ಅಹ್ಮದಾಬಾದ್: ಮುಸ್ಲಿಮೇತರರಿಗೆ ತೆರೆದ ಮಸೀದಿ ಬಾಗಿಲು

0
985

ಅಹ್ಮದಾಬಾದ್: ಬನ್ನಿ ಮಸೀದಿಗೆ ಭೇಟಿ ನೀಡೋಣ, ನಮಾಝ್ ಹೇಗೆ ಮಾಡುತ್ತಾರೆಂದು ನೋಡೋಣ, ಬನ್ನಿ ಇಸ್ಲಾಮನ್ನು ಅರಿಯೋಣ” ಎಂಬ ಪೋಸ್ಟರ್‍ನೊಂದಿಗೆ ಮಸೀದಿಯ ಬಾಗಿಲುಗಳನ್ನು ಮಸ್ಲಿಮೇತರರಿಗಾಗಿ ತೆರೆದ ಸನ್ನಿವೇಶವೊಂದು ಗುಜರಾತ್‍ನ ನರೋಡಾ ಪಾಟಿಯಾ ನಗರದಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಸೋನೀ ಚಾವ್ಲ್ ದಲ್ಲಿ ನಡೆದಿದೆ.

ಒಂದು ವರ್ಷದ ಹಿಂದಷ್ಟೇ ನಿರ್ಮಾಣಗೊಂಡಿರುವ “ಮಸ್ಜಿದ್ ಉಮರ್ ಬಿನ್ ಖತ್ತಾಬ್” ಮಸೀದಿಯು ಈ ಅವಕಾಶವನ್ನು ಮುಸ್ಲಿಮೇತರ ಧರ್ಮಬಾಂಧವರಿಗೆ ಕಲ್ಪಿಸಿದ್ದು ಪುರುಷರು ಮತ್ತು ಮಹಿಳೆಯರಿಗೆ ಇಸ್ಲಾಮನ್ನು ಅರಿಯುವ ಅವಕಾಶವನ್ನು ಮಾಡಿಕೊಟ್ಟಿದೆ.

ಒಂದು ವಾರದಲ್ಲಿ 120 ಕ್ಕೂ ಹೆಚ್ಚು ಮುಸ್ಲಿಮೇತರ ಧರ್ಮ ಬಾಂಧವರು ಮಸೀದಿಗೆ ಭೇಟಿ ನೀಡಿದ್ದಾರೆ.

“ಮುಸ್ಲಿಮರು ಮಸೀದಿಯಲ್ಲಿ ಏನು ಮಾಡುತ್ತಾರೆ, ಅವರು ಏನನ್ನು ಆರಾಧಿಸುತ್ತಾರೆ, ಎಂದು ತಿಳಿದುಕೊಳ್ಳುವ ಕುತೂಹಲ ಇತ್ತು. ಅದನ್ನಿಂದು ಈ ಮಸೀದಿಯಲ್ಲಿ ತಿಳಿದುಕೊಳ್ಳುವ ಅವಕಾಶ ದೊರೆಯಿತು” ಎಂದು ಸ್ಥಳೀಯರಾದ ಪ್ರವೀಣ್ ಪಟೇಲ್ ತಿಳಿಸಿದರು.

ಮಸೀದಿಯ ಕೋಶಾಧಿಕಾರಿಗಳಾದ ಮೊಯಿನುದ್ದೀನ್ ನಸರುಲ್ಲಾಹ್‍ರವರು ಈ ಕಾರ್ಯಕ್ರಮದ ಕುರಿತು ಮಾತನಾಡುತ್ತಾ, ಕ್ರೈಸ್ತ, ಹಿಂದೂ ಹಾಗೂ ಇತರೆ ಧರ್ಮೀಯ ಬಾಂಧವರಲ್ಲಿದ್ದ ತಪ್ಪುಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ನಾವು ಮಸೀದಿಯ ಬಾಗಿಲನ್ನು ತೆರೆದಿರಿಸಿರುವೆವು. ಐದು ಹೊತ್ತಿನ ನಮಾಝ್ ವೀಕ್ಷಿಸಲು ಇಲ್ಲಿ ಬೋಧಿಸಲಾಗುತ್ತಿರುವ ವಿಷಯಗಳನ್ನು ತಿಳಿಯಲು ಪ್ರತಿಯೊಬ್ಬರಿಗೂ ಹಕ್ಕಿದೆ” ಎಂದವರು ನುಡಿದರು.

2002ರಲ್ಲಿ ನರೋಡಾ ಪಟಿಯಾಲದಲ್ಲಿ ನಡೆದ ಕೋಮುಗಲಭೆಗೆ 97 ಜನರು ಹತರಾಗಿದ್ದರು. ಧರ್ಮಗಳ ನಡುವಿರುವ ದ್ವೇಷವನ್ನು ಅಳಿಸಲು, ಕೋಮುಸಾಮರಸ್ಯವನ್ನು ಸಾರಲು ಇದೊಂದು ಉತ್ತಮ ಹೆಜ್ಜೆ ಎಂಬುದಾಗಿ ಸಂದರ್ಶಕರು ಅಭಿಪ್ರಾಯ ಪಟ್ಟರು.