ಮುತ್ತೂಟ್ ಫೈನಾನ್ಸ್ ಮ್ಯಾನೇಜರ್ ಕೊಲೆ ಪ್ರಕರಣ: ಇಬ್ಬರ ಬಂಧನ

0
277

ಸನ್ಮಾರ್ಗ ವಾರ್ತೆ

ನೊಯ್ಡಾ,ಅ.9: ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಗಾಝಿಯಾಬಾದ್ ಮ್ಯಾನೇಜರ್ ಆಝಾದ್ ಗುಂಡೇಟಿಗೆ ಬಲಿಯಾದ ಘಟನೆಯಲ್ಲಿ ತಾಯಿಯ ಸಹೋದರ ಪುತ್ರನ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಕಂಪೆನಿಯ ಕಚೇರಿಯಿಂದ ಚಿನ್ನ ಕದಿಯಲು ಹೆಣೆದ ಸಂಚು ವಿಫಲವಾದದ್ದು ಮ್ಯಾನೇಜರ್ ಕೊಲೆಗೆ ಕಾರಣವೆಂದು ತಿಳಿಸಿದ್ದಾರೆ.

ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಜೂನ್ 20ರಂದು ಬಾದಲ್‍ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಝಾದ್‍ರ ಮೃತದೇಹ ಪತ್ತೆಯಾಗಿತ್ತು. ಕೊಲೆ ಆರೋಪದಲ್ಲಿ ಆಝಾದ್‍ರ ತಾಯಿ ಸಹೋದರ ಪುತ್ರ ಪರ್ವಿಂದರ್, ಗೆಳೆಯ ಚಮನ್‍ಲಾಲ್ ಕಶ್ಯಪ್‍ರನ್ನು ಬಂಧಿಸಲಾಗಿದೆ. ಸುನೀಲ್ ದೀಪಕ್ ತಲೆ ತಪ್ಪಿಸಿಕೊಂಡಿದ್ದಾನೆ.

ಆಝಾದ್‍ನಿಂದ ಪರ್ವಿಂದರ್ 10,000 ಸಾಲ ಪಡೆದಿದ್ದ. ಅದನ್ನು ಕೊಡುವಂತೆ ಆಝಾದ್ ಪರ್ವಿಂದರ್‍‌ಗೆ ಹೇಳುತ್ತಿದ್ದ. ಜೂನ್ 20ರಂದು ರಾತ್ರೆ ಪರ್ವಿಂದರ್ ಆಝಾದ್‍ನನ್ನು ಭೇಟಿಯಾಗಲು ಕಲ್ಬಾ ಗ್ರಾಮಕ್ಕೆ ಬಂದು ಹಣ ಕೊಡುತ್ತೇನೆ ಎಂದು ಹೇಳಿದ. ನಂತರ ಇಬ್ಬರೂ ಬೈಕ್‍ನಲ್ಲಿ ಹೋಗಿದ್ದರು. ಪ್ರಯಾಣದ ಮಧ್ಯೆ ಬೈಕ್ ನಿಲ್ಲಿಸಿದಾಗ ಇತರ ಮೂವರು ಇವರೊಂದಿಗೆ ಸೇರಿದರು.

ಆಝಾದ್‍ನ ಕಿಸೆಯಲ್ಲಿದ್ದ ಮುತ್ತೂಟ್ ಫೈನಾನ್ಸನ ಬೀಗದ ಕೈ ಕಿತ್ತುಕೊಂಡಿದ್ದಾರೆ. ಆದರೆ ಚಿನ್ನ ಇಡುವ ಲಾಕರ್ ತೆರೆಯಲಾಗದೆ ಎರಡು ಗಂಟೆಯಲ್ಲಿ ಇವರು ಮರಳಿ ಬಂದರು. ತನ್ನಿಂದ ಬೀಗದ ಕೈ ಕಿತ್ತುಕೊಂಡದ್ದಕ್ಕೆ ಪೊಲೀಸರಿಗೆ ದೂರು ನೀಡುವೆ ಎಂದು ಆಝಾದ್ ಹೇಳಿದ್ದರಿಂದ ಆಝಾದ್‍ಗೆ ಗುಂಡು ಹಾರಿಸಿ ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.