ಚೆನ್ನೈಯಲ್ಲಿ ನೀರಿನ ಬರ: 4000 ಲೀಟರ್ ನೀರಿಗೆ 30 ಸಾವಿರ ರೂಪಾಯಿ

0
856

ಚೆನ್ನೈ, ಜೂ.18: ತಮಿಳ್ನಾಡಿನಲ್ಲಿ ನೀರಿನ ಕೊರತೆ ತೀವ್ರಗೊಂಡಿದ್ದು ಕುಡಿಯುವ ನೀರು ಅಭಾವದಿಂದ ರಾಜ್ಯಾದ್ಯಂತ ಜನರು ಖಾಲಿ ಕೊಡದೊಂದಿಗೆ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನೀರಿನ ಅಭಾವ ಪರಿಹರಿಸಲು ಸರಕಾರ ಫಲಪ್ರದವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೆಚ್ಚಿನ ಕಡೆ ಕಾನೂನು ಶಿಸ್ತು ಸಮಸ್ಯೆ ತಲೆದೋರುವ ಸ್ಥಿತಿ ನಿರ್ಮಾಣವಾಗಿದೆ.

ಮೂರು ವರ್ಷಗಳಿಂದ ಮಳೆ ಕಡಿಮೆ ಸುರಿದಿದೆ. ಹೊಳೆ, ಕೊಳ ಸಹಿತ ಎಲ್ಲಾ ಜಲಾಶಯಗಳು ಬತ್ತಿಹೋಗಿವೆ. ಗ್ರಾಮಗಳಲ್ಲಿ ಮೈಲುಗಟ್ಟಲೆ ನಡೆದು ಹೋಗಿ ನೀರು ಸಂಗ್ರಹಿಸಿ ತರಬೇಕಾದ ಪರಿಸ್ಥಿತಿ ನೆಲೆಸಿದೆ. ಇದರ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ಕೇಳಿ ಬರುತ್ತಿದೆ. ಸಾರ್ವಜನಿಕ ನಲ್ಲಿ ಮತ್ತು ಕುಡಿಯುವ ನೀರು ಸರಬರಾಜು ಮಾಡುವ ಸ್ಥಳಗಳಲ್ಲಿ ಜನರು ನೆರೆಯುತ್ತಿದ್ದು ಘರ್ಷಣೆ ಸಾಮಾನ್ಯವಾಗುತ್ತಿದೆ. ಶ್ರೀಮಂತರು ಖಾಸಗಿ ಸಂಸ್ಥೆಗಳ ಟ್ಯಾಂಕರ್ ನಿಂದ ನೀರು ಖರೀದಿಸುತ್ತಿದ್ದಾರೆ. ಚೆನ್ನೈಯಲ್ಲಿ 4000 ಲೀಟರ್ ನೀರಿಗೆ 25,000 ರೂಪಾಯಿಯಿಂದ 30,00೦ ರೂಪಾಯಿ ದರ ವಿಧಿಸಲಾಗುತ್ತಿದೆ. ಚೆನ್ನೈಯ ಮೆಟ್ರೊ ವಾಟರ್ ಅಥಾರಿಟಿ ಎರಡು ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದೆ. ಅದು ಕೂಡ ಒಂದೆರಡು ಗಂಟೆಗಳ ಕಾಲ ಮಾತ್ರ.

ಆದ್ದರಿಂದ ಚೆನ್ನೈಯಲ್ಲಿ ವಾಸಿಸುತ್ತಿರುವ ಕುಟುಂಬಗಳು ನಗರ ತೊರೆದು ಸಂಬಂಧಿಕರ,ಗೆಳೆಯರ ಮನೆಗೆ ಹೋಗುತ್ತಿದ್ದಾರೆ. ಕೆಲವು ದಿವಸಗಳಿಂದ ತೀಕ್ಷ್ಣ ಬೇಸಿಗೆ ತಮಿಳ್ನಾಡನ್ನು ಕಾಡುತ್ತಿದೆ. ನೀರಿನ ಅಭಾವ ನಿವಾರಣೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಮಿಳ್ನಾಡು ಸಚಿವ ಎಸ್‍ಪಿ ವೇಲುಮಣಿ ತಿಳಿಸಿದರು. ಸಮಸ್ಯೆ ಪರಿಹಾರಕ್ಕಾಗಿ 233.72 ಕೋಟಿ ರಊಪಾಯಿ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಮಾತ್ರವಲ್ಲ 900 ಟ್ಯಾಂಕರ್ ಗಳಲ್ಲಿ 9100 ಟ್ರಿಪ್‍ಗಳ ಮೂಲಕ ಜನರು ವಾಸಿಸುವ ಸ್ಥಳಗಳಲ್ಲಿ ನೀರು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಕಾವೇರಿ ನೀರು ಪ್ರಾಧಿಕಾರ ತಮಿಳ್ನಾಡಿಗೆ ಕೊಡಬೇಕಾದ ನೀರು ಬಿಟ್ಟು ಕೊಟ್ಟರೂ ಕರ್ನಾಟಕ ಅದನ್ನು ಪಾಲಿಸಿಲ್ಲ ಎಂದು ಸಚಿವರು ಹೇಳಿದರು.