ನಾಗ್ಪುರದಲ್ಲಿ ಅರ್ಧ ಪ್ಯಾಂಟು ಧರಿಸಿ ಮಾತನಾಡುವುದು ರಾಷ್ಟ್ರೀಯತೆಯಲ್ಲ: ಆರ್‌ಎಸ್‌ಎಸ್ ವಿರುದ್ಧ ಸಚಿನ್ ಪೈಲಟ್

0
559

ಸನ್ಮಾರ್ಗ ವಾರ್ತೆ

ಜೈಪುರ,ಜ.4: ಕೇಂದ್ರ ಸರಕಾರದ ಕೃಷಿ ಕಾನೂನಿನ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿಕೆ ನೀಡಿದ್ದು, ಜೊತೆಗೆ ಆರೆಸ್ಸೆಸ್‍ನ್ನು ಟೀಕಿಸಿದ್ದಾರೆ. ರೈತರ ಕುರಿತು ಮಾತಾಡುವುದು ರಾಷ್ಟ್ರೀಯತೆಯಾಗಿದೆ. ನಾಗಪುರದ ಭಾಷಣ ಅಲ್ಲ ಎಂದು ಅವರು ಹೇಳಿದರು.

“ನಮ್ಮ ರೈತರ ಕಲ್ಯಾಣಕ್ಕಾಗಿ ಮಾತಾಡುವುದು ನಿಜವಾದ ರಾಷ್ಟ್ರೀಯತೆಯಾಗಿದೆ. ಅರ್ಧ ಪ್ಯಾಂಟು ಹಾಕಿಕೊಂಡು ನಾಗ್ಪುರದಲ್ಲಿ ನಡೆಸುವ ಭಾಷಣವನ್ನು ರಾಷ್ಟ್ರೀಯತೆಯೆಂದು ಹೇಳಲು ಸಾಧ್ಯವಿಲ್ಲ” ಎಂದು ಸಚಿನ್ ಪೈಲಟ್ ಪರೋಕ್ಷವಾಗಿ ಆರೆಸೆಸ್ ಅನ್ನು ಟೀಕಿಸಿದ್ದಾರೆ.

ಹೊಸ ಕೃಷಿ ಕಾನೂನುಗಳ ಮೂಲಕ ಕೇಂದ್ರ ಸರಕಾರ ರೈತರನ್ನು ಕತ್ತಲೆಗೆ ದೂಡುತ್ತಿದೆ. ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವುದು ಸೋಲಲ್ಲ ಎಂಬುದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು. ತಿದ್ದುಪಡಿಗಳು ಮಾಡುವುದು. ಕಾನೂನು ಹಿಂದೆಪಡೆಯುವುದು, ಕ್ಷಮೆ ಕೇಳುವುದು ನಾಯಕರ ಮಟ್ಟವನ್ನು ಎತ್ತರಗೊಳಿಸುತ್ತದೆ. ಮುಂದಿನ ದಿವಸಗಳಲ್ಲಿ ಕೇಂದ್ರದ ವಿರುದ್ಧ ಬಲವಾದ ಒತ್ತಡ ಹಾಕಬೇಕು. ರೈತರಿಗಾಗಿ ಒಟ್ಟಾಗಿ ಕೆಲಸ ಮಾಡಬೇಕೆಂದು ಸಚಿನ್ ಪೈಲಟ್ ಹೇಳಿದ್ದಾರೆ.