ನೈಜ ಔಲಿಯಾಗಳು ವ್ಯಾಪಾರಕ್ಕೆಂದಿಗೂ ಇಳಿಯಲಾರರು

0
428

✒ಟಿ.ಕೆ. ಉಬೈದ್

ಅಲ್ಲಾಹನ ಔಲಿಯಾಗಳು ಎಂದರೆ ಅಲ್ಲಾಹನನ್ನು ಅತಿ ಹೆಚ್ಚು ಪ್ರೀತಿಸುವ ಸತ್ಯವಿಶ್ವಾಸಿಗಳು. ಅವನನ್ನು ಭಯ ಭಕ್ತಿಯೊಂದಿಗೆ ಸದಾ  ಅವನನ್ನು ಸ್ಮರಿಸುತ್ತಿರುವವರು, ಅವನ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು, ಅವನು ನಿಷಿದ್ಧಗೊಳಿಸಿದವುಗಳಿಂದ ದೂರವಿರುವವರು,  ಅವನೊಂದಿಗೆ ಕೃತಜ್ಞತೆ ಮತ್ತು ವಿಧೇಯತೆಯಲ್ಲಿ ಸಂತೃಪ್ತಿಯುಳ್ಳವರು, ಅವನ ಪ್ರೀತಿಯಲ್ಲಿ ಸಂತೋಷವನ್ನು ಅನುಭವಿಸುವವರೂ  ಆಗಿರುತ್ತಾರೆ. ಅವರು ಭೌತಿಕ ಸುಖಭೋಗಗಳಲ್ಲಿ ಆಸಕ್ತಿಯಿಲ್ಲದವರೂ ಸಾತ್ವಿಕರೂ ವಿನೀತರೂ ಆಗಿರುತ್ತಾರೆ. ಇಂತಹ ಗುಣಸ್ವಭಾವವಿರುವವರನ್ನು ಎಲ್ಲರೂ ಗೌರವಿಸುತ್ತಾರೆ.

ಆದರೆ ಅವರು ಯಾರಿಂದಲೂ ಏನನ್ನೂ ಬಯಸುವುದಿಲ್ಲ, ನಿರೀಕ್ಷಿಸುವುದಿಲ್ಲ. ಅವರೊಂದಿಗೆ  ತೋರುವ ಪ್ರೀತಿ, ಗೌರವಾದರಗಳು ಅಲ್ಲಾಹನೊಂದಿ ಗಿನ ಭಯ-ಭಕ್ತಿ ಮತ್ತು ಪ್ರೀತಿಯ ಅನಿವಾರ್ಯ ಬೇಡಿಕೆಯಾಗಿದೆ. ಅಂತಹ  ಜನರನ್ನು ದ್ವೇಷಿಸಿದರೆ ಮತ್ತು ಅವರೊಂದಿಗೆ ಅತಿಕ್ರಮವಾಗಿ ವರ್ತಿಸಿದರೆ ಅದನ್ನು ಅಲ್ಲಾಹನು ಗಂಭೀರವಾಗಿ ಪರಿಗಣಿಸುತ್ತಾನೆ. ಅವರೊಡನೆ ದ್ವೇಷ ಸಾಧಿಸುವವರೊಂದಿಗೆ ಅಲ್ಲಾಹನು ಯುದ್ಧ ಘೋಷಣೆ ಮಾಡಿರುವನು.

ಪ್ರವಾದಿ ಮುಹಮ್ಮದ್(ಸ) ಈ ರೀತಿ ಹೇಳಿ ದರು- ನನ್ನ ಸಹಾಬಿಗಳ ವಿಷಯದಲ್ಲಿ ನೀವು ಅಲ್ಲಾಹನನ್ನು ಭಯಪಡಬೇಕು. ಅವರಿಗೆ ದ್ರೋಹ ಬಗೆಯಬಾರದು. ಅವರಿಗೆ ದ್ರೋಹ ಬ ಗೆದರೆ ನನಗೆ ದ್ರೋಹ ಮಾಡಿದಂತೆ. ನನಗೆ ದ್ರೋಹ ಮಾಡಿದರೆ ಅಲ್ಲಾಹನಿಗೆ ದ್ರೋಹ ಮಾಡಿದಂತೆ. ಅಂತಹವರಿಗೆ ಅಲ್ಲಾಹನು ಶೀಘ್ರ  ಶಿಕ್ಷೆ ನೀಡುವನು.

ಅಲ್ಲಾಹನ ಧರ್ಮಕ್ಕಾಗಿ ತಮ್ಮ ಜೀವವನ್ನೇ ಬಲಿಯರ್ಪಿಸಿದ ಸಹಾಬಿಗಳೆಲ್ಲ ಅಲ್ಲಾಹನ ಔಲಿಯಾಗಳಾಗಿದ್ದಾರೆ. ಅಂದರೆ ಅವನ  ಮಿತ್ರರಾಗಿದ್ದಾರೆ. ಅವರು ಯಾರೂ ಪವಾಡ ಪುರುಷರೋ, ಅದ್ಭುತ ಸಿದ್ಧಿಗಳನ್ನು ಪಡೆದವರೋ ಸಂಪೂರ್ಣ ವೈರಾಗಿಗಳೋ ಆಗಿರಲಿಲ್ಲ. ಮನಸ್ಸಿನಲ್ಲಿ ಅಲ್ಲಾಹನ ಪ್ರೀತಿ ತುಂಬಿಕೊಂಡರೆ ಆತನ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಅವನ ಸ್ನೇಹಕ್ಕೆ ಪೂರಕವಲ್ಲದ ಎಲ್ಲ ವಿಷಯಗಳೂ ಹೊರದಬ್ಬಲ್ಪಡುವುವು. ಆ ಬಳಿಕ ಅಲ್ಲಾಹನ ಪ್ರೀತಿ ಮತ್ತು ಅದರಲ್ಲಿರುವ ಅತ್ಯಾಸಕ್ತಿಯು ಅವನ ಇಚ್ಛೆ ಮತ್ತು ವ್ಯಾಮೋಹವನ್ನು ನಿಯಂತ್ರಿಸುವುದು.ಅಲ್ಲಾಹನು ಇಷ್ಟಪಡದ ಯಾವುದೂ ಅವನ ನಾಲಗೆಯಿಂದ ಹೊರಡದು. ಅವನ ಪ್ರತಿಯೊಂದು ಚಲನೆಯೂ ಅವನ ಆದೇಶಗಳಿಗನುಸಾರವಾಗಿರು ವುದು. ಅನಗತ್ಯವಾದ ಯಾವುದನ್ನೂ ಅವನು ಕೇಳಲಾರನು, ನೋಡಲಾರನು, ಸತ್ಯ ಮತ್ತು ನ್ಯಾಯ ಸಮ್ಮತ  ಕಾರ್ಯಗಳನ್ನು ಮಾಡಲು ಮತ್ತು ದೇವಮಾರ್ಗದಲ್ಲಿ ಹೋರಾಟ ನಡೆಸಲು ಮಾತ್ರ ಅವನು ತನ್ನ ಶಕ್ತಿಯನ್ನು ಉಪಯೋಗಿಸುವನು.ತೌಹೀದ್‍ನ ಅತ್ಯುನ್ನತ ಸ್ಥಿತಿಯಿದು. ಅಲ್ಲಾಹನ ಔಲಿಯಾ ಎಂದರೆ ಇವರೇ.

ಆದರೆ ಔಲಿಯಾ ಎಂದು ಹೇಳಿದರೆ ಪವಾಡ ಸದೃಢ  ಅದ್ಭುತ ಸಿದ್ಧಿಗಳನ್ನು ಹೊಂದಿದವರು, ಹಿಂದೂ ಧರ್ಮದ ಮಹರ್ಷಿಗಳಂತೆ ಶಪಿಸಲು, ವರ ನೀಡಲು ಸಾಮಥ್ರ್ಯವಿರುವವರು ಎಂಬ ಭಾವನೆ ನಮ್ಮ ಮಧ್ಯೆ ಹೇಗೋ ಪ್ರಚಾರ ಪಡೆದಿದೆ. ಇದನ್ನೇ ಬಳಸಿಕೊಂಡು ಕೆಲವು  ಚಾಣಾಕ್ಷಮತಿಗಳು ಸಿದ್ಧ ಪುರುಷರಂತೆ ವೇಷ ಕಟ್ಟಿಕೊಂಡು ಜನಸಾಮಾನ್ಯರನ್ನು ವಂಚಿಸುತ್ತಾರೆ, ಶೋಷಿಸುತ್ತಿದ್ದಾರೆ. ನೈಜ ಔಲಿಯಾಗಳು  ಈ ರೀತಿಯ ವ್ಯಾಪಾರಕ್ಕೆ ಖಂಡಿತ ಇಳಿಯಲಾರರು.