ನೆರೆ ಪರಿಹಾರಕ್ಕಾಗಿ ಕುರ್ಬಾನಿಯನ್ನು ಕೈ ಬಿಡಬೇಡಿ: ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷರಿಂದ ಮನವಿ

0
870

 

ಈದುಲ್ ಅಝïಹಾ ಭೂಮಿ-ಆಕಾಶಗಳಿಂದ ವಿಪತ್ತು ಎರಗಿರುವ ಸಂದರ್ಭದಲ್ಲಿ ಬಂದಿದೆ. ದೇಶದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಪರಿಗಣಿಸಿ ಕೆಲವರು ಈ ಸಂದರ್ಭದಲ್ಲಿ ಜಾನುವಾರುಗಳ ಕುರ್ಬಾನಿಯ ಬದಲು ಬೇರಾವುದಾದರೂ ಸತ್ಕಾರ್ಯದಲ್ಲಿ ಈ ಹಣವನ್ನು ವ್ಯಯಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನೊಂದೆಡೆ, ನೆರೆರಾಜ್ಯ ಕೇರಳ ಮತ್ತು ನಮ್ಮ ರಾಜ್ಯದ ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಮಹಾಪೂರವುಂಟಾಗಿ ಜೀವ-ಸೊತ್ತುಗಳ ಅಪಾರ ನಷ್ಟವುಂಟಾಗಿದೆ. ಇದನ್ನು ಪರಿಗಣಿಸಿ ಕೆಲವರು ಕುರ್ಬಾನಿಯ ಹಣವನ್ನು ರಿಲೀಫ್‍ಗೆ ನೀಡಬೇಕೆಂಬ ಬಗ್ಗೆ ಆಲೋಚಿಸುತ್ತಿದ್ದಾರೆ.

ಈದುಲ್ ಅಝïಹಾದ ಸಂದರ್ಭದಲ್ಲೇ ಕುರ್ಬಾನಿ ನೆರವೇರಿಸಬೇಕಾದುದು ಧಾರ್ಮಿಕ ಬೇಡಿಕೆಯಾಗಿದೆ. ಈಮಾನಿನಲ್ಲಿ ಸ್ಥಿರವಾಗಿರುವ ಸಮಯ ಇದೇ ಆಗಿದೆ. ಕುರ್ಬಾನಿ ವಾಜಿಬ್ ಆಗಿರುವವರು ಕುರ್ಬಾನಿಯನ್ನು ನೆರ ವೇರಿಸಲೇಬೇಕು. ಅದು ಇತರ ಯಾವುದೇ ಸತ್ಕಾರ್ಯಕ್ಕೆ ಬದಲಿಯಲ್ಲ. ಕುರ್ಬಾನಿಯ ಹೊರತಾದ ಯಾವುದೇ ಸತ್ಕಾರ್ಯ ಅಲ್ಲಾಹನಿಗೆ ಬೇಕಿಲ್ಲವೆಂದು ಪ್ರವಾದಿ(ಸ) ಹೇಳಿದ್ದಾರೆ. ಕುರ್ಬಾನಿ ಮಾಡದವರು ನಮ್ಮ ಈದ್‍ಗಾಗೆ ಬರಬಾರದೆಂದೂ ಅವರು(ಸ) ಹೇಳಿದ್ದಾರೆ.
ಕುರ್ಬಾನಿಯ ಹಣವನ್ನು ರಿಲೀಫ್‍ಗೆ ಬಳಸುವುದು ಸರಿಯಲ್ಲ. ಅದು ಸಾಕಾಗುವುದೂ ಇಲ್ಲ. ನೆರೆ ಪೀಡಿತರಿಗೆ ಕುರ್ಬಾನಿಯ ಹಣದಿಂದ ಸಹಾಯ ಮಾಡಲಾಗದು. ನೆರೆ ಪರಿಹಾರದಲ್ಲಿ ಬಹಳ ಉತ್ಸಾಹದಿಂದ ಪಾಲುಗೊಳ್ಳಬೇಕಾಗಿದೆ. ಈದ್‍ನ ಇತರ ಖರ್ಚುಗಳನ್ನು ಕಡಿಮೆ ಮಾಡಿಯೂ ಇತರ ಹಣದಿಂದಲೂ ರಿಲೀಫ್‍ಗೆ ಹಣ ನೀಡಬೇಕು. ಅಪ್ರಾಪ್ತ ಬಾಲಕರು ಮತ್ತು ಕುರ್ಬಾನಿ ಕಡ್ಡಾಯವಲ್ಲದ ಪ್ರಾಪ್ತ ವಯಸ್ಕರ ಪರವಾಗಿ ಕುರ್ಬಾನಿ ಮಾಡದೆ ಅದರ ಹಣವನ್ನು ರಿಲೀಫ್‍ಗೆ ನೀಡುವುದು ಉತ್ತಮ.

ಒಟ್ಟಿನಲ್ಲಿ ಕೊಡಗು ಮತ್ತು ಕೇರಳ ನೆರೆಪೀಡಿತರಿಗೆ ಆದಷ್ಟು ಹೆಚ್ಚು ಸಹಾಯ ಮಾಡಬೇಕು. ಕುರ್ಬಾನಿಯ ಕಾರ್ಯವನ್ನು ಕೈ ಬಿಡಬಾರದು.