ಎಡಪದವು ಐಡಿಯಲ್ ಶಿಕ್ಷಣ ಸಂಸ್ಥೆಯ ಸ್ಥಾಪಕ ವೈ. ಮುಹಮ್ಮದ್ ಬ್ಯಾರಿ ನಿಧನ: ಮುಸ್ಲಿಂ ಗಣ್ಯರಿಂದ ಸಂತಾಪ

0
443

ಸನ್ಮಾರ್ಗ ವಾರ್ತೆ

ಮಂಗಳೂರು: ತಾಲೂಕಿನ ಎಡಪದವು ಐಡಿಯಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ದ.ಕ., ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ, ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಎಡಪದವು ಮುಹಮ್ಮದ್ ಬ್ಯಾರಿ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮುಹಮ್ಮದ್ ರವರ ನಿಧನಕ್ಕೆ ಹಲವಾರು ಮುಸ್ಲಿಂ ಗಣ್ಯರು ಸಂತಾಪ ಸೂಚಿಸಿದ್ದಾರೆ‌.

ಮೂಲತಃ ಎಡಪದವು ಹಾಗೂ ಸದ್ಯ ಮಂಗಳೂರು ನಿವಾಸಿಯಾಗಿದ್ದ ಮುಹಮ್ಮದ್ ಬ್ಯಾರಿ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ದಿಲ್ಲಿ ಸಹಿತ ದೇಶದ ವಿವಿಧೆಡೆ ಸೇವೆ ಸಲ್ಲಿಸಿದವರು. ಅಲ್ಲಿಂದ ಸ್ವಯಂ ನಿವೃತ್ತಿ ಪಡೆದ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಎಡಪದವಿನಲ್ಲಿ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದವರು.

ಮುಸ್ಲಿಂ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂಬ ಕಾಳಜಿಯಿಂದ ಆ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು ಮುಹಮ್ಮದ್ ಬ್ಯಾರಿ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸೇವೆ ನೀಡುವ ಖಾಸಗಿ ಶಾಲೆಗಳಿಗೆ ಇರುವ ಸವಾಲುಗಳನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರು.

ದ.ಕ, ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷರಾಗಿ, ಎಡಪದವು ಉಮ್ಮುಹಾತುಲ್ ಮುಮಿನೀನ್ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಡಪದವು ಪರಿಸರದಲ್ಲಿ ಎಲ್ಲ ಸಮುದಾಯಗಳ ನಡುವಿನ ಸೌಹಾರ್ದದ ಕೊಂಡಿಯಾಗಿದ್ದರು.

ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

“ಇದು ಆಘಾತಕಾರಿ ಸುದ್ದಿ. ಬಿ.ಎ. ಮೊಹಿದಿನ್ ಸಾಹೇಬರ ನಿಧನದ ಬಳಿಕ ಮುಸ್ಲಿಂ ಸಮುದಾಯದ ಪಾಲಿಗೆ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದೊಡ್ಡ ಕೆಲಸ ಮಾಡಿದವರು ವೈ. ಮುಹಮ್ಮದ್ ಬ್ಯಾರಿ. ಅವರ ನಿಧನ ಮುಸ್ಲಿಂ ಸಮುದಾಯಕ್ಕೆ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ (ಎಂಇಐ ಎಫ್) ತುಂಬಲಾರದ ನಷ್ಟ” ಎಂದು ಒಕ್ಕೂಟದ ಗೌರವಾಧ್ಯಕ್ಷ ಉಮರ್ ಟೀಕೆ ಹೇಳಿದ್ದಾರೆ.

ಮುಹಮ್ಮದ್ ಬ್ಯಾರಿಯವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ನ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ,, ಜಿಲ್ಲಾ ಸಂಚಾಲಕ ಸಯೀದ್ ಇಸ್ಮಾಯಿಲ್, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಸಂತಾಪ ಸೂಚಿಸಿದ್ದಾರೆ‌.

ಈ ನಾಡನ್ನು ಶಿಕ್ಷಣ ಕ್ಷೇತ್ರದಲ್ಲಿ ಬೆಳಗಿ, ಪ್ರಜ್ಞೆಯ, ಅರಿವಿನ ದೀವಟಿಗೆಯನ್ನು ಹಿಡಿದು ಒಂದೀಡಿ ತಲೆಮಾರಿನ ಅಂಧಕಾರವನ್ನು ಮುಗಿಸಲು ಶ್ರಮಿಸಿದ ಮಹಾನ್ ಹರಿಕಾರ ಮತ್ತು ಜ್ಞಾನದ ವಕ್ತಾರ ಮುಹಮ್ಮದ್ ಬ್ಯಾರಿ ರವರ ಅಗಲಿಕೆಯು ನಮ್ಮನ್ನು ತೀವ್ರ ದುಃಖಿತರನ್ನಾಗಿಸಿದೆ. ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ದ.ಕ ಜಿಲ್ಲಾ ಘಟಕವು ಈ ಅಗಲುವಿಕೆಗೆ ಸಂತಾಪವನ್ನು ಸೂಚಿಸುತ್ತದೆ ಎಂದು ಎಸ್ ಐ ಓ ದ.ಕ‌. ಜಿಲ್ಲಾಧ್ಯಕ್ಷ ಎಂ. ದಾನೀಶ್ ತಿಳಿಸಿದ್ದಾರೆ.