ಒಂದು ಮನಸ್ಸಿನ ಕತೆ

0
2381

ಒಂದು ಮನಸ್ಸಿನ ಕತೆ

✒ಉಮ್ಮು ಫಾತಿಮಾ

‘ಯಾಕಮ್ಮ ಬಹಳ ಸಪ್ಪಗಿದ್ದೀಯ..?’

‘ಏನಿಲ್ಲಾ, ಇವತ್ಯಾಕೋ ನನ್ನ ‘ಮನಸ್ಸು’ ಸರಿಯಿಲ್ಲ’.

‘ಮನಸ್ಸಿಲ್ಲ’ ನಂಗೆ ಅಲ್ಲಿ ಬರ್ಲಿಕ್ಕೆ ಯಾಕೆ ಬಲವಂತ ಮಾಡ್ತೀರಾ..?
ಇಲ್ಲ ನೀವೇನು ಹೇಳಿದ್ರೂ ನನ್ನ ‘ಮನಸ್ಸು’ ಮಾತ್ರ ಅದನ್ನು ಒಪ್ಪುತ್ತಿಲ್ಲ.
ನಿಜವಾಗಿಯೂ ಆ ಕಾರ್ಯಕ್ರಮಕ್ಕೆ ನಾನು ಹೋಗಲೇಬೇಕು ಅಂತ ತಿಂಗಳಿಂದನೂ ಯೋಚಿಸ್ತಿದ್ದೆ.. ಆದ್ರೆ ಅವತ್ತೆ ನನ್ನ ‘ಮನಸ್ಸು’ ಕೆಟ್ಟೊಯ್ತು, ಹೋಗೋದು ಕ್ಯಾನ್ಸಲ್ ಮಾಡಿಬಿಟ್ಟೆ.

‘ಮನಸ್ಸು ! ಮನಸ್ಸು ! ಮನಸ್ಸು !’ ನಾನು ಯೋಚಿಸ ತೊಡಗಿದೆ, ‘ಮನಸ್ಸು’ ಅಂದರೆ ಏನು.? ಎಲ್ಲಿದೆ.? ಅದು ಹೇಗಿರುತ್ತದೆ.?

ಪುಟ್ಟ ಮಕ್ಕಳಿಗೆ ಕೇಳಿದ್ರೂ ತೋರಿಸ್ತಾರೆ ‘ಕಣ್ಣು, ಕಿವಿ, ಮೂಗು, ಬಾಯಿ, ಕೈ-ಕಾಲು, ತಲೆ ಯಾವುದು ಎಲ್ಲಿದೆ ಎಂದು. ಇನ್ನು ಮಿದುಳು, ಹ್ರದಯ, ಶ್ವಾಸಕೋಶ, ಕರುಳು, ಪಿತ್ತಕೋಶ ಮುಂತಾದವುಗಳು ಕೂಡ ಎಲ್ಲಿರುತ್ತದೆ.. ಹೇಗಿರುತ್ತದೆ.. ನಮಗೂ ಎಲ್ಲರಿಗೂ ತಿಳಿದದ್ದೆ.

ಅದರಲ್ಲೂ ಹೇಗಿರುತ್ತದೆ ತೋರಿಸೆಂದರೂ.. ಚಿತ್ರ ಬಿಡಿಸಿನೊ.. ಅಥವಾ ಫೋಟೋದಲ್ಲೊ, ವೀಡಿಯೋದಲ್ಲೂ ತೋರಿಸಿ ಕೊಡ್ತೇವೆ.
ಆದರೆ… ನಾನೆಂದೂ ‘ಮನಸ್ಸಿ’ನ ಚಿತ್ರವನ್ನು ಕೂಡ ಕಂಡದ್ದಿಲ್ಲ.
ಹೌದು ! ‘ಮನಸ್ಸು’ ಹೇಗಿರುತ್ತದೆ..?

ಈ ಪ್ರಶ್ನೆ ಬಹಳ ಚಿಕ್ಕಂದಿನಿಂದಲೇ ನನ್ನ ತಲೆಯಲ್ಲಿ ಕೊರೆಯುತ್ತಿರುವಂತಹದ್ದಾಗಿದೆ. ‘ಮನಸ್ಸು’ ಎಲ್ಲಿದೆ, ಹೇಗಿದೆ ? ಎಷ್ಟು ಹಾಡುಗಳು ಕವನಗಳಿವೆ ಈ ಮನಸ್ಸಿನ ಬಗ್ಗೆ. ಮನುಷ್ಯ ತನ್ನೆಲ್ಲಾ ಅಂಗ’ಗಳಿಗಿಂತ ಹೆಚ್ಚಾಗಿ ಮಾತು ಮಾತಿಗೂ ಮನಸ್ಸಿನ ಬಗ್ಗೆ ನುಡಿಯುತ್ತಿರುತ್ತಾನೆ. ಆದರೆ… ಈ ‘ಮನಸ್ಸು’ ಎಲ್ಲಿದೆ..?

ನನಗಂತೂ ‘ಮನಸ್ಸು’ ಎಲ್ಲಿದೆ ಎಂದು ಯೋಚಿಸುವಾಗಲೆಲ್ಲಾ.. ಹ್ರದಯದ ಚಿತ್ರ ಕಣ್ಮುಂದೆ ಬರುವುದು. ಹೌದು! ಮನಸ್ಸು ಹ್ರದಯದ ಅಕ್ಕ ಪಕ್ಕದಲ್ಲೆ ಇರಬೇಕು. ಹೇಗೆ ಕಂಡು ಹಿಡಿಯುವುದು? ಒಮ್ಮೆಯಾದರೂ ನನಿಗೆ ‘ಮನಸ್ಸಿ’ನ ಒಂದು ಚಿತ್ರ’ವಾದರೂ ಸರಿ ನೋಡಬೇಕೆನಿಸುತ್ತಲೇ ಇತ್ತು. ನಾನು ಚಿಕ್ಕಂದಿನಿಂದಲೇ ಹಲವು ಸ್ನೇಹಿತರಲ್ಲೂ ಕುಟುಂಬಸ್ತರಲ್ಲೂ ಈ ಸವಾಲು ಹಾಕಲು ತೊಡಗಿದೆ.’ಕಣ್ಣು, ಕಿವಿ, ಮೂಗು, ತಲೆ ಕೇಳಿದ್ರೆ ತೋರಿಸ್ತೀರಾ..’ಮನಸ್ಸು’ ಅಂದ್ರೇನು? ಎಲ್ಲಿದೆ ತೋರಿಸ್ತೀರಾ?

ಈ ಪ್ರಶ್ನೆ ಆಲಿಸಿದವರು ಒಂದುಕ್ಷಣ ಗೊಂದಲಕ್ಕೊಳಗಾಗಿ ಉತ್ತರ ಕೊಡಲೇ ಹಿಂಜರಿದು ಮೌನವಾಗುವರು. ಬಹುಶ: ಅವರು ಜೀವನದಲ್ಲಿ ಮೊದಲ ಬಾರಿ ಈ ಸವಾಲು ಕೇಳುತ್ತಿದ್ದಿರಬಹುದು. ಕೆಲವರು ಎದೆಯ ಮೇಲೆ ಕೈಯಿಟ್ಟು ಹ್ರದಯವನ್ನೇ ಮನಸ್ಸೆಂದು ತೋರಿಸಿದರೆ..ಇನ್ನೂ ಕೆಲವು ಬುದ್ದಿವಂತರು ತಮ್ಮ ತಲೆಗೆ ಬೊಟ್ಟು ತೋರಿಸಿ ‘ಮನಸ್ಸು ಇಲ್ಲಿದೆ’ ಎಂದೆನ್ನುತ್ತಾ ನನ್ನನ್ನು ಆಚ್ಚರಿಯಲ್ಲಿ ಬೀಳಿಸಿದ್ದೂ ಇದೆ.

ಅಂತೆಯೇ… ನಾನು ಕೂಡ ‘ಮನಸ್ಸೆನ್ನುವುದು ಹ್ರದಯದ ಬಳಿ ಇದೆ ಅಥವಾ ‘ಹ್ರದಯ’ವನ್ನೇ ಮನಸ್ಸು ಅಂತ ಹೇಳುತ್ತಿರುವುದು ಅನ್ನುವ ಸಂಶಯದಲ್ಲಿರುವಾಗ..ಈ ಅತೀ ಬುದ್ದಿವಂತ ಸ್ನೇಹಿತರು ‘ಮಿದುಳ’ನ್ನೇ ಮನಸ್ಸು ಎಂದು ಹೇಳುತ್ತಿರುವುದನ್ನು ಗಮನಿಸುವಾಗ ನಂಗೆ ಅವರ ಈ ಚಿಂತನೆಯ ಬಗೆಗೂ ಶಹಬ್ಬಾಸ್ ! ಅನಿಸುತ್ತದೆ. ಯಾಕೆಂದರೇ…

‘ಅವನಿಗೆ ತಲೆಕೆಟ್ಟಿದೆ’ , ‘ಅವನು ಮಾನಸಿಕ ರೋಗಿ’ ಅಂದ್ರೆ ಅದು ಮಿದುಳಿನ ರೋಗದ ಬಗ್ಗೆನೆ ಹೇಳುವುದಲ್ಲವೆ..? ‘ಮಾನಸಿಕ’ ಅಂದರೆ ‘ಮನಸ್ಸಿಗೆ ಸಂಬಂದಪೆಟ್ಟ ಖಾಯಿಲೆ’ಯೇ ಆದಕಾರಣ ಇವರುಗಳ ಚಿಂತನೆಗೆ ನಾನು ಹೆಮ್ಮೆ ಪಡದಿರಲು ಸಾಧ್ಯವೇ ಇಲ್ಲ. ಆದರೂ.. ಕೂಡ ‘ಮನಸ್ಸಿ’ನ ಬಗೆಗಿನ ನನ್ನ ಭಾವನೆಗಳು ಬದಲಾಗಲೇ ಇಲ್ಲ.’ಮನಸ್ಸು’ ತಲೆಯಲ್ಲಿರುವುದಲ್ಲ, ಹ್ರದಯ ಭಾಗದಲ್ಲಿಯೇ ಇರುವುದಾಗಿದೆ.

ಈ ನನ್ನ ಮನಸ್ಸಲ್ಲೂ ಪ್ರೀತಿ ತುಂಬಿದೆ ನಾನು ತೋರ್ಪಡಿಸುತ್ತಿಲ್ಲ ಅಷ್ಟೇ ಎಂದು ‘ಎದೆಯ ಹ್ರದಯ ಭಾಗದ’ ಮೇಲೆ ಕೈಯಿಂದ ತಟ್ಟುತ್ತಾ ಹೇಳುತ್ತಾರೆಯೇ..ಹೊರತು, ಯಾರೂ ‘ತಲೆಯನ್ನು’ ತಟ್ಟುತ್ತಾ ಹೇಳುವುದಿಲ್ಲ.

‘ಮನಸ್ಸಿನಾಳ’ದಿಂದ ಹೇಳುತ್ತಿರುವೆ ನಾನು.. ಇದೀಗ ಈ ಬರವಣಿಗೆಯ ಮಧ್ಯೆ ವಿಚಾರವೊಂದು ಓಡಿತು ನನ್ನಲ್ಲಿ..’ಮನಸ್ಸಿಗೆ ಆಳ’ ಬೇರೆ ಇದೆಯೇ.? ಅವನದದೆಷ್ಟು ‘ದೊಡ್ಡ ಮನಸ್ಸು’ (ಅಳತೆಗಳಿವೆಯೇ ಮನಸ್ಸಿಗೆ?) ಹಾಂ, ಅವಳದೋ ಬಲು ‘ವಿಶಾಲ ಮನಸ್ಸು’ ಅಷ್ಟಕ್ಕೇ ಇವಳ ‘ಮನಸ್ಸು ಮುದುಡಿ’ ಹೋಯ್ತು (ಅರಳುವಿಕೆ ಮುದುಡುವಿಕೆಗಳೂ ಇವೆಯೇ ಮನಸ್ಸಿನಲ್ಲಿ?)
ನನ್ನ ‘ಮನಸಿ’ಗೇ ಬೇಜಾರಾಯ್ತು.. ‘ಮನ’ ಮುಟ್ಟುವಂತೆ ಮಾತಾಡಿದ್ರು.. ಪಾಪ ಇವರೋ ‘ಮುಗ್ದ ಮನಸ್ಸಿ’ನೋರು.. ಮನದ ಕದ ತಟ್ಟಿದರು (ಮನಸ್ಸಿಗೆ ಬಾಗಿಲು ಬೇರೆ ಇದೆಯೇ?) ಅವನ್ದು ಬರೀ ‘ಕೆಟ್ಟ ಮನಸ್ಸು’. ಇವುಗಳು ಮನಸ್ಸಿನ ವಿವಿದ ರೂಪಗಳಾದರೆ..ಇನ್ನೂ ವಿಚಿತ್ರದವುಗಳೆಂದರೆ ಇವುಗಳು,’ಅವನು ‘ಮನದಲ್ಲೆ ಮಂಡಕ್ಕಿ ತಿನ್ನುತ್ತಿದ್ದ’, ‘ಮನಸ್ಸಿನಲ್ಲೆ ಮೆಲ್ಲುತ್ತಿದ್ದ’ (ಮನಸ್ಸು ತಿನ್ನುವ ಕೆಲಸವನ್ನೂ ಮಾಡುತ್ತದಾ..?)
‘ಮನಸ್ಸಲ್ಲೆ ಲೆಕ್ಕ ಹಾಕಿದ’ ಬರಹದ ಮಧ್ಯೆ ಯೋಚಿಸುತ್ತಾ ಕುಳಿತ ನನ್ನ ‘ಮನಸ್ಸಲ್ಲೂ ಈಗ ಪ್ರಶ್ನೆಗಳ ಹಾವಳಿ ತುಂಬಿತು.

ಮತ್ತೆ ಬರೆಯಲು ತೊಡಗಿದೆ.. ಈ ‘ಮನಸ್ಸೆಂಬ ಮರ್ಕಟದಿ..’ ತರ್ಕಕ್ಕೆ.. ನಿಲುಕದ ಎಷ್ಟೊಂದು ಭಾವನೆಗಳಿವೆ. ಈ ‘ಮಾನಸಿಕ ರೋಗ, ಮಿದುಳಿನ ಕಾಯಿಲೆಯೇನೊ ಸರಿ, ಆದರೆ ಆ ರೋಗ ಭಾದಿಸುವುದು ಹ್ರದಯದ ಭಾವನೆಗಳಿಗೆ ಕುತ್ತುಂಟಾಗಲೇ ಅಲ್ಲವೇ? ನನ್ನ ಯೋಚನೆಗಳು ಈ ವಿಷಯದತ್ತಲೇ ಸರಿದಾಡುತಿತ್ತು.

‘ಹೃದಯಕ್ಕಾದ’ ಅಥವಾ ‘ಮನಸ್ಸಿಗಾದ’ ತೀವ್ರ ನಿರಾಸೆ, ನೋವು ಸೋಲು.. ಹಾಗೆಯೇ .. ಪ್ರೀತಿ-ಮಮತೆ, ಬರವಸೆ, ವಿಶ್ವಾಸ, ನಂಬಿಕೆಗಳಿಗೆ ಪೆಟ್ಟು ಬಿದ್ದಾಗಲೇ ಅಲ್ಲವೇ ಮಾನಸಿಕ ರೋಗ ಉಂಟಾಗುವುದು? ನನ್ನ ಯೋಚನಾಲಹರಿಯಲ್ಲಿ ‘ಮನಸ್ಸೆಂದರೆ ಹ್ರದಯ’ ಅನ್ನುವ ತರ್ಕವೇ ಗಟ್ಟಿಯಾಯಿತು.

ಏನೇ ಇರಲಿ ಈ ‘ಮನಸ್ಸು’ ಅನ್ನುವುದು ಇದೆಯೊ..? ಇಲ್ಲವೋ..? ಆದರೂ ಪ್ರತೀ ಭಾರಿಯು ಮನುಷ್ಯ ತಾನು ಮಾಡುವ ಕ್ರಿಯೆಗಳಿಗೆಲ್ಲಾ ‘ಮನಸ್ಸು’ ಎಂಬ ಒಂದು ಕಾಲ್ಪನಿಕ ಅಂಗವನ್ನು ಸೃಷ್ಠಿಸಿ ಅದುವೇ ನಮ್ಮನ್ನು ನಿಯಂತ್ರಿಸುವ ಒಂದು ‘ವ್ಯಕ್ತಿತ್ವ’ ಎಂದಾಗಿಯೂ ಪರಿಗಣಿಸುತ್ತಾ.

‘ನಾನು ಮಾಡಿದ್ದಲ್ಲ ‘ಮನಸ್ಸಿನ ಆಟ’ ಇದೆಲ್ಲಾ ಎಂದು ಸದಾ ತನ್ನನ್ನು ರಕ್ಷಿಸುವ ಅಸ್ತ್ರವಾಗಿ ಮನಸ್ಸನ್ನು ಬಳಸುತಿರುತ್ತಾನೆ. ತಾನು ಮಾಡಿದ ಕೀಯೆಗಳನ್ನೆಲ್ಲಾ ಮನಸ್ಸಿನ ಮೇಲೆ ಹೊರೆ ಹಾಕುತ್ತಾ.. ಪದೇ ಪದೇ ತಾನು ಸೇಫ್ ಆಗುತ್ತಿರುತ್ತಾನೆ. ‘ನಾನೇನೋ ಕೊಡಬೇಕೆಂದೇ ಇದ್ದೆ, ಆದ್ರೆ ಈ ಮನಸ್ಸು ಒಪ್ಲಿಲ್ಲ’, ‘ನಾನು ಬರಬೇಕೆಂದೇ ಇದ್ದೆ, ಕೊನೇಗೆ ಮನಸ್ಸು ಬೇಡ ಅಂತು’ ಮನಸ್ಸು .. ಮನಸ್ಸು .. ಮನಸ್ಸು .. ಮನಸ್ಸು ಎಲ್ಲಿದೆ? ಮನಸ್ಸು ಅಂದರೇನು? ನಾನೊಂದು ತೀರ್ಮಾನಕ್ಕೆ ಬಂದೆ.. ಭಾವುಕತೆ ಹೆಚ್ಚಾಗಿರುವವರು.. ಭಾವಜೀವಿಗಳು ಮನಸ್ಸೆಂದರೇ.. ‘ಹ್ರದಯ’ವೆನ್ನುವರು, ಇನ್ನು ವ್ಯವಹಾರಸ್ಥರು, ವ್ಯವಹಾರ ಜ್ಞಾನದಲ್ಲೇ ಎಲ್ಲವನ್ನು ತೂಗುವವರು ಮನಸ್ಸನ್ನು ‘ಮಿದುಳು’ ಎಂದು ಹೇಳುವರು ಅಂದರೆ ‘ಬುದ್ದಿಜ್ಞಾನವೇ ಮನಸ್ಸು’ ಎಂದು.

ಏನೇ ಅಂದರೂ ಸತ್ಯ ಒಂದೇ.. ‘ಮನಸ್ಸು’ ಮನುಷ್ಯನಲ್ಲೇ ಇಲ್ಲದ ಅಂಗವಾಗಿದೆ. ಆದರೂ ಮನುಷ್ಯನು ಅತೀ ಹೆಚ್ಚಾಗಿ ತನ್ನ ಮಾತಿನಲ್ಲಿ ‘ಮನಸ್ಸು’ ಅನ್ನುವುದೊಂದು ನಮ್ಮ ಜತೆಗೆ ಇದೆ, ಹಾಗೂ ಇದು ನಮ್ಮನ್ನು ನಿಯಂತ್ರಿಸುತ್ತಿದೆ, ಅಥವಾ ನಮ್ಮನ್ನು ನಿಯಂತ್ರಣದಲ್ಲಿಟ್ಟು ಕೊಂಡಿದೆ’ ಎಂದು ಭಾವಿಸುತ್ತಾನೆ. ಅಥವಾ ಪದೇ ಪದೇ ಇನ್ನೊಬ್ಬರಿಗೆ ಅಂತಹಾ ಭಾವನೆ ಬರುವಂತಾ ಭ್ರಮೆ ಹುಟ್ಟಿಸುತ್ತಿರುತ್ತಾನೆ. ಇದೋ ನನಗಿಂದು ‘ಮನಸ್ಸಿ’ನ ಬಗೆ ಬರೆಯಬೇಕೆಂದು ಮನಸ್ಸಾದದ್ದಲ್ಲ, ಇದು.. ನಾನೇ ಬರೆಯಲು ತೊಡಗಿದ್ದು..

‘ಎಲ್ಲರೂ ತಮ್ಮ ತಮ್ಮ ಮನಸ್ಸನ್ನು ಸ್ವಚ್ಚವಾಗಿಟ್ಟುಕೊಂಡು ಅತೀಯಾಸೆ, ಅಸೂಹೆ, ಮತ್ಸರಗಳನ್ನು ಮನಸ್ಸಿನಿ೦ದ ದೂರವಿರಿಸಿ.. ಕರುಣೆ, ಪ್ರೀತಿ, ಸೌಹಾರ್ದತೆಯನ್ನು ಮನಸ್ಸಲ್ಲಿ ತುಂಬಿಟ್ಟುಕೊಂಡು ಉತ್ತಮ ಕಾರ್ಯದಲ್ಲಿ ಸದಾ ನಿಮ್ಮನ್ನು ‘ಮನ’ಪೂರ್ವಕ ತೊಡಗಿಸಿಕೊಳ್ಳುವವರಾಗಿರಿ’ ಎಂದು ಹಾರೈಸುತ್ತಾ.. ಇದೀಗ ನನ್ನ ಸ್ವಇಚ್ಚೆಯಿಂದ ಈ ‘ಮನಸ್ಸು ಇಲ್ಲದ ಮನಸ್ಸಿನ’ ಲೇಖನವನ್ನು ಇಲ್ಲಿಗೆ ಮುಗಿಸುತ್ತಿರುವೆನು.