ಮಿತ್ತಬೈಲ್ ಜಮಾಅತಿಗರೇ, ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ ಸ್ಥಾಪಿಸಿ ಉಸ್ತಾದರಿಗೆ ಗೌರವ ಸಲ್ಲಿಸಿ..

0
2830

ಅಬೂ ಅಮಾನ್

ಖಗೋಳ ಶಾಸ್ತ್ರ, ಕರ್ಮಶಾಸ್ತ್ರ, ಹದೀಸ್ ಪಾಂಡಿತ್ಯವಿದ್ದ ಮತ್ತು ಅಪಾರ ಧಾರ್ಮಿಕ ಪಂಡಿತರನ್ನು ತಯಾರಿಸಿದ್ದ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರು ಎಷ್ಟು ದೊಡ್ಡ ಜನಾನುರಾಗಿ ವ್ಯಕ್ತಿಯಾಗಿದ್ದರು ಅನ್ನುವುದಕ್ಕೆ ಅವರ ಜನಾಝದಲ್ಲಿ ಸೇರಿದ ಜನಸ್ತೋಮವೇ ಉತ್ತರ ಹೇಳುತ್ತಿತ್ತು. ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರ ಶಾಖೆಯ ಅಧ್ಯಕ್ಷ ಮತ್ತು ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕರಾದ ಮುಹಮ್ಮದ್ ಕು೦ಞ ಯವರೂ ಉಸ್ತಾದರ ಜನಾಝ ಸಂದರ್ಶನಕಾರರಲ್ಲಿ ಓರ್ವರಾಗಿದ್ದಾರೆ. ಸಾಮಾನ್ಯವಾಗಿ ಧಾರ್ಮಿಕ ನಾಯಕರು ವೈಜ್ಞಾನಿಕವಾಗಿ ಪಳಗಿರುವುದು ಕಡಿಮೆ. ಎಂಟರಿಂದ ಹದಿಮೂರನೇ ಶತಮಾನದ ಒಳಗೆ ಅಲ್ ಬರೂನಿ, ಅವಿಸ್ಸಿನ್ನ, ಇಬ್ನು ಹೈತಂ, ಇಬ್ನು ಖುಲ್ಡೂಮ್, ಇಬ್ನು ಬೈತಾರ್, ಶರೀಫುಲ್ ಇದ್ರಿಸ್, ಅಬುಲ್ ಕಾಸಿಂ, ಇಬ್ನುಲ್ ಬನ್ನ ಮುಂತಾದವರು ಧಾರ್ಮಿಕ ಮತ್ತು ವೈಜ್ಞಾನಿಕ ರಂಗದಲ್ಲಿ ಏಕಪ್ರಕಾರವಾಗಿ ಪಳಗಿ ಇತಿಹಾಸದಲ್ಲಿ ಸ್ಥಾನ ಪಡೆದಂತೆ ಬಳಿಕದ ಧಾರ್ಮಿಕ ವಿದ್ವಾಂಸರು ಅದೇ ಮಟ್ಟದಲ್ಲಿ ಎರಡೂ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಪಡೆದದ್ದು ಕಡಿಮೆ. ಇದಕ್ಕೆ ಕಾರಣಗಳು ಬೇರೆ ಬೇರೆ ಇರಬಹುದು. ಸಾಮಾಜಿಕ, ಆರ್ಥಿಕ, ರಾಜಕೀಯ ಇತ್ಯಾದಿ ಕಾರಣಗಳು ಮುಸ್ಲಿಂ ಜಗತ್ತನ್ನು ವೈಜ್ಞಾನಿಕ ಕ್ಷೇತ್ರದಿಂದ ದೂರ ನಿಲ್ಲಿಸುವಂತೆ ಮಾಡಿರಬಹುದು.ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಲೌಕಿಕ ವಿಧ್ಯೆಗೆ ಮಹತ್ವ ಕಡಿಮೆಯಾಗಿರುವುದೂ ಕಾರಣವಾಗಿರಬಹುದು. ಆದರೆ, ಜಬ್ಬಾರ್ ಉಸ್ತಾದ್ ಈ ಎಲ್ಲಕ್ಕೂ ಅಪವಾದದಂತಿದ್ದರು. ಅವರು ಏಕಕಾಲದಲ್ಲಿ ಧಾರ್ಮಿಕ ಪಂಡಿತರೂ ಹೌದು, ವಿಜ್ಞಾನದ ಉಸ್ತಾದರೂ ಹೌದು. ಆದ್ದರಿಂದಲೋ ಏನೋ ಅವರು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಹೊರಗೂ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಎಸ್ಸೆಸ್ಸೆಫ್ ಸಂಘಟನೆಯನ್ನು ಒಪ್ಪದವರೂ ಅವರನ್ನು ಒಪ್ಪುವಂಥ ವಾತಾವರಣ ನಿರ್ಮಾಣ ಮಾಡಿದ್ದರು. ನಿಜವಾಗಿ ಅರ್ಹತೆಯನ್ನು ಪರಿಗಣಿಸಿದ್ದರೆ ಅವರು ಎಂದೋ ದ. ಕ. ಜಿಲ್ಲೆಯ ಖಾಝಿಯಾಗಬೇಕಿತ್ತು ಎಂದು ಹೇಳುವವರಿದ್ದಾರೆ. ಮರ್ಹೂಂ ಕೋಟಾ ಉಸ್ತಾದರು ಕಾಯಿಲೆಗೀಡಾಗಿದ್ದಾಗ ಜಬ್ಬಾರ್ ಉಸ್ತಾದರನ್ನು ಹಂಗಾಮಿ ಖಾಝಿಯನ್ನಾಗಿ ನೇಮಕ ಮಾಡಲಾಗಿತ್ತು. ಕೋಟಾ ಉಸ್ತಾದ್ ಮರಣ ಹೊಂದಿ ಕೆಲಕಾಲದವರೆಗೂ ಜಬ್ಬಾರ್ ಉಸ್ತಾದರು ಹಂಗಾಮಿ ಖಾಝಿಯಾಗಿಯೇ ಇದ್ದರು. ಜಿಲ್ಲೆಯ ಬಹುತೇಕ ಮುಸ್ಲಿಮರು ಜಬ್ಬಾರ್ ಉಸ್ತಾದರೇ ಮುಂದಿನ ಖಾಝಿಯೆಂದು ಭಾವಿಸಿದ್ದರು. ಆದರೆ, ಆ ಬಳಿಕ ಚೆಂಬರಿಕ ಉಸ್ತಾದರು ಕೋಟಾ ಉಸ್ತಾದರ ಸ್ಥಾನವನ್ನು ತುಂಬಿದರು. ಆದರೆ, ಜಬ್ಬಾರ್ ಉಸ್ತಾದ್ ಖಾಝಿ ಆಗದೆ ಇರುವುದನ್ನೇ ಬಯಸಿದ್ದರು ಎಂದೇ ಹೇಳಲಾಗುತ್ತದೆ. ಆದ್ದರಿಂದಲೇ, ಹಂಗಾಮಿ ಆಗಿದ್ದೂ ಖಾಝಿ ಆಗಿ ನೇಮಕ ಆಗದೆ ಇದ್ದಿರುವುದಕ್ಕೆ ಕಾರಣ ಎಂದೂ ಹೇಳಲಾಗುತ್ತದೆ. ಅವರು ಯಾವತ್ತೂ ಸ್ಥಾನಮಾನವನ್ನು ಅಪೇಕ್ಷಿಸದ, ಥಳಕು ಬಳಕು ಜಗತ್ತಿನಲ್ಲಿ ಕರಗಲು ನಿರಾಕರಿಸಿದವರು. ಸಹಜವಾಗಿ ಬದುಕಿ ಬೆರಗು ಮೂಡಿಸಿದರು.

ಕಿಲ್ತಾನ್ ದ್ವೀಪದವರಾದ ಅವರು ಬದುಕಿನ ಬಹುಭಾಗ ಕಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ವಿರಾಗಿ ಅನ್ನುವುದಕ್ಕಿಂತಲೂ ಸಕಲವೂ ಇದ್ದೂ ಇಲ್ಲದೆ ಬದುಕುವುದು ಹೇಗೆ ಅನ್ನುವುದನ್ನು ತೋರಿಸಿಕೊಟ್ಟವರು. ಅವರು ಬಯಸಿದ್ದರೆ, ಬೇಕಾದುದೆಲ್ಲವನ್ನೂ ಅನುಭವಿಸುವುದಕ್ಕೆ ಅವರಿಗೆ ಅವಕಾಶವಿತ್ತು. ಅಷ್ಟು ಅಭಿಮಾನಿಗಳಿದ್ದರು. ಆದರೂ ಅವರು ಅಂತಹ ಅಭಿಮಾನಿಗಳನ್ನು ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಳ್ಳಲಿಲ್ಲ. ಅವರ ವೇಷಭೂಷಣವೂ ಸರಳ. ಪಂಚೆ, ಮುಂಡಾಸು, ಶರ್ಟು ಮತ್ತು ಕೈಯಲ್ಲೊಂದು ಹಳೇ ಕಾಲದ ಕೊಡೆ. ಹೆಗಲಲ್ಲೊಂದು ಹಸಿರು ಶಾಲು.‌ ಇದು ಜಬ್ಬಾರ್ ಉಸ್ತಾದ್.

ಅವರಿಗೆ ಅಲ್ಲಾಹನು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ.

ಮಿತ್ತಬೈಲಿನ ಜಮಾಅತರು ಖಗೋಳ ವಿಜ್ಞಾನದ ಅಧ್ಯಯನಕ್ಕೆ ಸಂಬಂಧಿಸಿ ಮಿತ್ತಬೈಲಿನಲ್ಲಿ ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದರೆ ಮತ್ತು ಅದರಿಂದಾಗಿ ಧಾರ್ಮಿಕ ಮತ್ತು ಖಗೋಳಶಾಸ್ತ್ರೀಯ ವಿಧ್ಯೆಯನ್ನು ಪಡೆದ ವಿದ್ಯಾರ್ಥಿಗಳು ತಯಾರಾದರೆ ಅದು ಉಸ್ತಾದರಿಗೆ ಸಲ್ಲಿಸುವ ಅತ್ಯುತ್ತಮ ಗೌರವಾದೀತು.