ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟ ಉತ್ತರ ಪ್ರದೇಶದ ಮೆನಾಝ್ ಬೇಗಂ: ಪತಿಯ ವಿರೋಧಕ್ಕೂ ಮಣಿದಿಲ್ಲ

0
441

ಗೊಂಡ, ಮೇ 27: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಮೇ 23ರಂದು ಜನಿಸಿದ ಮಗುವಿಗೆ ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ನರೇಂದ್ರ ಮೋದಿ ಎಂದು ಹೆಸರಿರಿಸಿದೆ. ಪಾರಸ್ಪುರ ಮಹ್ರೌಲ್ ಗ್ರಾಮದ ಮೆನಾಝ್ ಬೇಗಂ ಎಂಬ ಮಹಿಳೆ ತನ್ನ ಪುತ್ರನಿಗೆ ಹೀಗೆ ಹೆಸರಿಸಿದ್ದು ತಮ್ಮ ನಿರ್ಧಾರವನ್ನು ಬದಲಿಸುವಂತೆ ಹಲವರು ಒತ್ತಾಯಿಸಿದರೂ ಅವರು ಅದಕ್ಕೆ ಸಿದ್ಧಳಾಗಿಲ್ಲ ಎಂದು ಮೆನಾಝ್‍ರ ಪತಿಯ ತಂದೆ ಇದ್ರಿಸ್ ಹೇಳಿದರು. ಮೆನಾಝ್ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯಾಗಿದ್ದಾಳೆ.

ದುಬೈಯಲ್ಲಿ ಕೆಲಸ ಮಾಡುವ ಪತಿ ಮುಷ್ತಾಕ್ ಅಹ್ಮದ್ ಅವರು ಹೆಸರನ್ನು ಬದಲಿಸಲು ಹೇಳಿದರೂ ಮೆನಾಝ್ ಗಂಡನ ಮಾತಿಗೆ ಸಮ್ಮತಿಸಿಲ್ಲ. ಕೊನೆಗೆ ಆತ ಪತ್ನಿಯ ಮಾತನ್ನು ಒಪ್ಪಿಕೊಳ್ಳಬೇಕಾಯಿತು. ಮಗುವಿನ ಹೆಸರನ್ನು ನೋಂದಣಿ ಮಾಡಿಸಿಕೊಳ್ಳುವುದಕ್ಕಾಗಿ ಅಧಿಕಾರಿಗಳನ್ನು ಕುಟುಂಬ ಭೇಟಿಯಾಗಿದೆ.
ಕುಟುಂಬದ ಅರ್ಜಿ ಸಿಕ್ಕಿದೆ ಎಂದು ಜನನ-ಮರಣ ನೋಂದಣಿ ಮಾಡುವ ಪಂಚಾಯತ್ ಕಾರ್ಯದರ್ಶಿ ತಿಳಿಸಿದರು. ಹೆಸರು ದಾಖಲಾತಿಗೆ ಮೆನಾಝ್ ಬೇಗಂ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಮೋದಿಯನ್ನು ಹೊಗಳಿದ್ದಾಳೆ. ಬಡವರಿಗೆ ಅಡಿಗೆ ಅನಿಲ ಉಚಿತವಾಗಿ ಮಾಡಿಸಿದ್ದು, ಶೌಚಾಲಯ ನಿರ್ಮಿಸಿಕೊಟ್ಟದ್ದನ್ನು ಮೆನಾಝ್ ಬೇಗಂ ಬೆಟ್ಟು ಮಾಡಿದ್ದಾಳೆ. ಮುತ್ತಲಾಕ್ ಕೊನೆಗೊಳಿಸಲು ನಡೆಸಿದ ಪ್ರಯತ್ನವನ್ನೂ ಶ್ಲಾಘಿಸಿದ್ದಾಳೆ.