ನಾವೇಕೆ ಯೇಸು(ಅ)ರನ್ನು ಪ್ರೀತಿಸಬೇಕು?

0
972

ಖದೀಜ ನುಸ್ರತ್, ಅಬುಧಾಬಿ

ಈಸಾ(ಅ) ರನ್ನು ಇಂಗ್ಲೀಷ್ ನಲ್ಲಿ ಜೀಸಸ್, ಕನ್ನಡದಲ್ಲಿ ಯೇಸು ಎಂದು ಹೇಳಲಾಗುತ್ತದೆ. ಪವಿತ್ರ ಕುರ್ ಆನ್ ನಲ್ಲಿ ಈಸಾ ಎಂದೇ ಹೇಳಲಾಗಿದೆ. ಏಕೆಂದರೆ ಅದು ಅವರ ಹುಟ್ಟುನಾಮವಾಗಿದೆ. ಅವರು ಅಲ್ಲಾಹನ ಪ್ರವಾದಿ ಆಗಿದ್ದರು. ಮುಸ್ಲಿಮರು ಅವರ ಹೆಸರು ಹೇಳುವಾಗ ಗೌರವಾನ್ವಿತವಾಗಿ ಅಲೈಹಿಸ್ಸಲಾಮ್ (ಅವರ ಮೇಲೆ ಶಾಂತಿಯಿರಲಿ)ಎಂದು ಹೇಳುತ್ತೇವೆ. ಈಸಾ(ಅ) ರವರು ಊಲುಲ್ ಅಝ್ಮಿ ಎಂದು ಕರೆಯಲ್ಪಡುವ ಐದು ಶ್ರೇಷ್ಠ ಪ್ರವಾದಿಯವರಲ್ಲಿ ಒಬ್ಬರಾಗಿದ್ದಾರೆ. ಪವಿತ್ರ ಕುರ್ ಆನ್ ನಲ್ಲಿ ಮುಹಮ್ಮದ್(ಸ)ರ ಹೆಸರನ್ನು ಐದು ಬಾರಿ ಪ್ರಸ್ತಾಪಿಸಿದ್ದರೆ ಈಸಾ(ಅ) ರ ಹೆಸರನ್ನು 25 ಬಾರಿ ಪ್ರಸ್ತಾಪಿಸಲಾಗಿದೆ. ಅದು ಕುರ್ ಆನ್ ಅವತೀರ್ಣ ಕಾಲದಲ್ಲಿ ಈಸಾ(ಅ)ರ ಬಗ್ಗೆ ಇದ್ದ ಸಂಶಯಗಳನ್ನು ನಿವಾರಿಸಲಿಕ್ಕಾಗಿರಬಹುದು. ಈಸಾ(ಅ) ರ ಮೇಲೆ ಹಾಗೂ ಅವರಿಗೆ ಅವತೀರ್ಣಗೊಂಡ ಇಂಜೀಲ್ ನ ಮೇಲೆ ವಿಶ್ವಾಸವಿರಿಸಬೇಕಾದುದು ಕಡ್ಡಾಯವಾಗಿದೆ. ಈಸಾ(ಅ) ರ ಕುರಿತು ಕುರ್ ಆನ್ ಸೂಕ್ತ

“ಓ ಈಸಾ, ನಾನೀಗ ನಿನ್ನನ್ನು ಹಿಂದಕ್ಕೆ ಪಡಕೊಳ್ಳುವೆನು ಮತ್ತು ನಿನ್ನನ್ನು ನನ್ನ ಕಡೆಗೆ ಎತ್ತಿಕೊಳ್ಳುವೆನು…” (ಆಲಿ ಇಮ್ರಾನ್: 55)
“ಅವರು ಅವರನ್ನು (ಈಸಾರನ್ನು) ವಧಿಸಲೂ ಇಲ್ಲ, ಶಿಲುಬೆಗೇರಿಸಲೂ ಇಲ್ಲ…”(ಅನ್ನಿಸಾ: 157)

ಈಸಾ(ಅ) ಪುನಃ ಭೂಮಿಗೆ ಮರಳುವರು ಎಂದು ವಿಶ್ವಾಸವಿರಿಸದೆ ಮುಸ್ಲಿಮನಾಗಲು ಸಾಧ್ಯವಿಲ್ಲ.

ಈಸಾ(ಅ) ಮತ್ತು ಮರ್ಯಮ್ ರಿಗೆ ಅನೇಕ ಪವಾಡಗಳನ್ನು ಅಲ್ಲಾಹನು ನೀಡಿದ್ದನು. ಈಸಾ(ಅ)ರ ಪಿತೃರಹಿತ ಜನನವು ಒಂದು ಅತ್ಯದ್ಭುತ ಪವಾಡವಾಗಿದೆ. ಕುರ್ ಆನಿನಲ್ಲಿ ಅವರನ್ನು ಮರ್ಯಮರ ಪುತ್ರ ಈಸಾ ಎಂದೇ ಕರೆಯಲಾಗಿದೆ. ” ಅವರು, ಅಲ್ಲಾಹನು ಮರ್ಯಮರ ಕಡೆಗೆ ಕಳುಹಿಸಿದ ಒಂದು ಫರಮಾನು (ಆಜ್ಞೆ) ಆಗಿದ್ದರು. ಮತ್ತು ಅಲ್ಲಾಹನ ಕಡೆಯಿಂದ (ಮರ್ಯಮರ ಗರ್ಭಾಶಯದಲ್ಲಿ ರೂಪ ಧಾರಣ ಮಾಡಿದ) ಒಂದು ಆತ್ಮವಾಗಿದ್ದರು.” (ಸೂರ ಅನ್ನಿಸಾ:171)

ಈಸಾ(ಅ) ತೊಟ್ಟಿಲಿನಲ್ಲಿರುವಾಗಲೇ ಮಾತನಾಡುತ್ತಿದ್ದರು. ಅವರು ಆಡಿದಂತಹ ಪ್ರಥಮ ಮಾತು, “ನಾನು ಅಲ್ಲಾಹನ ದಾಸ. ಅವನು ನನಗೆ ಗ್ರಂಥವನ್ನು ನೀಡಿದನು. ಪ್ರವಾದಿಯನ್ನಾಗಿ ಮಾಡಿದನು.”(ಮರ್ಯಮ್: 30)

ಈಸಾ(ಅ) ರ ಕಾಲವು ಎಲ್ಲೆಲ್ಲೂ ರೋಗಗಳು ಹರಡಿದ್ದ ಹಾಗೂ ಜನರು ವೈದ್ಯಕೀಯ ಶಾಸ್ತ್ರದಲ್ಲಿ ಹೆಮ್ಮೆಪಡುತ್ತಿದ್ದಂತಹ ಕಾಲವಾಗಿತ್ತು. ಹುಟ್ಟು ಕುರುಡರನ್ನೂ ಕುಷ್ಠರೋಗಿಗಳನ್ನೂ ಅಲ್ಲಾಹನ ಅಪ್ಪಣೆಯಿಂದ ಗುಣಪಡಿಸುತ್ತಿದ್ದರು. ಅಲ್ಲಾಹನ ಅಪ್ಪಣೆಯಿಂದ ಸತ್ತವರನ್ನು ಜೀವಂತಗೊಳಿಸುತ್ತಿದ್ದರು. ಪಕ್ಷಿರೂಪದ ಆಕೃತಿ ಮಾಡಿ ಉಸಿರೂದಿದಾಗ ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗುತ್ತಿತ್ತು.

ಈಸಾ(ಅ)ರ ಮಾತೆ ಮೇರಿಯನ್ನು ಕುರ್ ಆನ್ ನಲ್ಲಿ ಮರ್ಯಮ್ ಎಂಬ ಹೆಸರಿನಲ್ಲಿ ಪ್ರಸ್ತಾಪಿಸಲಾಗಿದೆ. ಅವರು ಪವಿತ್ರ ಕುರ್ ಆನ್ ನಲ್ಲಿ ಹೆಸರನ್ನು ಪ್ರಸ್ತಾಪಿಸಲಾದ ಏಕೈಕ ಮಹಿಳೆಯಾಗಿದ್ದಾರೆ. ಅವರ ಹೆಸರಿನಲ್ಲಿ ಒಂದು ಅಧ್ಯಾಯವೇ ಇದೆ. ಮರ್ಯಮರ ತಾಯಿಯು ಅವರನ್ನು ಅಲ್ಲಾಹನಿಗೆ ಹರಕೆಯಾಗಿ ಒಪ್ಪಿಸಿದ ಮತ್ತು ಅಲ್ಲಾಹನು ಸ್ವೀಕರಿಸಿದ ಶಿಶುವಾಗಿದ್ದರು. ಝಕರಿಯ್ಯಾ(ಅ) ಅವರ ಸಂರಕ್ಷಕರಾಗಿದ್ದರು.  ಝಕರಿಯ್ಯಾ(ಅ) ಅವರ ಕೊಠಡಿಗೆ ಪ್ರವೇಶಿಸಿದಾಗಲೆಲ್ಲಾ ಅಲ್ಲಿ ಅಲ್ಲಾಹನಿಂದ ಬಂದಂತಹ ಭಕ್ಷ್ಯ ಪದಾರ್ಥಗಳನ್ನು ಕಾಣುತ್ತಿದ್ದರು.

ಇಮ್ರಾನನ ಪುತ್ರಿ ಮರ್ಯಮರು ಪವಿತ್ರ ಕುರ್ ಆನ್ ನಲ್ಲಿ ಸತ್ಯವಿಶ್ವಾಸಿಗಳಿಗೆ ಮಾದರಿ ಎಂದು ತಿಳಿಸಲಾಗಿರುವ ಮಹಿಳೆಯಾಗಿದ್ದಾರೆ. ಅವರು ಅವಿವಾಹಿತ ಸ್ತ್ರೀಯಾಗಿದ್ದರು. ಅವರು ತಮ್ಮ ಮಾನವನ್ನು ಕಾಪಾಡಿಕೊಂಡಿದ್ದರು.  ದೇವಚರರು ಮರ್ಯಮರಿಗೆ ಹೇಳಿದ ಮಾತು, “ಓ ಮರ್ಯಮ್, ಅಲ್ಲಾಹನು ನಿನ್ನನ್ನು ಪುನೀತಳನ್ನಾಗಿ ಮಾಡಿದನು ಮತ್ತು ನಿನಗೆ ಪರಿಶುದ್ಧತೆ ನೀಡಿದನು ಮತ್ತು ಸಮಸ್ತ ಲೋಕದ ಸ್ತ್ರೀಯರ ಮೇಲೆ ನಿನಗೆ ಶ್ರೇಷ್ಠತೆ ದಯಪಾಲಿಸಿ ತನ್ನ ಸೇವೆಗಾಗಿ ಆಯ್ದುಕೊಂಡನು.” (ಆಲಿ ಇಮ್ರಾನ್: 42)