ಪಾಕ್‌ನಲ್ಲಿ ಮಂದಿರ ನಿರ್ಮಾಣ ವಿವಾದಕ್ಕೆ ತೆರೆ: ಸರ್ವೋಚ್ಚ ವಿದ್ವಾಂಸರ ಮಂಡಳಿಯಿಂದ ಮಂದಿರ ನಿರ್ಮಾಣಕ್ಕೆ ಅನುಮತಿ

0
495

ಸನ್ಮಾರ್ಗ ವಾರ್ತೆ

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಮಂದಿರ ಕಟ್ಟುವ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ತೆರೆಬಿದ್ದಿದ್ದು ಅಲ್ಲಿನ ಸರ್ವೋಚ್ಚ ವಿದ್ವಾಂಸರ ಮಂಡಳಿ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ.

ಈ ಮೊದಲು ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಅವರು ಈ ಮಂದಿರ ನಿರ್ಮಾಣಕ್ಕೆ 6 ಲಕ್ಷ ಡಾಲರ್ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಮಂದಿರ ನಿರ್ಮಾಣದ ಪರ ಮತ್ತು ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.

3000 ಹಿಂದೂ ಜನಸಂಖ್ಯೆ ಇರುವ ಇಸ್ಲಾಮಾಬಾದಿನಲ್ಲಿ ಈವರೆಗೂ ಮಂದಿರ ಇರಲಿಲ್ಲ.ಆದ್ದರಿಂದ ಅಲ್ಲಿ ಮಂದಿರ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿದ್ದು ಆ ಬಗ್ಗೆ ವಿವಾದ ಉಂಟಾಗಿತ್ತು.

ಪಾಕಿಸ್ತಾನದ ಪಾರ್ಲಿಮೆಂಟ್‌ನ ಹಿಂದೂ ಸದಸ್ಯ ಲಾಲ್ ಮಲ್ಹಿ ಅವರು ಇದೀಗ ವಿದ್ವಾಂಸರ ನಿರ್ಧಾರವನ್ನು ಮೆಚ್ಚಿ ಹೇಳಿಕೆ ನೀಡಿದ್ದಾರೆ.

ಹಾಗೆಯೇ ಮದುವೆ ಇತ್ಯಾದಿ ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸುವುದಕ್ಕೆ ಹಿಂದುಗಳಿಗೆ ಸಮುದಾಯ ಭವನವನ್ನು ಕಟ್ಟುವುದಕ್ಕೂ ವಿದ್ವಾಂಸರ ಸಮಿತಿ ಅನುಮತಿ ನೀಡಿದೆ.

ಕಳೆದ ಜೂನ್ ನಲ್ಲಿ ವಿವಾದ ಉಂಟಾದ ಬಳಿಕ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಅವರು ಈ ಮಂದಿರ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಿದ್ದರು. ಅದಕ್ಕಿಂತ ಮೊದಲು ಮಂದಿರ ನಿರ್ಮಾಣಕ್ಕೆ 6ಲಕ್ಷ ಡಾಲರ್ ಹಣ ನೀಡುವುದಾಗಿ ಭರವಸೆ ನೀಡಿದ್ದರು.