ಬಿಹಾರ: ನಿತೀಶ್ ಸರಕಾರದಲ್ಲಿ ಒಬ್ಬ ಮುಸ್ಲಿಮ್ ಶಾಸಕನೂ ಇಲ್ಲ

0
258

ಸನ್ಮಾರ್ಗ ವಾರ್ತೆ

ಪಾಟ್ನ,ನ.17: ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿ ಆಡಳಿತ ಪಾರ್ಟಿಯಲ್ಲಿ ಒಬ್ಬ ಮುಸ್ಲಿಮ್ ಶಾಸಕನೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‍ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿಯು, ಹಿಂದುಸ್ತಾನಿ ಅವಾಂ ಮೋರ್ಚ ಸೆಕ್ಯುಲರ್, ವಿಕಾಶಶೀಲ ಇನ್ಸಾನ್ ಪಾರ್ಟಿಗಳಲ್ಲಿ ಯಾವುದೇ ಮುಸ್ಲಿಂ ಶಾಸಕನಿಲ್ಲ. ಬಿಹಾರದ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ.16ರಷ್ಟಿದ್ದಾರೆ. ಮುಸ್ಲಿಮರ ಬಗ್ಗೆ ಎನ್‍ಡಿಎಯ ನಿರ್ಲಕ್ಷ್ಯ ಚುನಾವಣಾ ಫಲಿತಾಂಶ ಎತ್ತಿ ತೋರಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಾಲ್ಕು ಪಾರ್ಟಿಗಳಲ್ಲಿ ಜೆಡಿಯು 11 ಮುಸ್ಲಿಂ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿತ್ತು. ಆದರೆ ಎಲ್ಲರೂ ಸೋಲುಂಡಿದ್ದಾರೆ. ಸೋಶಲಿಸ್ಟ್ ಜಾತ್ಯತೀವಾದಿಯೆನ್ನುತ್ತಿರುವ ನಿತೀಶ್ ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಒಬ್ಬ ಮುಸ್ಲಿಂ ಶಾಸಕನೂ ಇಲ್ಲದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂತು.

ಲೋಕ್ ಜನಶಕ್ತಿ ಪಾರ್ಟಿ ಹೊರತು ಎನ್‍ಡಿಎಯಲ್ಲಿಲ್ಲದ ಇತರ ಪಕ್ಷಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗಿದೆ. ಆರ್‍ಜೆಡಿಯ 75 ಶಾಸಕರಲ್ಲಿ ಎಂಟು ಮಂದಿ ಮುಸ್ಲಿಮರಿದ್ದಾರೆ. ಕಾಂಗ್ರೆಸ್ಸಿನ 19 ಶಾಸಕರಲ್ಲಿ ನಾಲ್ಕು ಮಂದಿ ಮತ್ತು ಅಸದುದ್ದೀನ್ ಉವೈಸಿಯ ಪಾರ್ಟಿಯಲ್ಲಿ ಐದು ಮಂದಿ ಎಡಪಕ್ಷದ 16 ಮಂದಿಯಲ್ಲಿ ಒಬ್ಬ ಮುಸ್ಲಿಂ ಶಾಸಕನಿದ್ದಾನೆ. ಬಹುಸಮಾಜ್ ಪಾರ್ಟಿಯ ಒಬ್ಬ ಶಾಸಕ ಕೂಡ ಮುಸ್ಲಿಂ ಆಗಿದ್ದಾನೆ.

ಜನರ ಆಕ್ರೋಶ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದ ನಿತೀಶ್ ಸರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕೋಮು ಧ್ರವೀಕರಣದ ಭಾಷಣದಿಂದ ಲಾಭ ಪಡೆದುಕೊಂಡಿದ್ದಾರೆ‌. ಬಿಜೆಪಿ, ಜೆಡಿಯು ಎರಡೂ ಒಂದೆ ಎಂದು ಅಲ್ಪಸಂಖ್ಯಾತರು ಭಾವಿಸುವಂತಾಯಿತು. ಆದುದರಿಂದ ಅವರು ನಿತೀಶ್‍ರಿಗೆ ಮತಹಾಕಿಲ್ಲ ಎಂದು ಹಿರಿಯ ಸಮಾಜವಾದಿ ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ.