ಸಂಬಳ ಕೇಳಿದ್ದಕ್ಕೆ ಯುವತಿಗೆ ನಡು ರಸ್ತೆಯಲ್ಲಿ ಥಳಿತ!

0
122

ಹೊಸದಿಲ್ಲಿ,ಮೇ 13: ಉತ್ತರಪ್ರದೇಶದ ಗ್ರೇಟರ್ ನೊಯಿಡದಲ್ಲಿ ಸಂಬಳ ಕೇಳಿದ ಯುವತಿಯನ್ನು ಯುವಕರು ಸೇರಿ ಕ್ರೂರವಾಗಿ ಹೊಡೆದ ಘಟನೆ ವೈರಲಾಗಿದೆ. ನೊಯಿಡಾದ ನಾಲೇಜ್ ಪಾರ್ಕಿನಲ್ಲಿ ಈ ಘಟನೆ ನಡೆದಿದ್ದು ಸೆಲೂನ್‍ನಲ್ಲಿ ಕೆಲಸ ಮಾಡುವ ಯುವತಿಗೆ ಯುವಕರ ಗುಂಪು ಥಳಿಸಿತ್ತು. ತಿಂಗಳ ಸಂಬಳ ತಡವಾಗಿದ್ದನ್ನು ಯುವತಿ ಪ್ರಶ್ನಿಸಿದಳು. ಅಂಗಡಿ ಮಾಲಕ ಮತ್ತು ಇತರ ಕೆಲಸಗಾರರು ಅವಳನ್ನು ನಿಂದಿಸಿ ಕೂದಲು ಹಿಡಿದು ಎಳೆದಾಡಿದರು. ನಂತರ ಕ್ರೂರವಾಗಿ ಚಾಟಿಯಿಂದ ಹೊಡೆದು ರಸ್ತೆಗೆ ಎಳೆದು ಹಾಕಿ ತುಳಿದರು. ಈ ದೃಶ್ಯವೀಗ ಹೊರಬಂದು ವೈರಲಾಗಿದೆ. ರಸ್ತೆಯಲ್ಲಿ ಸೇರಿದ ಜನರಲ್ಲಿ ಕೆಲವರು ದುಷ್ಕರ್ಮಿ ಯುವಕರನ್ನು ದೂರ ಸರಿಸಲು ಶ್ರಮಿಸುತ್ತಿದ್ದರೂ ಅವರು ಪುನಃ ಯುವತಿಗೆ ಹೊಡೆದಿದ್ದಾರೆ. ಒಬ್ಬ ಕತ್ತಿಯನ್ನು ಹಿಡಿದು ಓಡಿ ಬರುತ್ತಿರುವುದು ಕೂಡ ಕಂಡು ಬಂದಿದೆ. ಗಂಭೀರ ಗಾಯಗೊಂಡ ಯುವತಿ ಸ್ವಯಂ ನಾಲೇಜು ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಪೊಲೀಸರು ಈವರೆಗೂ ದುಷ್ಕರ್ಮಿಗಳನ್ನು ಬಂಧಿಸಿಲ್ಲ. ವೀಡಿಯೊ ವೈರಲ್ ಆದ ಬಳಿಕ ಘಟನೆಯ ಕುರಿತು ತನಿಖೆ ನಡೆಸೊ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.