ಪಶ್ಚಾತಾಪ ಪಡಲು ಅವಕಾಶವಿಲ್ಲದ ಶಾಶ್ವತ ಸೋಲು ಬರುವ ಮುನ್ನ…

0
875

ಡಾ| ಫರ್‌ಹತ್‌ ಹಾಶ್ಮಿ

ಅಲ್ಲಾಹನ ಧರ್ಮದ ವಿದ್ಯೆಯು ಬರೀ ಕಲಿಯುವುದರಿಂದ ಅಥವಾ ರ‌್ಯಾಂಕ್‌ ಗಳಿಸುವುದರಿಂದ ಸಿಗುವುದಿಲ್ಲ. ಯಾವಾಗ ಮನುಷ್ಯನ ಹೃದಯದಲ್ಲಿ ಅಲ್ಲಾಹನ ಮತ್ತು ಪರಲೋಕದ ಭಯಭಕ್ತಿ ಹುಟ್ಟುತ್ತದೋ ಆಗಲೇ ಅದು ಅವರಿಗೆ ಸಿಗುತ್ತದೆ. ನೀವು ಗಮನಿಸಿರ ಬಹುದು, ಕೆಲವರಿಗೆ ಅಗಾಧವಾದ ಜ್ಞಾನವಿರುತ್ತದೆ.ಆದರೆ ಅದು ಅವರಿಗಾಗಲೀ, ಇತರರಿಗಾಗಲೀ ಯಾವ ಉಪಯೋಗಕ್ಕೂ ಬರುವುದಿಲ್ಲ.

ಏಕೆಂದರೆ ಅವರಲ್ಲಿ ಅಲ್ಲಾಹನ ಭಯವಿರುವುದಿಲ್ಲ. ದೇವಭಯ ವಿರುವವನು ಮಾತ್ರ ವಿಷಯವನ್ನು ಹೃದಯದಿಂದ ಅಳೆಯುತ್ತಾನೆ ಮತ್ತು ಕಲಿತದ್ದನ್ನು ಬದುಕಲ್ಲಿ ಅಳವಡಿಸುತ್ತಾನೆ. ನಾವು ಸ್ವತಃ ಸಹನೆ ವಹಿಸುವುದು ಮತ್ತು ಇತರರಿಗೆ ಸಹನೆಯ ಉಪದೇಶ ನೀಡುವುದು, ಅಲ್ಲಾಹನ ಧರ್ಮವನ್ನು ಕಲಿಯಲು ಸಮಯಾವಕಾಶ ಮಾಡಿಕೊಳ್ಳುವುದು ಮತ್ತು ಅದರಂತೆ ಬದುಕು ರೂಪಿಸಲು ಗರಿಷ್ಠ ಪ್ರಯತ್ನಿಸಬೇಕು.

ಪವಿತ್ರ ಕುರ್‌ಆನ್‌ ಸಾಮಾನ್ಯ ಗ್ರಂಥವಲ್ಲ. ಅಲಕ್ಷ್ಯ ಮಾಡಿಬಿಡುವಂತಹದ್ದೂ ಅದಲ್ಲ. ಅದರೊಂದಿಗಿನ ನಮ್ಮ ಸಂಬಂಧವು ಮುಖ್ಯವಾಗಿರಬೇಕು. ಅದರೊಂದಿಗಿನ ಅಲಕ್ಷ್ಯತೆಯು ಬಹು ದೊಡ್ಡ ನಷ್ಟದ ವಿಷಯವಾಗಿದೆ.

ಹೌದು, ಈಗ ಅದು ನಮ್ಮ ಮುಂದಿದೆ. ಅದರ ಪಾರಾಯಣ-ಅಧ್ಯಯನಕ್ಕೆ ನಾವೆಷ್ಟು ಸಮಯ ಕೊಡುತ್ತಿದ್ದೇವೆ? ಅದರೊಂದಿಗೆ ಯಾವ ಸಂಬಂಧವನ್ನಿರಿಸಿ ಕೊಂಡಿದ್ದೇವೆ? ಅದರ ಕುರಿತು ನಮ್ಮ ಹೃದಯದಲ್ಲಿ ಯಾವ ತುಡಿತವಿದೆ? ಅದನ್ನು ಎಷ್ಟರ ತನಕ ಪ್ರೀತಿಸುತ್ತಿದ್ದೇವೆ? ಅದರ ಪಾವನ ವಚನಗಳ ಬಗ್ಗೆ ಎಷ್ಟು ನಂಬಿಕೆಯನ್ನಿರಿಸಿ ಕೊಂಡಿದ್ದೇವೆ ಮತ್ತು ಅದರ ಹಕ್ಕನ್ನು ಪೂರ್ತೀಕರಿಸಲು ನಮ್ಮಿಂದ ಸಾಧ್ಯವಾಗುತ್ತಿದೆಯೇ?ವಾಸ್ತವದಲ್ಲಿ,ಮಾತಾಡುವ ಕಲೆ ಮನುಷ್ಯರಿಗೆ ಮಾತ್ರ ತಿಳಿದಿದೆ. ಪ್ರಾಣಿಗಳಿಗೆ ಕೇವಲ ಬಾಲ ಅಲ್ಲಾಡಿಸುವುದು ಮತ್ತು ತಲೆ ಅಲ್ಲಾಡಿಸುವುದು ಮಾತ್ರ ಗೊತ್ತು.ನೀವು ತಿಳಿದಿರಬೇಕು, ಚಿಂತಿಸುವುದು ಮತ್ತು ಬುದ್ಧಿಯನ್ನು ಪಯೋಗಿಸಿ ಮುನ್ನಡೆಯುವುದರಿಂದಲೇ ಮನುಷ್ಯನನ್ನು ಜಾನುವಾರುಗಳಿಂದ ಪ್ರತ್ಯೇಕಿಸಲಾಗಿದೆ.

ಆದ್ದರಿಂದ ನಮಗೆ ನೀಡಲ್ಪಟ್ಟ ಕಣ್ಣು, ಕಿವಿ, ನಾಲಗೆ, ಕೈಕಾಲುಗಳು, ಬುದ್ಧಿ  ಮತ್ತು ಇತರ ಅವಯವಗಳನ್ನು ಅನಗತ್ಯ ಚರ್ಚೆ-ಹರಟೆಗಳಲ್ಲಿ ವಿನಿಯೋಗಿಸದೆ, ಅದನ್ನು ನಾವು ಅಲ್ಲಾಹನ ಗ್ರಂಥವನ್ನಭ್ಯಸಿಸಲು ತೊಡಗಿಸ ಬೇಕು. ನಮ್ಮ ಬದುಕಿನ ಉದ್ದೇಶವೇನು? ಮರಣೋತ್ತರ ಬದುಕಿನಲ್ಲಿ ನಮ್ಮೊಂದಿಗೆ ಯಾವ ರೀತಿ ನಡೆಸಿಕೊಳ್ಳಲಾಗುವುದು? ಅದಕ್ಕೆ ನಾವೇನು ಸಿದ್ಧತೆ ನಡೆಸಿ ಕೊಳ್ಳಬೇಕು? ಎಂಬಿತ್ಯಾದಿ ಗಂಭೀರ ಸವಾಲುಗಳಿಗೆ ನಮ್ಮ ಮೆದುಳನ್ನು ಬಳಸಿ ಉತ್ತರವನ್ನು ಕಂಡುಕೊಳ್ಳ ಬೇಕಾಗಿದೆ. ಅದರಲ್ಲಿ ಸಫಲವಾದಲ್ಲಿ ಖಂಡಿತ ಗೆಲುವು ನಮ್ಮದಾಗಿಸುವೆವು, ವಿಫಲವಾದಲ್ಲಿ ಸ್ವಾಭಾವಿಕವಾಗಿ ಸೋಲು ಕೂಡಾ ನಮ್ಮದಾಗುವುವು. ಆದರೆ ಆ ಸೋಲು ಪಶ್ಚಾತ್ತಾಪ ಪಡಲು ಅವಕಾಶವಿಲ್ಲದ ಶಾಶ್ವತ ಸೋಲಾಗಿರುವುದು.ಅಂತಹ ದುರವಸ್ಥೆಗೆ ತಲುಪುವ ಮೊದಲೇ ಎಚ್ಚೆತ್ತುಕೊಳ್ಳೋಣ! ಅಲ್ಲಾಹನು ನಮ್ಮೆಲ್ಲರನ್ನೂ ಆತನ ಶಾಪ-ಕ್ರೋಧಗಳಿಂದ ಕಾಪಾಡಲಿ!