ಮೋದಿ ಸರಕಾರವನ್ನು ಟೀಕಿಸಿದ ಟೈಮ್ಸ್ ಆಫ್ ಇಂಡಿಯ, ದ ಹಿಂದು, ಇಕಾನಮಿಕ್ಸ್ ಟೈಮ್ಸ್ ,ಟೆಲಿಗ್ರಾಫ್, ಆನಂದ್ ಬಝಾರ್ ಪತ್ರಿಕೆಗಳಿಗೆ ಜಾಹೀರಾತಿಲ್ಲ

0
904

ಹೊಸದಿಲ್ಲಿ, ಜೂ. 29: ಪ್ರಧಾನಿ ನರೇಂದ್ರ ಮೋದಿ ಮತ್ತು ಸರಕಾರವನ್ನು ಕಟುವಾಗಿ ಟೀಕಿಸುತ್ತಿರುವ ಪ್ರಮುಖ ಪತ್ರಿಕೆಗಳಾದ ಟೈಮ್ಸ್ ಆಫ್ ಇಂಡಿಯ, ದ ಹಿಂದು, ಇಕಾನಮಿಕ್ಸ್ ಟೈಮ್ಸ್ ,ಟೆಲಿಗ್ರಾಫ್ ಆನಂದ್ ಬಝಾರ್ ಪತ್ರಿಕೆಗಳಿಗೆ ಕೇಂದ್ರಸರಕಾರ ಜಾಹೀರಾತು ನಿರಾಕರಿಸಿದೆ. ಪ್ರಧಾನಿ ಮೋದಿ ಮತ್ತು ಸರಕಾರದ ವಿರುದ್ಧ ನಿರಂತರ ಟೀಕೆ ಮಾಡಿ ವರದಿ ಪ್ರಕಟಿಸುತ್ತಿರುವುದು ಸರಕಾರದ ಕೆಂಗಣ್ಣಿಗೆ ಕಾರಣವಾಗಿದೆ.

ರಫೇಲ್ ಯುದ್ಧವಿಮಾನ ವ್ಯವಹಾರದ ಭ್ರಷ್ಟಾಚಾರ ಕುರಿತು ದ ಹಿಂದೂ ಅನೇಕ ತನಿಖಾ ವರದಿ ಪ್ರಕಟಿಸಿತ್ತು. ಚುನಾವಣಾ ಸಮಯದಲ್ಲಿ ಇದು ಸರಕಾರಕ್ಕೆ ದೊಡ್ಡ ತಲೆನೋವು ಸೃಷ್ಟಿಸಿತ್ತು. ದ ಹಿಂದೂಗೆ ಈ ವರ್ಷ ಮಾರ್ಚಿನಿಂದ ಟೈಮ್ಸ್ ಗ್ರೂಪ್‍ಗೆ ಜೂನ್‍ನಿಂದ ಜಾಹೀರಾತು ನೀಡುವುದನ್ನು ನಿಲ್ಲಿಸಲಾಗಿದೆ. ಆದರೆ ಸರಕಾರ ಈ ಕುರಿತು ಸ್ಪಷ್ಟೀಕರಣವನ್ನು ನೀಡಿಲ್ಲ. ಟೈಮ್ಸ್ ಗ್ರೂಪ್‍ನ ಅಧೀನದಲ್ಲಿರುವ ಟೈಮ್ಸ್ ನೌ, ಮಿರರ್ ನೌ ಚ್ಯಾನೆಲ್‍ಗಳಿಗೂ ಜಾಹೀರಾತು ನಿರಾಕರಿಸಲಾಗಿದೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದನ್ನು ಬೆಟ್ಟು ಮಾಡಿ ಟೈಮ್ಸ್ ಗ್ರೂಪ್ ಮಾಧ್ಯಮ ಸಂಸ್ಥೆಗಳೂ ನಿರಂತರ ಸುದ್ದಿ ಪ್ರಕಟಿಸಿದ್ದವು. ಟೈಮ್ಸ್ ಆಫ್ ಇಂಡಿಯಕ್ಕೆ ಪ್ರತಿ ತಿಂಗಳು ಸುಮಾರು 15 ಕೋಟಿ ರೂಪಾಯಿ ಮತ್ತು ಹಿಂದೂಗೆ ನಾಲ್ಕು ಕೋಟಿ ರೂಪಾಯಿಯ ಜಾಹೀರಾತು ಕೇಂದ್ರ ಸರಕಾರ ನೀಡುತ್ತಿತ್ತು. ಜಾಹೀರಾತು ನಿಷೇಧಿಸಿದ ಕುರಿತು ಈ ಮಾಧ್ಯಮಗಳು ಬಹಿರಂಗಪಡಿಸಿಲ್ಲ. ಆದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮೋದಿ ಸರಕಾರ ಪ್ರಜಾಪ್ರಭುತ್ವ ವಿರುದ್ಧವಾಗಿ ಮಾಧ್ಯಮ ಸ್ವಾತಂತ್ರ್ಯವನ್ನು ದಮನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.