ಈಜಿಪ್ಟ್ ನ ಸಂಗಾತಿಗಳೇ, ನಿರುತ್ಸಾಹಗೊಳ್ಳದಿರಿ, ಅಲ್ಲಾಹನಿಚ್ಛಿಸಿದರೆ, ಅತಿಶೀಘ್ರ ನೀವೇ ಯಶಸ್ವಿಯಾಗುವಿರಿ- ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೈನಿ

0
659

ನವದೆಹಲಿ: ಜೂನ್, 18- ಈಜಿಪ್ಟ್ ನ ಪದಚ್ಯುತ ಅಧ್ಯಕ್ಷ ಡಾ/ ಮುಹಮ್ಮದ್ ಮುರ್ಸಿಯವರ ಸಾವನ್ನು ಸಹಜವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದು ಹತ್ಯೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಖಿಲ ಭಾರತ ಅಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೈನಿ ಹೇಳಿದ್ದಾರೆ. ಈ ಹತ್ಯೆಗೆ- ಕಾನೂನುಬಾಹಿರವಾಗಿ ಅಧಿಕಾರಕ್ಕೆ ಬಂದ ಈಜಿಪ್ಟ್ ನ ಸರಕಾರ ಮತ್ತು ಅದರ ಸ್ವಘೋಷಿತ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಅಬ್ದುಲ್ ಫತ್ತಾಹ್ ಅಲ್ ಸೀಸಿಯೇ ನೇರ ಕಾರಣ. ಮುರ್ಸಿಯವರ ಹುತಾತ್ಮತೆಯು ಜಾಗತಿಕವಾಗಿ ಇಸ್ಲಾಮಿಗೆ ಬಲವನ್ನು ನೀಡಲಿದೆ. ಸರ್ವಶಕ್ತ ಅಲ್ಲಾಹನು ಅವರ ಹುತಾತ್ಮತೆಯನ್ನು ಸ್ವೀಕರಿಸಲಿ, ಸ್ವರ್ಗದಲ್ಲಿ ಉನ್ನತ ದರ್ಜೆಯನ್ನು ದಯಪಾಲಿಸಲಿ ಮತ್ತು ಸಂತಪ್ತ ಅವರ ಕುಟುಂಬಕ್ಕೆ ಸಹನೆಯನ್ನು ನೀಡಲಿ ಎಂದು ಎಂದವರು ಪ್ರಾರ್ಥಿಸಿದ್ದಾರೆ.

ಮುರ್ಸಿಯವರ ಸಾವಿಗೆ ಶೋಕ ವ್ಯಕ್ತಪಡಿಸಿದ ಹುಸೈನಿಯವರು, ಮುರ್ಸಿಯವರ ಸಾವಿನ ಮೂಲಕ ಇಸ್ಲಾಮೀ ಜಗತ್ತು ಓರ್ವ ಉತ್ತಮ ನಾಯಕನನ್ನು ಕಳಕೊಂಡಂತಾಗಿದೆ. ಪಾರದರ್ಶಕ ಚುನಾವಣೆಯ ಮೂಲಕ ಚುನಾಯಿತರಾದ ಮುರ್ಸಿ ಸರಕಾರವನ್ನು ಹಿಂಸೆ ಮತ್ತು ಮಿಲಿಟರಿ ಬಲವನ್ನು ಪ್ರಯೋಗಿಸಿ ಪದಚ್ಯುತಗೊಳಿಸಲಾದ ಕ್ರಮವು ಪ್ರಜಾತಂತ್ರದ ಕಗ್ಗೊಲೆಯಾಗಿತ್ತು. ಸಿಸಿ ಆಡಳಿತವು ಮುರ್ಸಿ ವಿರುದ್ಧ ಕೃತ್ರಿಮ ಆರೋಪಗಳನ್ನು ಹೊರಿಸಿ ನಕಲಿ ವಿಚಾರಣೆ ನಡೆಸಿತು. ಮುರ್ಸಿಯವರನ್ನು ಅತ್ಯಂತ ಕೆಟ್ಟದಾಗಿ ಸಿಸಿ ಆಡಳಿತ ನಡೆಸಿಕೊಂಡಿತು. ಈ ಮೂಲಕ ಮಾನವ ಹಕ್ಕುಗಳನ್ನು ಗಾಳಿಗೆ ತೂರಿತು. ಇದು ಖಂಡನೀಯ. ಆದ್ದರಿಂದ, ಮುರ್ಸಿಯವರ ಹತ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಒಳಪಡಿಸಬೇಕು ಮತ್ತು ಇದರ ಹಿಂದಿರುವವರನ್ನು ಕಟಕಟೆಗೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರ ಒತ್ತಾಯಿಸಿದ್ದಾರೆ.

ಇದೇವೇಳೆ, ಈಜಿಪ್ಟ್ ನ ಇಸ್ಲಾಮಿ ಆಂದೋಲನದ ಭಾಗವಾಗಿರುವ ಎಲ್ಲರಿಗೂ ಸಹಾನುಭೂತಿಯನ್ನು ವ್ಯಕ್ತಪಡಿಸಿರುವ ಅವರು, ಸತ್ಯದ ಹಾದಿಯಲ್ಲಿ ಸ್ಥಿರವಾಗಿರಿ ಮತ್ತು ನಿರುತ್ಸಾಹಗೊಳ್ಳದಿರಿ, ಅಲ್ಲಾಹನಿಚ್ಛಿಸಿದರೆ, ಅತಿಶೀಘ್ರ ನೀವು ಯಶಸ್ವಿಯಾಗುವಿರಿ ಎಂದು ಭರವಸೆ ತುಂಬಿದ್ದಾರೆ.