ಪಂಜಾಬ್: ಸ್ಥಳೀಯ ಸಂಸ್ಥೆಗಳ 3252 ಸ್ಥಾನಗಳಲ್ಲಿ ಬರೇ 65 ಸ್ಥಾನಗಳನ್ನು ಪಡೆದು ಹೀನಾಯ ಮುಖಭಂಗ ಅನುಭವಿಸಿದ ಬಿಜೆಪಿ; ಇದು ಸಿಧು ಪವರ್

0
9826

 

ಮಾಜಿ ಕ್ರಿಕೆಟಿಗ ಮತ್ತು ಹಾಲಿ ಪಂಜಾಬ್ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ರ ಪ್ರಮಾಣ ವಚನ ಸಮಾರಂಭಕ್ಕೆ ತೆರಳಿ, ಅಲ್ಲಿನ ಸೇನಾ ನಾಯಕರನ್ನು ಆಲಿಂಗಿಸಿದ ಬಳಿಕ ನಡೆದ ಚುನಾವಣೆ ಎಂಬ ನೆಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಪಂಜಾಬ್ ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದ್ದು, ಒಟ್ಟು 3252 ಸ್ಥಾನಗಳ ಪೈಕಿ ಬರೇ 65 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ.

ಈ ಚುನಾವಣೆಯನ್ನು ಸಿಧು ಮತ್ತು ಬಿಜೆಪಿ ನಡುವಿನ ಕದನವಾಗಿಸಲು ಅಲ್ಲಿನ ಟಿವಿ ಮಾಧ್ಯಮಗಳು ಸಾಕಷ್ಟು ಪ್ರಯತ್ನಿಸಿದ್ದುವು. ಸಿಧುವನ್ನು ದೇಶ ದ್ರೋಹಿ ಎಂದು ಪದೇ ಪದೇ ಬಿಂಬಿಸಿ ಸರಣಿ ಡಿಬೇಟ್ ಗಳನ್ನೂ ಮಾಧ್ಯಮಗಳು ಹಮ್ಮಿಕೊಂಡಿದ್ದುವು. ಆದರೆ, ಈ ಪ್ರಚಾರ ಸರಣಿಯನ್ನು ಪಂಜಾಬ್ ಜನತೆ ತಿರಸ್ಕರಿಸಿದ್ದು, ಕಾಂಗ್ರೆಸ್ ಗೆ 2682 ಸ್ಥಾನಗಳನ್ನು ನೀಡಿ ಬೆಂಬಲಿಸಿದೆ. ಅದೇವೇಳೆ, ಅಕಾಲಿ ದಳವು 372 ಸ್ಥಾನಗಳನ್ನು ಪಡೆದರೆ, ಆಮ್ ಆದ್ಮಿ ಪಾರ್ಟಿಯು ಜಿಲ್ಲಾ ಪರಿಷತ್ ನಲ್ಲಿ ಶೂನ್ಯ ಸಂಪಾದಿಸಿದ್ದು, ಪಂಚಾಯತ್ ಚುನಾವಣೆಯಲ್ಲಿ 20 ಸ್ಥಾನಗಳನ್ನು ಪಡೆದಿದೆ.

ಜಿಲ್ಲಾ ಪರಿಷತ್ ನ 353 ಸ್ಥಾನಗಳು ಮತ್ತು ಪಂಚಾಯತ್ ನ 2899 ಸ್ಥಾನಗಳಿಗೆ ಕಳೆದ ವಾರ ಚುನಾವಣಾ ನಡೆದಿತ್ತು. ಜಿಲ್ಲಾ ಪರಿಷತ್ ನ ಒಟ್ಟು 352 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷವು 331 ಸ್ಥಾನಗಳನ್ನು ಪಡೆದಿದ್ದು, 2899 ಪಂಚಾಯತ್ ಸ್ಥಾನಗಳ ಪೈಕಿ 2351 ಸ್ಥಾನಗಳನ್ನು ಅದು ಪಡೆದುಕೊಂಡಿದೆ. ಬಿಜೆಪಿಯು 2 ಜಿಲ್ಲಾ ಪರಿಷತ್ ಸ್ಥಾನಗಳನ್ನೂ 63 ಪಂಚಾಯತ್ ಸ್ಥಾನಗಳನ್ನೂ ಪಡೆದುಕೊಂಡಿದೆ.

ಈ ಫಲಿತಾಂಶವನ್ನು ಬಿಜೆಪಿಯ ನಕಾರಾತ್ಮಕ ಪ್ರಚಾರಕ್ಕೆ ಸಿಕ್ಕ ಪ್ರತಿಫಲ ಎಂದು ವಿಶ್ಲೇಷಿಸಲಾಗುತ್ತಿದೆ.