ನಾನು ಪಪ್ಪಾಯಿ ತಿಂದುದಕ್ಕೆ ಪತ್ನಿ ಸಿಟ್ಟಾದಳು

0
1052

ಇಸ್ಮತ್ ಪಜೀರ್

ಸುಮಾರು ಮೂರು ವರ್ಷಗಳ ಹಿಂದಿನ ಮಾತು. ನನ್ನ ಮನೆಯ ಪಕ್ಕದ ನನ್ನ ಸಂಬಂಧಿಕರದ್ದೇ ಒಂದು ಖಾಲಿ ಮನೆ ಇತ್ತು. ಅವರು ಆ ಮನೆ ಮಾರಿ ಕೆಲವು ವರ್ಷಗಳಾದರೂ ಅದರ ಡಾಕ್ಯುಮೆಂಟ್ ಸಮಸ್ಯೆಯಿದ್ದುದರಿಂದ ಅದರ ಸೆಟ್ಲ್ ಮೆಂಟ್ ಆಗಿರಲಿಲ್ಲ. ಹಾಗೆ ಆ ಮನೆ ಇನ್ನೂ ಖಾಲಿಯಿತ್ತು. ನನ್ನ ಮನೆಯ ಜಮೀನಿಗೆ ತಾಗಿಯೇ ಇದ್ದ ಆ ಮನೆಯ ಅಂಗಳದಲ್ಲಿ ಯಾರೋ ಎಸೆದ ಪಪ್ಪಾಯಿ ಬೀಜ ಮೊಳಕೆಯೊಡೆದು ಗಿಡವಾಗಿ ಹಣ್ಣು ಬಿಟ್ಟಿತ್ತು. ಆ ಹಣ್ಣುಗಳನ್ನು ಕೊಯ್ಯುವವರಿಲ್ಲದೇ ಅದು ಹಾಗೇ ಹಣ್ಣಾಗಿ ಬಿದ್ದು ಕೊಳೆತು ಹೋಗುತ್ತಿತ್ತು.

ಅದು ಮಾವಿನ ಹಣ್ಣಿನ ಸೀಸನ್. ನಮ್ಮ ಜಮೀನಿನಲ್ಲಿರುವ ಅತ್ಯದ್ಭುತ ರುಚಿಕರವಾದ ಮಾವಿನ ಮರದ ಹಣ್ಣುಗಳು ಆ ಖಾಲಿ ಮನೆಯ ಅಂಗಳಕ್ಕೆ ಬೀಳುತ್ತಿತ್ತು. ನಮ್ಮ ಆ ಮರದ ಮಾವೆಂದರೆ ನನಗೆ ವಿಪರೀತ ಎನ್ನುವಷ್ಟು ಇಷ್ಟ. ನಾನು ಪ್ರತೀದಿನ ಬೆಳ್ಳಂಬೆಳಗ್ಗೆ ಮಾವಿನ ಹಣ್ಣು ಹೆಕ್ಕಲು ಆ ಖಾಲಿ ಮನೆಯ ಅಂಗಳಕ್ಕೆ ಹೋಗುತ್ತಿದ್ದೆ. ಹಾಗೆ ಹೋದಾಗ ಆ ಜಮೀನಿನ ಪಪ್ಪಾಯಿ ಮರದಿಂದ ಹಣ್ಣಾದ ಪಪ್ಪಾಯಿಯೊಂದು ಬಿದ್ದಿತ್ತು. ನಾನು ಸಹಜವಾಗಿಯೇ ಎತ್ತಿಕೊಂಡು ಬಂದೆ. ನನ್ನ ಪತ್ನಿ ಎಷ್ಟು ಸಿಟ್ಟಾದಳೆಂದರೆ ಅದನ್ನು ತಿನ್ನಲು ಬಿಡಲೇ ಇಲ್ಲ. ಕೊನೆಗೂ ಅದರ ಒಂದು ತುಂಡನ್ನು ಆಕೆಯ ಕಣ್ಣು ತಪ್ಪಿಸಿ ತಿಂದೆ. ಆ ಕಾರಣಕ್ಕಾಗಿ ಒಂದೆರಡು ದಿನ ಆಕೆ ನನ್ನೊಂದಿಗೆ ಸಿಟ್ಟಾಗಿದ್ದಳು.

ಆಗ ನನಗಿದ್ದ ಒಂದೇ ಪ್ರಶ್ನೆ‌”ಅದನ್ನು ಕೊಂಡೊಯ್ಯಲು ಅವರು ಬರುವುದಿಲ್ಲ, ಹೇಗಿದ್ದರೂ ಬಿದ್ದು ಕೊಳೆತು ಹೋಗುತ್ತದಲ್ವಾ…. ಅದನ್ನು ತಿಂದರೆ ತಪ್ಪೇನು? ಆಕೆಯ ವಾದ ಇಷ್ಟೇ, ಕೊಳೆತೇ ಹೋಗಲಿ ಅವರ ಅನುಮತಿಯಿಲ್ಲದೇ ತಿನ್ನುವುದು ನಮಗೆ ಹರಾಂ. ಈ ವಾದ ಇಸ್ಲಾಮೀ ನ್ಯಾಯಶಾಸ್ತ್ರದ ಪ್ರಾಥಮಿಕ ಜ್ಞಾನವಿರುವವರಿಗೆ ಹೊಸತಲ್ಲ. ಅದಾಗ್ಯೂ ಅದೆಲ್ಲಾ ಕಲ್ಲಿ ವಲ್ಲಿ ಎಂದು ತಾತ್ಸಾರ ಮಾಡುವವರೇ ಅಧಿಕ.

ಮಾಲಿಕ್ ಬಿನ್ ದೀನಾರ್ (ರ ) ಅವರ ಧರ್ಮ ಪ್ರಚಾರಕರ ತಂಡ ಭಾರತದಲ್ಲಿ ಕಾರ್ಯಾಚರಿಸುತ್ತಿದ್ದ ಕಾಲದಲ್ಲಿ ಅವರ ಬದುಕನ್ನು ಆ ಕಾಲದ ಜನತೆ ಕುತೂಹಲದ ಕಣ್ಣಲ್ಲಿ ನೋಡುತ್ತಿತ್ತು. ಕೆಳಜಾತಿಯ ಜನರನ್ನು ನರಿನಾಯಿಗಳಿಗಿಂತ ತುಚ್ಚವಾಗಿ ಕಾಣಲಾಗುತ್ತಿದ್ದ ಅಂದಿನ ಸಮಾಜದಲ್ಲಿ ಅವರನ್ನೂ ಪ್ರೀತಿಯಿಂದ ದೀನಾರ್ ಮಿಶನರಿಯ ತಂಡ ಮಾತನಾಡಿಸುತ್ತಿತ್ತು. ಇದರಿಂದ ಸಹಜವಾಗಿಯೇ ಮಾಲಿಕ್ ದೀನಾರ್ ಮತ್ತವರ ತಂಡದ ಮೇಲೆ ಪ್ರೀತಿ ಹುಟ್ಟಿತ್ತು.

ಹಾಗೆ ಇವರ ಮೇಲೆ ಪ್ರೀತಿ ಮತ್ತು ಅಭಿಮಾನವಿಟ್ಟುಕೊಂಡಿದ್ದ ನೂರಾರು ಕೆಳಜಾತಿಯವರಲ್ಲಿ ಅಪ್ಪು ಎಂಬವರೂ ಒಬ್ಬರಾಗಿದ್ದರು.‌ಅಪ್ಪು ಜಮೀಂದಾರರೊಬ್ಬರ ತೋಟದ ಕಾರ್ಮಿಕನಾಗಿದ್ದರು. ಅಪ್ಪು ಒಮ್ಮೆ ತಾನು ಕೆಲಸ ಮಾಡುವ ತೋಟದಿಂದ ಸಿಯಾಳವೊಂದನ್ನು ಕಿತ್ತು ತಂದು ಮಾಲಿಕ್ ಬಿನ್ ದೀನಾರರ ಮುಂದೆ ಇಟ್ಟು ಕುಡಿಯುವಂತೆ ಒತ್ತಾಯಿಸಿದರು.

ಇದನ್ನು ಎಲ್ಲಿಂದ ತಂದಿರುವಿರಿ?

ನಾನು ಕೆಲಸ ಮಾಡುವ ತೋಟದಿಂದ….

ನಿಮ್ಮ ತೋಟದ ಮಾಲೀಕನ ಅನುಮತಿ ಪಡೆದಿದ್ದೀರಾ?

ಇಲ್ಲ…

ಹಾಗಿದ್ದರೆ ನಮಗಿದನ್ನು ಕುಡಿಯಲಾಗದು..

ಯಾಕೆ…?

ನಮ್ಮ ಧರ್ಮದ ಪ್ರಕಾರ ಅದನ್ನು ಕುಡಿಯಕೂಡದು.

ನಾನು ಅನುಮತಿ ಪಡೆದುಕೊಂಡು ಬಂದರೆ…?

ಖಂಡಿತಾ ಕುಡಿಯಬಹುದು.

ಅಪ್ಪು ಕೂಡಲೇ ಅಲ್ಲಿಂದ ಓಡಿ ಹೋಗಿ ತನ್ನ ಧಣಿಯ ಅನುಮತಿ ಪಡಕೊಂಡು ಬರುತ್ತಾರೆ.

ಅನುಮತಿ ಪಡೆದಿರುವೆ, ಅವರು ಸಮ್ಮತಿಸಿದ್ದಾರೆ….

ಸರಿ ಹಾಗಾದರೆ ಕುಡಿಯೋಣ…

ಅಪ್ಪು ಆನಂದತುಂದಿಲನಾಗಿ‌ ಸಿಯಾಳವನ್ನು ಕೆತ್ತಿ ಕೊಡುತ್ತಾರೆ.

ಮಾಲಿಕ್ ಬಿನ್ ದೀನಾರ್ “ಮೊದಲು‌ ನೀವು ತುಟಿ ತಾಗಿಸಿ ಕುಡಿಯಿರಿ” ಎಂದರು.

ಇಲ್ಲ… ಇಲ್ಲ… ಇದು ನಿಮಗಾಗಿ ತಂದಿರುವೆ.

ನೀವು ತುಟಿ ತಾಗಿಸಿ ಕುಡಿಯದೇ ನಾವು ಕುಡಿಯಲಾರೆವು..

ಅಪ್ಪು ತುಟಿ ತಾಗಿಸಿ ಕುಡಿಯುತ್ತಾರೆ… ಆ ಬಳಿಕ ಮಾಲಿಕ್ ಬಿನ್ ದೀನಾರ್ ಮತ್ತವರ ತಂಡದವರೆಲ್ಲಾ ತುಟಿ ತಾಗಿಸಿ ಒಂದೊಂದೇ ಗುಟುಕು ಕುಡಿಯುತ್ತಾರೆ.

ಅಪ್ಪುವಿನ ಪಾಲಿಗೆ ಮಾಲಿಕ್ ಬಿನ್ ದೀನಾರರ ಈ ವರ್ತನೆಯೇ ಆಶ್ಚರ್ಯ.

ಯಾಕೆಂದರೆ… ಮೊದಲನೆಯದಾಗಿ ಯಾರ ಸ್ವತ್ತನ್ನೂ ಅವರ ಅನುಮತಿಯಿಲ್ಲದೇ ತಿನ್ನುವುದಾಗಲೀ, ಸೇವಿಸುವುದಾಗಲೀ ಕೂಡದು.

ಎರಡನೆಯದಾಗಿ ತನ್ನಂತಹ ಕೀಳುಜಾತಿಯ ಮನುಷ್ಯನ ತುಟಿ ತಾಗಿದ ಸಿಯಾಳ ಕುಡಿದದ್ದು.

ತನ್ನನ್ನು ನರಿ ನಾಯಿಗಳಿಗಿಂತಲೂ‌ ತುಚ್ಚವಾಗಿ ಕಾಣುವ ಸಮಾಜವೆಲ್ಲಿ ಇವರೆಲ್ಲಿ….?

ಯಾರದ್ದನ್ನು ಹೇಗೆ ಬೇಕಾದರೂ ಹಾಗೆ ಭೋಗಿಸುವ ತನ್ನ ಸಮಾಜವೆಲ್ಲಿ…. ಇವರು ಪಾಲಿಸುವ ಈ ನ್ಯಾಯವೆಲ್ಲಿ…?

ಇದರಿಂದ ಪ್ರಭಾವಿತನಾದ ಅಪ್ಪು ಅಂದಿನಿಂದ ಮಾಲಿಕ್ ಬಿನ್ ದೀನಾರರ ಶಿಷ್ಯನಾಗುತ್ತಾರೆ. ಒಟ್ಟಿನಲ್ಲಿ ಇಸ್ಲಾಮ್ ಭಾರತದಲ್ಲಿ ಜನಮನ್ನಣೆಗಳಿಸಲು ಇವೆರಡು ಅತ್ಯಂತ ಪ್ರಮುಖ ಕಾರಣಗಳು

ಈ ಕತೆ ಇಲ್ಲಿ ಹೇಳಲು ಕಾರಣವೇನೆಂದರೆ ಇಂದು ವಾಟ್ಸಾಪಿನಲ್ಲಿ ಒಂದು ವೀಡಿಯೋ ನೋಡಿದೆ. ಎಲ್ಲೋ ಉತ್ತರ ಭಾರತದ ಕಡೆ ಕೋಳಿ ಸಾಗಾಟದ ವಾಹನವೊಂದು ಅಪಘಾತವಾಗಿ ಬಿದ್ದಿತ್ತು. ಅದರಡಿಯಲ್ಲಿ‌ ಬಿದ್ದವರನ್ನು ರಕ್ಷಿಸುವುದು ಬಿಟ್ಟು ಆ ವಾಹನದಲ್ಲಿರುವ ಕೋಳಿಗಳನ್ನು ಕದ್ದು ಓಡುವುದರಲ್ಲೇ ಜನ ತಲ್ಲೀನರಾಗಿದ್ದರು.ಇಂತಹದ್ದನ್ನು ನಮ್ಮ ನಾಡಿನಲ್ಲೂ ನಾವು ನೋಡಿದ್ದೇವೆ. ಮೀನಿನ ಲಾರಿ ಮಗುಚಿ ಬಿದ್ದಾಗ, ಸೀಮೆ ಎಣ್ಣೆ ಟ್ಯಾಂಕರ್ ಬಿದ್ದಾಗ ತನಗೇನು ಸಿಗುತ್ತೆ ಎಂದು ಕಾಯುವ ಜನರೇ ಅಧಿಕ. ಮುಸ್ಲಿಮರಿಗೆ ಇದು ಧರ್ಮಬಾಹಿರ. ನಮಗೊಂದು ನ್ಯಾಯ ಸಂಹಿತೆಯಿದೆ.ನಾವು ಅದರ ಪ್ರಕಾರವೇ ಬದುಕಬೇಕಾದವರೇ ಹೊರತು ಹೇಗೋ ಯಾರದ್ದೋ ಸಿಕ್ಕರೆ ಅದನ್ನು ತಿಂದು ಹೊಟ್ಟೆ ತುಂಬಿಸುವುದು ಮುಸ್ಲಿಮನ ಲಕ್ಷಣವಲ್ಲ…