ವದಂತಿ ನಂಬಿ ಬೆಳ್ಳಂಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಲಸೆ ಕಾರ್ಮಿಕರು: ಪರಿಸ್ಥಿತಿ ಹತೋಟಿಗೆ ತರಲು ಪರದಾಡಿದ ಪೊಲೀಸರು

0
616

ಮಂಗಳೂರಿಗೂ ತಟ್ಟಿದ ಕಾರ್ಮಿಕರ ಗೋಳು

ಸನ್ಮಾರ್ಗ ವಾರ್ತೆ

ಮಂಗಳೂರು,ಮೇ,8: ಪಕ್ಷವೊಂದರ ವತಿಯಿಂದ ವಿವಿಧ ರಾಜ್ಯಗಳ ಕಾರ್ಮಿಕರಿಗಾಗಿ ತಮ್ಮ ಊರಿಗೆ ಮರಳಲು ರೈಲ್ವೆ ವ್ಯವಸ್ಥೆ ಮಾಡಲಾಗಿದೆ ಎಂಬ ವದಂತಿಯನ್ನು ನಂಬಿ ನಗರದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲೊಂದಾಗಿರುವ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನೂರಾರು ವಲಸೆ ಕಾರ್ಮಿಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಈ‌ ಮೂಲಕ ಮಂಗಳೂರಿಗೂ ಕಾರ್ಮಿಕರ ಗೋಳು ತಟ್ಟಿದ್ದು, ಬಂದಂತಹ ನೂರಾರು ಕಾರ್ಮಿಕರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಹರಸಾಹಸಪಟ್ಟರು.

ಕೋರೋನಾ ಲಾಕ್ ಡೌನ್ ನಿಂದಾಗಿ ರೈಲು ಸಂಚಾರ ಇನ್ನೂ ಆರಂಭವಾಗದಿದ್ದರೂ ವದಂತಿಯನ್ನು ನಂಬಿ ಬಸ್ ಸಂಚಾರವಿಲ್ಲದಿದ್ದರೂ ನಡೆದುಕೊಂಡೇ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ತಲುಪಿದ ನೂರಾರು ಕಾರ್ಮಿಕರು ಗುಂಪು ಗುಂಪಾಗಿ ನಿಂತಿದ್ದರು. ಈ‌ ವೇಳೆ ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸರೊಂದಿಗೆ ನಮಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಬೇಕಾಗಿ ಕೇಳಿದಾಗ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಓರ್ವ ಕಾರ್ಮಿಕನನ್ನು ಬಂಧಿಸಲು ಯತ್ನಿಸಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ, ಕಾರ್ಮಿಕರು ಘೋಷಣೆ ಕೂಗಲು ಆರಂಭಿಸಿದಾಗ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಅಲ್ಲೇ ಧರಣಿಗೆ ನಿರತರಾದ ಕಾರ್ಮಿಕರು, ತಮ್ಮನ್ನು ಊರಿಗೆ ಕಳುಹಿಸಿ ಕೊಡಿ ಎಂದು ಪೋಸ್ಟರ್ ಹಿಡಿದರು.

ನಂತರ ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷಾ, ಈವರೆಗೆ ತಾಳ್ಮೆಯಿಂದಿದ್ದೀರಿ. ಇನ್ನು ಮೂರು ದಿನಗಳೊಳಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಾಗುವುದು. ‌ಅಲ್ಲಿಯವರೆಗೆ ಕಾಯಿರಿ’ ಎಂದು ಭರವಸೆ ನೀಡಿದ ಬಳಿಕವಷ್ಟೇ ಧರಣಿ ಕೈಬಿಟ್ಟರು.

ಕಾಲ್ನಡಿಗೆಯಲ್ಲೇ ದೇರೇಬೈಲ್, ಸುರತ್ಕಲ್, ಕೆಪಿಟಿ, ನಂತೂರು, ಪಂಪ್ ವೆಲ್, ಕೂಳೂರು ಪ್ರದೇಶಗಳಿಂದ ಬಂದಿದ್ದ ಈ ವಲಸೆ ಕಾರ್ಮಿಕರನ್ನು ಬಳಿಕ‌ ಪೊಲೀಸರು ಕೆಎಸ್ಸಾರ್ಟಿಸಿ ಬಸ್ ನ ವ್ಯವಸ್ಥೆ ಕಲ್ಪಿಸಿ ಅವರವರ ಪ್ರದೇಶಗಳಿಗೆ ತೆರಳಲು ಸೂಚಿಸಲಾಯಿತು.

ಕೊರೋನಾ ಲಾಕ್ ಡೌನ್ ನಿಂದಾಗಿ ದೇಶ ಮತ್ತು ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯು ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಎಡವಿರುವುದು ಈ ಮೂಲಕ ತಿಳಿದು ಬರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊದಲು ಬೇರೆ ರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲ್ವೆ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದ್ದರು. ಬಳಿಕ ಕ್ರೆಡಾಯ್ ಸಂಸ್ಥೆಯ ಒತ್ತಡಕ್ಕೆ ಮಣಿದು ರದ್ದಾಗಿರುವುದಾಗಿ ತಿಳಿಸಿದ್ದರು. ಬಳಿಕ ವಿಪಕ್ಷ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಹಾಗೂ NGO ಗಳು ಸರಕಾರದ ಕ್ರಮವನ್ನು ಟೀಕಿಸಿದ್ದರಿಂದ ಆದೇಶವನ್ನು ವಾಪಸು ಪಡೆದು, ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ವ್ಯವಸ್ಥೆ ಕಲ್ಪಿಸುವುದಾಗಿ ಮಾಹಿತಿ ನೀಡಿದ್ದರು.