ನಗರಗಳೇಕೆ ದನ ಸಾಕುವುದಿಲ್ಲ?

0
291

ಸಂಪಾದಕೀಯ

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಪರಸ್ಪರ ಕೊಡು-ಕೊಳ್ಳುವಿಕೆಯ ಭಾಗವಾಗಿ ನೋಡದೆ ಪವಿತ್ರ-ಅಪವಿತ್ರತೆಯ ಸಂಬಂಧವಾಗಿ ನೋಡಿದರೆ ಏನಾಗಬಹುದು ಅನ್ನುವುದಕ್ಕೆ ಈಗಿನ ಉತ್ತರ ಪ್ರದೇಶ ಉತ್ತಮ ಉದಾಹರಣೆ. ಗೋಮಾಂಸದ ಹೆಸರಲ್ಲಿ ವೃದ್ಧ ಅಖ್ಲಾಕ್‍ರನ್ನು ಥಳಿಸಿ ಕೊಂದವರನ್ನು ಮತ್ತು ಆ ಬಗೆಯ ಮನಸ್ಥಿತಿ ಪ್ರತಿನಿಧಿಸುವವರನ್ನು ಸಮರ್ಥಿಸುತ್ತಲೇ ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಈಗ ದನಗಳೇ ಒಂದು ಸವಾಲಾಗಿ ನಿಂತಿವೆ. ಕಳೆದವಾರ ಉತ್ತರ ಪ್ರದೇಶದ ಬೀಡಾಡಿ ದನಗಳೂ ಮತ್ತು ರೈತರೂ ಸುದ್ದಿಯ ಮುನ್ನೆಲೆಗೆ ಬಂದರು. ನಿಜವಾಗಿ, ದನಗಳನ್ನು ಅತ್ಯಂತ ಹೆಚ್ಚು ಪ್ರೀತಿಸುವವರೆಂದರೆ ರೈತರು. ದನವಿಲ್ಲದ ರೈತ ಮತ್ತು ರೈತನ ಆಶ್ರಯವನ್ನು ಬಯಸದ ದನ ಇವೆರಡೂ ಅಸಾಧ್ಯ ಅನ್ನುವಷ್ಟು ಅನ್ಯೋನ್ಯ. ಆದರೂ ಉತ್ತರ ಪ್ರದೇಶದ ರೈತರು ಬೀಡಾಡಿ ದನಗಳಿಂದ ರೋಸಿ ಹೋದರು. ಮುಖ್ಯವಾಗಿ, ವಾರಣಾಸಿ, ಇಟಾವಾ, ಗೊಂಡಾ, ಹಥರಸ್, ಆಗ್ರಾ ಮುಂತಾದ ಪ್ರದೇಶಗಳ ರೈತರು ಸುಮಾರು 500ಕ್ಕಿಂತಲೂ ಅಧಿಕ ಬೀಡಾಡಿ ದನಗಳನ್ನು ಪೊಲೀಸು ಠಾಣೆ, ಶಾಲೆ ಮುಂತಾದ ಕಡೆ ಕಟ್ಟಿ ಹಾಕಿ ಪ್ರತಿಭಟಿಸಿದರು. ಹಾಗಂತ, ಹೀಗೆ ಕಟ್ಟುವುದಕ್ಕಿಂತ ಮೊದಲು ಅವರು ತಮ್ಮ ಗೋಧಿ, ಆಲೂಗಡ್ಡೆ, ಕಡಲೆ, ಬಟಾಣಿ, ಸಾಸಿವೆ ಇತ್ಯಾದಿ ಬೆಳೆಗಳನ್ನು ಬೀಡಾಡಿ ದನಗಳಿಂದ ರಕ್ಷಿಸುವುದಕ್ಕಾಗಿ ಮಾಡಬೇಕಾದ ಉಪಾಯಗಳ ಬಗ್ಗೆ ಚರ್ಚಿಸಿದ್ದರು. ರಾತ್ರಿ ಹಗಲೆನ್ನದೇ ತಮ್ಮ ಹೊಲಗಳನ್ನು ಕಾವಲು ಕಾಯುವುದಲ್ಲದೆ ಬೇರೆ ಉಪಾಯ ಇವರಿಗೆ ಕಾಣಿಸಿರಲಿಲ್ಲ. ಕೆಲವರು ಬಿದಿರಿನ ಬೇಲಿ ಹಾಕಿದರು. ಆದರೆ ದನಗಳು ಇವನ್ನೂ ಹೊಡೆದು ಹಾಕಿ ಬೆಳೆ ನಾಶ ಮಾಡಲು ಪ್ರಾರಂಭಿಸಿದಾಗ ಅನ್ಯ ದಾರಿ ಕಾಣದೇ ದನ ಕಟ್ಟಿ ಹಾಕುವ ಪ್ರತಿಭಟನೆಗಿಳಿದರು. ಆದರೆ ಸರಕಾರ ಸುಮಾರು ಎರಡು ಡಜನ್‍ನಷ್ಟು ರೈತರನ್ನು ಬಂಧಿಸಿತು. ದಂಡ ವಿಧಿಸಿತು.

ನಿಜವಾಗಿ, ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ಮತ್ತು ಭಾಷಣಕಾರನಿಗಿಂತ ಚೆನ್ನಾಗಿ ದನಗಳ ಬಗ್ಗೆ ಗೊತ್ತಿರುವವರೆಂದರೆ ರೈತರು. ದನ ಅವರ ಗೆಳೆಯ. ದನ ಅವರ ಆಸ್ತಿ. ದನ ಅವರ ಬದುಕು ಎಲ್ಲವೂ ಆಗಿದೆ. ಇಂಥ ದನಗಳನ್ನು ಅವರು ತಮ್ಮ ವೈರಿ ಎಂದು ಪರಿಗಣಿಸುವುದಕ್ಕೆ ಕಾರಣಗಳೇನು? ತನ್ನ ಒಡನಾಡಿಯ ವಿರುದ್ಧವೇ ಪ್ರತಿಭಟಿಸುವುದರ ಅರ್ಥವೇನು? ರೈತ ಮತ್ತು ರಾಜಕಾರಣಿ ಬೇರ್ಪಡುವುದು ಇಲ್ಲೇ. ರೈತ ದನವನ್ನು ಪ್ರೀತಿಸುತ್ತಾನೆ. ಸಾಕುತ್ತಾನೆ. ಆರೈಕೆ ಮಾಡುತ್ತಾನೆ. ಆಹಾರ ಒದಗಿಸುತ್ತಾನೆ ಮತ್ತು ಆರಾಧನಾ ಭಾವದಿಂದಲೂ ನೋಡುತ್ತಾನೆ. ತನ್ನ ಮಕ್ಕಳ ಅಥವಾ ಕುಟುಂಬದವರ ಕಾಯಿಲೆಗೆ ಆತ ಹೇಗೆ ಸ್ಪಂದಿಸುತ್ತಾನೋ ಅದೇ ಬಗೆಯ ಸ್ಪಂದನೆ ದನಗಳ ಬಗ್ಗೆ ರೈತರಲ್ಲಿರುತ್ತದೆ. ಯಾಕೆಂದರೆ, ದನಗಳ ಹೊರತು ಅವರು ತನ್ನ ಜೀವನ ಬಂಡಿಯನ್ನು ಕಲ್ಪಿಸಿಕೊಳ್ಳುವ ಹಾಗಿಲ್ಲ. ಅದು ಹಾಲನ್ನು ಒದಗಿಸುತ್ತದೆ. ಹೊಲದಲ್ಲಿ ದುಡಿಯುತ್ತದೆ. ಗೊಬ್ಬರವನ್ನೂ ಒದಗಿಸುತ್ತದೆ. ಓರ್ವ ರೈತ ದನವನ್ನು ಪ್ರೀತಿಸುವುದಕ್ಕೆ ಇವೆಲ್ಲವೂ ಕಾರಣ ಅಥವಾ ಇವಾವುದನ್ನೂ ಒದಗಿಸದ ದನವೊಂದನ್ನು ಬಹುಕಾಲ ಸಾಕಲು ಮತ್ತು ಆರೈಕೆ ಮಾಡಲು ಓರ್ವ ರೈತನಿಂದ ಸಾಧ್ಯವಿಲ್ಲ. ಪರಸ್ಪರ ಕೊಡು-ಕೊಳ್ಳುವಿಕೆಯ ಸಂಬಂಧವೊಂದರ ಆಚೆಗೆ ಬರೇ ಆರಾಧನಾ ಭಾವದಿಂದ ರೈತನೋರ್ವ ದನಗಳನ್ನು ಸಾಕಲು ಸಾಧ್ಯವಿಲ್ಲ. ಇದು ಸಾಮಾಜಿಕ ವಾಸ್ತವ. ಒಂದುವೇಳೆ, ಇದು ಅವಾಸ್ತವಿಕ ಎಂದಾದರೆ, ದನಗಳೆಲ್ಲ ಯಾಕೆ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಗರಗಳಲ್ಲಿ ದನ ಸಾಕಾಣಿಕೆ ಶೂನ್ಯ ಅನ್ನುವಷ್ಟು ಕಡಿಮೆ. ಹತ್ತು-ಇಪ್ಪತ್ತು ಅಂತಸ್ತಿನ ಕಟ್ಟಡಗಳ ಒಡೆಯರೂ ತಮ್ಮ ಫ್ಲ್ಯಾಟಿನ ಪಕ್ಕ ದನ ಸಾಕಾಣಿಕೆಗಾಗಿ ದೊಡ್ಡಿಯೊಂದನ್ನು ಕಟ್ಟುವುದಿಲ್ಲ. ಬೃಹತ್ ಬಂಗಲೆಯಂಥ ಮನೆ ಕಟ್ಟುವವರು ಮತ್ತು ದುಬಾರಿ ಕಾರುಗಳನ್ನು ಇರಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿ ಚಂದದ ಕಾರು ಪಾರ್ಕ್ ಮಾಡಿಕೊಳ್ಳುವವರು ಇಷ್ಟೇ ಮುತುವರ್ಜಿಯಿಂದ ದನ ಸಾಕಾಣಿಕೆಯ ಬಗ್ಗೆ ಮತ್ತು ಅಂಗಳದಲ್ಲೇ ಅದಕ್ಕೊಂದು ದೊಡ್ಡಿ ನಿರ್ಮಿಸುವ ಬಗ್ಗೆ ಕಾಳಜಿ ತೋರುವುದಿಲ್ಲ. ಬರೇ ಆರಾಧನೆಯ ಕಾರಣದಿಂದಾಗಿಯೇ ಯಾರಾದರೂ ದನ ಸಾಕುವುದಾದರೆ, ನಗರಗಳಲ್ಲಿ ವಾಸಿಸುವವರ ಪ್ರತಿ ಮನೆಗಳಲ್ಲೂ ದನ ಕಾಣಿಸಿಕೊಳ್ಳಬೇಕಿತ್ತು. ಫ್ಲ್ಯಾಟ್ ನಿರ್ಮಿಸುವಾಗಲೇ ದನ ಸಾಕಾಣಿಕೆಗಾಗಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಳ್ಳಬೇಕಿತ್ತು. ಮನೆಗೊಂದು ಸಿಟೌಟ್ ಇರುವಂತೆಯೇ ಮನೆಗೊಂದು ದನ ದೊಡ್ಡಿ ನಿರ್ಮಿಸುವುದು ಮತ್ತು ದನ ಸಾಕಾಣಿಕೆಯನ್ನು ಒಂದು ಧಾರ್ಮಿಕ ವಿಧಿಯಾಗಿ ಅಳವಡಿಸಿಕೊಳ್ಳುವುದು ಕಷ್ಟವೇನಲ್ಲ. ಆದರೆ, ನಗರವಾಸಿಗಳಲ್ಲಿ ಈ ಬಗೆಯ ಉಮೇದು ಕಾಣಿಸುವುದೇ ಇಲ್ಲ. ಇದರರ್ಥ

ಇವರೆಲ್ಲ ಗೋವಿನ ವಿರೋಧಿಗಳು ಎಂದಲ್ಲ ಮತ್ತು ಅವರು ಗೋವನ್ನು ಪ್ರೀತಿಸುವುದಿಲ್ಲ ಎಂದೂ ಅಲ್ಲ. ಗೋವಿಗೂ ಅದರ ಸಾಕಾಣಿಕೆಗೂ ಆರಾಧನಾ ಭಾವಕ್ಕಿಂತ ಹೊರತಾದ ಕಾರಣಗಳಿವೆ ಎಂದೇ ಅರ್ಥ. ರೈತ ನಗರಗಳಲ್ಲಿ ವಾಸಿಸುವುದಿಲ್ಲ. ಆದ್ದರಿಂದಲೇ ನಗರಗಳು ಗೋವನ್ನು ಸಾಕುವುದೂ ಇಲ್ಲ. ಕೃಷಿ ಕೆಲಸಗಳಿಗೆ ವಿಶಾಲ ಜಮೀನು ಬೇಕು. ಅದು ನಗರಗಳಲ್ಲಿ ಲಭ್ಯ ಇಲ್ಲ. ಆದ್ದರಿಂದ ರೈತರು ಕಾಣಸಿಗುವುದು ಗ್ರಾಮೀಣ ಪ್ರದೇಶಗಳಲ್ಲಿ. ದನಗಳು ಕಾಣಸಿಗುವುದೂ ಅಲ್ಲೇ. ಇದು ವಿಚಿತ್ರ. ಇಲ್ಲಿ ಬಹುಮುಖ್ಯವಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ದನಗಳೇಕೆ ರೈತರ ಜೊತೆಗೇ ಇವೆ? ದನವನ್ನು ಆರಾಧಿಸುವುದು ರೈತರು ಮಾತ್ರವೇ? ನಗರ ಪ್ರದೇಶಗಳ ಮಂದಿ ದನವನ್ನು ಆರಾಧಿಸುವುದಿಲ್ಲವೇ?

ದನಗಳ ಕುರಿತಂತೆ ಜನರ ನಿಜ ಭಾವನೆಗಳು ವ್ಯಕ್ತವಾಗುವುದು ಇಂಥ ಪ್ರಶ್ನೆಗಳು ಹುಟ್ಟಿಕೊಂಡಾಗಲೇ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಂದಿ ದನಗಳನ್ನು ಪ್ರೀತಿಸುವುದಿಲ್ಲ ಎಂದಲ್ಲ. ಆದರೆ ಈ ಪ್ರೀತಿ ಷರತ್ತುಬದ್ಧ. ಸಾಕುವ ದನದಿಂದ ಸಾಕುವವನಿಗೂ ಪ್ರಯೋಜನವಿರಬೇಕು ಎಂಬುದೇ ಷರತ್ತು. ಪ್ರಯೋಜನವಿರದ ಸಾಕಾಣಿಕೆಯನ್ನು ಜನರು ಬಯಸುವುದಿಲ್ಲ. ನಗರ ಪ್ರದೇಶದ ಮಂದಿ ಯಾಕೆ ಗೋವನ್ನು ಸಾಕುವುದಿಲ್ಲ ಎಂದರೆ, ದನಸಾಕಾಣಿಕೆಗೆ ಪೂರಕವಾದ ಮತ್ತು ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದಾದ ಯಾವ ವಾತಾವರಣವೂ ಅಲ್ಲಿಲ್ಲ. ಅಲ್ಲಿ ಅವರಿಗೆ ಜಮೀನು ಇಲ್ಲ. ಇನ್ನು, ಇರುವ ಸಣ್ಣ ಸ್ಥಳದಲ್ಲೇ ಸಾಕುವ ಅಂದರೆ, ಅದು ಸುಲಭ ಅಲ್ಲ. ಅದರ ಆರೈಕೆ, ಗೊಬ್ಬರಗಳ ವಿಲೇವಾರಿ, ಪೋಷಣೆ, ಚಿಕಿತ್ಸೆ ಇತ್ಯಾದಿಗಳನ್ನು ನಿಭಾಯಿಸುವುದಕ್ಕೆ ಸಿದ್ಧರಾಗಬೇಕು. ಒಂದುವೇಳೆ, ಇಷ್ಟೆಲ್ಲವನ್ನು ಮಾಡಿದರೂ ಪ್ರತಿಯಾಗಿ ಏನು ಸಿಗುತ್ತದೆ ಮತ್ತು ಎಷ್ಟು ಸಿಗುತ್ತದೆ ಎಂಬ ಪ್ರಶ್ನೆಯಿದೆ. ಹಾಲು ಕೊಡುವ ಹಸುವಿನ ನಿರ್ವಹಣೆಗೂ ಸಮಯ ಮೀಸಲಿಡಬೇಕು. ಅದರ ಕರುವಿನ ಬಗ್ಗೆ ನಿಗಾ ವಹಿಸಬೇಕು. ಹೀಗೆ ದನದ ಕುಟುಂಬವೂ ವಿಸ್ತರಿಸುತ್ತಾ ಹೋದಂತೆ ಒಂದೋ ಹಟ್ಟಿಯನ್ನು ವಿಸ್ತರಿಸುತ್ತಾ ಹೋಗಬೇಕಾಗುತ್ತದೆ ಅಥವಾ ದನಗಳನ್ನು ಮಾರಬೇಕಾಗುತ್ತದೆ. ಮತ್ತದೇ ಸಮಸ್ಯೆ. ಯಾರಿಗೆ ಮಾರುವುದು? ಖರೀದಿಸುವವರು ಯಾಕಾಗಿ ಖರೀದಿಸುತ್ತಾರೆ? ಮಾಂಸಕ್ಕಾಗಿ ಮಾರುವುದು ಅನೈತಿಕವಲ್ಲವೇ? ಹಾಗಾದರೆ, ಇದನ್ನು ದೊಡ್ಡಿಯಲ್ಲಿ ಇಟ್ಟುಕೊಂಡು ಏನು ಮಾಡುವುದು? ಇದರ ಖರ್ಚನ್ನು ಹೇಗೆ ನಿಭಾಯಿಸುವುದು?

ದನಗಳೆಲ್ಲ ಗ್ರಾಮೀಣ ಪ್ರದೇಶದಲ್ಲಿ ಯಾಕಿವೆ ಅನ್ನುವುದಕ್ಕೆ ಈ ಮೇಲಿನ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳಲ್ಲೇ ಇವೆ. ರೈತರು ಬರೇ ಭಾವನೆಗಾಗಿ ದನ ಸಾಕಾಣಿಕೆ ಮಾಡುತ್ತಿಲ್ಲ. ಅದು ಅವರ ಅನಿವಾರ್ಯತೆ. ಗದ್ದೆಯನ್ನು ಉಳಬೇಕಾದರೆ, ಗೊಬ್ಬರ ಹಾಕಬೇಕಾದರೆ ಅವರಿಗೆ ದನ ಬೇಕು. ಹೈನುತ್ಪನ್ನಗಳಿಗಾಗಿಯೂ ಅವರಿಗೆ ದನ ಬೇಕು. ಅದೊಂದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ. ನಗರಗಳಲ್ಲಿ ಈ ಅವಕಾಶ ಇಲ್ಲ. ಅಲ್ಲಿ ದನಗಳಿಗೆ ಕೊಡುವ ಪ್ರಕ್ರಿಯೆ ನಡೆಯಬಹುದೇ ಹೊರತು ದನಗಳಿಂದ ಕೊಳ್ಳುವಿಕೆಗೆ ಇರುವ ಅವಕಾಶಗಳು ತೀರಾ ತೀರಾ ಕಡಿಮೆ. ಆದ್ದರಿಂದಲೇ ನಗರ ಪ್ರದೇಶಗಳು ದನ ಸಾಕಾಣಿಕೆಯಿಂದ ಮುಕ್ತವಾಗಿವೆ. ಹಾಗಂತ, ಈ ವಾಸ್ತವ ರಾಜಕಾರಣಿಗಳಿಗೆ ಖಂಡಿತ ಗೊತ್ತು. ಆದರೆ ಅದನ್ನು ಹೇಳಿದರೆ ಓಟು ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಅವರು ಹೇಳುತ್ತಿಲ್ಲ.

ಭಾವನಾತ್ಮಕ ರಾಜಕಾರಣಕ್ಕೆ ಯಶಸ್ಸು ಲಭ್ಯವಾಗಬೇಕೆಂದರೆ, ಗೋಸಾಕಾಣಿಕೆಯ ಸುತ್ತ ಇರುವ ಈ ಸತ್ಯಗಳನ್ನು ಅಡಗಿಸಬೇಕು. ‘ಗೋಹತ್ಯೆ ನಿಷೇಧ’ ಎಂಬ ಕೂಗೆಬ್ಬಿಸಿ ಭಾವನಾತ್ಮಕ ಯುದ್ಧಕ್ಕೆ ಜನರನ್ನು ಸಜ್ಜುಗೊಳಿಸಬೇಕು. ಸದ್ಯ ನಡೆಯುತ್ತಿರುವುದು ಇಷ್ಟೇ. ಉತ್ತರ ಪ್ರದೇಶದ ಬೀಡಾಡಿ ದನಗಳು ಸಾರುತ್ತಿರುವುದೂ ಈ ರಾಜಕೀಯದ ಅಡ್ಡ ಪರಿಣಾಮವನ್ನೇ.