ಉಳ್ಳಾಲದಲ್ಲೊಬ್ಬರು ನೀರಿನ ಸಾಬ್: ಉಚಿತವಾಗಿ ನೀರು ಕೊಡ್ತಾರೆ ಅಬ್ದುಲ್ ರವೂಫ್ ಮುಸ್ಲಿಯಾರ್

0
1083

ತಾರಾನಾಥ್ ಗಟ್ಟಿ ಕಾಪಿಕಾಡ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಸಾಹೇಬರೊಬ್ಬರಿದ್ದಾರೆ. ಇವರೇನು ಶ್ರೀಮಂತಿಕೆಯಿಂದ ಸಾಹೇಬರಲ್ಲ, , ಆದರೆ ಹೃದಯಂತಿಕೆಯಿಂದ ಶ್ರೀಮಂತರು. ಇವರು ಹಳೆ ಕಾಲ ಕರ್ನಾಟಕದ ನೀರಿನ ಸಾಬ್ ನಜೀರ್ ಸಾಬ್ ತರಹದ ಸಾಹೇಬರು.

ಇವರು ಉಚಿತವಾಗಿ ನೀರು ಕೊಡುವ ಹಾಜಿ ಅಬ್ದುಲ್ ಸಾಹೇಬರು. ಆ ಕಾರಣಕ್ಕಾಗಿಯೇ ಇವರು ನೀರಿನ ಸಾಹೇಬರು.

ಸಾಮಾನ್ಯವಾಗಿ ಕುಡಿಯುವ ನೀರಿನ ಮೂಲ ಇರುವರು ಒಂದು ಸಣ್ಣ ಟ್ಯಾಂಕರ್ ನೀರಿಗೆ ಕನಿಷ್ಠವೆಂದರೂ ಐವತ್ತು ರೂಪಾಯಿ ಚಾರ್ಜ್ ಮಾಡ್ತಾರೆ, ಬಳಿಕ ಟ್ಯಾಂಕರ್ ರನವರು ಈ ನೀರನ್ನು 350 ರಿಂದ ಮೇಲ್ಪಟ್ಟು ದರಕ್ಕೆ ಮಾರಾಟ ಮಾಡ್ತಾರೆ.

ಈ ಲೆಕ್ಕದ ಪ್ರಕಾರ ದಿನಕ್ಕೆ ನೂರು ಟ್ಯಾಂಕರ್ ನೀರು ಮಾರಾಟ ಮಾಡಿದರೆ ಐದು ಸಾವಿರ ರೂಪಾಯಿ ಗ್ಯಾರಂಟಿ. ಆದರೆ ಮನೆ ಬಾಗಿಲಿಗೆ ಬರುವ ಈ ವ್ಯವಹಾರವನ್ನು ಎಡಕೈಯಲ್ಲೂಯೂ ಮುಟ್ಟಲಾರರು ಈ ಸಾಹೇಬರು. ಉಳ್ಳಾಲದ ಹಾಜಿ ಅಬ್ದುಲ್ ರವೂಫ್ ಸಾಹೇಬರ ನಂಬುಗೆಯ ಪ್ರಕಾರ ನೀರು ದೇವರ ಸ್ವತ್ತು. , ಅದರಲ್ಲಿ ಎಲ್ಲರೂ ಪಾಲು ಇದೆ.

ಉಳ್ಳಾಲ ದರ್ಗಾದ ಅವರ ಪಕ್ಕದಲ್ಲಿಯೆ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್ ಅವರ ಮನೆ ಇದೆ. ಇವರ ಮನೆಯ ಕೊಳವೆ ಬಾವಿಯಲ್ಲಿ ಯಥೇಚ್ಛವಾಗಿ ನೀರಿದೆ. ಹಾಗಂತ ಅವರು ನೀರಿನ ಮಾರಾಟಕ್ಕೆ ನಿಂತಿಲ್ಲ . ದಿನಕ್ಕೆ ಕಡಿಮೆ ಅಂದರೂ 150 ಟ್ಯಾಂಕರ್ ನೀರು ಇವರ ಮನೆಯ ಬೋರ್ ವೆಲ್ ನಿಂದ ಸರಬರಾಜು ಆಗುತ್ತದೆ. ಉಳ್ಳಾಲ ನಗರ ಸಭೆಯವರು ಹಾಗೂ ಇತರ ಖಾಸಗಿ ಟ್ಯಾಂಕರ್ ನವರು ಇಲ್ಲಿಂದ ನೀರು ಸಾಗಿಸುತ್ತಾರೆ.

ಬೆಳಿಗ್ಗೆ 5 ಗಂಟೆಯಿಂದ ತಡರಾತ್ರಿ 2.00 ಗಂಟೆ ತನಕ ನಿರಂತರವಾಗಿ ನೀರು ಪೂರೈಕೆಯಾಗುತ್ತದೆ. ಬೆಳಗ್ಗಿಂದ ರಾತ್ರಿ ತನಕ ಬೊರ್ ವೆಲ್ ಮೋಟರ್ ಚಾಲು ಆಗಿರುತ್ತದೆ. ರವೂಫ್ ಸಾಹೇಬರು ನೀರಿನ ಹಣವು ಪಡೆಯುವುದಿಲ್ಲ, , ಇನ್ನೂ ವಿದ್ಯುತ್ ಬಿಲ್ ಕೂಡ ಅವರೇ ಪಾವತಿಸುತ್ತಾರೆ.

ಕಳೆದ ಮೂರು ವರ್ಷಗಳಿಂದ ರವೂಫ್ ಸಾಹೇಬರ ಮನೆಯಿಂದ ಉಚಿತವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅವರೆಂದೂ ಪ್ರಚಾರ ಬಯಸಿದವರಲ್ಲ . ನೀರು ದೇವರಿಗೆ ಸೇರಿದ್ದು, , ಅದೇನೂ ನನ್ನದಲ್ಲ, ಎಲ್ಲರಿಗೂ ಸೇರಿದ್ದು, , ಈ ಒಂದು ಸಣ್ಣ ಸೇವೆಯಿಂದ ನನ್ನ ಹಿರಿಯರಿಗೆ, ಪೂರ್ವಜರಿಗೆ ಸಂತೃಪ್ತಿಯಾಬಹುದು ಎಂದು ನನ್ನ ನಂಬಿಕೆ ಎಂದು ಅಬ್ದುಲ್ ಸಾಹೇಬರು ವಿನೀತರಾಗಿ ನುಡಿಯುತ್ತಾರೆ.

70 ರ ಹರೆಯದ ಹಾಜಿ ಅಬ್ದುಲ್ ರವೂಫ್ ಮುಸ್ಲಿಯಾರ್ ಅವರು ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಹಾಯಕ ಧರ್ಮಗುರುಗಳಾಗಿ 47 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈಗಲೂ ಅವರದು ಧಾರ್ಮಿಕ ಸೇವೆ ಮುಂದುವರಿದಿದೆ. ಊರೆಲ್ಲ ನೀರಿನ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿರುವಾಗ ಅಬ್ದುಲ್ ರವೂಫ್ ಸಾಹೇಬರು ನೀರಿನ ಸಂತನಂತೆ ಕಾಣಿಸುತ್ತಾರೆ.