಯಾಪ್ಟನ್ ಅಮೀರ್ ಕುದ್ರೋಳಿ, ಸಿದ್ದೀಕ್ ಜಕ್ರಿಬೆಟ್ಟು, ಇರ್ಷಾದ್ ಹಾಶ್ಮಿ, ಆಸಿಫ್ ಕುದ್ರೋಳಿ, ಬಶೀರ್ ದೇರಳಕಟ್ಟೆ, ಆರಿಫ್ ಕಳಾಯಿ, ಮುನವ್ವರ್ ಕುದ್ರೋಳಿ, ಸಲೀಮ್ ಕೆ.ಕೆ., ಇರ್ಷಾದ್ ವೇಣೂರು ಸ್ವಯಂ ಸೇವಕರಾಗಿ ಸಹಕರಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.