ಓದದೆಯೇ ಆಡುವ ಮಾತು ಮತ್ತು ಭಾವುಕ ಗುಂಪು

0
1078

ಸನ್ಮಾರ್ಗ ಸಂಪಾದಕೀಯ

ಸಂಘಪರಿವಾರದಿಂದ ಹೊರಬಂದ ಮೂವರು ಪ್ರಮುಖ ನಾಯಕರು ಮಂಗಳೂರಿನಲ್ಲಿ ನಡೆದ ಜನನುಡಿ ಸಾಹಿತ್ಯದ ವೇದಿಕೆಯಲ್ಲಿ ತಮ್ಮ ಗತ ಬದುಕನ್ನು ಮೆಲುಕು ಹಾಕಿಕೊಂಡಿದ್ದಾರೆ. ಅವರ ಮೆಲುಕು ಎಷ್ಟು ಆಘಾತಕಾರಿಯಾದ ವಿಷಯಗಳನ್ನು ಒಳಗೊಂಡಿತ್ತೆಂದರೆ, ಅವರ ಮಾತಿನಿಂದ ಪ್ರಚೋದಿತವಾಗಿ ಈ ಹಿಂದೆ ನ್ಯಾಯಬಾಹಿರ ಕೃತ್ಯಗಳಲ್ಲಿ ಭಾಗಿಯಾದ ಗುಂಪು ಎಷ್ಟು ಅಮಾಯಕವಾದುದು ಎಂದು ಸ್ಪಷ್ಟವಾಗುತ್ತದೆ. ಭಜರಂಗದಳದ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, ನಮೋ ಬ್ರಿಗೇಡ್‍ನ ನಿಕೇತ್ ರಾಜ್ ಮೌರ್ಯ ಮತ್ತು ಸುಧೀರ್ ಮರೊಳ್ಳಿ ಇವರೇ ಆ ಮೂವರು. ಗುಜರಾತ್‍ಗೆ ಭೇಟಿಯನ್ನು ಕೊಡದೆಯೇ ಮತ್ತು ವಿವೇಕಾನಂದರ ಬಗ್ಗೆ ಏನನ್ನೂ ಓದದೆಯೇ ಗುಜರಾತ್‍ನ ಅಭಿವೃದ್ಧಿಯನ್ನು ಮತ್ತು ವಿವೇಕಾನಂದರ ವಿಚಾರಧಾರೆಯನ್ನು ಜನರ ಮುಂದೆ ಭಾವನಾತ್ಮಕ ಹೇಳುತ್ತಿದ್ದುದಾಗಿ ಅವರು ಒಪ್ಪಿಕೊಂಡರು. ಕ್ಷಮೆ ಯಾಚಿಸಿದರು. ತಮ್ಮ ಮಾತುಗಳಿಂದ ಪ್ರಚೋದಿತವಾಗುತ್ತಿದ್ದ ಕಾರ್ಯಕರ್ತರಿಗೆ ಅಧ್ಯಯನರಹಿತವಾದ ತಮ್ಮ ಮಾತುಗಳೇ ವೇದವಾಕ್ಯಗಳಾಗಿದ್ದುವು ಎಂಬ ಧಾಟಿಯಲ್ಲಿ ಅವರು ಮಾತಾಡಿದರು.

ಇವತ್ತಿನ ಬಹುದೊಡ್ಡ ದುರಂತ ಇದು. ಓದು ಇಲ್ಲ. ಅಧ್ಯಯನ ಇಲ್ಲ. ತಾವು ಆಲಿಸುತ್ತಿರುವ ಮಾತುಗಳು ನಿಜವೋ ಸುಳ್ಳೋ ಎಂಬುದನ್ನು ಒರೆಗೆ ಹಚ್ಚಿ ನೋಡುವ ತಿಳುವಳಿಕೆಯೂ ಈ ಗುಂಪಿನಲ್ಲಿ ಇರುವುದಿಲ್ಲ. ರಾಜಕೀಯಕ್ಕೆ ಬೇಕಾಗಿರುವುದು ಇಂಥ ಜನಸಮೂಹವೇ. ಒಂದುವೇಳೆ, ವಿವೇಕಾನಂದರನ್ನು ಓದಿಕೊಂಡ ಯಾರೇ ಆಗಲಿ, ಅವರನ್ನು ಒಂದು ಧರ್ಮದ ವೈರಿಯಾಗಿ ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಅವರು ಇಸ್ಲಾಮನ್ನು ಗೌರವಿಸಿದರು. ಮೆಚ್ಚಿಕೊಂಡರು. ಕ್ರೈಸ್ತ ಧರ್ಮದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಹಿಂದೂ ಧರ್ಮದ ಮೇಲೆ ನಿಷ್ಠೆಯನ್ನೂ ವ್ಯಕ್ತಪಡಿಸಿದರು. ಇದು ನಿಜವಾದ ವಿವೇಕಾನಂದ. ಅವರನ್ನು ಅರಿತುಕೊಳ್ಳುವುದಕ್ಕೆ ಅನೇಕಾರು ಪುಸ್ತಕಗಳಿವೆ. ಅವರೋರ್ವ ಶ್ರದ್ಧಾವಂತ ಹಿಂದು. ಅವರಿಗೆ ಈ ದೇಶದಲ್ಲಿರುವ ಹಿಂದೂಯೇತರ ಧರ್ಮಗಳು ಎಂದೂ ಅಡ್ಡಿಯಾಗಿರಲಿಲ್ಲ. ಈ ಧರ್ಮಗಳ ಆಚರಣೆಗಳು; ಇಗರ್ಜಿ, ಮಸೀದಿ, ಬಸದಿಗಳು ಅವರನ್ನು ವ್ಯಾಕುಲಕ್ಕೆ ಒಳಪಡಿಸಿಯೂ ಇರಲಿಲ್ಲ. ಅವರು ಇಸ್ಲಾಮಿನ ಸಮಾನತೆಯ ಚಿಂತನೆಯಿಂದ, ಕ್ರೈಸ್ತರ ಸೇವಾ ಮನೋಭಾವದಿಂದ ಬಹಳವೇ ಪ್ರಭಾವಿತಗೊಂಡಿದ್ದರು. ವಿವೇಕಾನಂದರ ಬದುಕನ್ನು ಅಧ್ಯಯನ ನಡೆಸಿದರೆ, ಅವರ ಉದಾರವಾದಿ ವಿಚಾರಧಾರೆಗಳು ಎದುರ್ಗೊಳ್ಳುತ್ತಲೇ ಹೋಗುತ್ತವೆ. ವಿಷಾದ ಏನೆಂದರೆ,

ಸದ್ಯದ ದಿನಗಳಲ್ಲಿ ನಮಗೆ ಪರಿಚಿತವಾಗುತ್ತಿರುವ ವಿವೇಕಾನಂದ ಇವರಲ್ಲ. ಉದಾರವಾದಿ ವಿವೇಕಾನಂದರನ್ನು ಯಾಕೋ ಒಂದು ಬೇಲಿಯೊಳಗೆ ಕೂರಿಸಿ ಪ್ರಸ್ತುತಪಡಿಸುತ್ತಿರುವಂತೆ ಕಾಣಿಸುತ್ತಿದೆ. ಹಾಗಂತ, ಕೇವಲ ವಿವೇಕಾನಂದರಿಗೆ ಮಾತ್ರ ಸೀಮಿತಗೊಳಿಸಿ ಹೀಗೆ ಹೇಳಬೇಕಾಗಿಲ್ಲ. ಗಾಂಧೀಜಿ, ನೆಹರೂ, ಟಿಪ್ಪು ಸುಲ್ತಾನ್, ಶಿವಾಜಿ, ಔರಂಗಝೇಬ್, ಪ್ರವಾದಿ ಮುಹಮ್ಮದ್‍ರ ಕುರಿತೂ ಹೀಗೆ ಹೇಳಬೇಕಾಗುತ್ತದೆ. 5 ದಶಕಗಳ ಹಿಂದೆ ಗಾಂಧೀಜಿ, ನೆಹರೂ, ಪಟೇಲರ ಬಗ್ಗೆ ಇದ್ದ ಅಭಿಪ್ರಾಯಗಳು ಈಗಿನ ಯುವ ತಲೆಮಾರಿನ ಒಂದು ದೊಡ್ಡ ಗುಂಪಿನಲ್ಲಿ ಇಲ್ಲ. ಇವರನ್ನು ಓದಿಯೇ ಇಲ್ಲದ ಒಂದು ದೊಡ್ಡ ಗುಂಪು ಇವತ್ತು ಇವರ ಬಗ್ಗೆ ಧಾರಾಳ ಮಾತಾಡುತ್ತಿದೆ. ಗಾಂಧೀಜಿ ಈ ದೇಶಕ್ಕೆ ಏನನ್ನೂ ಕೊಟ್ಟಿಲ್ಲ, ನೆಹರೂ ದೇಶ ವಿಭಜಕ ಎಂಬಲ್ಲಿಂದ ತೊಡಗಿ ಉದ್ದಕ್ಕೂ ಇವರ ಬಗ್ಗೆ ನಕಾರಾತ್ಮಕವಾಗಿ ಹೇಳುವ ಯುವ ಗುಂಪು ನಿರ್ಮಾಣವಾಗಿದೆ. ಔರಂಗಝೇಬ್, ಟಿಪ್ಪು ಸುಲ್ತಾನ್, ಶಿವಾಜಿ ಇತ್ಯಾದಿ ವ್ಯಕ್ತಿತ್ವಗಳ ಕುರಿತೂ ಈ ಗುಂಪು ಎಷ್ಟು ಬೇಕಾದರೂ ಮಾತಾಡುತ್ತದೆ. ಹಾಗಂತ,

ಈ ಗುಂಪಿಗೆ ಇವೆಲ್ಲ ಮಾಹಿತಿಗಳು ಎಲ್ಲಿಂದ ಎಂದು ಹುಡುಕ ಹೊರಟರೆ ಲಭ್ಯವಾಗುವುದು ತೀವ್ರ ಆಘಾತ ಮತ್ತು ಬಹುದೊಡ್ಡ ಶೂನ್ಯ. ಕಳೆದುಹೋದ ವ್ಯಕ್ತಿತ್ವಗಳ ಬಗ್ಗೆ ಅವರಾಡುವ ಮಾತುಗಳಿಗೆ ಅವರಲ್ಲಿ ಯಾವುದೇ ಆಧಾರಗಳೂ ಇರುವುದಿಲ್ಲ. ಅಲ್ಲಿ ಇಲ್ಲಿ ಕೇಳಿದವುಗಳು ಮತ್ತು ವಾಟ್ಸಾಪ್-ಫೇಸ್‍ಬುಕ್‍ಗಳಲ್ಲಿ ಓದಿದವುಗಳ ಹೊರತು ಅಧ್ಯಯನದ ಅರಿವು ಇರುವುದೇ ಇಲ್ಲ. ಔರಂಗಝೇಬ್‍ನನ್ನು ದೇಗುಲ ಭಂಜಕ ಎಂದು ಹೇಳುವವರಿಗೆ ನಿಜವಾದ ಔರಂಗಝೇಬ್ ಎಷ್ಟು ಮಂದಿಗೆ ಗೊತ್ತಿದೆ? ಆತ ಭಂಜಿಸಿದ ದೇಗುಲಗಳ ಸಂಖ್ಯೆಯನ್ನು ಹುಡುಕುತ್ತಾ ಹೋದರೆ ನಿಖರವಾಗಿ ಸಿಗುವ ಸಂಖ್ಯೆ- ಒಂದು. ಅದಕ್ಕೂ ಬಲವಾದ ಕಾರಣ ಇತ್ತು. ಭಂಜಿಸಿದ ಆ ದೇಗುಲದ ಪಕ್ಕವೇ ಅದೇ ದೇಗುಲದ ಪುನರ್ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಿದ್ದ ಅನ್ನುವ ಮಾಹಿತಿಯೂ ಸಿಗುತ್ತದೆ. ನಿಜವಾಗಿ,

ಔರಂಗಝೇಬ್ ಹಿಂದೂಗಳ ವಿರೋಧಿ ಆಗಿರಲಿಲ್ಲ. ಹಿಂದೂಗಳ ವಿರೋಧ ಕಟ್ಟಿಕೊಂಡು ಯಾವ ರಾಜರಿಗೂ ಇಲ್ಲಿ ಅಧಿಕಾರ ಚಲಾಯಿಸಲು ಸಾಧ್ಯವೂ ಇರಲಿಲ್ಲ. ರಾಜರುಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ವಿಭಜಿಸದೇ ಬರೇ ರಾಜರುಗಳಾಗಿ ನೋಡಿದರೆ ಮತ್ತು ಈ ಆಧಾರದಲ್ಲಿಯೇ ಅವರ ಆಡಳಿತವನ್ನು ಪರೀಕ್ಷೆಗೊಡ್ಡಿದರೆ, ಈ ರಾಜರುಗಳಲ್ಲಿ (ಅವರು ಹಿಂದೂ ಆಗಲಿ ಮುಸ್ಲಿಮ್ ಆಗಲಿ) ವ್ಯತ್ಯಾಸಗಳು ಬಹುತೇಕ ಕಾಣಿಸುವುದೇ ಇಲ್ಲ. ಶಿವಾಜಿಯ ಸೇನೆಗೆ ಬಲ ತುಂಬಿದವರೇ ಮುಸ್ಲಿಮರು. ಟಿಪ್ಪು, ಔರಂಗಝೇಬರ ಅಧಿಕಾರಕ್ಕೆ ಬೆಂಗಾವಲಾಗಿ ನಿಂತವರೇ ಹಿಂದೂಗಳು. ಇದು ಇತಿಹಾಸ. ಈ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಇರುವ ದಾರಿ ಒಂದೇ- ಓದು ಮತ್ತು ಅಧ್ಯಯನ. ಪ್ರವಾದಿ ಮುಹಮ್ಮದ್ ಏನು ಅನ್ನುವುದನ್ನು ವಿವರಿಸುವುದಕ್ಕೆ ಇಲ್ಲಿ ನೂರಾರು ಪುಸ್ತಕಗಳಿವೆ. ಒಂದುವೇಳೆ,

ಈ ಯಾವ ಪುಸ್ತಕಗಳನ್ನು ಓದದೆಯೇ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೆಂದರೆ, ಅದು ಅಪಾರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದಂತೆಯೇ ಆಗಬಹುದು. ಸತ್ಯ ಹೇಳುವ ಸಾಮರ್ಥ್ಯ ಇರುವುದು ಅಧಿಕೃತ ಇತಿಹಾಸ ಗ್ರಂಥಗಳಿಗೆ ಮಾತ್ರ. ಶಿವಾಜಿಯ ಬಗ್ಗೆಯೂ ನಾವು ಇದನ್ನೇ ಹೇಳಬೇಕು. ವೇದಗ್ರಂಥಗಳ ಕುರಿತು, ಬೈಬಲ್, ಕುರ್‍ಆನ್‍ನ ಬಗ್ಗೆಯೂ ಹೇಳಬೇಕಾದುದು ಇದನ್ನೇ. ಭಾಷಣ ನಮ್ಮ ದಾರಿ ತಪ್ಪಿಸಬಹುದು. ಸಾಮಾಜಿಕ ಜಾಲತಾಣಗಳೂ ಸುಳ್ಳು ಹೇಳಬಹುದು. ಆದರೆ, ನಮ್ಮ ಅರಿವಿನ ಮಟ್ಟವನ್ನು ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ಗ್ರಂಥಗಳು ಮಾತ್ರ ವಿಸ್ತರಿಸುತ್ತಾ ಹೋಗುತ್ತವೆ.

ಇತಿಹಾಸದಲ್ಲಿ ಏನು ನಡೆದಿದೆಯೋ ಅದು ಇತಿಹಾಸದ ಭಾಗವೇ ಹೊರತು ಅದಕ್ಕೆ ಇವತ್ತಿನ ಭಾರತ ಹೊಣೆಗಾರ ಅಲ್ಲ. ಔರಂಗಝೇಬ್, ಬಾಬರ್, ಶಿವಾಜಿ, ಗಾಂಧೀಜಿ ಮತ್ತು ಈ ಪಟ್ಟಿಯಲ್ಲಿ ಸೇರಿಕೊಳ್ಳುವ ಎಲ್ಲರೂ ಭೂಮಿಯಲ್ಲಿ ತಂತಮ್ಮ ಪಾತ್ರವನ್ನು ನಿರ್ವಹಿಸಿ ಹೊರಟು ಹೋಗಿದ್ದಾರೆ. ಅವರ ಹೆಸರಲ್ಲಿ ಇವತ್ತು ನಾವೆಷ್ಟೇ ಜಗಳಾಡಿದರೂ ಅವರಿಗೆ ಕಿಂಚಿತ್ ಲಾಭ ಅಥವಾ ನಷ್ಟ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಸದ್ಯದ ಅಗತ್ಯ ಏನೆಂದರೆ, ಅವರನ್ನು ಅವರಿವರಿಂದ ಕಲಿತುಕೊಳ್ಳದೇ ಪುಸ್ತಕಗಳಿಂದ ಕಲಿತುಕೊಂಡು ಅವರು ಮಾಡಿರಬಹುದಾದ ಪ್ರಮಾದಗಳಿಂದ ಪಾಠ ಕಲಿಯುವುದು. ಮಾತ್ರವಲ್ಲ, ಆಧುನಿಕ ಭಾರತವನ್ನು ಇನ್ನಷ್ಟು ಸುಂದರವಾಗಿ ಕಟ್ಟಲು ಪ್ರಯತ್ನಿಸುವುದು, ಇದು ಅಸಾಧ್ಯವಲ್ಲ. ಆದರೆ ಇದನ್ನು ಸಾಧ್ಯಗೊಳಿಸಲು ರಾಜಕೀಯ ಮುಕ್ತ ಅರಿವನ್ನು ಹೊಂದಬೇಕಾಗುತ್ತದೆ.

ಈ ದೇಶದ ಇತಿಹಾಸವನ್ನು ಓದುವುದು ಮತ್ತು ಇತಿಹಾಸವನ್ನು ಇತಿಹಾಸವಾಗಿ ಓದುವುದು ಇವೆರಡೂ ಇವತ್ತಿನ ತುರ್ತು ಅಗತ್ಯವೆಂದು ಹೇಳಬಹುದು. ಇತಿಹಾಸವನ್ನು ಓದುವುದಕ್ಕೂ ಇತಿಹಾಸವನ್ನು ಇತಿಹಾಸವಾಗಿ ಓದುವುದಕ್ಕೂ ವ್ಯತ್ಯಾಸ ಇದೆ. ಇತಿಹಾಸವನ್ನು ಇತಿಹಾಸವಾಗಿ ಓದುವಾಗ ನಾವು ಆ ಕಾಲದಲ್ಲಿ ನಿಂತು ಯೋಚಿಸುತ್ತೇವೆಯೇ ಹೊರತು ಇವತ್ತಿನ ಭಾರತವನ್ನು ಅವತ್ತಿನ ಇತಿಹಾಸಕ್ಕೆ ಹೊಣೆಯಾಗಿ ಯೋಚಿಸುವುದಿಲ್ಲ. ಸಾಧ್ಯವಾದರೆ ಈ ದೇಶದಲ್ಲಿರುವ ಎಲ್ಲ ಸಂಘಟನೆಗಳೂ ಇತಿಹಾಸದ ಅಧ್ಯಯನವನ್ನು ತಮ್ಮ ಕಾರ್ಯಕರ್ತರಿಗೆ ಕಡ್ಡಾಯಗೊಳಿಸುವ ತೀರ್ಮಾನ ಕೈಗೊಳ್ಳಬೇಕು. ಹೀಗೆ ಅಧ್ಯಯನ ನಿರತ ಯುವ ಸಮೂಹವೊಂದು ತಯಾರಾದರೆ, ಆ ಬಳಿಕ ಭಾಷಣಕಾರರು ಮತ್ತು ಬರಹಗಾರರು ತುಸು ಜಾಗೃತಗೊಂಡಾರು. ಅವರು ಆಡುವುದಕ್ಕಿಂತ ಮೊದಲು ಓದಿಯಾರು. ಹಾಗೆ ಓದಿ ಆಡುವ ಮಾತುಗಳು ಸಮಾಜವನ್ನು ಕಟ್ಟಬಲ್ಲುದೇ ಹೊರತು ಒಡೆಯಲಾರದು.