ಭಿನ್ನ ವಿಚಾರಧಾರೆಯನ್ನು ಸಹಿಸದ ವಾತಾವರಣ ದೇಶದಲ್ಲಿದೆ: ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಣೇಹಳ್ಳಿ ಶ್ರೀ

0
1422

ಶಿವಮೊಗ್ಗ: ಡಾ. ಕಲೀಮುಲ್ಲಾ ಅವರ ‘ಕ್ಲಾಸ್ ಟೀಚರ್’ ಕೃತಿಗೆ 2016ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಪ್ರದಾನ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮವು ಶಿವಮೊಗ್ಗದ ಕಮಲಾ ನೆಹರೂ ಮಹಿಳಾ ಕಾಲೇಜಿ ಸಭಾಂಗಣದಲ್ಲಿ ಡಿಸೆಂಬರ್ ೧೫ ರಂದು ನೆರವೇರಿತು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಯವರು ಮಾತನಾಡುತ್ತಾ,”ಬಹುತ್ವವನ್ನು ಅಪ್ಪಿ ಕೊಂಡಿರುವ ಸಾಹಿತಿಗಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅವರು ಮಾತನಾಡುತ್ತಾ “ದೇಶದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಾಹಿತಿಗಳು ಅವರ ವಿಚಾರಧಾರೆಗಳನ್ನು ಹೇಳಿಕೊಂಡರೆ ಅವರನ್ನೇ ಕೊಲ್ಲುವ ಹಂತಕ್ಕೆ ಕೆಲವರ ಮನಃಸ್ಥಿತಿ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಕಳವಳ ವ್ಯಕ್ತಪಡಿಸಿದರು.

“ನಮ್ಮ ಧಾರ್ಮಿಕ ಪರಂಪರೆಯಲ್ಲಿ ಸಂವಾದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಶರಣರ ಅನುಭವ ಮಂಟಪದಲ್ಲಿ ವಿಷಯಗಳ ಬಗ್ಗೆ ಚರ್ಚೆ, ಸಂವಾದಗಳನ್ನು ನಡೆಸುತ್ತಿದ್ದರು. ಆ ಮೂಲಕ ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ನೀಡುತ್ತಿದ್ದರು. ಈಗಲೂ ಒಂದು ವಿಷಯದ ಬಗ್ಗೆ ವಾದ, ವಿವಾದ, ಚರ್ಚೆ, ಸಂವಾದವನ್ನು ಮಾಡಿ ಇದು ಬಹುತ್ವದ ಸಂಕೇತವಾಗುತ್ತದೆ. ಆದರೆ, ಸಂವಾದ, ಚರ್ಚೆ ಮಾಡದೆಯೇ ಹೊಡಿ, ಬಡಿ ಎಂದು ಪ್ರಹಾರ ಮಾಡಿದರೆ ಅದು ಸರ್ವಾಧಿಕಾರತ್ವ ಮತ್ತು ಏಕತ್ವದ ಸಂಕೇತವಾಗುತ್ತದೆ ಎಂದು ಹೇಳಿದರು. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದರ ವಿರುದ್ಧ ಹೋರಾಡುವವರನ್ನೇ ಕೆಟ್ಟವರು ಎಂದು ಬಿಂಬಿಸುತ್ತಿದ್ದಾರೆ. ನಮ್ಮ ಸಂವಿಧಾನವನ್ನು ತಿಳಿದುಕೊಳ್ಳದೇ ಇರುವುದು ಈ ಎಲ್ಲಾ ಅನಾಹುತಗಳಿಗೆ ಕಾರಣವಾಗಿದೆ” ಎಂದು ಅವರು ನುಡಿದರು.

ಮಾಜಿ ಶಾಸಕ ಕಿಮ್ಮನೆ ರತ್ನಾಕರ ರವರು “ಕ್ಲಾಸ್ ಟೀಚರ್ ಪುಸ್ತಕದಲ್ಲಿ ಮಕ್ಕಳಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಬಿಂಬಿಸಲಾಗಿದೆ. ಶಾಲೆಗಳಲ್ಲಿ ನಾವೆಲ್ಲರೂ ಮಾಡಿದ ತರಲೆ, ತುಂಟಾಟಗಳ ಘಟನೆಗಳನ್ನು ಕಲೀಮುಲ್ಲಾ ಅವರು ಸುಂದರವಾಗಿ, ಸರಳ ಭಾಷೆಯಲ್ಲಿ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಕಿಮ್ಮನೆ ರತ್ನಾಕರ ಶ್ಲಾಘಿಸಿದರು.

ಸಾಹಿತಿ ಡಾ. ಕಲೀಮುಲ್ಲಾರವರು ‘ಪುಸ್ತಕದಲ್ಲಿ ನಾನು ನನ್ನ ಬಗ್ಗೆಯೂ ಬರೆದುಕೊಂಡಿದ್ದೇನೆ. ನನಗೆ ಯಾರಾದರೂ ನಿಮ್ಮ ಲೇಖನ ಚೆನ್ನಾಗಿದೆ, ನಿಮ್ಮ ಪುಸ್ತಕ ಓದಿದೆ ಎಂದು ಹೇಳಿದರೆ ಅದುವೇ ನನಗೆ ನಿಜವಾದ ಪ್ರಶಸ್ತಿ.ಎಂದು ತಿಳಿಸಿದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ಕೆ. ಎಲ್ ಅಶೋಕ್,” ಬಹುತ್ವ ಈ ದೇಶದ ಸೌಂದರ್ಯ. ಬೃಹತ್ ಸಂಖ್ಯೆಯ ಯುವ ತಲೆಮಾರು ಉದ್ಯೋಗಕ್ಕಾಗಿ ಪರದಾಡುವ, ರೈತಾಪಿ ಜನರು ಸಾಲದ ಹೊರಲಾಗದೇ ಬೀದಿಗಿಳಿಯುವ ಪರಿಸ್ಥಿತಿಯಿದ್ದರೂ ಸರಕಾರಗಳು ನೈಜ ಸಮಸ್ಯೆಯನ್ನು ಎದುರಿಸದೇ ಪರಸ್ಪರ ಧರ್ಮೀಯರ ಬಗ್ಗೆ ಕೋಮು ವಿಷ ಬೀಜ ಬಿತ್ತುತ್ತಿವೆ.ಇದು ಕಳವಳಕಾರಿ “ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಎಲ್. ಅಶೋಕ್, ವಿಖಾರ್ ಅಹಮದ್ ಹಾಗೂ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷರಾದ ಉಮರ್ ಯು.ಎಚ್ ಉಪಸ್ಥಿತರಿದ್ದರು.