ಪಾಡು

0
886

✒ಸಫ್ವಾನ್ ಸವಣೂರು

ಹಜಾರದ ಮೂಲೆಯ

ಹಳೆಯ ಮರದ ಕುರ್ಚಿಗೆ

ದೇಹದ ಭಾರವನ್ನಿಳಿಸಿ

ಅಂಗಳಕ್ಕೆ ನೋಟ ನೆಟ್ಟು

ಅಪ್ಪ ಆಲೋಚನೆಗಿಳಿದರೆ,

ಮುಂಬಾಗಿಲ ಚೌಕಟ್ಟಿಗೆ

ಬೆನ್ನು ಒರಗಿಸಿ ಕುಳಿತು

ಬೀಡಿ ಸುರುಟುವ ಅಮ್ಮ

ಅವನನ್ನೇ ದಿಟ್ಟಿಸುತ್ತಾಳೆ.

ಹಿರಿಯ ಮಗಳಿಗೆ

ಕೂಡಿಬಂದ ನೆಂಟಸ್ತನದ

ಮಾತುಕತೆಗಳು ಮುಗಿದು

ಮದುವೆಯ ಸಿದ್ಧತೆಗಳಿಗೆ

ತೊಡಗಲು ಮಾತ್ರ ಬಾಕಿ,

ಆದರೆ ಮದುಮಗಳಿಗೆ

ಮೈತುಂಬಾ ಒಡವೆಗಳನ್ನು

ತೊಡಿಸಲೇಬೇಕೆಂಬುದು

ವರನ ತಾಯಿಯ ಶೋಕಿ.

ಬೆವರಿಳಿಸಿ ದುಡಿಯುವ

ಅಪ್ಪ ಗಳಿಸುವ ಬಿಡಿಗಾಸು

ದಿನಚರಿಯ ವೆಚ್ಚಗಳಿಗೂ

ಸರಿಯಾಗಿ ಸಾಲುವುದಿಲ್ಲ,

ಬವಣೆಗಳ ಬಿರುಗಾಳಿಯ

ಹೊಡೆತಕ್ಕೆ ನಲುಗಿರುವ

ಬದುಕೆಂಬ ಹಾಯಿದೋಣಿ

ಸುಲಭವಾಗಿ ಸಾಗುವುದಿಲ್ಲ.

ಬೆಳೆದು ನಿಂತ ಮಗಳ

ಮದುವೆ ನೆರವೇರಿಸಲು

ಆಗದ ಬಡ ತಂದೆಯ

ಮುಂದೆ ಉಳಿದಿರುವುದು

ಈಗ ಅದೊಂದೇ ದಾರಿ,

ಏರಿಳಿಯಬೇಕಾಗಿದೆ ಆತ

ಮನೆಮಠ ಮಸೀದಿಯ

ಮೆಟ್ಟಿಲಿನ ಸಾಲುಗಳ

ನೆರವಿನ ನೆರಳನ್ನು ಕೋರಿ.