ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ತಾಯಿಯ ಮೃತದೇಹ ಕಸದರಾಶಿಗೆ ಎಸೆದ ಪುತ್ರ

0
979

ಚೆನ್ನೈ,ಆ. 14: ಮೃತದೇಹ ಸಂಸ್ಕಾರಕ್ಕೆ ಹಣ ಇಲ್ಲದ್ದರಿಂದಾಗಿ ತಾಯಿಯ ಮೃತದೇಹವನ್ನು ಪುತ್ರನೊಬ್ಬ ರಸ್ತೆ ಬದಿಯ ಕಸದತೊಟ್ಟಿಗೆ ಎಸೆದ ಘಟನೆ ತಮಿಳುನಾಡಿನ ತುತ್ತುಕುಡಿ ಧನಶೇಖರನ್ ನಗರದಲ್ಲಿ ನಡೆದಿದೆ.

ಕಸದ ರಾಶಿಯಲ್ಲಿ ಮಹಿಳೆಯ ಮೃತದೇಹ ಬಿದ್ದುಕೊಂಡಿದೆ ಎಂದು ಸಿಪ್‍ಕೋಟ್ ಪೊಲೀಸ್ ಠಾಣೆಗೆ ಯಾರೋ ತಿಳಿಸಿದ್ದರು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಮೋರ್ಚರಿಯಲ್ಲಿ ಇರಿಸಿದರು. ಇದೇ ಭಾಗದಲ್ಲಿ ವಾಸವಿರುವ ವಸಂತಿ(55) ಎಂಬವರ ಮೃತದೇಹ ಇದಾಗಿದ್ದು ತನಿಖೆಯಲ್ಲಿ ಪುತ್ರ ಮುತ್ತುಲಕ್ಷ್ಮಣನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮಣನ್(35) ಸಮೀಪದ ದೇವಾಲಯದಲ್ಲಿ ಅರ್ಚಕನಾಗಿದ್ದು ನಾಲ್ಕು ವರ್ಷದಿಂದ ಆತನ ತಾಯಿ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಒಂದು ಲಕ್ಷರೂಪಾಯಿವರೆಗೂ ಸಾಲ ಮಾಡಿದ್ದೇನೆ ಎಂದು ಮುತ್ತುಲಕ್ಷ್ಮಣನ್ ಹೇಳಿದ್ದಾನೆ.

ಮೃತದೇಹ ಸಂಸ್ಕಾರಕ್ಕೆ ತನ್ನಲ್ಲಿ ಹಣವಿಲ್ಲದ್ದರಿಂದ ಮೃತದೇಹವನ್ನು ಹೊದಿಕೆಯಲ್ಲಿ ಸುತ್ತಿ ಕಸದ ರಾಶಿಗೆ ಎಸೆದು ಬಂದಿದ್ದೇನೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಸಹಜ ಸಾವು ಎಂದು ಸ್ಪಷ್ಟವಾದ ಬಳಿಕ ಮೃತದೇಹವನ್ನು ಮುತ್ತುಲಕ್ಷ್ಮಣ್‍ಗೆ ನೀಡಲಾಗಿದ್ದು ನಂತರ ರೆವೆನ್ಯು-ಪೊಲೀಸ್ ಅಧಿಕಾರಿಗಳು ಮತ್ತು ಊರವರ ಸಹಾಯದಲ್ಲಿ ಮೃತದೇಹವನ್ನು ಸಂಸ್ಕರಿಸಲಾಯಿತು.