ಮಸೀದಿ ತೀರ್ಪು: ಫ್ರೀಜರ್ ನಲಿಟ್ಟ ಮಾಂಸದ ಜಾತಿ ಯಾವುದು ಎಂದು ಪ್ರಶ್ನಿಸಿದಂತೆ..

0
721

ಸಂಪಾದಕೀಯ

ಬಾಬರೀ ಮಸೀದಿ ಧ್ವಂಸ ಪ್ರಕರಣವನ್ನು ಲೋಕಸಭಾ ಚುನಾವಣೆಗಿಂತ ಮೊದಲೇ ಇತ್ಯರ್ಥಪಡಿಸಬೇಕೆಂಬ ಆತುರವು ಸುಪ್ರೀಮ್ ಕೋರ್ಟಿಗಿದೆಯೇ?

ಸೆ. 27ರಂದು ಸುಪ್ರೀಮ್ ಕೋರ್ಟು ವ್ಯಕ್ತಪಡಿಸಿರುವ ಅಭಿಪ್ರಾಯವು ಇಂಥದ್ದೊಂದು ಸಂದೇಹಕ್ಕೆ ಇಂಬು ನೀಡಿದೆ. ಬಾಬರಿ ಮಸೀದಿಯ ಧ್ವಂಸದ ತರುವಾಯ ಬಾಬರೀ ಮಸೀದಿಯಿದ್ದ ಜಾಗವೂ ಸೇರಿದಂತೆ ಸುತ್ತ-ಮುತ್ತಲಿನ ಜಾಗವನ್ನು ಅಂದಿನ ಕೇಂದ್ರ ಸರಕಾರವು ಅಧ್ಯಾದೇಶದ ಮೂಲಕ ವಶಪಡಿಸಿಕೊಂಡಿತ್ತು. ಇದನ್ನು ಇಸ್ಮಾಈಲ್ ಫಾರೂಖಿ ಎಂಬವರು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಈ ಕೇಸಿಗೆ ಸಂಬಂಧಿಸಿ 1994ರಲ್ಲಿ ನೀಡಲಾದ ತೀರ್ಪಿನಲ್ಲಿ, ‘ಮಸೀದಿಯು ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ, ನಮಾಝನ್ನು ಎಲ್ಲಿ ಬೇಕಾದರೂ ಬಯಲಲ್ಲೂ ನಿರ್ವಹಿಸಬಹುದು’ ಎಂದು ಹೇಳಲಾಗಿತ್ತು. ಖ್ಯಾತ ನ್ಯಾಯವಾದಿ ರಾಜೀವ್ ಧವನ್‍ರ ಮೂಲಕ ಸುನ್ನಿ ವಕ್ಫ್ ಬೋರ್ಡ್ ಪ್ರಶ್ನಿಸಿದ್ದು ಇದೇ ತೀರ್ಪನ್ನು. ‘1994ರಲ್ಲಿ ಸುಪ್ರೀಮ್ ಕೋರ್ಟು ವ್ಯಕ್ತಪಡಿಸಿದ ಈ ಅಭಿಪ್ರಾಯವು ಅಯೋಧ್ಯ ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ತೀರ್ಪಿನ ಮೇಲೆ ವಿಸ್ತೃತ ಚರ್ಚೆ ನಡೆಸುವುದಕ್ಕಾಗಿ 7 ಮಂದಿ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಈ ವಿಷಯವನ್ನು ವಹಿಸಿಕೊಡಬೇಕೆಂದು’ ಸುನ್ನಿ ವಕ್ಫ್ ಬೋರ್ಡ್ ಕೋರಿಕೊಂಡಿತ್ತು. ಆದರೆ ಸೆ. 27ರ ಬಹುಮತದ ತೀರ್ಪಿನಲ್ಲಿ ಈ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಝೀರ್ ಅವರಿದ್ದ ಪೀಠದಲ್ಲಿ ಅಬ್ದುಲ್ ನಝೀರ್‍ರನ್ನು ಹೊರತು ಪಡಿಸಿ ಉಳಿದಿಬ್ಬರು ನ್ಯಾಯಾಧೀಶರು ವಕ್ಫ್ ಬೋರ್ಡ್‍ನ ಕೋರಿಕೆಯನ್ನು ತಿರಸ್ಕರಿಸುವುದರ ಪರ ನಿಂತರು. ಆದರೆ ಕೋರಿಕೆಯನ್ನು ಮನ್ನಿಸಬೇಕು ಎಂದು ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು. ‘ಧರ್ಮದ ವಿಷಯಗಳಿಗೆ ಸಂಬಂಧಿಸಿದ ಪ್ರಕರಣವನ್ನು ಇತ್ಯರ್ಥಪಡಿಸಲು ತ್ವರೆ ಮಾಡಬೇಕಿಲ್ಲ. ಈ ವಿಷಯದ ಮೇಲೆ ವಿಸ್ತೃತ ಚರ್ಚೆ ನಡೆಸುವುದಕ್ಕಾಗಿ ಹೆಚ್ಚು ಸದಸ್ಯರಿರುವ ಸಂವಿಧಾನ ಪೀಠಕ್ಕೆ ಪ್ರಕರಣವನ್ನು ವಹಿಸಿಕೊಡಬಹುದೆಂದು’ ಅವರು ವಾದಿಸಿದರು. ಇದನ್ನು ಉಳಿದಿಬ್ಬರು ಒಪ್ಪಿಕೊಳ್ಳದೇ ಇದ್ದುದರಿಂದ ವಕ್ಫ್ ಬೋರ್ಡ್‍ನ ಮನವಿಯು ತಿರಸ್ಕ್ರತಗೊಂಡಿತು. ತಿರಸ್ಕಾರಕ್ಕೆ ಉಳಿದ ಇಬ್ಬರು ನ್ಯಾಯಾಧೀಶರು ಕೊಟ್ಟ ಕಾರಣ ಏನೆಂದರೆ, ‘ಫಾರೂಖಿ ಕೇಸಿಗೆ ಸಂಬಂಧಿಸಿ 1994ರಲ್ಲಿ ನೀಡಲಾದ ತೀರ್ಪು ಕೇಂದ್ರದ ಅಧ್ಯಾದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಇತರ ಪ್ರಕರಣಗಳಿಗೆ ಆ ತೀರ್ಪು ಅನ್ವಯಿಸುವುದಿಲ್ಲ’ವೆಂಬುದಾಗಿದೆ.

ಸುಪ್ರೀಮ್ ಕೋರ್ಟಿನ ಈ ನಿಲುವಿಗೆ ಬಿಜೆಪಿ ಮತ್ತು ಸಂಘಪರಿವಾರದ ಗುಂಪಿನಿಂದ ಸಂಭ್ರಮ ವ್ಯಕ್ತವಾಗಿದೆ. ಇದು ಮುಸ್ಲಿಮರಿಗಾದ ಹಿನ್ನಡೆ ಎಂಬ ರೀತಿಯಲ್ಲಿ ವ್ಯಾಖ್ಯಾನಗಳೂ ನಡೆದಿವೆ. ನಿಜವಾಗಿ, ಈ ಹಿನ್ನಡೆ-ಮುನ್ನಡೆಯ ಆಚೆಗೆ ಒಂದು ವಾಸ್ತವವಿದೆ. ಒಂದುವೇಳೆ, ಸುನ್ನಿ ವಕ್ಫ್ ಬೋರ್ಡ್‍ನ ಕೋರಿಕೆಗೆ ಮನ್ನಣೆ ಸಿಗುತ್ತಿದ್ದರೆ, ಬಾಬರಿ ವಿವಾದದ ಇತ್ಯರ್ಥಕ್ಕೆ ಇನ್ನಷ್ಟು ಸಮಯ ತಗಲುತ್ತಿತ್ತು. ‘ಬಾಬರಿ ಮಸೀದಿಯಿದ್ದ ಭೂಮಿ ಯಾರದು’ ಎಂಬ ಮೂಲ ಪ್ರಶ್ನೆಯನ್ನು ವಿಚಾರಣೆಗೆ ಎತ್ತಿಕೊಳ್ಳುವುದಕ್ಕಿಂತ ಮೊದಲು ‘ನಮಾಝïಗೆ ಮಸೀದಿ ಅನಿವಾರ್ಯವಲ್ಲ’ ಎಂಬ 1994ರ ತೀರ್ಪು ಮರುಪರಿಶೀಲನೆಗೊಂಡು ಇತ್ಯರ್ಥವಾಗಬೇಕಾದ ಅಗತ್ಯ ಇತ್ತು. ಹಾಗೆ ಅಗಿರುತ್ತಿದ್ದರೆ, ‘ಬಾಬರಿ ಮಸೀದಿಯಿದ್ದ ಜಾಗ ಯಾರದು’ ಎಂಬ ಮೂಲ ಮತ್ತು ನಿರ್ಣಾಯಕ ಪ್ರಶ್ನೆಯ ಮೇಲಿನ ವಿಚಾರಣೆಯು ಈಗ ನಿಗದಿಯಾಗಿರುವಂತೆ ಅಕ್ಟೋಬರ್ 29ರಂದು ಪ್ರಾರಂಭವಾಗುವುದಕ್ಕೆ ಸಾಧ್ಯವೇ ಇರಲಿಲ್ಲ. ಒಂದು ರೀತಿಯಲ್ಲಿ, ಲೋಕಸಭಾ ಚುನಾವಣೆಗಿಂತ ಮೊದಲು ಬಾಬರಿ ವಿವಾದ ಇತ್ಯರ್ಥವಾಗುವುದನ್ನು ತಡೆಯುವ ಸಾಮರ್ಥ್ಯ ವಕ್ಫ್ ಬೋರ್ಡ್‍ನ ಕೋರಿಕೆಗಿತ್ತು. ಆದ್ದರಿಂದಲೇ,

ಈ ಕೋರಿಕೆ ತಿರಸ್ಕ್ರತಗೊಳ್ಳುವುದನ್ನು ಬಿಜೆಪಿ ಬಯಸುತ್ತಿತ್ತು. ಮುಂದಿನ ಲೋಕಸಭಾ ಚುನಾವಣೆಯನ್ನು ನೋಟು ಬ್ಯಾನ್, ಜಿಎಸ್‍ಟಿ, ಕಪ್ಪು ಹಣದ ವೈಫಲ್ಯ, ರಫೇಲ್ ಹಗರಣ, ತೈಲ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿಗಳ ಮೂಲಕ ಎದುರಿಸಲಾಗದೆಂಬುದು ಅದಕ್ಕೆ ಚೆನ್ನಾಗಿ ಗೊತ್ತು. ಆದ್ದರಿಂದ, ರಾಮಮಂದಿರ ಅದರ ಇಂದಿನ ತುರ್ತು ಅಗತ್ಯ. ಕೋರ್ಟಿನ ತೀರ್ಪು ಪರವಾಗಿ ಬಂದರೂ ವಿರುದ್ಧವಾಗಿ ಬಂದರೂ ಲಾಭ ಕೊಯ್ಯುವ ಕಾರ್ಯತಂತ್ರವನ್ನು ಅದು ಈಗಾಗಲೇ ಹೆಣೆದಿದೆ ಎಂದು ಹೇಳಲಾಗುತ್ತದೆ. ತೀರ್ಪು ಪರವಾಗಿ ಬಂದರೆ ಅದನ್ನೇ ಸಾಧನೆಯಾಗಿ ಬಿಂಬಿಸಿ ಮತ ಯಾಚಿಸುವುದಕ್ಕೆ ಅದು ಮುಂದಾಗಬಹುದು. ತೀರ್ಪು ವಿರುದ್ಧವಾಗಿ ಬಂದರೆ, ಉಗ್ರ ಭಾಷಣ ಮತ್ತಿತರವುಗಳ ಮೂಲಕ ದೇಶದಾದ್ಯಂತ ಉದ್ವಿಘ್ನ ವಾತಾವರಣವೊಂದನ್ನು ನಿರ್ಮಿಸುವುದು ಮತ್ತು ಚುನಾವಣೆಯನ್ನು ಹಿಂದೂ v/s ಮುಸ್ಲಿಮ್ ಆಗಿ ವಿಭಜಿಸುವುದಕ್ಕೂ ಅದು ಪ್ರಯತ್ನಿಸಬಹುದು. ‘ಅಧ್ಯಾದೇಶ ತಂದು ಕೋಟು ತೀರ್ಪನ್ನು ಅಮಾನ್ಯಗೊಳಿಸುತ್ತೇವೆ, ಮಂದಿರ ಕಟ್ಟುತ್ತೇವೆ, ಬಹುಮತ ಕೊಡಿ’ ಎಂದೂ ಜನರಲ್ಲಿ ಅದು ಮನವಿ ಮಾಡಿಕೊಳ್ಳಬಹುದು. ಇವು ಏನಿದ್ದರೂ ಲಾಭ ಬಿಜೆಪಿಗೇ. ಅಂದಹಾಗೆ, ಕಪಿಲ್ ಸಿಬಲ್ ಅವರು ಇದನ್ನು ಈ ಹಿಂದೆಯೇ ಅಂದಾಜಿಸಿದ್ದರು. ಬಾಬರಿ ವಿವಾದ ಲೋಕಸಭಾ ಚುನಾವಣೆಯ ಬಳಿಕ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸುಪ್ರೀಮ್ ಕೋರ್ಟ್‍ನಲ್ಲಿ ವಾದಿಸಿದ್ದರು. ಅವರ ಈ ಬೇಡಿಕೆಯನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿತ್ತು. ವಿಷಾದ ಏನೆಂದರೆ,

ಕಾನೂನನ್ನು ಗೌರವಿಸದ ಗುಂಪೊಂದು 1992ರಲ್ಲಿ ಮಸೀದಿಯನ್ನು ಉರುಳಿಸಿದ ಬಳಿಕ, ‘ಮಸೀದಿ ಅನಿವಾರ್ಯವೋ’ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದು ಚರ್ಚಿಸಲಾಗುತ್ತಿದೆ ಎಂಬುದು. ಉರುಳಿಸಿದವರು ಇನ್ನೂ ಶಿಕ್ಷೆಗೆ ಒಳಗಾಗಿಲ್ಲ. ಆ ಕುರಿತಾದ ವಿಚಾರಣೆಯು ಈಗ ಯಾವ ಹಂತದಲ್ಲಿ ಇದೆ ಎಂಬುದು ಈಗ ಉರುಳಿಸಿದವರಿಗೇ ಗೊತ್ತಿಲ್ಲ. ಇಂಥದ್ದೊಂದು ಸ್ಥಿತಿಯಲ್ಲಿ, ಮಸೀದಿ ಅನಿವಾರ್ಯವೇ ಎಂದು ಕೋರ್ಟೇ ಪ್ರಶ್ನಿಸುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಈ ಹಿಂದೆ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬ ವೃದ್ಧರನ್ನು ಗುಂಪೊಂದು ಥಳಿಸಿ ಕೊಂದುಹಾಕಿತ್ತು. ಆಗ ಹುಟ್ಟಿಕೊಂಡ ಪ್ರಶ್ನೆ ಏನೆಂದರೆ, ಆ ವೃದ್ಧರ ಮನೆಯ ಫ್ರೀಜರ್ ನಲ್ಲಿರುವುದು ಗೋಮಾಂಸವೋ ಅಲ್ಲ ಮೇಕೆ ಮಾಂಸವೋ ಎಂಬುದಾಗಿತ್ತು. ಥಳಿಸಿ ಕೊಂದ ಗುಂಪೇ ಹುಟ್ಟು ಹಾಕಿದ ಈ ಪ್ರಶ್ನೆಗೆ ಎಷ್ಟು ಮಹತ್ವ ಲಭಿಸಿತೆಂದರೆ, ಸರಕಾರವೇ ಅದಕ್ಕೆ ಕಿವಿಗೊಟ್ಟಿತು. ಫ್ರೀಜರ್ ನಲ್ಲಿದ್ದ ಮಾಂಸವನ್ನು ಪ್ರಯೋಗಾಲಯಕ್ಕೆ ರವಾನಿಸಿತು. ಒಂದಲ್ಲ, ಎರಡೆರಡು ಬಾರಿ ಮಾಂಸ ಪರೀಕ್ಷೆ ನಡೆಯಿತು. ಥಳಿಸಿ ಕೊಂದ ಕೃತ್ಯಕ್ಕಿಂತ ಫ್ರೀಜರ್ ನಲ್ಲಿದ್ದ ಮಾಂಸದ ಜಾತಿಯೇ ಪ್ರಾಮುಖ್ಯತೆಯನ್ನು ಪಡೆದ ಕ್ರೂರ ವ್ಯಂಗ್ಯವೂ ನಡೆಯಿತು. ಇದೀಗ ಬಾಬರಿ ಮಸೀದಿ ಪ್ರಕರಣವೂ ಅಂಥದ್ದೇ ಒಂದು ಚರ್ಚೆಗೆ ತಿರುಗಿಕೊಂಡಿರುವುದು ವ್ಯಂಗ್ಯವೋ ಕುಚೋದ್ಯವೋ ಗೊತ್ತಾಗುತ್ತಿಲ್ಲ. ಅಂದಹಾಗೆ,

ನಮಾಝಗೆ ಮಸೀದಿಯೇ ಬೇಕೆಂದಿಲ್ಲ ನಿಜ. ಆದರೆ, ಮಸೀದಿ ಮುಸ್ಲಿಮರ ಅವಿಭಾಜ್ಯ ಅಂಗ. ಅದು ಅವರ ಸಾಂಸ್ಕ್ರತಿಕ, ರಾಜಕೀಯ, ಭಾವನಾತ್ಮಕ ಕೇಂದ್ರ. ಐದು ಹೊತ್ತಿನ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಬೇಕಾದುದು ಮಸೀದಿಯಲ್ಲೇ. ಮಸೀದಿಯಲ್ಲಿ ಮಾಡುವ ನಮಾಝಗೆ ಇತರೆಡೆ ಮಾಡುವ ನಮಾಝïಗಿಂತ ಹಲವು ಪಟ್ಟು ಹೆಚ್ಚು ಪುಣ್ಯವಿದೆ ಎಂಬ ಪ್ರವಾದಿ ವಚನ ಇದೆ. ಪ್ರವಾದಿಯವರು ಮದೀನಕ್ಕೆ ಹೋದ ಕೂಡಲೇ ಮಸೀದಿ ನಿರ್ಮಿಸಿದರು. ಮುಸ್ಲಿಮ್ ಸಮುದಾಯದ ಸರ್ವ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಅವರು ಮಸೀದಿಯನ್ನು ಪ್ರಸ್ತುತಪಡಿಸಿದರು. ಶುಕ್ರವಾರದ ನಮಾಝ ಮತ್ತು ಪ್ರವಚನವನ್ನು ಮಸೀದಿಯಲ್ಲೇ ನಿರ್ವಹಿಸಬೇಕಾಗಿದೆ. ಹಾಗಂತ, ಇದು ಈ ದೇಶದ ಮುಸ್ಲಿಮರ ಹೊಸ ವಾದವೇನೂ ಅಲ್ಲ. ಪ್ರವಾದಿಯವರ ವಚನಗಳೇ ಇದಕ್ಕೆ ಆಧಾರ. ಜಾಗತಿಕವಾಗಿ ಇರುವ ಮಸೀದಿಗಳು ಇದಕ್ಕೆ ಇನ್ನೊಂದು ಆಧಾರ. ಬಹುಶಃ,

1994ರಲ್ಲಿ ತೀರ್ಪು ನೀಡುವಾಗ ಈ ವಿಷಯದ ಮೇಲೆ ಗಂಭೀರ ಅವಲೋಕನ ಮತ್ತು ಆಳ ಅಧ್ಯಯನ ನಡೆದಿಲ್ಲವೇನೋ ಎಂದು ತೋರುತ್ತದೆ. ಆದ್ದರಿಂದಲೇ, ಸುನ್ನಿ ವಕ್ಫ್ ಬೋರ್ಡ್‍ನ ಕೋರಿಕೆಯನ್ನು ಕೋರ್ಟು ಮಾನ್ಯ ಮಾಡಬೇಕಿತ್ತು ಎಂಬ ವಾದಕ್ಕೆ ಬಲ ಬರುವುದು. ಆದರೆ,

ಸುಪ್ರೀಮ್ ಕೋರ್ಟು ಇನ್ನಾವುದೋ ತುರ್ತಿನಲ್ಲಿ ಇದ್ದಂತಿದೆ.