ನೋ ಕ್ರೈ ನೋ ಕ್ರೈ ಎಂದು ಅಜ್ಜ ಹೇಳುತ್ತಿದ್ದರೂ, ಮಗು ಅಳುತ್ತಿತ್ತು

0
694

ಆಯಿಷತುಲ್ ಅಫೀಫಾ

ಸೂಪರ್ ಮಾರ್ಕೆಟ್ ವೊಂದರ ತರಕಾರಿ ವಿಭಾಗದಲ್ಲಿ ತರಕಾರಿಗಳನ್ನು ತೂಕ ಮಾಡುವ ಸರತಿ ಸಾಲಿನಲ್ಲಿ ನಿಂತಿದ್ದಾಗ ಆ ಸಾಲಿನಲ್ಲಿ ನಿನ್ನೆ ,ಇಂದು ನಾಳೆಯ ದ್ಯೋತಕಗಳಾಗಿ ಅಜ್ಜ , ಮಗ ,ಮೊಮ್ಮಗಳು ನನ್ನ ಮುಂದೆ ನಿಂತಿದ್ದರು. ಮಗು ಆದರ ಕೈಯಿಂದ ನೆಲಕ್ಕೆ ಬಿದ್ದಿದ್ದ ಮಿಠಾಯಿಗಾಗಿ ಕೀರಲು ಧ್ವನಿಯಿಂದ ಅಳುತಿತ್ತು. ಅಜ್ಜ ಆಗಾಗ ತಲೆನೇವೇರಿಸುತ್ತಾ ಮಗುವನ್ನು ತಬ್ಬಿಕೊಳ್ಳುತ್ತಾ”ನೋ ಕ್ರೈ ನೋ ಕ್ರೈ” ಎಂದು ಸಮಾಧಾನ ಪಡಿಸುತ್ತಿದ್ದರು. ಅಲ್ಲಿ ಅದಕ್ಕಿಂತ ಹೆಚ್ಚಿನ ಮಾತುಕತೆ ನಡೆಯಲಿಲ್ಲ,ಮಗು ಸಹ ಅಜ್ಜನ ಮಾತಿಗೆ ಅಳುವೊಂದನ್ನು ಬಿಟ್ಟು ಬೇರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.

ಅಷ್ಟರಲ್ಲಿ ಮಗುವಿನ ತಂದೆ “ಡೋಂಟ್ ಕ್ರೈ ವೀ ವಿಲ್ ಬೈ ಅನದರ್ ಒನ್ ಅಟ್ ಕೌಂಟರ್” (ಅಳಬೇಡ ನಾವು ಕೌಂಟರ್ ನಲ್ಲಿ ಬೇರೆ ಖರೀದಿಸೋಣಾ) ಎಂದು ಮಗುವನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಅಜ್ಜನೂ ಕೂಡ ಮಗ ಹೇಳಿದ ಅದೇ ಮಾತನ್ನು ಗಿಣಿ ಪಾಠ ಒಪ್ಪಿಸುವಂತೆ ಮಗುವಿನ ಬಳಿ ಪುನಾರಾವರ್ತಿಸಿದರು.

ಅಲ್ಲಿ ಯಾವುದು ಸರಿಯಾಗಿಲ್ಲ ,ಆ ಸನ್ನಿವೇಶಕ್ಕೆ ತಕ್ಕಂತಹ ಮಾನವ ಸಹಜ ಭಾವನೆಗಳು ಅಳು ಒಂದನ್ನು ಬಿಟ್ಟು ಬೇರೆಯಾವುದು ಪ್ರಕಟವಾಗಲೇ ಇಲ್ಲ ಎಂದು ನೋಡುತ್ತಿದ್ದ ನನಗನಿಸಿತು. ಉತ್ತರ ಭಾರತೀಯರು ಅಥವಾ ಬಾಂಗ್ಲಾ ದೇಶಿಗರಂತೆ ಕಾಣುವ ಆ ಕುಟುಂಬ ತಮ್ಮ ಮುಂದಿನ ತಲೆಮಾರಿನ ಮೇಲೆ ಇಂಗ್ಲೀಷನ್ನು ಹೇರುವ ಭರದಲ್ಲಿ ತಮ್ಮ ಮೇಲೆಯೇ ಹೇರಿಕೊಂಡಿದೆ. ಮಗುವಿಗಿಂತಲೂ ಹೆಚ್ಚಾಗಿ ಅಜ್ಜನೇ ಇಂಗ್ಲಿಷ್ ನ ಪ್ರಯೋಗಕ್ಕೊಳಗಾಗಿರುವಂತೆ ಭಾಸವಾಯಿತು.

ಪ್ರೀತಿ-ಪ್ರೇಮ , ನೋವು-ನಲಿವು, ದುಃಖ,ಕೋಪ, ಸಂತೋಷ, ಬೇಸರ, ಅಸಹನೆ, ಅಸೂಯೆ ಇವು ಮನುಷ್ಯನಿಂದ ಹೊರಹೊಮ್ಮುವ ಭಾವನೆಗಳ ಕೆಲವು ಪ್ರಕಾರಗಳು, ಭಾಷೆ ಎನ್ನುವುದು ಹೃದಯದ ಭಾವಗಳನ್ನು ಪ್ರಕಟಪಡಿಸುವುದಕ್ಕಿರುವ ಸಾಧನ. ಆದರೆ ಭಾವನೆಗಳನ್ನು ಪ್ರಕಟಪಡಿಸುವ ಮಾಧ್ಯಮದಲ್ಲಿ ಹಿಡಿತವಿಲ್ಲದಿದ್ದರೆ ಪರಿಣಾಮಕಾರಿಯಾಗಿ ಪ್ರಕಟಿಸುವಲ್ಲಿ ಮತ್ತು ಅರ್ಥೈಸುವಲ್ಲಿ ಮನುಷ್ಯ ವಿಫಲನಾಗುತ್ತಾನೆ. ಹಾಗಂತ ಭಾಷೆಗೆ ಪದಗಳ ಹಂಗಿಲ್ಲ ಮೂಗರು ಆಂಗಿಕ ಭಾಷೆಯಲ್ಲಿ ತಮನ್ನು ಪ್ರಸ್ತುತ ಪಡಿಸುವುದನ್ನು ನಾವು ನೋಡಿರುತ್ತೇವೆ ಆದರೆ ಆಂಗಿಕ ಭಾಷೆಯ ಅರಿವಿಲ್ಲದವರಿಗೆ ಅದು ಪರಿಣಾಮಕಾರಿಯಾಗಿ ತಟ್ಟಲಾರದು.

ಈ ಅಜ್ಜ ಮೊಮ್ಮಗಳ ವಿಷಯದಲ್ಲೂ ನಡೆದಿರುವುದು ಅದುವೇ. ಪಾಪ ಅಜ್ಜನಿಗೆ ನೋ ಕ್ರೈ ಅನ್ನುವುದು ಬಿಟ್ಟು ಹೆಚ್ಚಿನ ಪದಗಳೇನು ಆಂಗ್ಲ ಭಾಷೆಯಲ್ಲಿ ತಿಳಿದಿಲ್ಲ,ಇಂಗ್ಲಿಷ್ ನ ಒತ್ತಡಕ್ಕೆ ಮಣಿದು ತಮ್ಮ ಭಾವನೆಗಳನ್ನು ಪದಗಳಲ್ಲಿ ಕಟ್ಟಿಕೊಡುವಲ್ಲಿ ವಿಫಲರಾಗಿದ್ದರು. ಆ ಕೊರತೆಯನ್ನು ಹೋಗಲಾಡಿಸಲೆಂಬಂತೆ ಮೊಮ್ಮಗಳನ್ನು ಆಗಾಗ ತಬ್ಬಿ ಹಣೆಗೆ ಮುತ್ತಿಡುತ್ತಾ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು. ತನಗೇನು ಬೇಕೆಂಬುವುದನ್ನು ಅರ್ಥ ಮಾಡಿಸಲು ಮೂರರ ಆಸುಪಾಸಿನ ಆ ಮಗುವಿಗೂ ಸಾಧ್ಯವಾಗಲಿಲ್ಲ ಅಲ್ಲಿ ತಲೆದೋರಿರುವುದು ಸಹ ಭಾಷೆಯ ತೊಡಕೆ.

ಆ ಕುಟುಂಬದ ಮನೆ ಭಾಷೆ ಹಿಂದಿಯಾಗಿದ್ದರೆ ನನ್ಹೀ ಪರಿಯಾಂ , ಗುಡಿಯ ರಾಣಿ , ಅಚ್ಛಾ ಬಚ್ಚಾ , ಚಂದಾ ಭೇಟಿ ಯಂತಹ ರಮಿಸುವ ಮುದ್ದು ಮುದ್ದಾದ ಪದಗಳನ್ನು ಅಜ್ಜನ ಬಾಯಿಂದ ಕೇಳ ಸಿಗುತಿತ್ತೇನೋ ಹಾಗೆ ಮೊಮ್ಮಗಳ ತೊದಲು ಮಾತುಗಳನ್ನು ಕೇಳುವ ಭಾಗ್ಯ ಅಜ್ಜನಿಗೂ ಸಿಗುತಿತ್ತು. ಆದರೆ ಆಂಗ್ಲ ಭಾಷೆಯ ತೊಡಕು ಅಜ್ಜ ಮೊಮ್ಮಗಳ ಬಾಯಿಯನ್ನು ಕಟ್ಟಿ ಹಾಕಿದೆ. ಇಂಗ್ಲಿಷ್ ನ ಹಂಗಿಲ್ಲದೆ ಬಾಲ್ಯ ಕಳೆದಿರುವ ಎಲ್ಲರಿಗೂ ತಿಳಿದಿರುತ್ತೆ ಅಜ್ಜ ಅಜ್ಜಿಯ ಮುದ್ದು ಮಾಡುವ ರೀತಿ. ಅವು ಬಾಲ್ಯ ಸಹಜ ಸುಂದರ ನೆನಪುಗಳಾಗಿ ನಮ್ಮಲ್ಲಿ ಉಳಿದಿದೆ ಆದರೆ ಆಂಗ್ಲ ಭಾಷೆಯ ತೊಡಕು ಅಜ್ಜ ಅಜ್ಜಿಯರ ಸಹಜ ಪ್ರೇಮವನ್ನು ವಂಚಿಸಿರುವುದು ಮಾತ್ರವಲ್ಲ ಯಾವ ಅಳುಕಿಲ್ಲದೆ ಇತರರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ತಡೆದು ಮಕ್ಕಳ ಬಾಲ್ಯವನ್ನು ಸಹ ಕಸಿದುಕೊಂಡಿದೆ.

22 ಭಾರತೀಯ ಭಾಷೆಗಳಿಗೆ ಸಂವಿಧಾನದಲ್ಲಿ ಮಾನ್ಯತೆ ದೊರೆತಿದೆಯಾದರು ಅದಕ್ಕಿಂತಲೂ ಹೆಚ್ಚು ಆಡುಭಾಷೆಗಳು ಭಾರತದಲ್ಲಿ ಕಾಣಸಿಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯೊಂದನ್ನೇ ಲೆಕ್ಕಕ್ಕೆ ತೆಗೆದರೆ ಸುಮಾರು ಎಂಟಕ್ಕಿಂತಲೂ ಹೆಚ್ಚು ಆಡುಭಾಷೆಗಳು ಕಾಣಸಿಗುತ್ತವೆ. ಆಡುಭಾಷೆಗಳು ಯಾವುದೇ ಲಿಪಿ ಹೊಂದಿರದಿದ್ದರೂ ಅದನ್ನು ಬಳಸುವ ಜನರಿಂದ ಬೆಳೆದು ನಿಂತಿರುವ ಭಾಷೆಗಳು.ಹಾಗಾಗಿ ಒಂದು ಭಾಷೆ ಬೆಳೆಯಲು ಮತ್ತು ಉಳಿಯಲು ಅದನ್ನು ಬಳಸುವ ಜನರು ಕಾರಣರಾಗುತ್ತಾರೆ. ದೇವಗ್ರಂಥ ಅವತೀರ್ಣವಾಗಿದ್ದರು ಹಿಬ್ರೂ ಭಾಷೆ ಅವನತಿ ಕಂಡಿರುವುದನ್ನು ನಾವಿಲ್ಲಿ ನೆನಪಿಸಬಹುದು.
2030ರ ವೇಳೆಗೆ ವಿಶ್ವದಲ್ಲಿ ಇಂಗ್ಲೀಷ್ , ಜಪಾನೀಸ್, ಕೊರಿಯನ್ ಒಳಗೊಂಡು ಕೇವಲ ಬೆರಳೆಣಿಕೆಷ್ಟು ಭಾಷೆಗಳು ಮಾತ್ರ ಉಳಿಯುತ್ತದೆಯೆಂದು ಒಂದು ಅದ್ಯಾನವು ಅಂದಾಜಿಸಿದೆ.

ಭಾಷಾ ಪ್ರೇಮದ ಬಗ್ಗೆ ಮಾತನಾಡುವಾಗ ನಮ್ಮ ನೆರೆಯ ಕೇರಳಿಗರನ್ನು ನೆನಪಿಸಲೇ ಬೇಕು ಯಾಕೆಂದರೆ ಕೊಲ್ಲಿ ರಾಷ್ಟ್ರಗಳಲ್ಲಿ ಕೇರಳಿಗರ ಭಾಷಾ ಪ್ರೇಮದ ಜಿದ್ದಿಗೆ ಮಣಿದು ಮಲಯಾಳಂನ್ನು ಆಡಳಿತದ ಉಪಭಾಷೆಯಾಗಿ ಸ್ವೀಕರಿಸಿದ್ದಾರೆ. ಸರಕಾರಿ ಕಛೇರಿಗಳಲ್ಲಿ , ಸಂಚಾರಿ ನಿಯಮಗಳ ಫಲಕಗಳಲ್ಲಿ ಮಲಯಾಳಂ ಕಾಣಸಿಗುತ್ತದೆ. ಬೇರೆ ದೇಶಗಳಿಂದ ಕೊಲ್ಲಿ ರಾಷ್ಟ್ರಕ್ಕೆ ದುಡಿಯಲು ಬಂದ ಹೆಚ್ಚಿನವರಲ್ಲಿ ಕೇರಳವೆಂದರೆ ಭಾರತದ ಒಂದು ರಾಜ್ಯವಲ್ಲ ಬದಲಾಗಿ ಸ್ವತಂತ್ರ ದೇಶವೆಂಬ ಅಭಿಪ್ರಾಯವಿದೆ.

ಸಾಮಾನ್ಯವಾಗಿ ನಮ್ಮ ಮನೆ ಭಾಷೆಯನ್ನು ಮದರ್ ಟಂಗ್, ಮಾತೃ ಭಾಷೆ ಎಂದು ಕರೆಯುತ್ತೇವೆ ಹೌದು ಮನೆ ಭಾಷೆಯೆಂಬುವುದು ತಾಯಿಯಷ್ಟೇ ಆಪ್ಯಾಯಮಾನ , ಯಾವ ಅಳುಕಿಲ್ಲದೆ ನಿಸ್ಸಂಕೋಚವಾಗಿ ತಾಯಿಯಲ್ಲಿ ನಮ್ಮ ಭಾವನೆಗಳನ್ನು ತೋರ್ಪಡಿಸಲು ಹೇಗೆ ಸಾಧ್ಯವೋ ಹಾಗೆ ಯಾವುದೇ ವ್ಯಾಕರಣದ ಹಂಗಿಲ್ಲದೆ ನಿಸ್ಸಂಕೋಚವಾಗಿ ಆಡುಭಾಷೆಯಲ್ಲಿ ಭಾವನೆಗಳನ್ನು ಪ್ರಸ್ತುತಪಡಿಸಬಹುದು. ಅಲ್ಲಿ ಪರಕೀಯತೆ ಭಾವವಿರುವುದಿಲ್ಲ ಎಲ್ಲ ನನ್ನದು ನಮ್ಮದು. ಹಾಗಾಗಿ ಮಕ್ಕಳಿಗೆ ಮನೆಭಾಷೆಯನ್ನು ಕಲಿಸಿಕೊಡುವಲ್ಲಿ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಯಾಕೆಂದರೆ ಆಂಗ್ಲ ಭಾಷೆಯನ್ನು ಕಲಿಸಲು ಶಾಲೆ ಇನ್ನಿತರ ಸಂಸ್ಥೆಗಳಿವೆ ಮತ್ತು ಕಲಿಯುವತ್ತ ಮಕ್ಕಳು ವಿಫುಲ ಅವಕಾಶಗಳನ್ನು ಹೊಂದಿದ್ದಾರೆ. ಆದರೆ ಮನೆಭಾಷೆಯನ್ನು ಕಲಿಸಲು ಯಾವುದೇ ಸಂಸ್ಥೆಗಳಿಲ್ಲ ಮನೆಯವರೇ ಅದನ್ನು ಕಲಿಸಬೇಕಾಗುತ್ತದೆ.
ನಿನ್ನೆ ಮತ್ತು ನಾಳೆಯ ನಡುವಿರುವ ಭಾಷೆಯ ತೊಡಕನ್ನು ಹೋಗಲಾಡಿಸಿ ಹಿರಿಯರ ಪ್ರೀತಿ ವಂಚಿತರನ್ನಾಗಿ ಮಾಡದೆ ಯಾವ ಅಳುಕಿಲ್ಲದೆ ಮುಕ್ತವಾಗಿ ಬೆರೆಯಲು ಅವಕಾಶ ಮಾಡಿಕೊಟ್ಟು ಚಿರಕಾಲ ನೆನಪಿನಲ್ಲುಳಿಯುವ ಸುಂದರ ಬಾಲ್ಯವನ್ನು ನಮ್ಮ ಮಕ್ಕಳಿಗೆ ಒದಗಿಸಿಕೊಡಬೇಕು.

ಇಂಗ್ಲೀಷ್ ಮಾತ್ರ ಸುಸಂಸ್ಕೃತ ಭಾಷೆ ನಾಗರಿಕತೆಯ ಲಕ್ಷಣ ಎಂಬ ಅಭಿಪ್ರಾಯ ಹೆಚ್ಚಿನವರಲ್ಲಿ ಅಚ್ಚೋತ್ತಿ ಬಿಟ್ಟಿದೆ.ಇಂಗ್ಲಿಷ್ನಲ್ಲಿ ಮಾತಾನಾಡಿದರೆ ಶ್ರೇಷ್ಠ ಬೇರೆ ಭಾಷೆ ಕನಿಷ್ಠ ಎಂಬ ಭಾವನೆಯಿದೆ. ಹಾಗಾಗಿ ಮಕ್ಕಳನ್ನು ಶ್ರೇಷ್ಠರನ್ನಾಗಿ ರೂಪಿಸುವಲ್ಲಿ ಆಂಗ್ಲ ಭಾಷೆಯ ಹೇರಿಕೆಯಾಗುತ್ತಿದೆ. ಇಂದು ಸಿವಿಲೈಸ್ಡ್ ಲ್ಯಾಂಗ್ವೇಜ್ ಎಂದು ಕರೆಯಲ್ಪಡುವ ಇಂಗ್ಲೀಷ್ ಒಂದು ಕಾಲದಲ್ಲಿ ಬಡವರ ಭಾಷೆಯಾಗಿ ,ಆಡು ಭಾಷೆಯಾಗಿ ಮಾತ್ರ ಪ್ರಚಲಿತದಲ್ಲಿತ್ತು.

ಐದನೇ ಶತಮಾನದಲ್ಲಿ ಡೆನ್ಮಾಕ್ ಮತ್ತು ಉತ್ತರ ಜರ್ಮನಿಯಿಂದ ಇಂಗ್ಲೆಂಡ್ ಗೆ ವಲಸೆ ಬಂದ ಬುಡಕಟ್ಟು ಜನಾಂಗಳಾದ ಸ್ಯಾಕ್ಸನ್ ಮತ್ತು ಜೂಟರ ಮೂಲಕ ಈ ಭಾಷೆ ಪ್ರವರ್ಧಮಾನಕ್ಕೆ ಬಂದು ಮುಂದೆ ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳ ಶಬ್ದಗಳನ್ನು ಸೇರಿಸಿಕೊಂಡು ಹನ್ನೆರಡನೇ ಶತಮಾನಕ್ಕಾಗುವಾಗ ಸಮೃದ್ಧ ಭಾಷೆಯಾಗಿ ಬೆಳೆಯಿತೆಂಬುವುದು ಆಂಗ್ಲ ಭಾಷೆಯ ಮೂಲ ಹುಡುಕಿದರೆ ತಿಳಿದುಬರುತ್ತದೆ. ಹೀಗೆ ವಲಸೆಗಾರ ಬುಡಕಟ್ಟು ಜನಾಂಗದ ಭಾಷೆಯಾಗಿದ್ದ ಇಂಗ್ಲೀಷನ್ನು ಯೂರೋಪಿನ ಜನ ತಮ್ಮ ಬಳಿಗೆ ಸೇರಿಸಿಕೊಳ್ಳದೆ ನಿಕೃಷ್ಟವಾಗಿ ಕಾಣುತ್ತಿದ್ದರು. ಒಂದು ಭಾಷೆಯ ಸಮೃದ್ಧತೆಗೆ ಆ ಭಾಷೆಯಲ್ಲಿ ಬೆಳೆದಿರುವ ಸಾಹಿತ್ಯ ಕನ್ನಡಿಯಾಗಿದೆ.

ಇನ್ನು ಇಂಗ್ಲಿಷ್ ನ ವಿಷಯಕ್ಕೆ ಬಂದರೆ ಆಂಗ್ಲ ಭಾಷೆಯಲ್ಲಿ ಗಂಭೀರ ಸಾಹಿತ್ಯ ಆರಂಭವಾದದ್ದೆ ಹನ್ನೆರಡನೇ ಶತಮಾನದ ನಂತರ.ಆದರೆ ಭಾರತೀಯ ಭಾಷೆಯ ಸಾಹಿತ್ಯಗಳು ಅತೀ ಪುರಾತನವಾದದ್ದು. ನಮ್ಮ ಕರ್ನಾಟಕ ಭಾಷೆ ಕನ್ನಡವನ್ನೇ ನೋಡಿದರೆ , ಕನ್ನಡದ ಪ್ರಬುದ್ಧ ಅಲಂಕಾರ ಗ್ರಂಥ ‘ಕವಿರಾಜ ಮಾರ್ಗ’ದ ಕಾಲ ಒಂಬತ್ತನೇ ಶತಮಾನ ಈ ಗ್ರಂಥ ರಚನೆಯಾಗುವ ಕಾಲಕ್ಕೆ ಕನ್ನಡ ಪ್ರೌಢ ಭಾಷೆಯಾಗಿ ಬೆಳೆದಿತ್ತು. ಆದರೆ ಆ ಕಾಲದಲ್ಲಿ ಇಂಗ್ಲೀಷ್ ಆಡುಭಾಷೆಯಾಗಿತ್ತೇ ಹೊರತು ಸಾಹಿತ್ಯಿಕವಾಗಿ ಬೆಳೆದಿರಲಿಲ್ಲ.

ಇಂಗ್ಲೀಷ್ ಜಗತ್ತಿನಾದ್ಯಂತ ಪಸರಿಸಲು ನೇರ ಕಾರಣ ಸೂರ್ಯ ಅಸ್ತಮಿಸದ ನಾಡಿನವರ ವಸಾಹತುಶಾಹಿ ಆಡಳಿತ. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿದ ಮೆಕಾಲೆ ಭಾರತದಲ್ಲಿ ಕಪ್ಪು ಚರ್ಮದ ಬ್ರಿಟೀಷರನ್ನು ಉತ್ಪಾದಿಸುತ್ತೇನೆ ಎಂದಿದ್ದನಂತೆ. ಆಡುಭಾಷೆಯೊಂದು ಹೇರಳವಾಗಿ ಬಳಸುವುದರಿಂದ ಹೇಗೆ ಮುಖ್ಯವಾಹಿನಿಯಲ್ಲಿ ಗಣ್ಯ ಸ್ಥಾನ ಪಡೆದುಕೊಳ್ಳಬಹುದೆಂಬುವುದಕ್ಕೆ ಒಂದು ಕಾಲದಲ್ಲಿ ಆಡುಭಾಷೆಯಾಗಿದ್ದ ಇಂದು ನಾಗರಿಕ ಭಾಷೆಯೆನಿಸಿಕೊಂಡಿರುವ ಆಂಗ್ಲಭಾಷೆಯೇ ಸಾಕ್ಷಿ.

ಹಾಗಂತ ಇತರ ಭಾಷೆಗಳು ಅಮುಖ್ಯವೆಂದಲ್ಲ ಸಾದ್ಯವಾದರೆ ಹೆಚ್ಚೆಚ್ಚು ಭಾಷೆಗಳನ್ನು ಕಲಿಯಲು ಪ್ರಯತ್ನಿಸಬೇಕು ಇದು ಅಲ್ಜೈಮರ್ ನಂತಹ ರೋಗಗಳು ಬಾಧಿಸುವುದನ್ನು ತಡೆಯುತ್ತದೆ.ಹಾಗೆ ಒಂದು ಭಾಷೆಯ ಸಂಪನ್ಮೂಲಗಳಾದ ಜ್ಞಾನ , ಸಾಹಿತ್ಯ , ವಿಜ್ಞಾನ ಮುಂತಾದ ವಿಚಾರಗಳು ಮಾನವನ ಅಭಿವೃದ್ಧಿಗೆ ಅಗತ್ಯ . ಹಾಗಂತ ನಮ್ಮ ಮನೆ ಭಾಷೆಯನ್ನು ಚಟ್ಟಕೇರಿಸಿಯಲ್ಲ ನಮ್ಮತನ ,ಭಾಷೆ , ನಮ್ಮ ಸಂಸ್ಕೃತಿಯನ್ನು ಉಳಿಸುವುದು ಸಹ ನಮ್ಮ ಕರ್ತವ್ಯ. ಇಂಗ್ಲೀಷ್ ಭಾಷೆಯನ್ನು ಕೇವಲ ಭಾಷೆಯಾಯಾಗಿ ಮಾತ್ರ ನೋಡುವ ಹೊರತು ಬುದ್ಧಿಮತ್ತೆಯನ್ನು ಅಳೆಯುವ ಮಾನದಂಡವಾಗಿಯಲ್ಲ.