ಕಂಬಕ್ಕೆ ಹೊಡೆದ ಮೊಳೆಗಳು

0
650

✒ ಬಿಂತಿ ಯಾಸೀನ್

ಹತ್ತು ವರ್ಷದ ಬಾಲಕನಾದ ಬಿಲಾಲ್ ತನ್ನ ಹೆತ್ತವರೊಂದಿಗೆ ವಾಸವಾಗಿದ್ದ. ಆತನಿಗೆ ವಿಪರೀತ ಸಿಟ್ಟು ಬರುತ್ತಿತ್ತು. ಯಾವುದಾದರೂ ಸಣ್ಣ ವಿಷಯ ಸಿಕ್ಕಿದರೂ ಕೂಡ ಆತ ಸಿಟ್ಟಿಗೇಳುತ್ತಿದ್ದ. ಎದುರಲ್ಲಿದ್ದವ ರನ್ನು ಅವಾಚ್ಯ ಪದಗಳಿಂದ ನಿಂದಿಸಿ ಕಳುಹಿಸುತ್ತಿದ್ದ. ಹಿರಿಯರೂ ಕೂಡ ಹಲವು ಬಾರಿ ಆತನಿಂದ ನಿಂದನೆಗೊಳಗಾಗಿ ಆತನ ಚಾರಿತ್ರ್ಯ ಸರಿ ಇಲ್ಲವೆಂದೂ, ಆತನೊಂದಿಗೆ ಮಾತನಾಡದಿ ರುವುದೇ ಉತ್ತಮವೆಂದೂ ಹೇಳಿಕೊಳ್ಳತೊಡಗಿದರು. ಆಟವಾಡುವಾಗ ಅಕ್ಕ-ಪಕ್ಕದ ಮನೆಯ ಮಕ್ಕಳೊಂದಿಗೆ ಜಗಳ ಮಾಡುವುದೇ ಹೆಚ್ಚಾದುದರಿಂದ ಅವರು ಆತನನ್ನು ತಮ್ಮೊಂದಿಗೆ ಆಟಕ್ಕೆ ಸೇರಿಸಿಕೊಳ್ಳಲು ಹಿಂಜರಿ ದರು. ಆತನನ್ನು ಕಾಣುವಾಗ ವೈರಿಯನ್ನು ಕಂಡಂತೆ ಇತರೆ ಮಕ್ಕಳು ವರ್ತಿಸಲಾರಂಭಿಸಿದರು.

ಹೆತ್ತವರು ಆತನಿಗೆ ಅತ್ಯುತ್ತಮ ತರಬೇತಿ ನೀಡಿದರೂ, ಉಪಚರಿಸಿ ದರೂ ಅವುಗಳಾವುದೂ ಆತನ ಲೆಕ್ಕಕ್ಕೆ: ಬರಲಿಲ್ಲ. ಒಮ್ಮೆ ಮನೆಯ ಜಗಲಿಯಲ್ಲಿ ಕುಳಿತು ಬಿಲಾಲ್ ತನ್ನ ಆಟಿಕೆಗಳೊಂದಿಗೆ ಆಟವಾಡುತ್ತಿದ್ದನು.

ಈ ನಡುವೆ ಅಪರಿಚಿತ ವ್ಯಕ್ತಿಯೊಬ್ಬರು ಬಂದು ಯಾವುದೋ ವಿಷಯದಲ್ಲಿ ಆತನ ತಂದೆಯೊಂದಿಗೆ ವಾಗ್ದಾಳಿ ನಡೆಸಿದರು. ಬಿಲಾಲ್‍ನ ತಂದೆ ಯಾವುದೇ ರೀತಿಯಲ್ಲಿ ಉತ್ತರವನ್ನು ಕೊಡದೇ ಅವರನ್ನು ಕುಳ್ಳಿರಿಸಿ ಉಪಚರಿಸಿದರು. ಆ ವ್ಯಕ್ತಿಯು ಅಲ್ಪ ಹೊತ್ತಿನ ಬಳಿಕ ನಗು ನಗುತ್ತಾ ತಮ್ಮ ಸಂಭಾಷಣೆಯನ್ನು ಮುಗಿಸಿ ಹೊರಟು ಹೋದರು.

ಇದನ್ನು ಕಂಡು ಬಿಲಾಲ್‍ಗೆ ಅಚ್ಚರಿಯಾಯ್ತು. ಆತ ತಂದೆಯ ಬಳಿ ಹೋಗಿ “ಆ ವ್ಯಕ್ತಿ ಅಷ್ಟೊಂದು ಅಪಮಾನ ಗೈದರೂ ನಿಮಗೆ ಕೋಪ ಬರಲಿಲ್ಲವೇ?” ಎಂದು ಕೇಳಿದನು.

ಆಗ ಆತನ ತಂದೆ ಹೇಳಿದರು,”ನಿನ್ನಂತೆ ನಾನು ಅವರೊಂದಿಗೆ ಜಗಳಕ್ಕಿಳಿದರೆ ಊರಿನವರೆಲ್ಲರೂ ನನ್ನನ್ನು ಕೆಟ್ಟವನೆಂದು ಹೇಳಬಹುದು. ಬದಲಾಗಿ ನಾನು ನನ್ನ ಕೋಪವನ್ನು ನಿಯಂತ್ರಿಸಿ ಕೊಳ್ಳುತ್ತೇನೆ. ಅದರಿಂದಾಗಿ ಎಲ್ಲರೂ ಸಹನೆಯ ಪಾಠ ಕಲಿಯುತ್ತಾರೆ” ಎಂದರು.

ಬಿಲಾಲ್‍ಗೆ ತನಗೂ ಕೂಡ ಕೋಪವನ್ನು ನಿಯಂತ್ರಿಸಿ ಕೊಳ್ಳಬೇಕೆಂಬ ಬಯಕೆ ಹುಟ್ಟಿ ಕೊಂಡಿತು. ಆತ ತಂದೆಯ ಬಳಿ “ನನಗೆ ನನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದನ್ನು ಹತೋಟಿಗೆ ತರಬೇಕಾದರೆ ಏನಾ ದರು ಒಂದು ಉಪಾಯ ನಿಮ್ಮಲ್ಲಿಲ್ಲವೇ?” ಎಂದು ಕೇಳಿದನು.

ಆಗ ಅವರಿಗೆ ಅಚ್ಚರಿಯಾಯ್ತು. ಅವರು ಕೂಡಲೇ “ನಾನು ಆಲೋ ಚಿಸಿ ನಿನಗೊಂದು ಉಪಾಯವನ್ನು ಬೇಗನೆ ಹೇಳುವೆ” ಎಂದರು. ಬಿಲಾಲ್‍ಗೆ ಅತೀವ ಸಂತೋಷವಾಯ್ತು.

ಆ ದಿನ ಸಂಜೆ ಬಿಲಾಲ್‍ನ ತಂದೆ ಒಂದು ಕಟ್ಟಿಗೆಯ ಕಂಬವನ್ನು ಮನೆಯ ಜಗಲಿಯ ಹತ್ತಿರದಲ್ಲಿಯೇ ನಿಲ್ಲಿಸಿದರು. ಇನ್ನೊಂದು ಕಡೆ ಒಂದು ದೊಡ್ಡ ಖಾಲಿ ಹೂವಿನ ಕುಂಡವನ್ನು ಇರಿಸಿದರು. ತದನಂತರ ಬಿಲಾಲ್ ನನ್ನು ಕರೆದು ಆತನ ಒಂದು ಕೈಯಲ್ಲಿ ಮೊಳೆಗಳನ್ನು ಹಾಗೂ ಒಂದು ಸುತ್ತಿಗೆಯನ್ನು ನೀಡಿದರು ಮತ್ತು ಇನ್ನೊಂದು ಕೈಯಲ್ಲಿ ಹೂವಿನ ಬೀಜಗಳನ್ನು ನೀಡಿದರು.

ತದನಂತರ ಹೇಳಿದರು, “ಬಿಲಾಲ್ ನಿನಗೆ ಯಾವಾಗಲೆಲ್ಲ ಕೋಪ ಬರುವುದೋ ನೀನು ಈ ಮೊಳೆಗಳಿಂದ ಒಂದನ್ನು ತೆಗೆದು ಈ ಕಂಬದ ಮೇಲೆ ಬಡಿಯಬೇಕು. ನಿನಗೆ ಕೋಪ ತರಿಸಿದವರಿಗೆ ಯಾವುದೇ ರೀತಿಯ ಮಾತನ್ನೂ ಕೂಡ ಆಡಬಾರದು. ಒಂದು ವೇಳೆ ಸಂಜೆಯೊಳಗೆ ನಿನ್ನೊಂದಿಗೆ ಅವರು ಕ್ಷಮೆಯಾಚಿಸಿ ನಿನ್ನ ಗೆಳೆತನವನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ನೀನು ಈ ಹೂವಿನ ಕುಂಡದಲ್ಲಿ ಬೀಜಗಳನ್ನು ನೆಟ್ಟು ನೀರುಣಿಸಬೇಕು” ಎಂದರು.
ಆಗ ಬಿಲಾಲ್ ಆಗಬಹುದು ಎಂದನು.

ಆತನ ಮನಸ್ಸಿನಲ್ಲಿ ಅಸಹನೆಯು ಮನೆ ಮಾಡಿತ್ತು ಇದೆಂತಹ ಕೆಲಸವೆಂಬ ಭಾವನೆ ಆತನಲ್ಲಿ ಮೂಡಿತ್ತು. ಆದರೆ ಆತ ತಂದೆಯ ಬಳಿ ಆಯ್ತು ಎಂದು ಹೇಳಿ ಕೂಡಲೇ ಒಂದು ಮೊಳೆಯನ್ನು ತೆಗೆದು ಜೋರಾಗಿ ಆ ಕಂಬಕ್ಕೆ ಬಡಿದನು. ಅಂದಿನಿಂದ ಆತನ ದಿನಚರಿ ಮುಂದು ವರಿಯಿತು. ಹಲವು ದಿನಗಳ  ಕಾಲ ಆಯಾ ಮೊಳೆಗಳನ್ನು ಬಡಿದನಾದರೂ ಒಂದೇ ಒಂದು ಹೂವಿನ ಬೀಜವನ್ನು ನೆಡಲಿಲ್ಲ. ಕೆಲವೊಮ್ಮೆ ಮೊಳೆಯನ್ನು ಬಡಿಯುವಾಗ ಆತನ ಕೈಗೆ ಗಾಯವಾದವು. ಆದರೂ ಆತ ತನ್ನ ಆ ಹವ್ಯಾಸವನ್ನು ನಿಲ್ಲಿಸಲಿಲ್ಲ.

ಕೆಲವು ದಿನಗಳ ಆತನ ಮೌನವು ಹಲವರ ಮನಸ್ಸನ್ನು ಬದಲಿಸಿತ್ತು. ಅವರು ಆತನನ್ನು ಮೊದಲಿನಂತೆ ನಿಂದಿಸುವುದನ್ನು ನಿಲ್ಲಿಸಿದರು. ಆತನೊಂದಿಗೆ ನಗುತ್ತಾ ಮಾತನಾಡ ತೊಡಗಿದರು. ಬಿಲಾಲ್ ಈ ನಡುವೆ ಮೊಳೆಗಳನ್ನು ಹೊಡೆಯುವುದನ್ನು ನಿಲ್ಲಿಸಿ ಹೂವಿನ ಬೀಜಗಳನ್ನು ನೆಟ್ಟು ನೀರುಣಿಸ ತೊಡಗಿದನು. ಆತನ ಗೆಳೆಯರೂ ಕೂಡ ಆತನಿಗೆ ಈ ಕೆಲಸದಲ್ಲಿ ನೆರವಾಗತೊಡಗಿದರು. ಹಲವು ದಿನಗಳ ಬಳಿಕ ಬಿಲಾಲ್ ಸೌಮ್ಯ ಸ್ವಭಾವದವನಾಗಿ ಪರಿವರ್ತಿತನಾದನು.

ಒಂದು ದಿನ ತನ್ನ ತಂದೆಯ ಬಳಿ “ನಾನೀಗ ನನ್ನ ಕೋಪವನ್ನು ನಿಯಂತ್ರಿಸುವುದನ್ನು ಕಲಿತೆ” ಎಂದು ಹೇಳಿದನು.

ಆಗ ತಂದೆ ಆತನಿಗೆ ಹೇಳಿದರು, “ಬಿಲಾಲ್ ಈಗ ಇನ್ನೊಂದು ಕೆಲಸ ನೀನು ಮಾಡಬೇಕಾಗಿದೆ. ನೀನು ಆ ಕಂಬಕ್ಕೆ ಹೊಡೆದ ಎಲ್ಲ ಮೊಳೆಗಳನ್ನು ಕಿತ್ತು ತೆಗೆಯ ಬೇಕಿದೆ. ತದನಂತರ ನೀನು ನನ್ನ ಬಳಿ ಬಂದು ಇದೇ ಮಾತನ್ನು ಪುನಾರಾವರ್ತಿಸಿದರೆ ನಿನ್ನ ಕೊಪ ನಿಯಂತ್ರಣವಾಗಿದೆ ಎಂದರ್ಥ” ಎಂದರು.

ಬಿಲಾಲ್ ತಾನೇ ಹೊಡೆದ ಮೊಳೆಗಳನ್ನು ಕಿತ್ತು ತೆಗೆಯ ಲಾರಂಭಿಸಿದನು. ಕೆಲವೊಂದು ಮೊಳೆಗಳನ್ನು ಎಷ್ಟೇ ಪರಿಶ್ರಮ ಪಟ್ಟರೂ ಕಿತ್ತು ತೆಗೆಯಲಾಗಲಿಲ್ಲ. ಆತನಿಗೆ ಅತೀವ ಕೋಪ ಬಂದಾಗ ಜೋರು ಜೋರಾಗಿ ಮೊಳೆಗಳ ಮೇಲೆ ಹೊಡೆದುದು ಆತನಿಗೆ ನೆನಪಾಯ್ತು. ಆತ ಅಲ್ಲಿಯೇ ಕುಳಿತು ಅಳಲಾ ರಂಭಿಸಿದ. ಇದನ್ನು ಕಂಡ ಬಿಲಾಲ್‍ರವರ ತಂದೆ ಏನಾಯ್ತು ಎಂದು ಪ್ರಶ್ನಿಸಿದರು. ಕೆಲವು ಮೊಳೆಗಳನ್ನು ಕಿತ್ತು ತೆಗೆಯಲಾಗುತ್ತಿಲ್ಲವೆಂದು ಆತ ಪ್ರತ್ಯುತ್ತರಿಸಿದನು. ಆಗ ಬಿಲಾಲ್‍ನ ತಂದೆಯವರು ಆತನನ್ನು ಸಮಾಧಾನ ಪಡಿಸಿ ಕಂಬವನ್ನೊಮ್ಮೆ ನೋಡಲು ಹೇಳಿದರು. ಮೊಳೆಗಳನ್ನು ಕಿತ್ತು ತೆಗೆದ ಪರಿಣಾಮವಾಗಿ ಅದು ಹಲವು ರಂಧ್ರಗಳಿಂದ ತುಂಬಿಕೊಂಡಿತ್ತು. ಕಿತ್ತು ತೆಗೆಯಲಾಗದ ಮೊಳೆಗಳ ಆಕಾರವು ಗೋಚರಿಸುತ್ತಿತ್ತು.

ಆತನ ತಂದೆ ಹೇಳಿದರು, “ಜನರಿಗೆ ಈ ಮೊದಲು ನಿನ್ನ ವರ್ತನೆ ಮತ್ತು ನಿನ್ನ ನಿಂದನೆಯಿಂದ ಅಪಾರ ನೋವಾಗುತ್ತಿತ್ತು. ಆದುದರಿಂದ ಅವರೆಲ್ಲರೂ ನಿನ್ನಿಂದ ದೂರ ಸರಿದರು. ನೀನಾಡಿದ ಅವಾಚ್ಯ ಪದಗಳು ನಿನ್ನನ್ನು ಕೆಟ್ಟ ವನನ್ನಾಗಿಸಿದ್ದುವು. ಆದರೆ ನೀನು ಈ ಕಂಬಕ್ಕೆ ಮೊಳೆಗಳನ್ನು ಹೊಡೆದು ನಿನ್ನ ಕೋಪವನ್ನು ನಿಯಂತ್ರಿಸಿದುದರಿಂದ ಹಲವರ ಮನಸಿನ ಮೇಲೆ ನಿನ್ನ ಕುರಿತು ಮೂಡಲಿದ್ದ ಕೆಟ್ಟ ವಿಚಾರಗಳು ಅಳಿದು ಹೋದವು. ಇನ್ನು ಕೆಲವೊಮ್ಮೆ ನಿನಗೆ ಕೋಪವನ್ನು ನಿಯಂತ್ರಿಸಲಾಗದೇ ನೀನಾಡಿದ ಮಾತುಗಳಿಂದ ನೊಂದ ಹೃದಯಗಳ ಮೇಲೆ ಈಗಲೂ ಮೊಳೆಗಳು ಈ ಕಂಬದಲ್ಲಿ ಉಳಿದಂತೆ ಬಾಕಿ ಉಳಿದಿವೆ. ಆದುದರಿಂದ ನೀನು ಅವರಲ್ಲಿ ಕ್ಷಮೆ ಯಾಚಿಸಬೇಕಿದೆ. ಇನ್ನು ನಿನ್ನ ಉತ್ತಮ ಗುಣಗಳಿಂದಾಗಿ ಮನೆಯ ಮುಂದೆ ಸುಂದರ ಹೂಗಳು ಅರಳಿ ನಿಂತಿವೆ. ಅವುಗಳು ನಿನ್ನ ಒಳ್ಳೆಯತನದ ಪ್ರತೀಕವಾಗಿವೆ. ಇನ್ನಾದರೂ ನೀನು ಉತ್ತಮ ರೀತಿಯಿಂದ ವರ್ತಿಸಬೇಕು” ಎಂದು ಅವರು ಹೇಳಿದರು.

ಬಿಲಾಲ್ ತನ್ನ ವರ್ತನೆಯಿಂದ ಅವರು ಎದುರಿಸಿದ ಅಪಚಾರಗಳಿಗೆ ಅವರಿಂದ ಕ್ಷಮೆ ಯಾಚಿಸಿದನು. ಈ ಹಿಂದೆ ತಾನು ನಿಂದಿಸಿದ ಹಿರಿಯರ ಬಳಿಯೂ ಕ್ಷಮೆ ಯಾಚಿಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರನಾದನು.